ಬೆಂಗಳೂರು: ಅರಣ್ಯೇತರ ಉದ್ದೇಶಗಳಿಗೆ ಪರಿವರ್ತಿಸಲಾಗಿದ್ದಂತಹ ಅರಣ್ಯ ಭೂಮಿಯ (Forest Land) ಪೈಕಿ ಶೇಕಡಾ 40ರಷ್ಟು ಭೂಮಿಯನ್ನು ಮರಳಿ ಮೀಸಲು ಅರಣ್ಯವಾಗಿ (Reserve Forest) ಪರಿವರ್ತನೆ ಮಾಡುವ ರಾಜ್ಯ ಸರ್ಕಾರದ (State Government) ನಿರ್ಧಾರ ಈಗ ರಾಜ್ಯದಲ್ಲಿ ಸಂಘರ್ಷಕ್ಕೆ ಕಾರಣವಾಗಿದೆ. ಅರಣ್ಯ ಮತ್ತು ಕಂದಾಯ ಇಲಾಖೆಯಿಂದ (Forest and Revenue Department) ಜಂಟಿಯಾಗಿ ಸರ್ವೆ ನಡೆಸದೆ ಬೇಕಾಬಿಟ್ಟಿಯಾಗಿ ಸರ್ವೆ ನಡೆಸಿ ಮೀಸಲು ಅರಣ್ಯ ಎಂದು ಘೋಷಿಸಿದ ಪರಿಣಾಮವಾಗಿ ಕಾಡಿನಂಚಿನಲ್ಲಿ ನೂರಾರು ವರ್ಷಗಳಿಂದ ವಾಸ ಮಾಡುತ್ತಿರುವ ಹಾಗೂ ವ್ಯವಸಾಯ ಮಾಡುತ್ತಿರುವ ಮಂದಿ ಬೀದಿಪಾಲಾಗುವ ಆತಂಕದ ಸ್ಥಿತಿ ಈಗ ಎದುರಾಗಿದೆ. ಈಗ ಬೆಳ್ತಂಗಡಿಯ ಕಳೆಂಜ ಗ್ರಾಮದ ಅಮ್ಮಿನಡ್ಕದಲ್ಲಿ ರೈತರೊಬ್ಬರಿಗೆ ಮನೆ ಕಟ್ಟಲು ಬಿಡದೇ ಇರುವುದು ಸಂಘರ್ಷಕ್ಕೆ ಎಡೆಮಾಡಿ ಕೊಟ್ಟಿದೆ. ನಾಗರಿಕರ ಪರವಾಗಿ ಈಗ ವಿಸ್ತಾರ ನ್ಯೂಸ್ ನಿಲ್ಲುತ್ತಿದ್ದು, ಜನರ ಪರವಾಗಿ ಅಭಿಯಾನ (Vistara News Campaign) ಮಾಡುತ್ತಿದೆ.
ಈ ಮೂಲಕ ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಅರಣ್ಯದಂಚಿನ ಗ್ರಾಮಸ್ಥರ ನಡುವಿನ ಸಂಘರ್ಷ ಮತ್ತೆ ಜೋರಾಗಿದೆ. ಅಮ್ಮಿನಡ್ಕದಲ್ಲಿ ಈಗ ಅರಣ್ಯ ಇಲಾಖೆಯ ಅಧಿಕಾರಿಗಳ ವಿರುದ್ಧ ಜನಪ್ರತಿನಿಧಿಗಳು ತಿರುಗಿಬಿದ್ದಿದ್ದಾರೆ. ಇನ್ನು ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಏಳಪಟ್ಟಿ ಗ್ರಾಮದಲ್ಲಿ ಒತ್ತುವರಿ ಭೂಮಿ ಸರ್ವೇಗೆ ಹೋದ ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಸ್ಥಳೀಯರು ಕಲ್ಲು ತೂರಾಟ ನಡೆಸಿದ್ದಾರೆ.
ಇದನ್ನೂ ಓದಿ: Power Point with HPK : ಶಿವಮೊಗ್ಗ ಗಲಭೆ; ಖಡ್ಗದ ಬಗ್ಗೆ ಚರ್ಚೆ ಮಾಡಲೇಬಾರದೆಂದ ಮಧು ಬಂಗಾರಪ್ಪ!
