ಬೆಂಗಳೂರು: ಕರ್ನಾಟಕ ರಾಜಕಾರಣದಲ್ಲಿ ಅನೇಕ ದಿನಗಳಿಂದ ಚರ್ಚೆಯಾಗುತ್ತಿದ್ದ ಸಿದ್ದರಾಮೋತ್ಸವದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ತಬ್ಬಿಕೊಂಡು ʻನಾವಿಬ್ಬರೂ ಒಟ್ಟಾಗಿದ್ದೇವೆʼ ಎಂದು ಸಂದೇಶ ನೀಡಿದ್ದು ಸುಮ್ಮನೆ ತೋರಿಕೆಗೇ ಎಂಬ ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿದೆ.
ಸಿದ್ದರಾಮೋತ್ಸವ ಎಂದೇ ಪ್ರಸಿದ್ಧಿಯಾಗಿದ್ದ, ಸಿದ್ದರಾಮಯ್ಯ ಅವರ 75ನೇ ವರ್ಷದ ಕಾರ್ಯಕ್ರಮದಲ್ಲಿ ಮಾತನಾಡುವ ಮೊದಲು, ಸಿದ್ದರಾಮಯ್ಯ ಅವರಿಗೆ ರಾಮನಗರದ ರೇಷ್ಮೆ ಶಾಲು, ಸ್ಮರಣಿಕೆ ನೀಡಿ ಶಿವಕುಮಾರ್ ಗೌರವಿಸಿದರು. ಸಿದ್ದರಾಮಯ್ಯ ಅವರನ್ನು ತಬ್ಬಿಕೊಂಡು ಏಕತೆಯ ಸಂದೇಶವನ್ನು ರವಾನಿಸಿದರು.
ನಂತರ ಮಾತನಾಡುತ್ತ, ಸಿದ್ದರಾಮಯ್ಯ ಅವರು ಕೇವಲ ಹಿಂದುಳಿದ ವರ್ಗದ ನಾಯಕನಲ್ಲ. ಸರ್ವಜನಾಂಗಕ್ಕೂ, ಸರ್ವರಿಗೂ ಅವರು ನಾಯಕ. ಈಗೊಂದು ದೊಡ್ಡ ಅವಕಾಶ ನಿಮ್ಮ ಮುಂದಿದೆ. ಅಧಿಕಾರ ಲಕ್ಷ್ಮಿ ನಿಮ್ಮ ಮನೆಗೆ ಬಾಗಿಲಿಗೆ ಬಂದಿದ್ದಾಳೆ. ಬೆಳಕು ಬರೋ ಕಾಲ ಬಂದಿದೆ. ಅದನ್ನು ಬಳಸಿಕೊಳ್ಳಿ ಎಂದಿದ್ದರು.
ರಾಹುಲ್ ಗಾಂಧಿ ತಮ್ಮ ಭಾಷಣದಲ್ಲಿ ಈ ವಿಚಾರವನ್ನು ಉಲ್ಲೇಖಿಸಿದ್ದರು. ಇಬ್ಬರೂ ನಾಯಕರು ಒಬ್ಬರನ್ನೊಬ್ಬರು ಅಪ್ಪಿಕೊಂಡಿದ್ದು ನೋಡಿ ನನಗೆ ಬಹಳ ಸಂತೋಷವಾಯಿತು. ಡಿ.ಕೆ. ಶಿವಕುಮಾರ್ ಒಬ್ಬ ಒಳ್ಳೆಯ ಸಂಘಟಕನೆಂದು ಬೆನ್ನು ತಟ್ಟಿದರು. ಡಿಕೆಶಿ ಅವರು ನೀವು ಅಭೂತಪೂರ್ವವಾಗಿ ಪಕ್ಷ ಸಂಘಟನೆ ಮಾಡಿದ್ದಾರೆ. ನಾನು ಅತ್ಯಂತ ಸ್ಪಷ್ಟವಾಗಿ ಹೇಳುತ್ತೇನೆ. ಈ ಒಗ್ಗಟ್ಟಿನ ಪ್ರದರ್ಶನ ಬಿಜೆಪಿ ಆರ್‌ಎಸ್‌ಎಸ್ ಅನ್ನು ಸೋಲಿಸುವ ಶಕ್ತಿಯನ್ನು ಹೊಂದಿದೆ ಎಂದಿದ್ದರು.
ನಂತರ ಮಾತನಾಡಿದ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ. ಶಿವಕುಮಾರ್ ಇದ್ದಾರೆ. ಅನೇಕ ಬಾರಿ ವಿರೋಧ ಪಕ್ಷದವರು ಹಾಗೂ ಮಾಧ್ಯಮದವರು ತಪ್ಪು ಮಾಹಿತಿ ನೀಡುತ್ತಿದ್ದಾರೆ. ಡಿ.ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯ ನಡುವೆ ಬಿರುಕಿದೆ ಎಂದು ಹೇಳುತ್ತಾರೆ. 75ನೇ ಹುಟ್ಟುಹಬ್ಬ ಆಚರಿಸಲು ಶಿವಕುಮಾರ್ ವಿರೋಧ ಇದೆ ಎಂದು ಹೇಳುತ್ತಾರೆ. ಇದು ವಿರೋಧಪಕ್ಷದವರ ಭ್ರಮೆ ಹಾಗೂ ಕೆಲವು ಮಾಧ್ಯಮಗಳ ಸೃಷ್ಟಿ. ನಾನು ಹಾಗೂ ಶಿವಕುಮಾರ್ ಒಟ್ಟಾಗಿದ್ದೇವೆ. ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದು ಹೇಳಿದ್ದರು.
