Site icon Vistara News

ವಿಜಯೇಂದ್ರನಿಗೆ ಸಾಮರ್ಥ್ಯ ಇದೆ, ಭವಿಷ್ಯದಲ್ಲಿ ಅವಕಾಶ ಸಿಗಲಿದೆ: BSY

Vijayendra BJP yeddyurappa

ಬೆಂಗಳೂರು: ವಿಧಾನ ಪರಿಷತ್‌ ಚುನಾವಣೆಗೆ ಬಿ.ವೈ. ವಿಜಯೇಂದ್ರ ಅವರಿಗೆ ಟಿಕೆಟ್‌ ಕೈತಪ್ಪಿದ ನಂತರ ಇದೇ ಮೊದಲ ಬಾರಿಗೆ ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ ಪ್ರತಿಕ್ರಿಯೆ ನೀಡಿದ್ದಾರೆ. ವಿಜಯೇಂದ್ರನಿಗೆ ಸಾಮರ್ಥ್ಯ ಇದೆ, ಭವಿಷ್ಯದಲ್ಲಿ ಅವಕಾಶಗಳು ಸಿಗಲಿವೆ ಎಂದು ತಿಳಿಸಿದ್ದಾರೆ.

ವಿಧಾನಸಭೆಯಿಂದ ಪರಿಷತ್‌ಗೆ ಬಿಜೆಪಿಯಿಂದ ನಾಲ್ಕು ಅಭ್ಯರ್ಥಿಗಳು ಆಯ್ಕೆ ಆಗುವ ಅವಕಾಶವಿದೆ. ಹದಿನೈದು ದಿನದ ಹಿಂದೆ ರಾಜ್ಯ ಬಿಜೆಪಿ ಕೋರ್‌ ಕಮಿಟಿಯಿಂದ ಇಪ್ಪತ್ತು ಹೆಸರುಗಳನ್ನು ಕೇಂದ್ರಕ್ಕೆ ಶಿಫಾರಸು ಮಾಡಲಾಗಿತ್ತು. ಅದರಲ್ಲಿ ವಿಜಯೇಂದ್ರ ಹೆಸರು ಸಹ ಇತ್ತು. ಅವರನ್ನು ವಿಧಾನ ಪರಿಷತ್‌ಗೆ ಆಯ್ಕೆ ಮಾಡಿ ಮಂತ್ರಿ ಮಾಡುವ ಉಪಾಯವನ್ನು ಬಿಜೆಪಿಯ ಒಂದು ಗುಂಪು ಹೊಂದಿತ್ತು. ಇನ್ನೇನು ಅವರ ಟಿಕೆಟ್‌ ಖಚಿತ ಎಂಬ ಭಾವನೆಯೂ ಇತ್ತು. ಆದರೆ ಕೊನೆ ಕ್ಷಣದಲ್ಲಿ ವರಿಷ್ಠರು ಖಡಕ್‌ ನಿರ್ಧಾರ ಕೈಗೊಂಡು, ವಿಜಯೇಂದ್ರ ಹೆಸರನ್ನು ಮಂಗಳವಾರ ತಿರಸ್ಕರಿಸಿದರು. ಈ ಘಟನೆ ನಂತರ ವಿಜಯೇಂದ್ರ ಬಹಿರಂಗಪತ್ರವೊಂದನ್ನು ಬರೆದು, ಯಾರೂ ಪಕ್ಷದ ಕುರಿತು ಟೀಕೆಗಳನ್ನು ಮಡಬಾರದು ಎಂದು ಕಾರ್ಯಕರ್ತರು ಮತ್ತು ಅಭಿಮಾನಿಗಳನ್ನು ಕೋರಿದ್ದರು. ತಮಗೆ ಸಾಮರ್ಥ್ಯ ಇದೆ ಎಂದು ಬಿಜೆಪಿ ವರಿಷ್ಠರಿಗೆ ಪರೋಕ್ಷವಾಗಿ ತಿಳಿಸಿದ್ದರು. ಇದೆಲ್ಲ ಘಟನೆ ನಂತರ ಮೊದಲ ಬಾರಿಗೆ ಯಡಿಯೂರಪ್ಪ ಪ್ರತಿಕ್ರಿಯಿಸಿದ್ದು, ಅವರೂ ವಿಜಯೇಂದ್ರ ಅವರ ಸಾಮರ್ಥ್ಯದ ಬಗ್ಗೆ ಮಾತನಾಡಿದ್ದಾರೆ.

