Site icon Vistara News

CM Siddaramaiah: ತಾಲೂಕು, ಜಿಲ್ಲಾ ಪಂಚಾಯಿತಿ, ಬಿಬಿಎಂಪಿ ಚುನಾವಣೆಗೆ ನಾವು ಸಿದ್ಧ: ಮುಖ್ಯಮಂತ್ರಿ ಸಿದ್ದರಾಮಯ್ಯ

We are ready for taluk and zilla panchayat and BBMP elections Says CM Siddaramaiah

ಮೈಸೂರು: ಲೋಕಸಭಾ ಚುನಾವಣೆ (Lok Sabha Election 2024) ಫಲಿತಾಂಶದ ನಂತರ ತಾಲೂಕು, ಜಿಲ್ಲಾ ಪಂಚಾಯಿತಿಗಳ ಚುನಾವಣೆ (Taluk and Zilla panchayat Election) ಹಾಗೂ ಬಿಬಿಎಂಪಿ ಚುನಾವಣೆಯನ್ನು (BBMP Election) ನಡೆಸಲಾಗುವುದು. ಸರ್ಕಾರ ಚುನಾವಣೆ ನಡೆಸಲು ಸಿದ್ಧವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ತಿಳಿಸಿದರು.

ಶುಕ್ರವಾರ ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಂಬಂಧಿಸಿದಂತೆ ಚುನಾವಣಾ ಆಯೋಗವು ಉಚ್ಚ ನ್ಯಾಯಾಲಯಕ್ಕೆ ಹೋಗಲಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ ಹೀಗೆ ಉತ್ತರಿಸಿದರು.

ಕ್ಷೇತ್ರ ಪುನರ್ವಿಂಗಡನೆಗೆ ಜನವರಿವರೆಗೆ ಗಡುವು ಇದ್ದುದರ ಬಗ್ಗೆ ಮಾತನಾಡಿ ಈ ಬಗ್ಗೆ ಅಡ್ವೋಕೇಟ್ ಜನರಲ್ ಜತೆ ಚರ್ಚೆ ಮಾಡಿ ಅವರು ಕಾನೂನು ಪ್ರಕಾರ ಏನು ಮಾಡಬೇಕೆಂದು ಹೇಳುತ್ತಾರೋ ಹಾಗೆ ಮಾಡುತ್ತೇವೆ. ಪುನರ್ ವಿಂಗಡಣೆಯಾದ ಮೇಲೆ ಮೀಸಲಾತಿ ಮಾಡಲೇಬೇಕು ಎಂದು ಹೇಳಿದರು.

ಹೈಕಮಾಂಡ್ ನಿರ್ಧಾರದ ಬಗ್ಗೆ ತಿಳಿದಿಲ್ಲ

ಈ ಬಾರಿ ಡಾ. ಯತೀಂದ್ರ ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿಸುವ ಬಗ್ಗೆ ಕಾಂಗ್ರೆಸ್‌ನಲ್ಲಿ ಚಟುವಟಿಕೆ ನಡೆಯುತ್ತಿರುವುದರ ಬಗ್ಗೆ ಮಾಧ್ಯಮದವರು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸಿಎಂ ಸಿದ್ದರಾಮಯ್ಯ, ಹೈಕಮಾಂಡ್‌ನವರು ಯತೀಂದ್ರ ಅವರನ್ನು ಎಂ.ಎಲ್.ಸಿ ಮಾಡುವುದಾಗಿ ಹೇಳಿದ್ದರು. ಏನು ಮಾಡುತ್ತಾರೆ ಎಂದು ನನಗೆ ಗೊತ್ತಿಲ್ಲ. ಹೋದ ನಾನು ಬಾರಿ ವರುಣಾದಲ್ಲಿಯೇ ನಿಲ್ಲಬೇಕು ಎಂದು ತೀರ್ಮಾನವಾದಾಗ ಕ್ಷೇತ್ರ ಬಿಟ್ಟುಕೊಡಲು ಸೂಚಿಸಿದ್ದರು. ಈಗ ಏನು ಮಾಡುತ್ತಾರೆ ಎಂದು ತಿಳಿದಿಲ್ಲ ಎಂದು ಹೇಳಿದರು.