ಈಗ ಅರಣ್ಯ ಇಲಾಖೆ ಹಾಗೂ ಅರಣ್ಯ ಇಲಾಖೆ ಸಚಿವ ಈಶ್ವರ ಖಂಡ್ರೆ ವಿರುದ್ಧ ಮಲೆನಾಡು, ಕರಾವಳಿ ಜಿಲ್ಲೆಗಳ ಶಾಸಕರಿಂದ ಪಕ್ಷಾತೀತವಾದ ಹೋರಾಟ ಶುರುವಾಗಿದೆ. ಈ ಕುರಿತು ಸಿಎಂ ಸಿದ್ದರಾಮಯ್ಯ ಅವರಿಗೆ ದೂರು ನೀಡಲೂ ಮುಂದಾಗಿದ್ದಾರೆ ಎಂಬ ವಿಚಾರ ಗೊತ್ತಾಗಿದೆ.
ಜನರ ಜತೆ ವಿಸ್ತಾರ ನ್ಯೂಸ್; ಸರಣಿ ವರದಿ ಆರಂಭ
ಜಾಗತಿಕ ತಾಪಮಾನ ಹೆಚ್ಚಳ, ಹವಾಮಾನ ವೈಪರೀತ್ಯದ ಈ ಹೊತ್ತಲ್ಲಿ ಅರಣ್ಯವನ್ನು ಉಳಿಸುವುದು-ಬೆಳೆಸುವುದು ಪ್ರತಿಯೊಬ್ಬರ ಜವಾಬ್ದಾರಿ. ಇದು ಸಂವಿಧಾನಬದ್ಧ ಕರ್ತವ್ಯ ಕೂಡ. ಆದರೆ, ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಮುಂದಾಗಿರುವ ರಾಜ್ಯ ಸರ್ಕಾರವು ಅರಣ್ಯ ಮತ್ತು ಕಂದಾಯ ಭೂಮಿಯ ಸರ್ವೆಯನ್ನು ಸಮರ್ಪಕವಾಗಿ ನಡೆಸಿಲ್ಲ. ತಲೆಮಾರುಗಳಿಂದ ಕೃಷಿ ಮತ್ತು ಇನ್ನಿತರ ಚಟುವಟಿಕೆ ನಡೆಸಿಕೊಂಡು ಬಂದಿರುವ ಅರಣ್ಯವಾಸಿಗಳಿಗೆ, ಅರಣ್ಯದಂಚಿನ ಗ್ರಾಮಸ್ಥರನ್ನು ಮಾನವೀಯ ನೆಲೆಗಟ್ಟಿನಲ್ಲಿ ನೋಡುತ್ತಲೂ ಇಲ್ಲ. ಅಲ್ಲದೆ, ಸೂಕ್ತ ದಾಖಲೆಗಳನ್ನು ನೀಡದೆ ಮತ್ತು ಗ್ರಾಮೀಣ ಭಾಗಕ್ಕೆ ಮೂಲ ಸೌಕರ್ಯಗಳನ್ನು ಒದಗಿಸದೆ ಈಗ ಏಕಾಏಕಿ ಇವರೆಲ್ಲರಿಗೂ ತೊಂದರೆಯಾಗುವಂತಹ ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ. ಅರಣ್ಯ ಉಳಿಸುವ ಹೆಸರಿನಲ್ಲಿ ಏಕಮುಖ ನಿರ್ಧಾರವನ್ನು ತೆಗೆದುಕೊಂಡು ಜಾರಿಗೆ ತರುತ್ತಿರುವುದು ಖಂಡನೀಯ. ಕಾಡು ಕಾಪಾಡಿದ ಜನರ ವಿರುದ್ಧವೇ ತೊಡೆ ತಟ್ಟಿರುವುದು ಎಷ್ಟು ಸರಿ ಎಂಬ ಪ್ರಶ್ನೆ ಎದ್ದಿದೆ. ಅವರಿಗೆ ಪರ್ಯಾಯವೇ ಇಲ್ಲವೇ ಎಂಬ ಪ್ರಶ್ನೆ ಕಾಡುತ್ತದೆ. ಈ ಕುರಿತು ವಿಸ್ತಾರ ನ್ಯೂಸ್ ಸರಣಿ ವರದಿ ಪ್ರಕಟಿಸಿ, ಸರ್ಕಾರದ ಗಮನ ಸೆಳೆಯಲಿದೆ. ತನ್ಮೂಲಕ ಜನರ ದನಿಯಾಗಿ ಕಾರ್ಯನಿರ್ವಹಿಸಲಿದೆ.
