ತುಮಕೂರು/ಬೆಳಗಾವಿ: ರಾಜ್ಯದಲ್ಲಿ ಎದ್ದಿರುವ ದಲಿತ ಸಿಎಂ (Dalit CM) ಕೂಗಿಗೆ ಇಬ್ಬರು ಪ್ರಮುಖ ಸಚಿವರು ಬೆಂಬಲ ಸೂಚಿಸಿದ್ದಾರೆ. ದಲಿತರು ಕೇವಲ ಮತ ಹಾಕಲು ಸೀಮಿತರಾಗಿದ್ದಾರೆ, ಅವರ ಮತದಿಂದ ಯಾರ್ಯಾರೋ ನಾಯಕರಾಗಿದ್ದಾರೆ. ಅವರಿಗೆ ಸಿಎಂ ಆಗುವ ಅವಕಾಶವಿಲ್ಲವೇ ಎಂಬ ಪ್ರಶ್ನೆಯನ್ನು ಸಮಾಜ ಕಲ್ಯಾಣ ಖಾತೆ ಸಚಿವ ಡಾ.ಎಚ್.ಸಿ. ಮಹದೇವಪ್ಪ (Dr HC Mahadevappa) ಎತ್ತಿದ್ದರು. ಅದಕ್ಕೆ ಈಗ ಸಚಿವರಾದ ಕೆ.ಎನ್. ರಾಜಣ್ಣ (KN Rajanna) ಮತ್ತು ಸತೀಶ್ ಜಾರಕಿಹೊಳಿ (Sathish Jarakiholi) ಬೆಂಬಲ ಸೂಚಿಸಿದ್ದಾರೆ. ಇವರಿಬ್ಬರೂ ಸಿಎಂ ಸಿದ್ದರಾಮಯ್ಯ ಅವರಿಗೆ ಆಪ್ತರಾಗಿರುವುದು ವಿಶೇಷ.
ಡಾ. ಎಚ್.ಸಿ. ಮಹದೇವಪ್ಪ ಅವರು ದಲಿತ ಸಿಎಂ ಚರ್ಚೆ ಹುಟ್ಟುಹಾಕಿದ ಸಮಯದ ಬಗ್ಗೆ ಚರ್ಚೆ ನಡೆಯುತ್ತಿದೆ. ಉಪಮುಖ್ಯಮಂತ್ರಿಯಾಗಿರುವ ಡಿ.ಕೆ. ಶಿವಕುಮಾರ್ ಅವರು ಹಿಂದಿನಿಂದಲೂ ಈ ಹುದ್ದೆಯ ಆಕಾಂಕ್ಷಿಯಾಗಿದ್ದಾರೆ. ಎರಡೂವರೆ ವರ್ಷದ ಬಳಿಕ ಅವರಿಗೆ ಸಿಎಂ ಹುದ್ದೆ ಬಿಟ್ಟು ಕೊಡಬೇಕು ಎಂಬ ಒಪ್ಪಂದವಾಗಿದೆ ಎಂದು ಹೇಳಲಾಗುತ್ತಿದೆ.
ಈ ನಡುವೆ, ಡಿ.ಕೆ. ಶಿವಕುಮಾರ್ ಅವರಿಗೆ ಜಾರಿ ನಿರ್ದೇಶನಾಲಯದ ಪ್ರಕರಣದಿಂದ ಕ್ಲೀನ್ ಚಿಟ್ ಸಿಕ್ಕಿದೆ. ಹೀಗಾಗಿ ಅವರು ಸಿಎಂ ಹುದ್ದೆಗೆ ಪ್ರಬಲವಾಗಿ ವಾದ ಮಂಡಿಸಬಹುದು ಎಂಬ ಸೂಚನೆಯ ಹಿನ್ನೆಲೆಯಲ್ಲಿ ಅದನ್ನು ತಪ್ಪಿಸುವುದಕ್ಕಾಗಿ ದಲಿತ ಸಿಎಂ ಮಂತ್ರ ಪಠಿಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಸಿಎಂ ಬದಲಾವಣೆ ಮಾಡುವುದಿದ್ದರೆ ದಲಿತರನ್ನು ಮಾಡಿ ಎಂಬ ಹಕ್ಕೊತ್ತಾಯದ ಮೂಲಕ ಡಿ.ಕೆ. ಶಿವಕುಮಾರ್ ಬಣದ ದಿಕ್ಕೆಡಿಸುವುದು ಉದ್ದೇಶ ಎನ್ನಲಾಗುತ್ತಿದೆ. ಅದಕ್ಕೆ ಪೂರಕವಾಗಿ ಈ ಚರ್ಚೆಗಳೆಲ್ಲವೂ ಸಿದ್ದರಾಮಯ್ಯ ಅವರ ಆಪ್ತರ ಕಡೆಯಿಂದಲೇ ನಡೆಯುತ್ತಿವೆ.
Dalit CM : ಮಹದೇವಪ್ಪ ಮಾತಿಗೆ ದನಿಗೂಡಿಸಿದ ಸಚಿವ ಕೆ.ಎನ್.ರಾಜಣ್ಣ
ತುಮಕೂರಿನಲ್ಲಿ ಮಾತನಾಡಿದ ಸಚಿವ ಕೆ.ಎನ್. ರಾಜಣ್ಣ ಅವರು ಸಿದ್ದರಾಮಯ್ಯ ಅವರನ್ನು ಬದಲಾಯಿಸುವ ಪರಿಸ್ಥಿತಿ ಬಂದರೆ ಜಿ. ಪರಮೇಶ್ವರ್ ಅವರು ಸಿಎಂ ಆಗಬೇಕು ಎನ್ನುವುದು ನನ್ನ ಆಸೆ ಎಂದಿದ್ದಾರೆ.
ʻʻಸಿದ್ದರಾಮಯ್ಯನವರು ಪೂರ್ಣಾವಧಿ ಸಿಎಂ ಆಗಬೇಕು ಅನ್ನೋದು ಬಹುಪಾಲು ಶಾಸಕರ ಅಭಿಪ್ರಾಯ. ಆದರೆ ಒಂದು ವೇಳೆ ಬದಲಾವಣೆ ಮಾಡಬೇಕು ಎಂದು ಹೈ ಕಮಾಂಡ್ ಚಿಂತನೆ ಮಾಡಿದರೆ ಅದು ದಲಿತರ ಆಯ್ಕೆ ಆಗಲಿ. ಅದರಲ್ಲೂ ಜಿ.ಪರಮೇಶ್ವರ್ ಅರ್ಹತೆಯುಳ್ಳವರು. ಸಿಎಂ ಆಗುವ ಎಲ್ಲಾ ಅರ್ಹತೆ ಪರಮೇಶ್ವರ್ ಅವರಿಗೆ ಇದೆ. ಅವರು ಸಿಎಂ ಆಗಬೇಕು ಅನ್ನೊದು ನನ್ನ ಅಭಿಲಾಷೆ. ಹಾಗೇ ಡಿ.ಕೆ.ಶಿವಕುಮಾರ್ ಕೂಡ ಸಿಎಂ ಆಗಬಾರದು ಅಂತಲ್ಲ. ಅವರು ಕೂಡ ಆಗಲಿʼʼ ಎಂದು ಹೇಳಿದರು ಕೆ.ಎನ್. ರಾಜಣ್ಣ.
ʻʻದಲಿತ ಸಿಎಂ ವಿಚಾರದಲ್ಲಿ ಮಹದೇವಪ್ಪ ಅವರಿಗಿಂತ ಮೊದಲೇ ನಾವು ಪ್ರಸ್ತಾಪ ಮಾಡಿದ್ದೇವೆ. ಈಗ ಚುನಾವಣೆ ಇರೋದ್ರಿಂದ ನಾವು ಇಂಥಹ ವಿಚಾರ ಎತ್ತೋದಿಲ್ಲ. ನಮಗೆ ನಾವೇ ನಿರ್ಬಂಧ ಹಾಕಿಕೊಂಡಿದ್ದೇವೆ. ಹಾಗಂತ ಡಿಕೆ ಶಿವಕುಮಾರ್ ಸಿಎಂ ಆಗಬಾರದು ಎಂದು ನಾವು ಹೇಳೋದಿಲ್ಲ. ಆದರೆ ದಲಿತ ಸಿಎಂ ನಮ್ಮ ಹಕ್ಕು,. ನಮ್ಮ ಹಕ್ಕು ಕೇಳೋದ್ರಲ್ಲಿ ಯಾರ ಆಕ್ಷೇಪ ಇರಬಾರದುʼʼ ಎಂದು ಹೇಳಿದ ಕೆಎನ್. ರಾಜಣ್ಣ, ಈಗಿನಿಂದಲೇ ದಲಿತ ಸಿಎಂ ಕೂಗು ಹೊರಹಾಕಿದ್ದರೆ ಯಾವತ್ತೋ ಒಂದು ದಿನ ಯಶಸ್ವಿಯಾಗುತ್ತದೆ. ಬೆಳಗ್ಗೆ ಕೇಳಿದ್ರೆ ಸಂಜೆಗೆ ದಲಿತ ಸಿಎಂ ಕೊಟ್ಟುಬಿಡುತ್ತಾರಾ? ಅದಕ್ಕೆ ಈಗಿನಿಂದಲೇ ಬೇಡಿಕೆ ಇಡುತ್ತಿದ್ದೇವೆ ಎಂದರು.