ಪ್ರಕರಣ ದುರ್ಬಲಗೊಳಿಸಲು ಹೇಳಿಕೆ

ಪ್ರಜ್ವಲ್ ರೇವಣ್ಣ ಅವರ ಪ್ರಕರಣದಲ್ಲಿ ಡಿ.ಕೆ.ಶಿವಕುಮಾರ್ ಅವರ ಆಡಿಯೊ ಇರುವುದರಿಂದ ಅವರನ್ನೇ ವಿಚಾರಣೆ ಮಾಡಬೇಕೆಂದು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಆಗ್ರಹ ಮಾಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ, ಎಚ್‌ಡಿಕೆ ಅಣ್ಣನ ಮಗ ಅತ್ಯಾಚಾರ ಪ್ರಕರಣದಲ್ಲಿ ಆರೋಪಿ. ಅತ್ಯಾಚಾರದ ವಿಡಿಯೊ ಹರಿದಾಡಿತು ಎನ್ನುವುದಕ್ಕಿಂತ, ಅತ್ಯಾಚಾರ ಘೋರ ಅಪರಾಧ. ಅತ್ಯಾಚಾರದ ಸಂಗತಿಯನ್ನು ದುರ್ಬಲಗೊಳಿಸಲು ಡಿ.ಕೆ. ಶಿವಕುಮಾರ್ ಹಾಗೂ ಮತ್ತೊಬ್ಬರ ಮೇಲೆ ಹೇಳುತ್ತಿದ್ದಾರೆ. ಅವರು ಈ ನೆಲದ ಕಾನೂನಿಗೆ ಗೌರವ ಕೊಡಬೇಕು. ಅಣ್ಣನ ಮಗ ಅಪರಾಧಿಯಲ್ಲ, ಆರೋಪಿ ಅಷ್ಟೇ ಎಂದಿದ್ದಾರೆ. ನ್ಯಾಯಾಲಯದಲ್ಲಿ ವಿಚಾರಣೆಗೆ ಒಳಪಟ್ಟಂತೆ ನಾನೂ ಕೂಡ ಆರೋಪಿ ಎಂದೇ ಹೇಳಿದ್ದೇನೆ ಎಂದರು.

ನಂಬಿರುವುದು ನಿಮ್ಮ ತಪ್ಪು

ಪ್ರಜ್ವಲ್ ರೇವಣ್ಣ ಅವರ ಪಾಸ್‌ಪೋರ್ಟ್ ರದ್ದತಿಗೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದು, ಈವರೆಗೆ ಅವರಿಂದ ಪ್ರತಿಕ್ರಿಯೆ ಬಂದಿಲ್ಲ. ಇನ್ನು ಎಲ್ಲರಿಗೂ ಪ್ರಧಾನ ಮಂತ್ರಿಗಳ ಕಚೇರಿಯಿಂದ ಕೂಡಲೇ ಉತ್ತರ ದೊರಕುತ್ತದೆ ಎಂದು ನೀವೆಲ್ಲ ನಂಬಿರುವುದೇ ನಿಮ್ಮ ತಪ್ಪು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ನಾವು ಬರೆದಿರುವ ಅನೇಕ ಪತ್ರಗಳಿಗೆ ಅವರು ಉತ್ತರ ಕೊಟ್ಟಿಲ್ಲ. ಮೋದಿಯವರು ಸೆಲೆಕ್ಟಿವ್ ಎಂದು ಹೇಳುವುದಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರ ಕೊಡುತ್ತಾರೆ ಎಂಬ ನಂಬಿಕೆ ಇದೆ. ಚುನಾಯಿತ ಸರ್ಕಾರದ ಮುಖ್ಯಮಂತ್ರಿಯೊಬ್ಬರು ಪ್ರಧಾನಿಗಳಿಗೆ ಪತ್ರ ಬರೆದಾಗ ಸ್ವಾಭಾವಿಕವಾಗಿ ಉತ್ತರ ಕೊಡುತ್ತಾರೆ ಎಂಬ ನಂಬಿಕೆ ಇದೆ. ರಾಜತಾಂತ್ರಿಕ ಪಾಸ್‌ಪೋರ್ಟ್ ರದ್ದು ಮಾಡಲು ಬರೆದ ಮೊದಲ ಪತ್ರಕ್ಕೆ ಉತ್ತರ ಕೊಟ್ಟಿಲ್ಲ. ಎರಡನೇ ಪತ್ರಕ್ಕೆ ಉತ್ತರ ಕೊಡುತ್ತಾರೆನೋ ನೋಡೋಣ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಬಿಜೆಪಿಯವರನ್ನು ಪ್ರಶ್ನಿಸಿ

ಲೋಕಸಭಾ ಚುನಾವಣಾ ಫಲಿತಾಂಶಕ್ಕಾಗಿ ಪಾಸ್‌ಪೋರ್ಟ್‌ ರದ್ದತಿ ವಿಚಾರವಾಗಿ ವಿಳಂಬ ಧೋರಣೆಯನ್ನು ಅನುಸರಿಸಲಾಗುತ್ತಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ, ಈ ಪ್ರಶ್ನೆಯನ್ನು ಬಿಜೆಪಿಯ ಪ್ರಲ್ಹಾದ್‌ ಜೋಶಿ ಅವರನ್ನು ಕೇಳಿ ಎಂದರು.

ಮನೆಯವರಿಗೆ ಹೇಳದೆ ವಿದೇಶಕ್ಕೆ ತೆರಳಿದರೇ?

ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಪ್ರಜ್ವಲ್‌ ರೇವಣ್ಣ ಅವರಿಗೆ ಪತ್ರ ಬರೆದು ಶರಣಾಗಬೇಕು. ಇಲ್ಲದಿದ್ದರೆ ಒಬ್ಬಂಟಿಯಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ, ಇವರಿಗೆ ಗೊತ್ತಿಲ್ಲದೆ ಪ್ರಜ್ವಲ್‌ ರೇವಣ್ಣ ವಿದೇಶಕ್ಕೆ ಹೊರಟು ಹೋಗಿದ್ದಾರಾ? ಎಂದು ಪ್ರಶ್ನೆ ಮಾಡಿದರು.

ಪ್ರಚಾರಕ್ಕೆ ಏಕೆ ಹೋಗಿದ್ದರು?

ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ಮೊದಲಿನಿಂದಲೂ ಪ್ರಜ್ವಲ್ ರೇವಣ್ಣ ನಮ್ಮ ಸಂಪರ್ಕದಲ್ಲಿ ಇಲ್ಲ ಎಂದು ಹೇಳಿಕೆ ನೀಡುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ, ಹಾಗಾದರೆ ನನ್ನ ಮಗ ಎಂದು ಮತ ನೀಡಲು ಪ್ರಚಾರ ಮಾಡಿದ್ದು ಏನು? ಇದು ಸಂಪರ್ಕವೋ? ಅಲ್ಲವೋ ಎಂದು ಪ್ರಶ್ನಿಸಿದರು.

ಇದನ್ನೂ ಓದಿ: Bank fraud: ಕಾರವಾರ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್‌ನಲ್ಲಿ‌ ಹಗರಣ! 54 ಸಾವಿರ ಕೋಟಿ ರೂ. ಗುಳುಂ; ಮ್ಯಾನೇಜರ್ ಸಾವಿಂದ ಹೊರಬಂತು ಅವ್ಯವಹಾರ!

ಪ್ರಕರಣದ ಬಗ್ಗೆ ಗಮನ ಕೇಂದ್ರೀಕರಿಸಲು ಎಸ್.ಐ.ಟಿ ರಚನೆ

ಎಸ್.ಐ.ಟಿ ತನಿಖೆ ತಾತ್ವಿಕ ಅಂತ್ಯ ಪಡೆಯುವುದಿಲ್ಲ ಎಂದು ಎಚ್.ಡಿ. ಕುಮಾರಸ್ವಾಮಿ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ, ನಮಗೆ ಎಸ್.ಐ.ಟಿ ಬಗ್ಗೆ ಸಂಪೂರ್ಣ ವಿಶ್ವಾಸವಿದೆ. ಕುಮಾರಸ್ವಾಮಿ ಕಾಲದಲ್ಲಿ ಎಷ್ಟು ಪ್ರಕರಣಗಳನ್ನು ಎಸ್ಐಟಿಗೆ ವಹಿಸಿದ್ದಾರೆ ಎನ್ನುವ ಬಗ್ಗೆ ನನಗೆ ತಿಳಿದಿಲ್ಲ. ಎಸ್ಐಟಿ ರಚನೆ ಮಾಡುವುದು ಪ್ರಕರಣದ ಬಗ್ಗೆ ಗಮನವನ್ನು ಕೇಂದ್ರೀಕರಿಸಲು ಎಂದು ಹೇಳಿದರು.

ಕಾವೇರಿ ನದಿ ಮಲಿನವಾಗುತ್ತಿದೆ ಎಂದು ಪತ್ರ ಬರೆದಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ, ಕೆಲವು ಕಡೆ ಕೈಗಾರಿಕೆಗಳಿಂದ ಬಿಡುವ ನೀರಿನಿಂದ ಮಲಿನವಾಗಿರುವ ಸಾಧ್ಯತೆ ಇರುತ್ತದೆ. ಈ ಬಗ್ಗೆ ಪರಿಶೀಲಿಸಲಾಗುವುದು ಎಂದರು.

Exit mobile version