ಪರಿಸ್ಥಿತಿ ಹದಗೆಡಲು ಏನು ಕಾರಣ?
ಕರ್ನಾಟಕ ಅರಣ್ಯ ಕಾಯ್ದೆ 1963ರ ಸೆಕ್ಷನ್ 4ರ ಕಲಂ 4 (1) ಅಡಿ ಯಾವುದೇ ಭೂ ಪ್ರದೇಶವನ್ನು ʻಮೀಸಲು ಅರಣ್ಯ’ ಎಂದು ಸರ್ಕಾರ ಘೋಷಿಸಲು ಅವಕಾಶವಿದೆ. ಇದನ್ನು ಬಳಸಿಕೊಂಡು ಅರಣ್ಯ ಇಲಾಖೆ ಬೇಕಾಬಿಟ್ಟಿಯಾಗಿ ʻಮೀಸಲು ಅರಣ್ಯʼ ಅಧಿಸೂಚನೆ ಹೊರಡಿಸುತ್ತಿರುವುದರಿಂದ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿದೆ. ಸರ್ಕಾರ ಅಧಿಕಾರಕ್ಕೆ ಬಂದ 120 ದಿನಗಳಲ್ಲೇ 5,729 ಎಕರೆ ಪ್ರದೇಶವನ್ನು ಮೀಸಲು ಅರಣ್ಯ ಎಂದು ಘೋಷಿಸಲಾಗಿದೆ. ಇದನ್ನು ಸರ್ಕಾರ ಬಹುದೊಡ್ಡ ಸಾಧನೆ ಎಂಬಂತೆ ಬಿಂಬಿಸಿಕೊಳ್ಳುತ್ತಿದೆ.
ಇದನ್ನೂ ಓದಿ: Power Point with HPK : ಶಿವಮೊಗ್ಗದಲ್ಲಿ 10 ಮನೆಗಳಿಗೆ ಕಲ್ಲು ಬಿದ್ದಿದೆ; ಅದು ಕೋಮು ಗಲಭೆ ಅಲ್ಲ!
ಆದರೆ, ಅರಣ್ಯ-ಕಂದಾಯ ಇಲಾಖೆ ಜಂಟಿ ಸರ್ವೆ ನಡೆಸದೆ, ಬೇಕಾಬಿಟ್ಟಿಯಾಗಿ ಮೀಸಲು ಅರಣ್ಯವನ್ನು ಘೋಷಣೆ ಮಾಡಿಡಲಾಗಿದೆ. ಇದರಿಂದಾಗಿ ಕಾಡಿನಂಚಿನಲ್ಲಿ ನೂರಾರು ವರ್ಷಗಳಿಂದ ವಾಸ ಮಾಡುತ್ತಿರುವ ಮತ್ತು ಬೇಸಾಯ ಮಾಡುತ್ತಿರುವ ಬಡ ಜನ ಬೀದಿ ಪಾಲಾಗುವ ಸ್ಥಿತಿ ನಿರ್ಮಾಣವಾಗಿದೆ.