ಈ ಕುರಿತು ವಿಧಾನಸೌಧದಲ್ಲಿ ಪ್ರತಿಕ್ರಿಯಿಸಿದ ಬಿಎಸ್‌ವೈ, ವಿಜಯೇಂದ್ರಗೆ ವಿಧಾನ ಪರಿಷತ್‌ ಟಿಕೆಟ್‌ ಕೈತಪ್ಪಿದ್ದಕ್ಕೆ ಬಗ್ಗೆ ಅಸಮಾಧಾನ ಇಲ್ಲ. ವಿಜಯೇಂದ್ರನಿಗೆ ಭವಿಷ್ಯದಲ್ಲಿ ಅವಕಾಶ ಇದೆ, ಅವನಿಗೆ ಸಾಮರ್ಥ್ಯ ಇದೆ. ಸಾಮರ್ಥ್ಯ, ನಿಷ್ಠೆ ಇರುವವರನ್ನು ಪಕ್ಷ ಎಂದಿಗೂ ಕೈಬಿಡುವುದಿಲ್ಲ. 2023ರಲ್ಲಿ ಕರ್ನಾಟಕದಲ್ಲಿ ಅಧಿಕೃಕ್ಕೆ ಬರುವ ಗುರಿಯೊಂದಿಗೆ ಎಲ್ಲ ಕೆಲಸಗಳನ್ನೂ ಮಾಡುತ್ತಾನೆ ಎಂಬ ವಿಶ್ವಾಸವಿದೆ. ಮುಂದಿನ ಚುನಾವಣೆಯಲ್ಲೂ ಬಿಜೆಪಿ ಗೆಲ್ಲುತ್ತದೆ, ಬಹುಮತ ಪಡೆಯುತ್ತದೆ ಎಂದರು.

ಟಿಕೆಟ್‌ ನಿರಾಕರಣೆಯಲ್ಲಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌ ಹಸ್ತಕ್ಷೇಪ ಇದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಬಿಎಸ್‌ವೈ, ಅವರಿಗೂ ಇದಕ್ಕೂ ಸಂಬಂಧವಿಲ್ಲ. ಅನಗತ್ಯವಾಗಿ ಮಾಧ್ಯಮಗಳಲ್ಲಿ ಅವರ ಹೆಸರು ಹೇಳಲಾಗುತ್ತಿದೆ ಎಂದರು.

ವಿಜಯೇಂದ್ರ ಅವರು ಈಗಾಗಲೆ ಅನೇಕ ಬಾರಿ ಸಾಮರ್ಥ್ಯ ಸಾಬೀತುಪಡಿಸಿದ್ದಾರಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಬಿಎಸ್‌ವೈ, ಈಗಾಗಲೆ ಪಕ್ಷ ಅವರಿಗೆ ರಾಜ್ಯ ಉಪಾಧ್ಯಕ್ಷ ಸ್ಥಾನ ನೀಡಿದೆ. ಭವಿಷ್ಯದಲ್ಲಿ ಮತ್ತಷ್ಟು ಅವಕಾಶ ಮಾಡಿಕೊಡುತ್ತಾರೆ. ಈ ಕುರಿತು ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ತೀರ್ಮಾನ ಮಾಡುತ್ತಾರೆ ಎಂದರು. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ವಿಜಯೇಂದ್ರಗೆ ಟಿಕೆಟ್‌ ನೀಡಲಾಗುತ್ತದೆಯೇ ಎಂಬ ಕುರಿತು ಪ್ರತಿಕ್ರಿಯಿಸಿ, ಟಿಕೆಟ್‌ ಬಗ್ಗೆ ಈಗಲೇ ಚರ್ಚೆ ಏಕೆ? ಸಂದರ್ಭ ಬಂದಾಗ ನೋಡೋಣ ಎಂದು ಹೇಳಿ ಹೊರಟರು.

ಇದನ್ನೂ ಓದಿ | ಲಕ್ಷ್ಮಣ ಸವದಿಗೆ ಮತ್ತೆ ಅದೃಷ್ಟ: ವಿಧಾನ ಪರಿಷತ್‌ ಬಿಜೆಪಿ ಪಟ್ಟಿ ಘೋಷಣೆ

Exit mobile version