ರಮೇಶ ದೊಡ್ಡಪುರ, ಬೆಂಗಳೂರು
ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದ ಸಮುದಾಯಗಳಿಗೆ ಮೀಸಲಾತಿ ನೀಡುವ ಮೂಲಕ ಸಮಾನ ಅವಕಾಶಗಳನ್ನು ನೀಡಬೇಕು ಎಂದು ಸಂವಿಧಾನದಲ್ಲಿ ನೀಡಿದ ಅಧಿಕಾರ ಇಂದು ರಾಜಕೀಯ ದಾಳವಾಗಿ ಮಾರ್ಪಟ್ಟಿರುವುದು ಅತ್ಯಂತ ಸ್ಪಷ್ಟವಾಗಿದೆ.
ವಿಧಾನಸಭೆ ಚುನಾವಣೆಗೂ ಮುನ್ನ ಎಲ್ಲ ಸಮುದಾಯಗಳೂ ತಮ್ಮ ತಮ್ಮ ಮತದಾರರ ಸಂಖ್ಯೆಯನ್ನು ಮುಂದಿಟ್ಟುಕೊಂಡು ಸರ್ಕಾರದ ಮೇಲೆ ಒತ್ತಡ ಹೇರುತ್ತಿವೆ. ಇದು ಕೇವಲ ಆಡಳಿತಾರೂಢ ಬಿಜೆಪಿಗೆ ಮಾತ್ರವಲ್ಲದೆ ಎಲ್ಲ ಪಕ್ಷಗಳಲ್ಲಿರುವ ಸಮುದಾಯಗಳ ಮುಖಂಡರಿಗೂ ಒತ್ತಡವನ್ನು ಸೃಷ್ಟಿಸಿದೆ.
ಎಸ್‌ಸಿಎಸ್‌ಟಿ ಮೀಸಲಾತಿ
ಸಂವಿಧಾನದಲ್ಲಿ ಮೀಸಲಾತಿಯನ್ನು ಸಾಮಾಜಿಕ ಹಾಗೂ ಶೈಕ್ಷಣಿಕ ಹಿಂದುಳಿದ ಸಮುದಾಯಗಳಿಗೆ ನೀಡಲು ತಿಳಿಸಲಾಗಿತ್ತು. ಅದರಂತೆ ಮೀಸಲಾತಿ ಜಾರಿಯಾದಾಗ ಕರ್ನಾಟಕದಲ್ಲಿ ಆರು ಎಸ್‌ಸಿ ಹಾಗೂ ಆರು ಎಸ್‌ಟಿ ಸಮುದಾಯಗಳಿಗೆ ಮೀಸಲಾತಿ ಸಿಕ್ಕಿತ್ತು. ನಂತರದಲ್ಲಿ ಒಂದೊಂದೇ ಜಾತಿಗಳು ಸೇರ್ಪಡೆ ಆಗುತ್ತ ಇದೀಗ ಎಸ್‌ಸಿ ಪಟ್ಟಿಯಲ್ಲಿ 101 ಜಾತಿಗಳು ಹಾಗೂ ಎಸ್‌ಟಿ ಪಟ್ಟಿಯಲ್ಲಿ 52 ಜಾತಿಗಳು ಸೇರ್ಪಡೆಯಾಗಿವೆ.