ಅರಣ್ಯೇತರ ಉದ್ದೇಶಗಳಿಗೆ ಪರಿವರ್ತನೆ ಮಾಡಲಾಗಿದ್ದ ಅರಣ್ಯ ಭೂಮಿಯಲ್ಲಿ ಶೇ.40 ಭೂಮಿಯನ್ನು ಮರಳಿ ಮೀಸಲು ಅರಣ್ಯವನ್ನಾಗಿ ಪರಿವರ್ತಿಸುವ ಐತಿಹಾಸಿಕ ನಿರ್ಧಾರವನ್ನು ನಮ್ಮ ಸರ್ಕಾರ ಕೈಗೊಂಡಿದೆ ಎಂದು ಕಾಂಗ್ರೆಸ್ ಸೋಷಿಯಲ್ ಮೀಡಿಯಾ “ಎಕ್ಸ್” (ಟ್ವಿಟರ್) ನಲ್ಲಿ ಹೇಳಿಕೊಂಡಿದೆ. ಅರಣ್ಯ ಸಚಿವ ಈಶ್ವರ್ ಖಂಡ್ರೆ ಈಗಿರುವ ಶೇ.22ರಷ್ಟು ಅರಣ್ಯವನ್ನು ಶೇ.30ಕ್ಕಿಂತ ಹೆಚ್ಚಿಸುವ ನಿರ್ಧಾರವನ್ನು ಇಲಾಖೆ ತೆಗೆದುಕೊಂಡಿದ್ದು, ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ ಎಂದು ಅರಣ್ಯ ಇಲಾಖೆಯ ಕ್ರಮವನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಇದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ಸಂಘರ್ಷಕ್ಕೆ ನಾಂದಿ ಹಾಡಿರುವ ಸರ್ಕಾರದ ಕ್ರಮ
ಅರಣ್ಯ ಇಲಾಖೆ ಮತ್ತು ಸಚಿವರ ಈ ನಿರ್ಧಾರದ ವಿರುದ್ಧ ಮಲೆನಾಡು ಮತ್ತು ಕರಾವಳಿ ಜಿಲ್ಲೆಗಳ ಶಾಸಕರು ತಿರುಗಿ ಬಿದ್ದಿದ್ದಾರೆ. ಹೀಗೆ ಏಕಾಏಕಿ ಮೀಸಲು ಅರಣ್ಯ ಘೋಷಣೆಯಿಂದ ಹಾಗೂ ನಿರ್ಬಂಧಗಳನ್ನು ವಿಧಿಸುವುದರಿಂದ ಕಾಡಂಚಿನ ಗ್ರಾಮಸ್ಥರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಕಿಡಿಕಾರುತ್ತಿದ್ದಾರೆ. ಕಾಂಗ್ರೆಸ್‌ನ ಶಾಸಕರು ಕೂಡ ಸಚಿವರ ವಿರುದ್ಧ ತಿರುಗಿ ಬಿದ್ದಿದ್ದು, ಮುಖ್ಯಮಂತ್ರಿಗಳಿಗೆ ದೂರು ನೀಡಲು ತೀರ್ಮಾನಿಸಿದ್ದಾರೆ ಎಂದು ತಿಳಿದುಬಂದಿದೆ.
ಮಲೆನಾಡು ಶಾಸಕರ ಆಕ್ರೋಶ
ʻʻ120 ದಿನದಲ್ಲಿ 5,000 ಸಾವಿರ ಎಕರೆ ಕಾಡನ್ನು ಈ ಅರಣ್ಯ ಇಲಾಖೆಯೇನೂ ಬೆಳೆಸಿಲ್ಲ. ಇರುವ ಕಾಡನ್ನೇ ಮೀಸಲು ಎಂದು ಸಹಿ ಹಾಕಿದ್ದಾರೆ. ಈ ಸಹಿ ಹಾಕಲು 120 ದಿನ ಏಕೆ, ಬರೀ 120 ಸೆಕೆಂಡ್ ಸಾಕು. ಇದೊಂದು ವಿವೇಚನಾ ರಹಿತ ನಿರ್ಧಾರವಾಗಿದೆ. ಇದನ್ನು ಸರ್ಕಾರ ತನ್ನ ಸಾಧನೆ ಎಂದು ಬಿಂಬಿಸಿಕೊಳ್ಳುತ್ತಿರುವುದು ನಾಚಿಕೆಗೇಡು ಎಂದು ಮಲೆನಾಡು ಭಾಗದ ರೈತರು ಸಾಮಾಜಿಕ ಜಾಲತಾಣಗಳಲ್ಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.
ಬಯಲು ನಾಡು ಬೀದರ್‌ನ ಈಶ್ವರ್ ಖಂಡ್ರೆ ಅವರಿಗೆ ಮಲೆನಾಡಿನ ಜನ ಜೀವನ, ಸಮಸ್ಯೆಗಳ ಬಗ್ಗೆ ಏನು ಗೊತ್ತು? ಅವರು ಅಧಿಕಾರಿಗಳು ಕೊಟ್ಟ ಫೈಲ್‌ಗೆ ಸಹಿ ಹಾಕುತ್ತಿದ್ದಾರೆ. ಸಮಸ್ಯೆ ಹೇಳಲು ಹೋದರೆ ಕೇಳಿಸಿಕೊಳ್ಳದೆ ಉದ್ಧಟತನದಿಂದ ವರ್ತಿಸುತ್ತಿದ್ದಾರೆ ಎಂದು ಮಲೆನಾಡು ಭಾಗದ ಕಾಂಗ್ರೆಸ್ ಶಾಸಕರು ದೂರುತ್ತಲಿದ್ದಾರೆ.
ಇದನ್ನೂ ಓದಿ: Power Point with HPK : ಸಿಎಂ ಸಿದ್ದರಾಮಯ್ಯಗೆ ಮಾಮ ಎಂದು ಕರೆಯುವ ಶಿವರಾಜಕುಮಾರ್!
ವಿಸ್ತಾರ ನ್ಯೂಸ್ ಪ್ರಶ್ನೆ ಏನು?
1. ಸರ್ಕಾರ ಈಗ ಮೀಸಲು ಅರಣ್ಯವನ್ನು ಘೋಷಣೆ ಮಾಡಿದೆ. ಆದರೆ, ಇದರ ಮುಂದಿನ ಪರಿಣಾಮ ಏನು ಎಂಬುದನ್ನು ನೋಡಬೇಕಲ್ಲವೇ? ಮೀಸಲು ಅರಣ್ಯ ಎಂದು ಘೋಷಣೆ ಮಾಡಿದರೆ ಸಾಕೇ? ನಾಗರಿಕರ ಹಕ್ಕುಗಳನ್ನು ಕಾಪಾಡುವುದು ಸರ್ಕಾರದ ಕರ್ತವ್ಯ ಅಲ್ಲವೇ?
2. ಮೀಸಲು ಅರಣ್ಯ ಎಂದು ಘೋಷಿಸಲ್ಪಟ್ಟ ಸ್ಥಳಗಳಲ್ಲಿ ಈಗಾಗಲೇ ಮನೆ ಕಟ್ಟಿಕೊಂಡಿದ್ದರೆ ಅಥವಾ ತೋಟವನ್ನೋ ಇನ್ನೇನೋ ಕೃಷಿ ಚಟುವಟಿಕೆಯನ್ನು ಮಾಡಿಕೊಂಡಿದ್ದರೆ ಅಂತಹ ಜಾಗವನ್ನು ವಾಪಸ್ ಪಡೆಯುವುದು ಹೇಗೆ? ಎಂಬುದನ್ನು ಮೊದಲು ಸ್ಪಷ್ಟಪಡಿಸಬೇಕು. ಅಂಥವರಿಗೆ ಪುನರ್ವಸತಿ ಯೋಜನೆ ಏನು? ಏಕಾಏಕಿ ಮನೆ ಕೆಡವಿ, ನೀವು ಜಾಗ ಖಾಲಿ ಮಾಡಿ ಎಂದರೆ ಅವರು ಹೇಗೆ ಹೋಗಲು ಸಾಧ್ಯ?
3. ಈಗಾಗಲೇ ಶೇಕಡಾ 20ರಷ್ಟು ಇರುವ ಅರಣ್ಯವನ್ನು ಶೇಕಡಾ 30ಕ್ಕೆ ಹೆಚ್ಚಳ ಮಾಡುವ ಗುರಿಯನ್ನು ಹಾಕಿಕೊಳ್ಳಲಾಗಿದೆ. ಇದು ಒಳ್ಳೆಯ ಉದ್ದೇಶವೇ ಸರಿ. ಅದೇ ರೀತಿಯಾಗಿ ಇರುವ ಇನ್ನಿತರ ಪರ್ಯಾಯ ಮಾರ್ಗಗಳನ್ನೂ ನೋಡಬಹುದಲ್ಲವೇ? ಅಕೇಶಿಯಾ ನೆಡುತೋಪುಗಳನ್ನು ನೀವು ಬಳಸುವುದನ್ನು ನಿಲ್ಲಿಸಿ ಅಲ್ಲಿ ಅರಣ್ಯೀಕರಣವನ್ನು ಮಾಡಬಹುದಲ್ಲವೇ?
4. ರಸ್ತೆಯುದ್ದಕ್ಕೂ ಅಕ್ಕಪಕ್ಕದಲ್ಲಿ ಸಾಲು ಸಾಲು ಜಾಗಗಳಿವೆ. ಅಲ್ಲಿ ಸರಿಯಾಗಿ ಗಿಡಗಳನ್ನು ಬೆಳೆಸಿ ನಿರ್ವಹಣೆ ಮಾಡಿದ್ದೇ ಆದಲ್ಲಿ ಈಗ ಹಾಕಿಕೊಂಡಿರುವ ಗುರಿಗಿಂತಲೂ ಹೆಚ್ಚಳವಾಗುವುದಿಲ್ಲವೇ? ಇದು ಕ್ಲಿಷ್ಟಕರ ದಾರಿ ಎಂದು ಬಿಡಲಾಗಿದೆಯೇ?
5. ಸಮೀಕ್ಷೆಯನ್ನು ನಡೆಸದೆ, ಸರ್ವೆ ನಡೆಸದೇ ನಮ್ಮ ಬಳಿ ಸರ್ಕಾರದ ಆದೇಶ ಇದೆ ಎಂದು ಏಕಾಏಕಿ ನುಗ್ಗಿದರೆ ಜನರು ಸುಮ್ಮನಿರುತ್ತಾರೆಯೇ? ಜನರಿಂದಲೇ ಆಡಳಿತ ಎಂಬುದು ಮರೆತು ಹೋಯಿತೇ?
6. ಕೊನೆಯದಾಗಿ ಹೇಳಬೇಕೆಂದರೆ, ಅರಣ್ಯ ಜಾಗವನ್ನು ಹೆಚ್ಚಳ ಮಾಡುವ ನಿರ್ಧಾರಕ್ಕೆ ವಿಸ್ತಾರ ನ್ಯೂಸ್ ಸಹಮತ ಇದೆ. ಆದರೆ, ಈಗ ಕೈಗೊಂಡಿರುವ ಏಕಾಏಕಿ ನಿರ್ಧಾರ ಸರಿಯಲ್ಲ. ಪರ್ಯಾಯ ಮಾರ್ಗಗಳು ಏನು? ಈಗಿರುವವರಿಗೆ ಪರ್ಯಾಯ ನೆಲೆ ಏನು? ಎಂಬುದನ್ನು ಸ್ಪಷ್ಟಪಡಿಸದೇ ಕೈಗೊಂಡಿರುವ ನಿರ್ಧಾರವನ್ನು ಜನಸಾಮಾನ್ಯರ ಪರವಾಗಿ ಖಂಡಿಸಲಾಗುತ್ತಿದೆ.
ಯಾವ ಜಿಲ್ಲೆಯಲ್ಲಿ ಎಷ್ಟು ಎಕರೆ ಪ್ರದೇಶ ಮೀಸಲು ಅರಣ್ಯವಾಗಿ ಘೋಷಣೆ?
- ಚಿಕ್ಕಮಗಳೂರು-4,589
- ಚಿತ್ರದುರ್ಗ-391
- ಬೀದರ್-261
- ಬೆಳಗಾವಿ-153
- ಬಳ್ಳಾರಿ-105
- ಮಂಡ್ಯ-49
- ಶಿವಮೊಗ್ಗ-25
ಇದನ್ನೂ ಓದಿ: Power Point with HPK : ಮುಂದಿನ ವರ್ಷಕ್ಕೆ 600 ಕೆಪಿಎಸ್ ಶಾಲೆ; ಮಕ್ಕಳಿಗೆ ತಗ್ಗಲಿದೆ ಬ್ಯಾಗ್ ಹೊರೆ!
ಮೀಸಲು ಅರಣ್ಯ ಘೋಷಣೆಯಿಂದ ಏನೇನು ತೊಂದರೆ?
- ಪ್ರದೇಶದಲ್ಲಿ ಅರಣ್ಯೇತರ ಚಟುವಟಿಕೆ ನಡೆಸುವಂತಿಲ್ಲ. ಅಂದರೆ ಕೃಷಿ, ಕೃಷಿಗೆ ಸಂಬಂಧಿಸಿದ ಯಾವುದೇ ಚಟುವಟಿಕೆ ನಡೆಸುವಂತಿಲ್ಲ.
– ಈ ಜಾಗವನ್ನು ಯಾವುದೇ ಮಂಜೂರಾತಿ, ಅಧಿಭೋಗದಾರಿಕೆಗೆ ಆದೇಶ ನೀಡುವಂತಿಲ್ಲ.