ಇದನ್ನೂ ಓದಿ : Dalit CM : ಮತ್ತೆ ದಲಿತ ಸಿಎಂ ಕೂಗು; ಮತ ನಮ್ದು, ಲೀಡರ್ ಯಾರ್ಯಾರೋ ಎಂದ ಮಹದೇವಪ್ಪ
Dalit CM : ಡಿ.ಕೆ. ಶಿವಕುಮಾರ್ ಕೇಸ್ ವಜಾಕ್ಕೂ ದಲಿತ ಸಿಎಂ ಬೇಡಿಕೆಗೂ ಸಂಬಂಧವಿಲ್ಲ
ಡಿ.ಕೆ ಶಿವಕುಮಾರ್ ಅವರ ವಿರುದ್ಧದ ಇ.ಡಿ. ಕೇಸ್ ವಜಾ ಆಗಿದ ತಕ್ಷಣ ನಾವು ದಲಿತ ಸಿಎಂ ಕೇಳುತಿದ್ದೇವೆ ಅನ್ನೋದು ತಪ್ಪು. ಈ ಹಿಂದೆ ಹಲವು ಬಾರಿ ಕೇಳಿದ್ದೇವೆ ಎಂದರು.
ಎಚ್.ಸಿ. ಮಹದೇವಪ್ಪ ಅವರ ಹೇಳಿಕೆ ಸಮರ್ಥಿಸಿದ ಸಚಿವ ಸತೀಶ್ ಜಾರಕಿಹೊಳಿ
ಬೆಳಗಾವಿ: ಮತ ಹಾಕುವವರು ನಾವು, ಸಿಎಂ ಅಧಿಕಾರ ಅನುಭವಿಸುವವರು ಅವರು? ದಲಿತರಿಗೆ ಸಿಎಂ ಸಿಗಬೇಕು- ಎಂಬ ಬೇಡಿಕೆ ಇಟ್ಟ ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಸಿ ಮಹಾದೇವಪ್ಪ ಅವರಿಗೆ ಲೋಕೋಪಯೋಗಿ ಖಾತೆ ಸಚಿವ ಸತೀಶ್ ಜಾರಕಿಹೊಳಿ ಬೆಂಬಲ ಸೂಚಿಸಿದ್ದಾರೆ.
ಬೆಳಗಾವಿಯಲ್ಲಿ ಮಾತನಾಡಿದ ಅವರು, ʻʻದಲಿತ ಸಿಎಂ ಆಗಬೇಕೆಂಬ ಕೂಗು ಮೊದಲಿನಿಂದಲೂ ಇದೆ, ಹೊಸದೇನಿದೆ ಇದರಲ್ಲಿ? ಮಲ್ಲಿಕಾರ್ಜುನ ಖರ್ಗೆ ಅವರ ಕಾಲದಿಂದಲೂ ನಾವು (ದಲಿತರು) 99ಕ್ಕೆ ಔಟ್ ಆಗ್ತಿದ್ದೇವೆ. ಹಾಗೇ ಅವತ್ತಿನಿಂದಲೂ ದಲಿತರು ಸಿಎಂ ಸ್ಥಾನಕ್ಕೆ ಬೇಡಿಕೆ ಇಡುತ್ತಿದ್ದಾರೆʼʼ ಎಂದರು. ದಲಿತ ಸಿಎಂ ವಿಚಾರಕ್ಕೆ ಕೆಲವರ ಆಕ್ಷೇಪದ ಬಗ್ಗೆ ಪ್ರತಿಕ್ರಿಯಿಸಿದ ಅವರು, ʻʻರಾಜಕಾರಣ ಅಂದರೆ ಕುತಂತ್ರ ಇರೋದೇ ಎಂದರು.
