ಬೆಂಗಳೂರು: ರಾಜ್ಯದಲ್ಲಿ ಹುಲಿ ಉಗುರಿನ (Tiger Nail) ಲಾಕೆಟ್ವುಳ್ಳ ಸರ ಧರಿಸಿರುವವರ ವಿರುದ್ಧ ಅರಣ್ಯ ಇಲಾಖೆ (Forest department) ಸಮರ ಸಾರಿದ್ದರ ವಿರುದ್ಧ ಈಗ ಮಾಜಿ ಸಚಿವ ಸಿ.ಟಿ. ರವಿ (Former minister CT Ravi) ಕಿಡಿಕಾರಿದ್ದಾರೆ. ಇದು ಸರ್ಕಾರದ ಪಿತೂರಿ ಎಂದು ಹೇಳಿದ್ದಾರೆ. ಜನರನ್ನು ದಾರಿ ತಪ್ಪಿಸಲು ರಾಜ್ಯ ಸರ್ಕಾರ ಮಾಡುತ್ತಿರುವ ಪ್ಲ್ಯಾನ್ ಎಂದು ಕುಟುಕಿದ್ದಾರೆ. ಅಲ್ಲದೆ, ಸಿಎಂ ಸಿದ್ದರಾಮಯ್ಯ (CM Siddaramaiah) ಅವರನ್ನು ಕಮಿಷನ್ ಕಲೆಕ್ಟರ್ ಎಂದಿದ್ದರೆ, ಡಿಸಿಎಂ ಡಿ.ಕೆ. ಶಿವಕುಮಾರ್ (DCM DK Shivakumar) ಅವರನ್ನು ಡೆಪ್ಯುಟಿ ಕಮಿಷನ್ ಕಲೆಕ್ಟರ್ ಎಂದು ದೂರಿದ್ದಾರೆ. ಬೇಕೆಂದೇ ರಾಜ್ಯ ಸರ್ಕಾರ ಹೀಗೆ ಮಾಡುತ್ತಿದೆ ಎಂದು ಸಹ ಅವರು ಕಿಡಿಕಾರಿದ್ದಾರೆ.
ಈ ಬಗ್ಗೆ ತಮ್ಮ ಫೇಸ್ಬುಕ್ ಖಾತೆಯಲ್ಲಿ ಬರೆದುಕೊಂಡಿರುವ ಸಿ.ಟಿ. ರವಿ, ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ತಮ್ಮ ತಪ್ಪನ್ನು ಮರೆಮಾಚಲು ಹೀಗೆ ಮಾಡುತ್ತಿರುವುದಾಗಿಯೂ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: Tiger Nail : ಹುಲಿ ಉಗುರು ಧರಿಸಿದ ಅರಣ್ಯಾಧಿಕಾರಿಗಳ ಸಸ್ಪೆಂಡ್; ಸಚಿವ ಈಶ್ವರ್ ಖಂಡ್ರೆ ಸೂಚನೆ
ಸಿ.ಟಿ. ರವಿ ಪೋಸ್ಟ್ನಲ್ಲೇನಿದೆ?
ಇತ್ತೀಚೆಗೆ ನಡೆದ ಐಟಿ ದಾಳಿ, ಅಲ್ಲಿ ಪತ್ತೆಯಾದ ನೂರು ಕೋಟಿಗೂ ಅಧಿಕ ಅಕ್ರಮ ಹಣದ ಕುರಿತಾದ ಚರ್ಚೆಯನ್ನು ದಾರಿ ತಪ್ಪಿಸಿ, ಸಾರ್ವಜನಿಕರ ಆಕ್ರೋಶಕ್ಕೆ ಪೂರ್ಣ ವಿರಾಮ ನೀಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರದ ಕಮಿಷನ್ ಕಲೆಕ್ಟರ್ (CM) ಮತ್ತು ಡೆಪ್ಯುಟಿ ಕಮಿಷನ್ ಕಲೆಕ್ಟರ್ (DCM) ಆರಂಭಿಸಿರುವ ಹೊಸ ನಾಟಕ “ಹುಲಿ ಉಗುರು”.
ನೂರಾರು ವರ್ಷಗಳಿಂದ ಹುಲಿ ಉಗುರನ್ನು ಬಹಳ ಜನ ರಾಜ್ಯಾದ್ಯಂತ (ದೇಶಾದ್ಯಂತ) ಆಭರಣವಾಗಿ ಧರಿಸುತಿರುವುದು ಹೊಸದೂ ಅಲ್ಲ, ಅರಣ್ಯ ಇಲಾಖೆಯ ಅಧಿಕಾರಿಗಳು ಕಾಣದೆ ಇದ್ದಿದ್ದೂ ಅಲ್ಲ. ಈಗ ಸರ್ಕಾರದ ಆಡಳಿತಾತ್ಮಕ ವೈಫಲ್ಯ, ಬೋಗಸ್ ಭರವಸೆಗಳ ಮೇಲಿನ ಜನರ ಆಕ್ರೋಶ, ರೈತರಿಗೆ ವಿದ್ಯುತ್ ಪೂರೈಸಲಾಗದೆ ನೀಡಿದ ಕತ್ತಲೆ ಭಾಗ್ಯ, ಬರ ಪರಿಸ್ಥಿತಿ ನಿರ್ವಹಣೆಯಲ್ಲಿನ ವೈಫಲ್ಯ, ನಿಮ್ಮ ಸರ್ಕಾರದ ಮಂತ್ರಿಗಳು ತೆರೆದ ನಕಲಿ ದಾಖಲೆಗಳ ಇಲಾಖೆ, ಶಾಸಕರು ಬಂಡಾಯದ ಬಸ್ ಹತ್ತುತ್ತಿರುವ ಬೇಗುದಿ ಮತ್ತು ಇವೆಲ್ಲಕ್ಕಿಂತ ಮುಖ್ಯವಾಗಿ ಪಂಚ ರಾಜ್ಯ ಚುನಾವಣೆಗೆ ನಡೆಸಿದ ಕಲೆಕ್ಷನ್ ಐಟಿ ಇಲಾಖೆಯ ಪಾಲಾಗಿ ಜನರ ಎದುರು ತಲೆಯೆತ್ತಿ ನಡೆಯಲಾಗದು ಎನ್ನುವ ಕಾರಣಕ್ಕೆ “ಹುಲಿಯುಗುರು” ಎಂಬ ಸದಾರಮೆ ನಾಟಕ ಆಡುತ್ತಿರುವುದು ಸ್ಪಷ್ಟ.
ಇದನ್ನೂ ಓದಿ: CM Siddaramaiah : ಸ್ವಾಭಿಮಾನಿ ಕನ್ನಡಿಗರ ಪ್ರಶ್ನೆ ಅಭಿಯಾನ; ಕೇಂದ್ರ – ಮೋದಿ ವಿರುದ್ಧ ಸಿಎಂ ವಾರ್!
ನಿಮ್ಮ ಮಂತ್ರಿ ಮಂಡಲದೊಳಗೆ ಒಮ್ಮೆ ಇಣುಕಿ
ಒಮ್ಮೆ ನಿಮ್ಮ ಮಂತ್ರಿಮಂಡಲದ ಒಳಗೆ ಇಣುಕಿ, ಅಲ್ಲಿ ಬಹಳಷ್ಟು ಜನ ಕಾಡು ಪ್ರಾಣಿಗಳನ್ನು ಬಂಧನದಲ್ಲಿರಿಸಿದವರು, ಕಾಡುಪ್ರಾಣಿಗಳನ್ನು ಹತ್ಯೆ ಮಾಡಿದವರು ಸಿಕ್ಕಿಯಾರು. ಅಂತವರನ್ನು ಬಿಟ್ಟು ಹುಲಿಯುಗುರು ಧರಿಸಿದ್ದಾರೆ ಎನ್ನುವ ಕಾರಣಕ್ಕೆ ಕ್ರಮ ಕೈಗೊಳ್ಳಲು ಹೊರಟಿರುವುದು, ಅದರಲ್ಲೂ ಜನಸಾಮಾನ್ಯರಿಗೆ ನೇರ FSL ವರದಿ ಬರುವುದಕ್ಕೆ ಮುಂಚೆಯೇ ಬಂಧನ ಸೇರಿದಂತೆ ಸೆಲೆಬ್ರಿಟಿಗಳಿಗೆ ನೋಟಿಸ್ ನೀಡುವುದು, ಇದೆಲ್ಲವೂ ಈ ನಾಟಕದ ಭಾಗವಲ್ಲವೇ? ಇದು ನಿಮ್ಮ ಸರ್ಕಾರದ ಪ್ರಾಮಾಣಿಕತೆಯ ಬಗ್ಗೆ ಸಂಶಯ ಮೂಡಿಸುವುದಿಲ್ಲವೇ?” ಎಂದು ಸಿ.ಟಿ. ರವಿ ಖಾರವಾಗಿ ಪ್ರಶ್ನೆ ಮಾಡಿದ್ದಾರೆ.