– ಸರಿಯಾಗಿ ಸರ್ವೆ ನಡೆಯದೇ ಇರುವುದರಿಂದ ದಾಖಲೆ ಇದ್ದರೂ ಕೋರ್ಟ್ – ಕಚೇರಿ ಅಲೆಯುವ ಸಂಕಷ್ಟ - ಜಾನುವಾರು ಮೇಯಿಸಲು, ದರಕು ಗುಡಿಸಲು ನಿರ್ಬಂಧ
– ಹೊಸ ರಸ್ತೆ ನಿರ್ಮಾಣ, ಹಳೇ ರಸ್ತೆ ದುರಸ್ತಿ, ವಿದ್ಯುತ್ ಸಂಪರ್ಕ ಕಲ್ಪಿಸಲು ಅಡ್ಡಿ. ಸರ್ಕಾರದ ಬಳಕೆಗೂ ಈ ಜಾಗ ದೊರೆಯದು.
ಚಿಕ್ಕಮಗಳೂರಲ್ಲಿ ನಡೆದಿರುವ ಪ್ರತಿಭಟನೆ
ರಾಜ್ಯ ಸರ್ಕಾರದ ಮೀಸಲು ಅರಣ್ಯ ವ್ಯಾಪ್ತಿ ಹೆಚ್ಚಿಸುವ ಆದೇಶಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಈಗ ಘೋಷಣೆಯಾಗಿರುವ ಬಹುಪಾಲು ಪ್ರದೇಶವು ಚಿಕ್ಕಮಗಳೂರು ಜಿಲ್ಲೆಗೆ ಸೇರುವುದರಿಂದ ಇಲ್ಲಿನ ಜನರ ಸಿಡಿದೆದ್ದಿದ್ದಾರೆ. ಪ್ರತಿಭಟನೆ ತೀವ್ರಗೊಂಡಿದ್ದು, ಸರ್ಕಾರದ ವಿರುದ್ಧ ಆದಿವಾಸಿಗಳು, ಗಿರಿಜನರು ಮತ್ತು ಸಣ್ಣ ರೈತರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಕೂಡಲೇ ಒತ್ತುವರಿ ಕಾರ್ಯಾಚರಣೆಯನ್ನು ನಿಲ್ಲಿಸಬೇಕು ಎಂದು ಸರ್ಕಾರ ನೀಡಿದ ಸಾಗುವಳಿ ಚೀಟಿ ಹಿಡಿದು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಹಾಗೂ ಅರಣ್ಯ ಸಚಿವ ಈಶ್ವರ್ ಖಂಡ್ರೆ ವಿರುದ್ಧ ಅಸಮಾಧಾನವನ್ನು ಹೊರಹಾಕಿದ್ದಾರೆ.
ಕೆ.ಜಿ. ಬೋಪಯ್ಯ ಕಿಡಿ
ಕೊಡಗು ಜಿಲ್ಲೆಯ ಬಹುತೇಕ ಪ್ರದೇಶ ಅರಣ್ಯಕ್ಕೆ ಹೊಂದಿಕೊಂಡೇ ಇದೆ. ಕೊಡಗಿನ ಅರಣ್ಯವನ್ನು ಅರಣ್ಯದಂಚಿನ ನಿವಾಸಿಗಳೇ ರಕ್ಷಣೆ ಮಾಡುತ್ತಿದ್ದಾರೆ. ಕೊಡಗಿನ ಅರಣ್ಯವನ್ನು ಅರಣ್ಯ ಇಲಾಖೆ ರಕ್ಷಣೆ ಮಾಡಿದ್ದಲ್ಲ. ದೇವರ ಕಾಡುಗಳ ಹೆಸರಿನಲ್ಲಿ ಅರಣ್ಯವನ್ನು ಕೊಡಗಿನ ಜನತೆ ರಕ್ಷಿಸಿದ್ದಾರೆ. ಅರಣ್ಯ ಇಲಾಖೆಯು ಕೊಡಗಿನಲ್ಲಿ ಒಂದಿಲ್ಲೋಂದು ಸಮಸ್ಯೆಯನ್ನು ನೀಡುತ್ತಲೇ ಇರುತ್ತದೆ. ಅರಣ್ಯದಂಚಿನ ಗ್ರಾಮದ ಜನತೆಗೆ 10 ಎಕರೆಯವರೆಗೆ ಹಕ್ಕು ಪತ್ರ ನೀಡಬೇಕು. ಆದರೆ, ಅರಣ್ಯ ಇಲಾಖೆ ಮಾತ್ರ ಆ ಕೆಲಸವನ್ನು ಮಾಡುತ್ತಿಲ್ಲ. ಅಭಿವೃದ್ಧಿ ಕೆಲಸಗಳನ್ನು ಮಾಡಲು ಅಡ್ಡಗಾಲು ಹಾಕುತ್ತಿದೆ ಎಂದು ಮಾಜಿ ಸಚಿವ ಕೆ.