ಬೆಂಗಳೂರು: ₹800 ಕೋಟಿಗೂ ಹೆಚ್ಚಿನ ಅಕ್ರಮ ಆಸ್ತಿ ಹಾಗೂ 300ಕ್ಕೂ ಹೆಚ್ಚು ಬ್ಯಾಂಕ್ ಖಾತೆಗಳನ್ನು ಹೊಂದಿರುವ ಆರೋಪ ಎದುರಿಸುತ್ತಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ಎರಡೂವರೆ ವರ್ಷದ ನಂತರ ಮತ್ತೆ ಇಡಿ ಸಂಕಷ್ಟ ಎದುರಾಗಿದೆ. ಅಂದಿನ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ(ಇಡಿ) ಡಿ.ಕೆ. ಶಿವಕುಮಾರ್ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಕೆ ಮಾಡಿದೆ. ಇನ್ನೇನು ವಿಧಾನಸಭೆ ಚುನಾವಣೆಗೆ ಒಂದು ವರ್ಷಕ್ಕಿಂದಲೂ ಕಡಿಮೆ ಅವಧಿ ಇರುವಾಗ, ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಕೆಶಿ ವಿರುದ್ಧ ಆರೋಪಪಟ್ಟಿ ಸಲ್ಲಿಕೆ ಆಗಿದೆ.
2019ರಲ್ಲಿ ಬಂಧನವಾಗಿದ್ದ ಪ್ರಕರಣದಲ್ಲಿ ಇಡಿಯಿಂದ ದೆಹಲಿ ನ್ಯಾಯಾಲಯದಲ್ಲಿ ಆರೋಪಪಟ್ಟಿ ಸಲ್ಲಿಸಲಾಗಿದೆ. ಶಿವಕುಮಾರ್ ವಿರುದ್ಧ ಅನೇಕ ಆರೋಪಗಳನ್ನು ಮಾಡಲಾಗಿದ್ದು, ಅನೇಕರ ಹೆಸರುಗಳು ಇವೆ ಎನ್ನಲಾಗಿದೆ. ಕಾಂಗ್ರೆಸ್‌ನ ಅಖಿಲ ಭಾರತ ಮಟ್ಟದಲ್ಲಿ ಉಂಟಾಗಿದ್ದ ಸಮಸ್ಯೆಗಳಿಂದ ಹೊರಬರಲೂ ಸಹಾಯ ಮಾಡಿ ಟ್ರಬಲ್ ಶೂಟರ್ ಎನ್ನಿಸಿಕೊಂಡಿದ್ದ ಡಿ.ಕೆ. ಶಿವಕುಮಾರ್ ಅವರಿಗೇ ಈಗ ಟ್ರಬಲ್ ಎದುರಾಗಿದೆ.
ಇದನ್ನೂ ಓದಿ | ಕರಪ್ಷನ್ನು, ಕೆಮ್ಮು ಎಲ್ಲ ಯಾವತ್ತಿದ್ದರೂ ಹೊರಗೆ ಬರಲೇಬೇಕು ಎಂದ ಡಿ.ಕೆ. ಶಿವಕುಮಾರ್
ಪ್ರಕರಣಕ್ಕೆ ಸಂಬಂಧಿಸಿ ಡಿ.ಕೆ. ಶಿವಕುಮಾರ್ ಅವರನ್ನು ಇಡಿ ಬಂಧಿಸಿ 45 ದಿನ ವಿಚಾರಣೆ ನಡೆಸಿತ್ತು. ತಮ್ಮ ಮೇಲೆ ಅಕ್ರಮ ಆಸ್ತಿ ಸಂಪಾದನೆ ಆರೋಪದ ಜತೆಗೆ ಡಿಕೆಶಿ ಪುತ್ರಿಯ ಮೇಲೂ ಆರೋಪವಿದೆ. ಪುತ್ರಿ ₹108 ಕೋಟಿ ಆಸ್ತಿ ಹೊಂದಿದ್ದು, ಇದರ ಮೂಲದ ಬಗ್ಗೆ ಇಡಿ ಅನುಮಾನ ವ್ಯಪ್ತಪಡಿಸಿತ್ತು. ಡಿಕೆಶಿ ಹೆಸರಿನಲ್ಲಿ 24, ಸಹೋದರ ಸುರೇಶ್ ಹೆಸರಿನಲ್ಲಿ 27 ಆಸ್ತಿ ಜತೆಗೆ ತಾಯಿಯ ಹೆಸರಿನಲ್ಲೂ 38 ಆಸ್ತಿಗಳಿದ್ದದ್ದನ್ನು ಪತ್ತೆ ಹಚ್ಚಲಾಗಿತ್ತು. ಈ ಆಸ್ತಿಗಳಿಗೆ ಮೂಲ ಇಲ್ಲ ಎಂದು ತಿಳಿಸಲಾಗಿತ್ತು. ಈ ಕುರಿತು ಶಿವಕುಮಾರ್ ಅವರ ತಾಯಿಯನ್ನೂ ವಿಚಾರಣೆ ನಡೆಸಲಾಗಿತ್ತು.
ತಿಹಾರ್ ಜೈಲಿನಲ್ಲಿ ಬಂಧನದಲ್ಲಿದ್ದಾಗ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಖುದ್ದು ಭೇಟಿ ನೀಡಿ ಧೈರ್ಯ ತುಂಬಿದ್ದರು. ಅನೇಕ ದಿನ ವಿಚಾರಣೆ ನಂತರ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿತ್ತು.
ಇದೀಗ ದೆಹಲಿ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಲಾಗಿರುವ ಆರೋಪ ಪಟ್ಟಿಯ ಸಂಪೂರ್ಣ ವಿವರ ಇನ್ನೂ ಲಭ್ಯವಾಗಿಲ್ಲ. ವಿಚಾರಣೆ ಆರಂಬವಾದ ಕೂಡಲೆ ಅನೇಕ ಬಾರಿ ಡಿಕೆಶಿ ನವದೆಹಲಿಗೆ ತೆರಳಬೇಕಾಗುತ್ತದೆ. ಇಡಿ ಹೊರಿಸಿರುವ ಆರೋಪಗಳ ಕುರಿತು ಉತ್ತರ ನೀಡಬೇಕು ಹಾಗೂ ತಾವು ನಿರಪರಾಧಿ ಎಂದು ಸಾಬೀತಪಡಿಸಬೇಕು. ಈ ಹಂತದಲ್ಲಿ ನೀಡಲಾಗುವ ನೋಟಿಸ್, ವಾರಂಟ್‌ಗಳು ಚುನಾವಣೆ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎನ್ನುವುದನ್ನು ಕಾದುನೋಡಬೇಕಿದೆ.
ಇದನ್ನೂ ಓದಿ | ನಮ್ಮದು ಡಿ.ಕೆ. ಶಿವಕುಮಾರ್ ಕುಟುಂಬ ಕೆಟ್ಟೋಯ್ತ?: ಆರೋಪಕ್ಕೆ ಅಶ್ವತ್ಥನಾರಾಯಣ ಆಕ್ರೋಶ