ಬೆಂಗಳೂರು: ಮೇ 13ರಂದು ನೆಲಮಂಗಲ ಸಮೀಪ ಜೆಡಿಎಸ್ ಮಹತ್ವಾಕಾಂಕ್ಷೆಯ ‘ಜನತಾ ಜಲಧಾರೆ’ ಸಮಾರೋಪ ಸಮಾರಂಭ ನಡೆಯಲಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದರು. ಕಳೆದ ತಿಂಗಳು 16ರಂದು ಹನುಮ ಜಯಂತಿ ದಿನ ಆರಂಭವಾದ ಜನತಾ ಜಲಧಾರೆ ಕಾರ್ಯಕ್ರಮ ರಾಜ್ಯಾದ್ಯಂತ ಯಸ್ವಿಯಾಗಿ ನಡಿದಿದ್ದು ಈಗ ಸಮಾರೋಪ ಸಮಾರಂಭಕ್ಕೆ ಸಜ್ಜಾಗಿದೆ ಎಂದರು.
ಈ ಬೃಹತ್ ಸಮಾರೋಪ ಸಮಾರಂಭದಲ್ಲಿ ಸುಮಾರು 4-5 ಲಕ್ಷ ಜನರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಬೆಂಗಳೂರು ನಗರದ ನಾಗರಿಕರಿಗೆ ತೊಂದರೆ ಆಗಬಾರದು ಎಂಬ ಕಾರಣಕ್ಕಾಗಿ ಬೆಂಗಳೂರು ಹೊರ ವಲಯದಲ್ಲಿ ಸಮಾರೋಪ ಹಮ್ಮಿಕೊಳ್ಳಲಾಗಿದೆ. ನೆಲಮಂಗಲ ಸಮೀಪದ ಬಾವಿಕೆರೆ ಬಳಿಯ ಬೆಂಗಳೂರು-ಹಾಸನ ಹೆದ್ದಾರಿಯ ಪಕ್ಕದ ಬೃಹತ್ ಮೈದಾನದಲ್ಲಿ ಸಮಾವೇಶ ಆರಂಭವಾಗಲಿದೆ.
ಸಮಾವೇಶದ ಉದ್ದೇಶದ ಬಗ್ಗೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ʼಧರ್ಮದ ದಂಗಲ್ ಹೆಸರಿನಲ್ಲಿ ಸರ್ವ ಜನಾಂಗದ ಶಾಂತಿ ತೋಟದಲ್ಲಿ ಕೆಲವರು ಅಶಾಂತಿ ಸೃಷ್ಟಿಸುತ್ತಿದ್ದಾರೆ. ನಮ್ಮ ರಾಜ್ಯ ಉತ್ತರ ಪ್ರದೇಶ ಗುಜರಾತ್ ಆಗಲು ಬಿಡಲ್ಲ. ನಮ್ಮ ನೆಲದ ಪರಂಪರೆಗೆ ಧಕ್ಕೆ ಆಗದಂತೆ ಸಮಾವೇಶವನ್ನು ಆಯೋಜಿಸಿದ್ದೇವೆʼ ಎಂದರು.
ರಾಜ್ಯದ ಸಂಪತ್ತು ದುರ್ಬಳಕೆ ಆಗುತ್ತಿದೆ ಎಂದು ಆರೋಪಿಸಿದ ಕುಮಾರಸ್ವಾಮಿ ʼರಾಜ್ಯ ಸರ್ಕಾರ ಹಾಗೂ ಎರಡು ರಾಷ್ಟ್ರೀಯ ಪಕ್ಷಗಳು ನೀರಾವರಿ ಯೋಜನೆಗಳಿಗೆ ಸಂಬಂಧಿಸಿದಂತೆ ಜನರಿಗೆ ಭರವಸೆ ಕೊಟ್ಟರೂ ನಿಗದಿತ ಅವಧಿಯಲ್ಲಿ ಕಾರ್ಯಕ್ರಮ ಮುಗಿಸಿಲ್ಲ. ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಮಾಡಿ ಎಂದು ಮನವಿ ಮಾಡಿದ್ದಾರೆ. ಎತ್ತಿನಹೊಳೆ, ಮಹದಾಯಿ ಯೋಜನೆಗೂ ಸಕಾರಾತ್ಮಕ ಸ್ಪಂದನೆ ಸಿಗುತ್ತಿಲ್ಲʼ ಎಂದು ಸರಕಾರದ ವಿರುದ್ಧ ಅವರು ವಾಗ್ದಾಳಿ ನಡೆಸಿ
ಇದನ್ನೂ ಓದಿ:JDS ಚುನಾವಣಾ ರಣಕಹಳೆ ಇಂದಿನಿಂದ: ಜನತಾ ಜಲಧಾರೆಗೆ ದೇವೇಗೌಡರಿಂದ ಚಾಲನೆ
ರಾಜ್ಯದಲ್ಲಿ ಕಾಣಿಸಿಕೊಂಡ ನೀರಿನ ಸಮಸ್ಯೆ ಬಗ್ಗೆ ಮಾತನಾಡಿ ʼನೀರಿನ ಸಮಸ್ಯೆಯನ್ನು ಸರ್ಕಾರಗಳು ಗಂಭೀರವಾಗಿ ತೆಗೆದುಕೊಂಡಿಲ್ಲ. ಹೀಗೆ ಮುಂದುವರೆದರೆ ಬೆಂಗಳೂರು ನಗರದ ಜನರಿಗೆ ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಲಿದೆ. ಅರ್ಕಾವತಿ ನದಿ ಪುನಶ್ಚೇತನ ಅಂದರು. ಅದು ನಿಂತು ಹೋಯಿತು. ಬೆಂಗಳೂರು ಹಲವು ಕೆರೆಗಳನ್ನು, ರಾಜ ಕಾಲುವೆಗಳನ್ನು ನುಂಗಿ ಹಾಕಿದ್ದಾರೆ. ಅದನ್ನು ಸರಿಪಡಿಸಬೇಕುʼ ಎಂದು ಆಗ್ರಹಿಸಿದರು.