ಅನೇಕ ದಶಕಗಳಿಂದಲೂ ಎಸ್‌ಸಿ ಸಮುದಾಯಕ್ಕೆ ಶೇ.೧೫ರಿಂದ ಶೇ.17ಕ್ಕೆ ಹಾಗೂ ಎಸ್‌ಟಿ ಮೀಸಲಾತಿ ಪ್ರಮಾಣವನ್ನು ಶೇ.3ರಿಂದ ಶೇ.7ಕ್ಕೆ ರಾಜ್ಯ ಸರ್ಕಾರ ಹೆಚ್ಚಳ ಮಾಡಿ ಸುಗ್ರೀವಾಜ್ಞೆ ಹೊರಡಿಸಿದೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವಿದ್ದಾಗ ರಚಿಸಲಾಗಿದ್ದ ನ್ಯಾ. ನಾಗಮೋಹನದಾಸ್ ನೇತೃತ್ವದಲ್ಲಿ ರಚಿಸಿದ್ದ ಆಯೋಗದ ವರದಿಯನ್ನು ಇದಕ್ಕೆ ಆಧಾರವಾಗಿ ಸ್ವೀಕರಿಸಲಾಗಿದೆ. ಮುಂಬರುವ ಬೆಳಗಾವಿ ಅಧಿವೇಶನದಲ್ಲಿ ಮಸೂದೆಯನ್ನು ಮಂಡಿಸಿ ಉಭಯ ಸದನಗಳ ಒಪ್ಪಿಗೆ ಪಡೆಯಲು ಸರ್ಕಾರ ಸಿದ್ಧವಾಗಿದೆ.
ಅದಕ್ಕೂ ಮುನ್ನ ರಾಜ್ಯಾದ್ಯಂತ ಬಿಜೆಪಿ ಸಮಾವೇಶಗಳನ್ನು ಆಯೋಜಿಸುತ್ತಿದ್ದು, ಎಸ್‌ಸಿಎಸ್‌ಟಿ ಸಮುದಾಯಕ್ಕೆ ನಿಜವಾಗಿಯೂ ನ್ಯಾಯ ದೊರಕಿಸಿಕೊಟ್ಟಿದ್ದು ತಾನೇ ಎಂದು ಹೇಳಿಕೊಳ್ಳುತ್ತಿದೆ. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ವಾಗ್ದಾಳಿ ನಡೆಸುತ್ತಿದ್ದು, ನಿಜವಾಗಿ ನ್ಯಾಯ ಕೊಡುವ ಕೆಲಸ ಮಾಡಿದ್ದು ಜೆಡಿಎಸ್ ಎಂದು ಎಚ್.ಡಿ. ಕುಮಾರಸ್ವಾಮಿ ಸಹ ಹೇಳಿದ್ದಾರೆ. ಈ ಸಮುದಾಯಗಳು ತಮ್ಮ ಪಾಲು ಸಿಕ್ಕಿತೆಂದು ಸುಮ್ಮನಿದ್ದು, ಉಳಿದ ಸಮುದಾಯಗಳಲ್ಲಿ ನಿರೀಕ್ಷೆ ಗರಿಗೆದರಿದೆ.
ಒಕ್ಕಲಿಗ ಮೀಸಲಾತಿ
ಕರ್ನಾಟಕದಲ್ಲಿ ಪ್ರಬಲ ಸಮುದಾಯವಾದ ಒಕ್ಕಲಿಗರು ತಮ್ಮ ಮೀಸಲಾತಿ ಪ್ರಮಾಣವನ್ನು ಹೆಚ್ಚಳ ಮಾಡಬೇಕೆಂದು ಸರ್ಕಾರದ ಮೇಲೆ ಒತ್ತಡ ಆರಂಭಿಸಿದ್ದಾರೆ. ಮುಂಬರುವ ಜನವರಿಯಿಂದ ನಿಜವಾದ ಹೋರಾಟ ಮಾಡಲಾಗುವುದು, ಅದಕ್ಕೂ ಮುನ್ನವೇ ಸರ್ಕಾರ ಕ್ರಮ ಕೈಗೊಂಡರೆ ಒಳ್ಳೆಯದು ಎಂಬ ಸಂದೇಶವನ್ನು ಬೆಂಗಳೂರಿನಲ್ಲಿ ಭಾನುವಾರ ನಡೆದ ಪೂರ್ವಭಾವಿ ಸಭೆಯಲ್ಲಿ ನೀಡಲಾಗಿದೆ.