ಇದನ್ನೂ ಓದಿ | ಸಿದ್ದರಾಮೋತ್ಸವದ ಬಗ್ಗೆ ನಂಗೆ ಆಸಕ್ತಿ ಇಲ್ಲ, ಇದು ಜಲಧಾರೆಯ 50% ಕೂಡಾ ಇಲ್ಲ ಎಂದ ಎಚ್‌ಡಿಕೆ
ರಾಹುಲ್ ಮಾಡಿದ ಸನ್ನೆ
ಸಿದ್ದರಾಮಯ್ಯ ಅವರನ್ನು ಡಿ.ಕೆ. ಶಿವಕುಮಾರ್ ತಬ್ಬಿಕೊಂಡ ವಿಡಿಯೊ ಇದೀಗ ಸಾಮಾಜಿಕ ಜಾಲತಾಣಧಲ್ಲಿ ಹರಿದಾಡುತ್ತಿದೆ. ಮೊದಲಿಗೆ ಸಿದ್ದರಾಮಯ್ಯ ಅವರಿಗೆ ಶಾಲು ಹೊದಿಸಿ, ಇಂದಿರಾ ಗಾಂಧಿಯವರ ಪುಸ್ತಕವೊಂದನ್ನು ಶಿವಕುಮಾರ್ ನೀಡುತ್ತಾರೆ. ಈ ವೇಳೆಯಲ್ಲಿ ಪಕ್ಕ ಕುಳಿತಿದ್ದ ರಾಹುಲ್ ಗಾಂಧಿ ಕೈ ಸನ್ನೆ ಮಾಡಿ, ತಬ್ಬಿಕೊಳ್ಳುವಂತೆ ಶಿವಕುಮಾರ್‌ಗೆ ಹೇಳುತ್ತಾರೆ. ಇದನ್ನು ನೋಡಿದ ಶಿವಕುಮಾರ್ ಒಂದಲ್ಲ, ಎರಡು ಬಾರಿ ಸಿದ್ದರಾಮಯ್ಯ ಅವರನ್ನು ತಬ್ಬಿಕೊಂಡು, ನಾವಿಬ್ಬರೂ ಒಟ್ಟಾಗಿದ್ದೇವೆ ಎಂದು ಸಂದೇಶ ನೀಡುವ ಪ್ರಯತ್ನ ಮಾಡಿದರು.
ಅಂದರೆ ಇಬ್ಬರೂ ನಾಯಕರು ಮನಃಪೂರ್ವಕವಾಗಿ ಒಟ್ಟಾಗಿಲ್ಲ. ಸಿದ್ದರಾಮೋತ್ಸವ ನಂತರ ಕಾಂಗ್ರೆಸ್ ವಿಭಜನೆ ಆಗುತ್ತದೆ ಎಂಬ ವಿಪಕ್ಷಗಳ ಮಾತನ್ನು ಸುಳ್ಳಾಗಿಸುವ ಸಲುವಾಗಿ ಈ ರೀತಿ ಒಂದು ಒಪ್ಪಂದ ಮಾಡಿಕೊಳ್ಳಲಾಗಿದೆ ಎಂಬ ಚರ್ಚೆ ನಡೆಯುತ್ತಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಸಚಿವ ಶ್ರೀರಾಮುಲು, ಇಬ್ಬರನ್ನು (ಸಿದ್ದರಾಮಯ್ಯ ಮತ್ತು ಡಿಕೆಶಿ) ಒಂದು ಮಾಡಬೇಕೆಂದು ದೆಹಲಿಯಿಂದ ಒಬ್ಬ ಅಂಪೈರ್ ಬಂದಿದ್ದರು. ಯಾರನ್ನು ಇನ್ ಮಾಡಬೇಕು, ಯಾರನ್ನು ಔಟ್ ಮಾಡಬೇಕೆಂಬುದು ಅವರಿಗೆ ಗೊತ್ತಾಗಲಿಲ್ಲ. ಔಟ್ ಆದವರನ್ನು ಇನ್ ಮಾಡಿದ್ದಾರೆ. ಇನ್ ಆಗಿದ್ದವರನ್ನು ಔಟ್ ಮಾಡಿದ್ದಾರೆ. ಅಂಪೈರ್ ನಿರ್ಣಯವನ್ನು ತೆಗೆದುಕೊಳ್ಳದೆ ಗೊಂದಲಕ್ಕೆ ಸಿಲುಕಿಸಿ ಯಾವುದೇ ನಿರ್ಧಾರ ಕೈಗೊಳ್ಳಲಾಗದೆ ಹಿಂದಕ್ಕೆ ತೆರಳಿದ್ದಾರೆ ಎಂದು ರಾಹುಲ್ ಗಾಂಧಿ ಬಗ್ಗೆ ಹೆಸರು ಹೇಳದೆ ಟೀಕಿಸಿದ್ದಾರೆ.
ಇದನ್ನೂ ಓದಿ | ಸಿದ್ದರಾಮೋತ್ಸವ ಎಫೆಕ್ಟ್ ಕಡೆಗಣಿಸುವಂತಿಲ್ಲ; ಅಮಿತ್ ಶಾಗೆ ಯಡಿಯೂರಪ್ಪ ರಿಪೋರ್ಟ್