ಡಿಕೆಶಿಗೆ ಸಂಬಂಧಿಸಿದ ಇಡಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ರದ್ದು ಮಾಡುತ್ತಿದ್ದಂತೆಯೇ ದಲಿತ ಸಿಎಂ ಕೂಗು ಕೇಳಿ ಬಂತಾ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಡಿಕೆಶಿ ಅವರಿಗೂ ದಲಿತ ಸಿಎಂ ಕೂಗಿಗೆ ಏನು ಸಂಬಂಧ? ಡಿಕೆಶಿಗೆ ಅವಕಾಶ ಇದ್ರೆ ಸಿಎಂ ಆಗೇ ಆಗ್ತಾರೆ. ಇದಕ್ಕೆ ಸಂಬಂಧ ಇಲ್ಲ ಸದ್ಯಕ್ಕೆ ಈ ವಿಚಾರ ಅವಶ್ಯಕತೆ ಇಲ್ಲ, ಇದು ಚುನಾವಣೆ ವಿಷಯವೂ ಅಲ್ಲ ಎಂದರು.
ʻʻವೋಟ್ ಹಾಕುವವರು ನಾವು, ನಮಗೂ ಅದರ ಲಾಭ ಸಿಗಬೇಕು. ನಾವು ಸಿಎಂ ಸ್ಥಾನ ಎಂಜಾಯ್ ಮಾಡಬೇಕಲ್ವಾ?ʼ ಎಂದು ಪರೋಕ್ಷವಾಗಿ ತಾನೂ ಸಿಎಂ ಆಕಾಂಕ್ಷಿ ಎಂದರು ಸತೀಶ್ ಜಾರಕಿಹೊಳಿ.
ʻʻನಮ್ಮ ವಿರುದ್ಧ ಪಿತೂರಿ ನಡೆಯುತ್ತಲೇ ಇರುತ್ತದೆ. ನಮ್ಮ ಬಗ್ಗೆ ಹಿಂದೆ ಮಾಹಿತಿ ಇಟ್ರೇ ಏನು ಆಗಲ್ಲ. ಒಳಗೂ ಹೊರಗೂ ನಾವು ಒಂದೇ ಹೇಳ್ತೀವಿʼʼ ಎಂದು ಸತೀಶ್ ಜಾರಕಿಹೊಳಿ ಹೇಳಿದರು.
ನಮ್ಮಲ್ಲಿ ಸೈನಿಕರೇ ಹೆಚ್ಚು, ಲೀಡರ್ಸ್ ಕೊರತೆ ಇದೆ ಎಂದ ಜಾರಕಿಹೊಳಿ
ʻʻನಮ್ಮಲ್ಲಿ ಸೈನಿಕರ ಸಂಖ್ಯೆ ಜಾಸ್ತಿಯಿದೆ, ಲೀಡರ್ಸ್ ಕೊರತೆ ಇದೆ ಅದು ಹುಟ್ಟಬೇಕು. ನಾಲ್ಕು ಕೋಟಿ ಅಹಿಂದ ವೋಟ್ ಬ್ಯಾಂಕ್ ಇದೆ ಅದೇ ನಮ್ಮ ಬೇಸ್ ಕೂಡ ಹೌದು. ಸಿಎಂ ವಿಚಾರದಲ್ಲಿ ಹೈಕಮಾಂಡ್ ಮಟ್ಟದಲ್ಲಿ ಪ್ರಭಾವ ಬೀರುವಲ್ಲಿ ನಾವು ವಿಫಲ ಆಗಿದ್ದೇವೆ. ನಮ್ಮ ಪಕ್ಷ ಅಷ್ಟೆ ಅಲ್ಲ ಎಲ್ಲ ಪಕ್ಷದಲ್ಲಿ ಹಾಗೇ ಇದೆ. ಹಿಂದೆ ಕಾರಜೋಳ ಅವರ ಹೆಸರಿತ್ತು ಆದರೆ ಆಗಲಿಲ್ಲ. ಜೆಡಿಎಸ್ ನಲ್ಲಿ ಕುಮಾರಸ್ವಾಮಿ ಅವರ ಹೆಸರಿತ್ತು. ಅವರೂ ಆಗಲಿಲ್ಲʼʼ ಎಂದು ನೆನಪಿಸಿದರು.