Site icon Vistara News

Diplomatic passport: ಏನಿದು ಡಿಪ್ಲೊಮ್ಯಾಟಿಕ್‌ ಪಾಸ್‌ಪೋರ್ಟ್‌? ಕೇಂದ್ರ ರದ್ದು ಮಾಡಿದರೆ ಪ್ರಜ್ವಲ್‌ ರೇವಣ್ಣ ಅರೆಸ್ಟ್!

Prajwal Revanna case

ಬೆಂಗಳೂರು: ಪ್ರಜ್ವಲ್‌ ರೇವಣ್ಣ ಪ್ರಕರಣದಲ್ಲಿ (Prajwal Revanna Case) ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದ ವಿರುದ್ಧ ರಾಜತಾಂತ್ರಿಕ ಸಮರ ಸಾರಿದೆ. ಪ್ರಜ್ವಲ್‌ ರೇವಣ್ಣನ ರಾಜತಾಂತ್ರಿಕ ಪಾಸ್‌ಪೋರ್ಟ್ (Diplomatic passport) ರದ್ದು ಮಾಡಿ ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರಿಗೆ ಸಿಎಂ ಸಿದ್ದರಾಮಯ್ಯ ಮತ್ತೊಂದು ಪತ್ರ ಬರೆದ ಬೆನ್ನಲ್ಲೇ ಕೇಂದ್ರ ಸರ್ಕಾರವು ಪ್ರಕ್ರಿಯೆಯನ್ನು ಚುರುಕುಗೊಳಿಸಿದೆ. ಈ ಹಿನ್ನೆಲೆಯಲ್ಲಿ ಪ್ರಜ್ವಲ್‌ ಇಕ್ಕಟ್ಟಿಗೆ ಸಿಲುಕಿದ್ದು, ಬಂಧನ ಬಹುತೇಕ ಖಚಿತ ಎಂದೇ ಹೇಳಲಾಗಿದೆ.

ಒಂದು ವೇಳೆ ಕೇಂದ್ರ ಸರ್ಕಾರ ಕ್ರಮ ಕೈಗೊಂಡರೆ ಏನಾಗುತ್ತದೆ? ಏನಿದು ಡಿಪ್ಲೊಮ್ಯಾಟಿಕ್‌ ಪಾಸ್‌ಪೋರ್ಟ್‌? ಇದನ್ನು ಯಾರು ಯಾರು ಪಡೆದುಕೊಳ್ಳಬಹುದು? ಇದರ ಅವಧಿ ಎಷ್ಟು ವರ್ಷ ಇರುತ್ತದೆ? ಇದನ್ನು ಹೇಗೆ ಪಡೆದುಕೊಳ್ಳಬಹುದು? ವಿಶೇಷ ಸೌಲಭ್ಯಗಳು, ಮಾನ್ಯತೆಗಳು ಏನು ಎಂಬ ವಿವರವನ್ನು ಇಲ್ಲಿ ನೀಡಲಾಗಿದೆ.

ಏನಿದು ಡಿಪ್ಲೊಮ್ಯಾಟಿಕ್‌ ಪಾಸ್‌ಪೋರ್ಟ್?‌ (diplomatic passport)

ಡಿಪ್ಲೊಮ್ಯಾಟಿಕ್‌ ಪಾಸ್‌ಪೋರ್ಟ್‌ ಅನ್ನು ಟೈಪ್‌ ಡಿ (Type D) ಪಾಸ್‌ ಪೋರ್ಟ್‌ ಎಂದೂ ಕರೆಯುತ್ತಾರೆ. ಭಾರತೀಯ ರಾಜತಾಂತ್ರಿಕರು, ಸರ್ಕಾರಿ ಅಧಿಕಾರಿಗಳು ಹಾಗೂ ಭಾರತ ಸರ್ಕಾರದ ಪರ ಪ್ರತಿನಿಧಿಸುವ ವ್ಯಕ್ತಿಗಳಿಗೆ ಇದನ್ನು ನೀಡಲಾಗುತ್ತದೆ. ಭಾರತ ಸರ್ಕಾರದ ಪರ ಅಧಿಕೃತ ವಿದೇಶ ಪ್ರಯಾಣದ ಸಂದರ್ಭ ಬಳಸುತ್ತಾರೆ.

ಡಿಪ್ಲೊಮ್ಯಾಟಿಕ್‌ ಪಾಸ್‌ಪೋರ್ಟ್‌ 28 ಪುಟಗಳನ್ನು ಒಳಗೊಂಡಿರುತ್ತದೆ. ಸಾಮಾನ್ಯ ಪಾಸ್‌ಪೋರ್ಟ್‌ ಕಡು ನೀಲಿ ಕವರ್‌ ಅನ್ನು ಹೊಂದಿದ್ದರೆ, ಇದು ಮರೂನ್‌ ಬಣ್ಣದಲ್ಲಿ ಇರುತ್ತದೆ. ಸಾಮಾನ್ಯ ಪಾಸ್‌ಪೋರ್ಟ್‌ ವಯಸ್ಕರಿಗೆ 10 ವರ್ಷ ಹಾಗೂ ಅಪ್ರಾಪ್ತರಿಗೆ 5 ವರ್ಷ ವ್ಯಾಲಿಡಿಟಿಯನ್ನು ಹೊಂದಿರುತ್ತದೆ. ಡಿಪ್ಲೊಮ್ಯಾಟಿಕ್‌ ಪಾಸ್‌ಪೋರ್ಟ್‌ 5 ಅಥವಾ ಕಡಿಮೆ ಅವಧಿಗೆ ಬಿಡುಗಡೆಯಾಗುತ್ತದೆ.

ಡಿಪ್ಲೊಮ್ಯಾಟಿಕ್‌ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸುವುದು ಹೇಗೆ?

ದಿಲ್ಲಿಯಲ್ಲಿ ವಿದೇಶಾಂಗ ಇಲಾಖೆಯ ಪಾಸ್‌ಪೋರ್ಟ್‌ ಸೇವಾ ಪ್ರೋಗ್ರಾಮ್‌ ವಿಭಾಗದಲ್ಲಿ ಮಾತ್ರ ಡಿಪ್ಲೊಮ್ಯಾಟಿಕ್‌ ಪಾಸ್‌ ಪೋರ್ಟ್‌ ಬಗ್ಗೆ ಅರ್ಜಿ ಸಲ್ಲಿಸಬೇಕಾಗುತ್ತದೆ.

ಪ್ರಯೋಜನವೇನು?

ಡಿಪ್ಲೊಮ್ಯಾಟಿಕ್‌ ಪಾಸ್‌ಪೋರ್ಟ್‌ ಭಾರತ ಸರ್ಕಾರವನ್ನು ರಾಜತಾಂತ್ರಿಕ ಉದ್ದೇಶಗಳಿಗೆ ವಿದೇಶಗಳಲ್ಲಿ ಪ್ರತಿನಿಧಿಸುವವರಿಗೆ ಅಧಿಕೃತ ಗುರುತಿನ ದೃಢೀಕರಣವಾಗಿ ಬಳಕೆಯಾಗುತ್ತದೆ. ಇದು ಅವರಿಗೆ ಗುರುತು ಮತ್ತು ಅಧಿಕೃತ ಸ್ಥಾನಮಾನವನ್ನು ಒದಗಿಸುತ್ತದೆ.

ಇದನ್ನೂ ಓದಿ:

ಅರೆಸ್ಟ್‌ ಮಾಡುವುದು ಸಾಧ್ಯವೇ ಇಲ್ಲ

ಈ ಪಾಸ್‌ಪೋರ್ಟ್‌ ಇರುವವರಿಗೆ ಅಂತಾರಾಷ್ಟ್ರೀಯ ಕಾನೂನು ಅಡಿಯಲ್ಲಿ ಕೆಲವು ವಿಶೇಷ ಸೌಲಭ್ಯಗಳು, ಮಾನ್ಯತೆಗಳು ಸಿಗುತ್ತದೆ. ಆತಿಥೇಯ ರಾಷ್ಟ್ರದಲ್ಲಿ ಅರೆಸ್ಟ್‌, ವಶಕ್ಕೆ ತೆಗೆದುಕೊಳ್ಳುವುದು ಸಾಧ್ಯವಾಗುವುದಿಲ್ಲ.

ವೀಸಾ ಸೌಲಭ್ಯ

ಈ ಪಾಸ್‌ಪೋರ್ಟ್‌ ಇರುವವರಿಗೆ ಹಲವು ದೇಶಗಳು ವೀಸಾ ವಿಸ್ತರಿಸುತ್ತವೆ. ವೀಸಾ ಮನ್ನಾ ಸೌಲಭ್ಯವೂ ಸಿಗಬಹುದು. ಅಧಿಕೃತ ಪ್ರವಾಸ ಕಾರ್ಯಕ್ರಮಗಳು ಸುಗಮವಾಗುತ್ತದೆ. ಭಾರತೀಯ ರಾಯಭಾರ ಕಚೇರಿಯ ಸಂಪರ್ಕ ಸೌಲಭ್ಯಗಳು ಸಿಗುತ್ತವೆ.

ಪ್ರಜ್ವಲ್‌ ರೇವಣ್ಣ ಬಂಧನ ಖಚಿತ

ರಾಜ್ಯ ಸರ್ಕಾರದ ಪತ್ರ ಆಧರಿಸಿ ವಿದೇಶಾಂಗ ಇಲಾಖೆಯು ಪ್ರಜ್ವಲ್ ರೇವಣ್ಣ ಪಾಸ್‌ಪೋರ್ಟ್ ರದ್ದು ಮಾಡುವ ಪ್ರಕ್ರಿಯೆಯನ್ನು ಶುರು ಮಾಡಿದೆ. ಕಾರಣ, ಈಗಾಗಲೇ ಅರೆಸ್ಟ್ ವಾರೆಂಟ್, ಸಮೇತ ಪತ್ರ ಎಸ್‌ಐಟಿ ಬರೆದಿದೆ.

ಹೇಗೆ ರದ್ದಾಗುತ್ತದೆ ಪ್ರಜ್ವಲ್ ಡಿಪ್ಲೊಮ್ಯಾಟಿಕ್‌ ಪಾಸ್‌ಪೋರ್ಟ್‌?

ಭಾರತೀಯ ವಿದೇಶಾಂಗ ಇಲಾಖೆಗೆ ಎಸ್‌ಐಟಿ ಅಧಿಕಾರಿಗಳು ರಾಜ್ಯ ಗೃಹ ಇಲಾಖೆ ಮುಖಾಂತರ ಪತ್ರ ರವಾನಿಸಿದ್ದಾರೆ. ಈ ಹಿಂದೆ ಸಿಎಂ ಪತ್ರ ಬರೆದಿದ್ದ ವೇಳೆ ನ್ಯಾಯಾಲಯದ ಆದೇಶ ಬೇಕು ಎಂದು ಕೇಂದ್ರ ಗೃಹ ಇಲಾಖೆ ಹೇಳಿತ್ತು. ಹಾಗಾಗಿ ನ್ಯಾಯಾಲಯದಿಂದ ಅರೆಸ್ಟ್ ವಾರಂಟ್ ಪಡೆದು ಎಸ್‌ಐಟಿಯವರು ಪುನಃ ಪತ್ರ ಬರೆದಿದ್ದಾರೆ. ಹೀಗಾಗಿ ಭಾರತೀಯ ವಿದೇಶಾಂಗ ಇಲಾಖೆಯು ಪಾಸ್‌ಪೋರ್ಟ್ ರದ್ದು ಪ್ರಕ್ರಿಯೆಯನ್ನು ಆರಂಭ ಮಾಡಿದೆ.

ಪಾಸ್‌ಪೋರ್ಟ್ ಅಥಾರಿಟಿ ಆಫ್ ಇಂಡಿಯಾ ಭಾರತೀಯ ವಿದೇಶಾಂಗ ಇಲಾಖೆ ಅಡಿಯಲ್ಲಿ ಬರುತ್ತದೆ. ಎಸ್‌ಐಟಿಯಿಂದ ಬಂದಿರುವ ಪತ್ರವನ್ನು ದೃಢೀಕರಣಕ್ಕಾಗಿ ಕೇಂದ್ರ ಗೃಹ ಇಲಾಖೆಗೆ ರವಾನೆ ಮಾಡುತ್ತದೆ. ಕೇಂದ್ರ ಗೃಹ ಇಲಾಖೆ ