Site icon Vistara News

ವಿಸ್ತಾರ ಸಂಪಾದಕೀಯ: ರಾಜಕೀಯ ವಾಗ್ಯುದ್ಧ ಅಂಕೆ ಮೀರದಿರಲಿ

Fight

#image_title

ಇತ್ತೀಚೆಗೆ ರಾಜಕಾರಣಿಗಳ ಪರಸ್ಪರ ದೋಷಾರೋಪ, ವಾಕ್‌ ಪ್ರಹಾರಗಳು ಹೆಚ್ಚಿವೆ. ಇದಕ್ಕೆ ಇನ್ನು ಕೆಲವೇ ತಿಂಗಳಲ್ಲಿ ಬರಲಿರುವ ಲೋಕಸಭೆ ಚುನಾವಣೆ ಹಾಗೂ ಸದ್ಯದಲ್ಲೇ ಇರುವ ವಿಧಾನಸಭೆ ಚುನಾವಣೆ. ರಾಜ್ಯ ಸರ್ಕಾರದ ಮಂತ್ರಿಯೊಬ್ಬರು ಮಾಜಿ ಮುಖ್ಯಮಂತ್ರಿಯವರ ವಿರುದ್ಧ ನಾಲಿಗೆ ಸಡಿಲ ಬಿಟ್ಟು ದ್ವೇಷವನ್ನು ಪ್ರಚೋದಿಸುವಂತೆ ಮಾತಾಡಿರುವುದು ವರದಿಯಾಗಿದೆ. ಅದೇ ಪಕ್ಷದ ಇನ್ನೊಬ್ಬ ಶಾಸಕರು ಕೂಡ ಹೀಗೇ ಮಾತನಾಡಿದ್ದಾರೆ. ಟಿಪ್ಪು ಸುಲ್ತಾನ್‌ ವಿಚಾರದಲ್ಲಿ ಈ ಮಾತಿನ ಕೂರಂಬುಗಳು ಹಾರಾಡಿವೆ. ಕೆಲವೇ ದಿನಗಳ ಮುನ್ನ ಇನ್ನೊಂದು ಪಕ್ಷದವರೂ ಈ ಪಕ್ಷದ ಮುಖಂಡರನ್ನು ಪಿಂಪ್‌ಗಳಿಗೆ ಹೋಲಿಸಿದ್ದೂ ವರದಿಯಾಗಿತ್ತು. ಟೀಕೆ, ವಾಕ್‌ಪ್ರಹಾರಗಳು ಲಕ್ಷ್ಮಣರೇಖೆ ದಾಟಿ ಹೋಗದಂತೆ ನೋಡಿಕೊಳ್ಳುವುದು ಖಂಡಿತವಾಗಿಯೂ ಅಗತ್ಯವಿದೆ.

ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ಪಕ್ಷಗಳ ನಡುವೆ ವಾಕ್ಸಮರ ಜೋರಾಗುವುದು ಸಹಜ. ಆದರೆ ಅದು ಮಿತಿಯನ್ನು ಮೀರಿ ಅಶ್ಲೀಲವಾಗಿ ಬೈದಾಡಿಕೊಳ್ಳುತ್ತಿರುವುದು, ಎದುರಿನವರ ಮೇಲೆ ದ್ವೇಷ ಸೃಷ್ಟಿಸುವಂತಿರುವುದು ವಿಷಾದಕರ. ವಾಗ್ದಾಳಿಗಳು ಸಭ್ಯತೆಯ ಎಲ್ಲೆ ಮೀರದಂತಿರಬೇಕು, ಆರೋಗ್ಯಕರವಾಗಿರಬೇಕು. ವಾಚಾಮಗೋಚರವಾಗಿ ಬೈದಾಡಿಕೊಳ್ಳುವುದು ರಾಜಕೀಯ ಪಕ್ಷಗಳ ಮುಖಂಡರಿಗೆ ಖಂಡಿತ ಶೋಭೆ ತರದು. ಎಲ್ಲೆ ಮೀರಿದಾಗ ಇವು ಕೋರ್ಟ್‌ ಅಂಗಳವನ್ನೂ ಪ್ರವೇಶಿಸಬಹುದು. ಆಗ ನ್ಯಾಯಾಂಗದಿಂದ ಪಾಠ ಹೇಳಿಸಿಕೊಳ್ಳಬೇಕಾಗುತ್ತದೆ. ಇತ್ತೀಚೆಗೆ ಸುಪ್ರೀಂ ಕೋರ್ಟ್‌ ಕೂಡ ಒಂದು ಪ್ರಕರಣದಲ್ಲಿ, ದ್ವೇಷ ಭಾಷಣ ಮಾಡುವವರು ಯಾರೇ ಆಗಿದ್ದರೂ ಅವರ ವಿರುದ್ಧ ಸ್ವಯಂಪ್ರೇರಿತವಾಗಿ ಕ್ರಮ ಕೈಗೊಳ್ಳುವಂತೆ ದೆಹಲಿ, ಉತ್ತರ ಪ್ರದೇಶ ಮತ್ತು ಉತ್ತರಾಖಂಡ ಪೊಲೀಸರಿಗೆ ಆದೇಶಿಸಿತ್ತು. ಕಳೆದ ವರ್ಷ ನವೆಂಬರ್‌ನಲ್ಲಿ ಇನ್ನೊಂದು ಪ್ರಕರಣದಲ್ಲಿ, ಕೇರಳದ ಮಾಜಿ ಸಚಿವ ಎಂ.ಎನ್‌. ಮಾಣಿ ಅವರಿಗೆ ಕೋರ್ಟ್‌ ಛೀಮಾರಿಯನ್ನೂ ಹಾಕಿತ್ತು. ರಾಜಕಾರಣಿಗಳು ಹಾಗೂ ಉನ್ನತ ಸ್ಥಾನದಲ್ಲಿರುವವರು ಅನ್ಯರ ಬಗ್ಗೆ ಮಾನಹಾನಿಕರವಾದ ಮಾತುಗಳನ್ನು ಆಡಬಾರದು ಎಂದು ನಿರ್ದೇಶಿಸಿತ್ತು. ಇದು ಕೋರ್ಟ್‌ ಹೇಳದೆಯೂ ಜವಾಬ್ದಾರಿಯುತ ಸ್ಥಾನದಲ್ಲಿರುವವರು ಅರ್ಥ ಮಾಡಿಕೊಳ್ಳಬೇಕಾದ ಮಾತು.

ರಾಜ್ಯದಲ್ಲಿ ಮಾತ್ರವೇ ಅಲ್ಲ, ರಾಷ್ಟ್ರ ಮಟ್ಟದಲ್ಲೂ ಎದುರಾಳಿಯ ಕೀಳು ನಿಂದನೆ, ಅವಾಚ್ಯ ಪದಗಳ ಬಳಕೆ ಎದ್ದು ಕಾಣಿಸುತ್ತಿದೆ. ಮಧ್ಯಪ್ರದೇಶದ ಕಾಂಗ್ರೆಸ್‌ ಮುಖಂಡನೊಬ್ಬ, ಸಂವಿಧಾನವನ್ನು ಉಳಿಸಲು ನರೇಂದ್ರ ಮೋದಿಯವರನ್ನು ಕೊಲ್ಲುವ ಅಗತ್ಯವಿದೆ ಎಂದು ಹೇಳಿದ್ದ. ಇಂಥ ಮಾತುಗಳು ಅಪರಾಧವೆನಿಸುತ್ತವೆ. 2007ರಲ್ಲಿ ನರೇಂದ್ರ ಮೋದಿಯವರನ್ನು ಕಾಂಗ್ರೆಸ್‌ ಮುಖ್ಯಸ್ಥೆ ಸೋನಿಯಾ ಗಾಂಧಿ ʼಸಾವಿನ ಸರದಾರʼ ಎಂದು ಕರೆದಿದ್ದರು. 2017ರಲ್ಲಿ ಮಣಿಶಂಕರ ಅಯ್ಯರ್‌ ಅವರು ಮೋದಿಯವರನ್ನು ʼನೀಚʼ ಎಂದು ಕರೆದಿದ್ದರು. ಇತ್ತೀಚೆಗೆ ಗುಜರಾತ್‌ ಚುನಾವಣೆ ಸಂದರ್ಭ ಮೋದಿಯವರಿಗೆ ಮಲ್ಲಿಕಾರ್ಜುನ ಖರ್ಗೆಯವರು ʼರಾವಣʼ ಎಂದಿದ್ದರು. ಆದರೆ ಇಂಥ ಹೇಳಿಕೆಗಳೆಲ್ಲ ಹೇಳಿದವರಿಗೇ ತಿರುಮಂತ್ರವಾಗಿವೆ. ಮತದಾರರ ಮನಶ್ಶಾಸ್ತ್ರ ಅರ್ಥ ಮಾಡಿಕೊಳ್ಳುವ ಜನನಾಯಕರು ಇಂಥ ಬೈಗುಳಗಳನ್ನು ತಮ್ಮ ಎದುರಾಳಿಗೆ ಬಳಸಲಾರರು. ಇದು ಅವರನ್ನೇ ಇಕ್ಕಟ್ಟಿಗೆ ಸಿಲುಕಿಸುವುದಲ್ಲದೆ, ಅವರ ಚಾರಿತ್ರ್ಯವನ್ನೂ ಹರಾಜಿಗಿಡುತ್ತದೆ.

ಅವಹೇಳನ, ದ್ವೇಷ, ರೋಷಾವೇಷವಿಲ್ಲದೆಯೂ ರಾಜಕೀಯ ಪಕ್ಷಗಳು ಪರಸ್ಪರ ಪರಿಣಾಮಕಾರಿಯಾಗಿ ಆರೋಪ ಪ್ರತ್ಯಾರೋಪ ಮಾಡಲು ಸಾಧ್ಯವಿದೆ. ಎದುರಾಳಿಯನ್ನು ಎದುರಿಸುವುದರಲ್ಲೂ ಇಂಥ ಘನತೆ ಇರಬೇಕು. ಚುನಾವಣೆ ಸಂದರ್ಭದಲ್ಲಿ ಎಂಥ ಮಾತುಕತೆ, ವಾಗ್ವಾದ ನಡೆಯಬೇಕು? ಸರ್ಕಾರದ ಪ್ರಗತಿ, ಭ್ರಷ್ಟಾಚಾರ, ಸಾಧನೆ, ವೈಫಲ್ಯಗಳ ಬಗ್ಗೆ ಅರ್ಥಪೂರ್ಣ ಚರ್ಚೆ ಆಗಬೇಕು. ಆಡಳಿತ ಪಕ್ಷ ಸರಿಯಾಗಿ ಕೆಲಸ ಮಾಡಿದೆಯೇ ಇಲ್ಲವೇ ಎಂದು ಪ್ರತಿಪಕ್ಷ ವಿಮರ್ಶಿಸಬೇಕು. ತಾನು ಮಾಡಿರುವ ಕೆಲಸಗಳಿಗೆ ಆಡಳಿತ ಪಕ್ಷ ಕನ್ನಡಿ ಹಿಡಿಯಬೇಕು, ಪ್ರತಿಪಕ್ಷದ ವೈಫಲ್ಯಗಳನ್ನು ಸಾಣೆಗೆ ಹಿಡಿಯಬೇಕು.

ಇದನ್ನೂ ಓದಿ : ವಿಸ್ತಾರ ಸಂಪಾದಕೀಯ: ಟ್ರಾಫಿಕ್ ದಂಡ ವಿನಾಯಿತಿ ಕ್ರಾಂತಿಕಾರಕ ನಿರ್ಧಾರ

ಎದುರಾಳಿಯನ್ನು ವೈಯಕ್ತಿಕವಾಗಿ ದೂರುವ, ಅವಹೇಳನ ಮಾಡುವ, ಪಾಠ ಕಲಿಸಲು ಕರೆ ಕೊಡುವ ಅಗತ್ಯವೇ ಇಲ್ಲ. ಆಗ ಮಾತ್ರ ರಾಜಕೀಯ ವಾಗ್ವಾದಗಳು ಅರ್ಥಪೂರ್ಣವಾಗುತ್ತವೆ. ಕರ್ನಾಟಕಕ್ಕೆ ಒಂದು ಸಭ್ಯ ರಾಜಕೀಯ ಪರಂಪರೆಯಿದೆ. ಇಲ್ಲಿನ ರಾಜಕೀಯ ವಾಗ್ಯುದ್ಧಗಳು ಸಭ್ಯತೆಯ ಆವರಣದೊಳಗಿವೆ. ಈ ಪರಂಪರೆಗೆ ಧಕ್ಕೆ ಆಗದಿರಲಿ. ಕರ್ನಾಟಕದ ರಾಜಕೀಯವು ಬಿಹಾರ, ಉತ್ತರ ಪ್ರದೇಶದ ರಾಜಕಾರಣದಂತೆ ಆಗುವುದು ಬೇಡ. ಹೊಸ ತಲೆಮಾರಿನ ರಾಜಕಾರಣಿಗಳಿಗೆ ನಕಾರಾತ್ಮಕ ರಾಜಕಾರಣದ ಶೈಲಿಯ ಸಂದೇಶ ರವಾನೆ ಆಗದಿರಲಿ.

Exit mobile version