Site icon Vistara News

ʼಮೈಸೂರು ಹುಲಿʼಯನ್ನು ಕೈಬಿಟ್ಟಿಲ್ಲ: ಟಿಪ್ಪು ಸುಲ್ತಾನ್‌ ಪಾಠ ಇರಲಿದೆ ಎಂದ ನಾಗೇಶ್‌

ಬಿ.ಸಿ. ನಾಗೇಶ್‌

ಬೆಂಗಳೂರು: ಟಿಪ್ಪು ಸುಲ್ತಾನ್‌ (Tippu Sultan) ಕುರಿತು ಶಾಲಾ ಪಠ್ಯದಲ್ಲಿದ್ದ ಉತ್ಪ್ರೇಕ್ಷೆಯುಳ್ಳ ಅಂಶಗಳನ್ನು ಕೈಬಿಡಲಾಗಿದೆಯೇ ವಿನಃ ʼಮೈಸೂರು ಹುಲಿʼ (Tiger of Mysore) ಬಿರುದು ಸೇರಿ ಟಿಪ್ಪು ಕುರಿತ ಅನೇಕ ಮಾಹಿತಿಗಳನ್ನು ಉಳಿಸಿಕೊಳ್ಳಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ಹೇಳಿದ್ದಾರೆ.

ದ್ವಿತೀಯ ಪಿಯುಸಿ ಪರೀಕ್ಷೆ ಕುರಿತು ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಂತರ ಪ್ರಶ್ನೆಗೆ ನಾಗೇಶ್‌ ಉತ್ತರಿಸಿದ್ದಾರೆ. ಟಿಪ್ಪು ಸುಲ್ತಾನ್‌ ಕುರಿತ ಪಠ್ಯದ ಕುರಿತು ಶಾಸಕ ಅಪ್ಪಚ್ಚು ರಂಜನ್‌ ವಿಶೇಷ ಬೇಡಿಕೆ ಮುಂದಿಟ್ಟಿದ್ದಾರೆ. ಪ್ರಮುಖವಾಗಿ, ಟಿಪ್ಪು ಒಬ್ಬ ಕ್ರೂರಿ. ಆತ ಕನ್ನಡವನ್ನು ಕಗ್ಗೊಲೆ ಮಾಡಿ ಪರ್ಷಿಯನ್‌ ಭಾಷೆ ಹೇರಿದ. ಕೊಡಗಿನಲ್ಲಿ ಜನಗಳ ಮಾರಣಹೋಮ ನಡೆಸಿದ್ದಾನೆ ಎಂದಿದ್ದಾರೆ. ಹಾಗೂ ಇದಕ್ಕೆ ಅಗತ್ಯ ಎಲ್ಲ ದಾಖಲೆಗಳನ್ನೂ ನೀಡಿದ್ದಾರೆ. ಅವರ ಬೇಡಿಕೆಯೇನೆಂದರೆ, ಟಿಪ್ಪುವಿನ ಸಂಪೂರ್ಣ ಪಾಠವನ್ನು ಶಾಲಾ ಪಠ್ಯದಿಂದ ಕೈಬಿಡಬೇಕು. ಹಾಗೊಂದು ಪಕ್ಷ ಸಂಪೂರ್ಣ ಕೈಬಿಡಲು ಆಗದಿದ್ದರೆ ಟಿಪ್ಪುವಿನ ಎರಡೂ ಮುಖಗಳನ್ನು ತೋರಿಸಬೇಕು ಎನ್ನುವುದು.

ಸದ್ಯಕ್ಕೆ ಟಿಪ್ಪುವಿನ ಸಂಪೂರ್ಣ ಪಠ್ಯವನ್ನು ತೆಗೆಯಲು ಹೋಗಿಲ್ಲ. ಅನಗತ್ಯ ಎನ್ನಿಸಿದ, ಉತ್ಪ್ರೇಕ್ಷೆಯಿಂದ ಕೂಡಿದ ಅಂಶಗಳನ್ನು ತೆಗೆದಿದ್ದೇವೆ. ಈ ರೀತಿ ಇತರೆ ವಿಚಾರಗಳಲ್ಲೂ ಮಾಡಿದ್ದೇವೆ. ಟಿಪ್ಪುವಿನ ಕುರಿತು ಹೇಳಲಾಗುವ ʼಮೈಸೂರು ಹುಲಿʼ ಬಿರುದನ್ನೂ ತೆಗೆದಿಲ್ಲ. ಮುಂದಿನ ವಾರದಲ್ಲಿ ಪಠ್ಯದ ಕುರಿತು ಪೂರ್ಣ ಮಾಹಿತಿಯನ್ನು ನೀಡುತ್ತೇನೆ ಎಂದಿದ್ದಾರೆ.

ಈ ಹಿಂದೆ ಸಿದ್ದರಾಮಯ್ಯ ಸರ್ಕಾರ ರಚಿಸಿದ್ದ ಪ್ರೊ. ಬರಗೂರು ರಾಮಚಂದ್ರಪ್ಪ (Baraguru Ramachandrappa) ಅವರ ನೇತೃತ್ವದ ಪಠ್ಯಪುಸ್ತಕ ರಚನಾ ಸಮಿತಿಯು ಅನೇಕ ಸುಳ್ಳು, ಅಪೂರ್ಣ ಹಾಗೂ ಪೂರ್ವಾಗ್ರಹಪೀಡಿತ ಅಂಶಗಳನ್ನು ಶಾಲಾ ಪಠ್ಯದಲ್ಲಿ ಸೇರಿಸಿದೆ ಎಂಬ ಆರೋಪ ಕೇಳಿಬಂದಿತ್ತು. ಇದಕ್ಕಾಗಿ ಲೇಖಕ ರೋಹಿತ್‌ ಚಕ್ರತೀರ್ಥ ಅವರ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚಿಸಿ ಪರಿಷ್ಕರಣೆಗೆ ಸೂಚಿಸಲಾಗಿತ್ತು. ಈ ಸಮಿತಿಯು ಕಳೆದ ವಾರವಷ್ಟೆ ಸರ್ಕಾರಕ್ಕೆ ತನ್ನ ವರದಿಯನ್ನು ಸಲ್ಲಿಕೆ ಮಾಡಿತ್ತು. ಟಿಪ್ಪು ವಿಚಾರ ಬಿಜೆಪಿ ಹಾಗೂ ಕಾಂಗ್ರೆಸ್‌ ನಡುವೆ ಅನೇಕ ಬಾರಿ ವಾಕ್ಸಮರಕ್ಕೂ ಕಾರಣವಾಗಿದೆ.

ಹೆಚ್ಚಿನ ಓದಿಗಾಗಿ: ಮುಸ್ಲಿಮರು ಕತ್ತರಿಸಿದ ಮಾಂಸವನ್ನೇ ನಾವು ಸೇವಿಸೋದು: ಸಿದ್ದರಾಮಯ್ಯ

ಮದರಸಾಗಳಲ್ಲಿ ಉತ್ತಮ ಶಿಕ್ಷಣ ಸಿಗುತ್ತಿಲ್ಲ

ಮದರಸಾಗಳಲ್ಲಿ ಕಲಿತ ಮಕ್ಕಳಿಗೆ ಸ್ಪರ್ಧಾತ್ಮಕ ಜಗತ್ತಿನಲ್ಲಿ ಸ್ಪರ್ಧೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ನಾಗೇಶ್‌ ತಿಳಿಸಿದ್ದಾರೆ. ಮದರಸಾಗಳಲ್ಲಿ ಸ್ಪರ್ಧಾತ್ಮಕ ಶಿಕ್ಷಣ ಸಿಗುತ್ತಿಲ್ಲ ಎಂದು ಪೋಷಕರು ಹೇಳಿದ್ದಾರೆ. ಇದು ನಿಜವೂ ಹೌದು. ಈ ಶಿಕ್ಷಣ ಪಡೆದ ಮಕ್ಕಳು ಜೀವನ ನಿರ್ವಹಣೆ ಮಾಡುವುದು ಕಷ್ಟ. ಆದರೆ ಸಾಮಾನ್ಯ ಶಿಕ್ಷಣವನ್ನು ಮದರಸಾಗಳಲ್ಲೂ ನೀಡಿ ಎಂದು ಇಲ್ಲಿಯವರೆಗೆ ಯಾವುದೇ ಮದರಸಾಗಳಿಂದ ಮನವಿ ಬಂದಿಲ್ಲ. ಹಾಗೇನಾದರೂ ಮನವಿ ಬಂದರೆ ನೋಡೋಣ ಎಂದರು.

ಇದನ್ನೂ ಓದಿ : 2nd PU Exam: ಪಿಯುಸಿ ಪರೀಕ್ಷೆಗೂ ಹಿಜಾಬ್‌ ಧರಿಸುವಂತಿಲ್ಲ: ಶಿಕ್ಷಣ ಸಚಿವರ ಸ್ಪಷ್ಟನೆ

Exit mobile version