ಈ ಸಭೆಯಲ್ಲಿ ಸಮುದಾಯದ ಧಾರ್ಮಿಕ ಮುಖಂಡರು, ವಿವಿಧ ಪಕ್ಷಗಳ ರಾಜಕೀಯ ಮುಖಂಡರು ಭಾಗವಹಿಸಿದ್ದರು. ಎಲ್ಲರೂ ಪಕ್ಷ ಭೇದ ಮರೆತು ಮೀಸಲಾತಿ ಹೆಚ್ಚಳಕ್ಕೆ ಹೋರಾಟ ಮಾಡಬೇಕು ಎಂದು ಕರೆ ನೀಡಿದರು, ಸಂಕಲ್ಪ ತೊಟ್ಟರು.
ಪಂಚಮಸಾಲಿ ಮೀಸಲಾತಿ
ವೀರಶೈವ ಲಿಂಗಾಯತ ಸಮುದಾಯದ ಪಂಚಮಸಾಲಿ ಸಮುದಾಯವು ೩ಎ ಮೀಸಲಾತಿಯಿಂದ 2ಎ ಮೀಸಲಾತಿ ನೀಡಬೇಕು ಎಂದು ಸಾಕಷ್ಟು ಸಮಯದಿಂದ ಒತ್ತಾಯ ಮಾಡುತ್ತಲೇ ಬಂದಿದೆ. ಕೂಡಲಸಂಗಮದ ಬಸವ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಕಳೆದ ವರ್ಷ ಕೂಡಲ ಸಂಗಮದಿಂದ ಬೆಂಗಳೂರಿನವರೆಗೆ ಪಾದಯಾತ್ರೆ ನಡೆಸಿ ಸರ್ಕಾರಕ್ಕೆ ಎಚ್ಚರಿಕೆ ನೀಡಲಾಗಿತ್ತು.
ನಂತರ ಸರ್ಕಾರ ಮಾತು ಕೊಟ್ಟಂತೆ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದಿಂದ ಕುಲಶಾಸ್ತ್ರ ಅಧ್ಯಯನವನ್ನು ನಡೆಸುತ್ತಿದೆ. ಡಿಸೆಂಬರ್‌ನಲ್ಲಿ ಆಯೋಗದ ವರದಿ ಸಲ್ಲಿಕೆಯಾಗುವ ಸಾಧ್ಯತೆಯಿದ್ದು, ಅದನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕಿದೆ. ಅದಕ್ಕೂ ಮೊದಲೇ ರಾಜ್ಯಾದ್ಯಂತ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹಾಗೂ ಹರಿಹರದ ವಚನಾನಂದ ಸ್ವಾಮೀಜಿ ಜಾಗೃತಿ ಸಭೆಗಳನ್ನು ನಡೆಸುತ್ತಿದ್ದಾರೆ. ಜನರಲ್ಲಿ ವಿಷಯವನ್ನು ಜೀವಂತವಾಗಿ ಇಡಲಾಗುತ್ತಿದ್ದು, ಆಗಾಗ್ಗೆ ದೊರೆಯುವ ಗಡುವುಗಳಿಂದ ಸರ್ಕಾರ ಇಕ್ಕಟ್ಟಿಗೆ ಸಿಲುಕಿದೆ.
ಬಿಲ್ಲವ-ಈಡಿಗ ಮೀಸಲಾತಿ
ಕರ್ನಾಟಕದ ಕರಾವಳಿ ಜತೆಗೆ ಉತ್ತರ ಕರ್ನಾಟಕದಲ್ಲೂ ಇರುವ ಬಿಲ್ಲವ-ಈಡಿಗ-ನಾಮಧಾರಿ ಸಮುದಾಯಕ್ಕೆ 2ಎ ಮೀಸಲಾತಿ ಹೆಚ್ಚಳ ಮಾಡಬೇಕೆಂಬ ಒತ್ತಾಯ ತೀವ್ರವಾಗಿದೆ. ಸಮುದಾಯವನ್ನು ಶಾಂತವಾಗಿಸುವ ಸಲುವಾಗಿ ಇತ್ತೀಚೆಗೆ ರಾಜ್ಯ ಸರ್ಕಾರ ವಿಶೇಷ ಕೋಶವನ್ನು ರಚನೆ ಮಾಡಿ ಆದೇಶ ಹೊರಡಿಸಿತ್ತು. ಆದರೆ ಆದೇಶದ ಪ್ರತಿಯನ್ನು ಬ್ರಹ್ಮಶ್ರೀ ನಾರಾಯಣಗುರು ಶಕ್ತಿ ಪೀಠದ ಶ್ರೀ ಪ್ರಣವಾನಂದ ಸ್ವಾಮೀಜಿ ವಿರೋಧಿಸಿದರು.