ʼಗಂಗಾ ಆರತಿʼ ಜಲಾಧಾರೆಯ ಹೈಲೈಟ್ಸ್ :
ಜಲಧಾರೆ ಕಾರ್ಯಕ್ರಮದಲ್ಲಿ ಸಂಜೆ 6.30ರ ಹೊತ್ತಿಗೆ ʼಗಂಗಾ ಆರತಿʼ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮಕ್ಕಾಗಿ 20 ಜನ ಪಂಡಿತರ ತಂಡ ವಾರಣಾಸಿಯಿಂದ ಬರಲಿದ್ದಾರೆ. ಸಮಾವೇಶದಲ್ಲಿ ಈ ಅಂಶ ಬಹಳ ಮಹತ್ವದ್ದು ಎಂದು ಕುಮಾರಸ್ವಾಮಿ ತಿಳಿಸಿದರು.
180 ವಿಧಾನಸಭೆ ಕ್ಷೇತ್ರದಲ್ಲಿ ಪ್ರವಾಸ ಮಾಡಲಾಗಿದೆ. ಅಷ್ಟೂ ಕಡೆ ಜಲಧಾರೆ ಕಾರ್ಯಕ್ರಮ ನಡೆದಿದೆ. 15 ಗಂಗಾ ರಥಗಳು ಯಶಸ್ವಿಯಾಗಿ ಸಂಚರಿಸಿವೆ. ಇವುಗಳ ಮೂಲಕ ರಾಜ್ಯದ ಎಲ್ಲಾ ಜೀವ ನದಿಗಳಿಂದ ಸಂಗ್ರಹ ಮಾಡಲಾಗಿರುವ ಪುಣ್ಯಜಲವನ್ನು ಒಂದು ಬೃಹತ್ ಕಲಶಕ್ಕೆ ತುಂಬಿಸಿ ಸಮಾವೇಶದಲ್ಲಿ ಪೂಜೆ ನೆರವೇರಿಸಲಾಗುವುದು ಎಂದರು ಅವರು. ನಮ್ಮ ರಾಜ್ಯದಲ್ಲಿ ನೀರನ್ನು ಸಂಪೂರ್ಣವಾಗಿ ಬಳಕೆ ಮಾಡಲು ಗಂಗಾ ತಾಯಿ ಆಶೀರ್ವಾದ ಪಡೆಯಲು ಈ ಕಾರ್ಯಕ್ರಮ ಆಯೋಜಿಸಲಾಗಿದೆ.
ಸಮಾವೇಶದಲ್ಲಿ ಭಾಗಿಯಾಗುವ ಎಲ್ಲರಿಗೂ ದಾಸೋಹದ ವ್ಯವಸ್ಥೆ ಮಾಡಲಾಗಿದೆ. ಎಲ್ಲವನ್ನೂ ಅಚ್ಚುಕಟ್ಟಾಗಿ ಮಾಡಲಾಗಿದೆ ಎಂದು ಕುಮಾರಸ್ವಾಮಿ ಅವರು ಹೇಳಿದರು.
ಶಾಸಕರಾದ ಡಾ. ಶ್ರೀನಿವಾಸ ಮೂರ್ತಿ, ಮಂಜುನಾಥ್ ಹಾಗೂ ವಿಧಾನ ಪರಿಷತ್ ಸದಸ್ಯ ಭೋಜೇಗೌಡ ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.
ಇದನ್ನೂ ಓದಿ: ಕಾಣದ ಕೈಗಳ ಹಿಡಿತದಲ್ಲಿ ಬಿಜೆಪಿ ಸರ್ಕಾರ: ಇನ್ನೂ ಒಂದು ವರ್ಷ ಇದೇ ಸ್ಥಿತಿ ಎಂದ HDK