ಜಿ. ಬೋಪಯ್ಯ ಅರಣ್ಯ ಇಲಾಖೆಯ ಹೊಸ ಕಾನೂನು ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ಗಿರಿಜನರ ಅಧ್ಯಕ್ಷತೆಯನ್ನು ಒಳಗೊಂಡ ಒಂದು ಸಮಿತಿ ಇದೆ. ಅಲ್ಲಿ ನಡೆಯುವ ಸಭೆಗಳಿಗೂ ಕೂಡ ಅರಣ್ಯ ಇಲಾಖೆ ಅಧಿಕಾರಿಗಳು ಗೈರಾಗುತ್ತಾರೆ. ಹೆದ್ದಾರಿ, ವಿದ್ಯುತ್ ಸಂಪರ್ಕ, ಕಿರು ಸೇತುವೆಗಳ ನಿರ್ಮಾಣಕ್ಕೆ ಹೊಸ ಹೊಸ ಕಾನೂನುಗಳನ್ನು ಮಾಡಲಾಗುತ್ತಿದೆ ಎಂದು ಮಡಿಕೇರಿಯಲ್ಲಿ ಕೆ.ಜಿ. ಬೋಪಯ್ಯ ಕಿಡಿಕಾರಿದ್ದಾರೆ.
ಇದನ್ನೂ ಓದಿ: Power Point with HPK : ಗೀತಕ್ಕ ಸ್ಪರ್ಧೆ ತೀರ್ಮಾನ ನನ್ನದೆಂದ ಮಧು ಬಂಗಾರಪ್ಪ!
ಗುಡುಗಿದ ಹರೀಶ್ ಪೂಂಜ
ಅರಣ್ಯ ಪ್ರದೇಶದಲ್ಲಿ ಅಕ್ರಮ ಮನೆ ನಿರ್ಮಾಣ ಹಿನ್ನೆಲೆಯಲ್ಲಿ ಪಂಚಾಂಗ ಸಮೇತ ಅರಣ್ಯ ಇಲಾಖೆಯವರು ಮನೆಯನ್ನು ಧ್ವಂಸಗೊಳಿಸಿರುವ ಪ್ರಕರಣ ಈಗಾಗಲೇ ವರದಿಯಾಗಿದೆ. ಈ ವಿಷಯ ಗೊತ್ತಾಗುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ್ದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಮನೆ ಧ್ವಂಸಗೊಳಿಸಿದ ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡಿದ್ದರು. ಸ್ಥಳದಿಂದಲೇ ಅರಣ್ಯ ಸಚಿವರಿಗೆ ಕರೆ ಮಾಡಿ ಆಕ್ರೋಶವನ್ನು ಹೊರಹಾಕಿದ್ದರು. ಅಲ್ಲದೆ, ಸ್ಥಳೀಯರೊಂದಿಗೆ ಮತ್ತೆ ಮನೆ ನಿರ್ಮಿಸಲು ಮುಂದಾಗಿದ್ದರು. ಈ ಕಾರಣಕ್ಕಾಗಿ ಅರಣ್ಯ ಅಧಿಕಾರಿಗಳು ಮತ್ತು ಶಾಸಕರ ಮಧ್ಯೆ ವಾಗ್ವಾದ ನಡೆದಿದೆ. ಈ ವೇಳೆ ಯಥಾಸ್ಥಿತಿಯನ್ನು ಕಾಪಾಡುವಂತೆ ಸಚಿವ ಈಶ್ವರ ಖಂಡ್ರೆ ಅವರು ಅರಣ್ಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.