ಜನವರಿ 6ರಿಂದ ಮಂಗಳೂರಿನಿಂದ ಬೆಂಗಳೂರಿಗೆ ಪಾದಯಾತ್ರೆ ನಡೆಸುವುದಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಎರಡೂವರೆ ವರ್ಷದಿಂದ ಇದಕ್ಕೆ ಒತ್ತಾಯ ಮಾಡುತ್ತಿದ್ದರೂ ಸರ್ಕಾರ ಸ್ಪಂದನೆ ಮಾಡುತ್ತಿಲ್ಲ ಎಂದಿದ್ದಾರೆ. ಆಡಳಿತಾರೂಢ ಬಿಜೆಪಿಗೆ ಮುಖ್ಯವಾಗಿ ಕರಾವಳಿ ಪ್ರದೇಶದಲ್ಲಿ ಬಹುದೊಡ್ಡ ಮತಬ್ಯಾಂಕ್ ಆಗಿರುವ ಬಿಲ್ಲವ ಸಮುದಾಯವನ್ನು ಸಮಾಧಾನ ಮಾಡುವ ಅನಿವಾರ್ಯತೆ ಎದುರಾಗಿದೆ.
ವಿಶ್ವಕರ್ಮ ಮೀಸಲಾತಿ
ರಾಜ್ಯಾದ್ಯಂತ ಹರಡಿಕೊಂಡಿರುವ ವಿಶ್ವಕರ್ಮ ಸಮುದಾಯವೂ ಮೀಸಲಾತಿಗಾಗಿ ಪಟ್ಟು ಹಿಡಿದಿದೆ. ಇತ್ತೀಚೆಗೆ ಮಂಡ್ಯದಲ್ಲಿ ಈ ಕುರಿತು ಮಾತನಾಡಿರುವ ಬಿಜೆಪಿ ವಿಧಾನ ಪರಿಷತ್ ಸದಸ್ಯ ಕೆ.ಪಿ. ನಂಜುಂಡಿ, ಈಗಾಗಲೆ ಎಲ್ಲ ಕಡೆ ಸಮುದಾಯದಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಸುಮಾರು ಐವತ್ತು ಸಾವಿರ ಜನರನ್ನು ಸೇರಿಸಿ ಸಮಾವೇಶ ಮಾಡುವ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ನೀಡಲಾಗುತ್ತದೆ. ಬೀದರ್‌ನಿಂದ ಬೆಂಗಳೂರಿನವರೆಗೂ ಪಾದಯಾತ್ರೆ ನಡೆಸುತ್ತೇವೆ ಎಂದು ಎಚ್ಚರಿಸಿದ್ದಾರೆ.
ಬಲಿಜ ಮೀಸಲಾತಿ
ರಾಜ್ಯದ ವಿವಿಧೆಡೆ ವಾಸಿಸುವ ಬಲಿಜ ಸಮುದಾಯವು 2A ಮೀಸಲಾತಿಗಾಗಿ ಒತ್ತಾಯ ಮಾಡುತ್ತಿದೆ. ಈ ಕುರಿತು ಬಲಿಜ ಸಂಘದ ವತಿಯಿಂದ ಸಮಾಲೋಚನಾ ಸಭೆ ನಡೆಸಲಾಗಿದ್ದು, ಸರ್ಕಾರ ಆದಷ್ಟೂ ಬೇಗ ಬಲಿಜ ಸಮುದಾಯಕ್ಕೆ 2A ಮೀಸಲಾತಿ ನೀಡಬೇಕು ಎಂದು ಒತ್ತಾಯಿಸಿದೆ. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಎಂದು ರಾಜ್ಯ ಬಲಿಜ ಸಂಘದ ಅಧ್ಯಕ್ಷ ಡಾ. ಟಿ ವೇಣುಗೋಪಾಲ್ ಅವರ ನೇತೃತ್ವದಲ್ಲಿ ಎಚ್ಚರಿಕೆಯನ್ನೂ ನೀಡಲಾಗಿದೆ.
ಆರ್ಥಿಕ ಹಿಂದುಳಿದ ಮೀಸಲಾತಿ
ವಿವಿಧ ಸಮುದಾಯಗಳಿಗೆ ಮೀಸಲಾತಿ ನೀಡುತ್ತಿರುವುದರಿಂದ, ಮುಖ್ಯವಾಗಿ ಬ್ರಾಹ್ಮಣ ಸಮುದಾಯ ಬೇಸರಗೊಂಡಿದ್ದನ್ನು ಸರಿಪಡಿಸಲು ಕೇಂದ್ರ ಸರ್ಕಾರ ಆರ್ಥಿಕ ಹಿಂದುಳಿದವರ ಮೀಸಲಾತಿ (EWS) ಮೀಸಲಾತಿಯನ್ನು ಜಾರಿ ಮಾಡಿದೆ. ಎಲ್ಲಿಯೂ ಬ್ರಾಹ್ಮಣ ಸಮುದಾಯಕ್ಕೆ ಎಂದು ತಿಳಿಸಿಲ್ಲವಾದರೂ, ಉಳಿದ ಎಲ್ಲ ಸಮುದಾಯಗಳೂ ಒಂದಲ್ಲ ಒಂದು ಮೀಸಲಾತಿ ವರ್ಗದಲ್ಲಿ ಇರುವುದರಿಂದ ಹೊರಗೆ ಉಳಿಯುವುದು ಇದೊಂದೇ ಸಮುದಾಯ. ಈ 10% ಮೀಸಲಾತಿಯನ್ನು ಕೇಂದ್ರದ ಶಿಕ್ಷಣ ಸಂಸ್ಥೆಗಳು ಹಾಗೂ ಉದ್ಯೋಗದಲ್ಲಿ ಅನ್ವಯ ಮಾಡಲಾಗಿದೆ.
ಬಿ.ಎಸ್. ಯಡಿಯೂರಪ್ಪ ಸಿಎಂ ಆಗಿದ್ದಾಗ ರಾಜ್ಯದಲ್ಲೂ ಇಡಬ್ಲ್ಯುಎಸ್ ಕೋಟಾ ಜಾರಿ ಮಾಡಲು ಸಂಪುಟ ನಿರ್ಧಾರ ಮಾಡಲಾಗಿದೆ. ಆದರೆ ನಂತರ ಅದನ್ನು ಆದೇಶವಾಗಿ ಹೊರಡಿಸಿಲ್ಲ. ಇದೀಗ ರಾಜ್ಯದಲ್ಲಿ ಎಸ್‌ಸಿಎಸ್‌ಟಿ ಮೀಸಲಾತಿಯನ್ನು ಹೆಚ್ಚಳ ಮಾಡಿರುವುದರಿಂದ ಜನರಲ್ ಕೋಟಾದಲ್ಲಿದ್ದ ಆರು ಶೇಕಡಾ ಮೀಸಲಾತಿ ಕಡಿತವಾಗಿದೆ. ಇದು ಬ್ರಾಹ್ಮಣ ಸಮುದಾಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಈ ಕೋಪವನ್ನು ತಣಿಸಬೇಕೆಂದರೆ ರಾಜ್ಯದಲ್ಲೀ ಇಡಬ್ಲ್ಯುಎಸ್ ಕೋಟಾವನ್ನು ಜಾರಿ ಮಾಡಲೇಬೇಕಾದ ಅನಿವಾರ್ಯತೆ ಸಿಎಂ ಬೊಮ್ಮಾಯಿ ಸರ್ಕಾರದ ಮೇಲಿದೆ. ಇಲ್ಲದಿದ್ದರೆ ಬಿಜೆಪಿ ತನ್ನ ಸಾಂಪ್ರದಾಯಿಕ ಮತಗಳನ್ನು ಕಳೆದುಕೊಳ್ಳುವ ಅಪಾಯ ಎದುರಿಸುತ್ತಿದೆ.
ಎಚ್ಚರ ತಪ್ಪಿದರೆ ತಿರುಗುಬಾಣ
ಚುನಾವಣೆ ಹತ್ತಿರದಲ್ಲಿರುವಾಗ ಇಂತಹ ಯಾವುದೇ ಬೇಡಿಕೆಯನ್ನು ಸ್ಪಷ್ಟವಾಗಿ ತಿರಸ್ಕರಿಸುವ ರಿಸ್ಕ್ ಅನ್ನು ಯಾವುದೇ ರಾಜಕೀಯ ಪಕ್ಷ ತೆಗೆದುಕೊಳ್ಳುವುದಿಲ್ಲ. ಆದರೆ, ಮೀಸಲಾತಿ ನೀಡುತ್ತೇವೆ ಎಂದು ಚುನಾವಣೆ ಕಾರಣಕ್ಕೆ ಭರವಸೆ ನೀಡಿಬಿಟ್ಟರೆ ಭವಿಷ್ಯದಲ್ಲಿ ಇದೇ ಮುಳುವಾಗುತ್ತದೆ ಎಂಬ ಆತಂಕವೂ ಅನೇಕ ರಾಜಕೀಯ ನಾಯಕರನ್ನು ಕಾಡುತ್ತಿದೆ.
ಮೀಸಲಾತಿ ಹೆಚ್ಚಳ ಮಾಡುವ ಮೂಲಕ ಚುನಾವಣೆಯಲ್ಲಿ ಲಾಭ ಮಾಡಿಕೊಳ್ಳಬಹುದು ಎಂದು ತಿಳಿದಿದ್ದ ಸರ್ಕಾರ, ಈ ವಿಚಾರದಲ್ಲಿ ಸ್ವಲ್ಪ ಎಚ್ಚರ ತಪ್ಪಿದರೂ ತಮಗೇ ತಿರುಗುಬಾಣವಾಗುತ್ತದೆ ಎಂಬುದನ್ನು ಅರಿಯುತ್ತಿದೆ. ಮೀಸಲಾತಿ ಹೆಚ್ಚಳ ಮಾಡುವ ಶಿಫಾರಸನ್ನು ಕೇಂದ್ರಕ್ಕೆ ವರ್ಗಾವಣೆ ಮಾಡುವುದಷ್ಟೆ ಅಲ್ಲದೆ, ಅವೆಲ್ಲವನ್ನೂ ನ್ಯಾಯಾಲಯದ ಒರೆಗಲ್ಲಿನಲ್ಲೂ ಗೆಲ್ಲಿಸಿಕೊಂಡು ಬರಬೇಕಾದ ಅಗ್ನಿ ಪರೀಕ್ಷೆಗೆ ಸಜ್ಜಾಗುತ್ತಿದೆ.
ಇದನ್ನೂ ಓದಿ | SCST ಐಕ್ಯತಾ ಸಮಾವೇಶ | ಬಿಜೆಪಿಯ ಮೀಸಲಾತಿ ತಂತ್ರಕ್ಕೆ ಕಾಂಗ್ರೆಸ್ ಪ್ರತಿತಂತ್ರ; ದಿನಾಂಕ, ಸ್ಥಳ ಫಿಕ್ಸ್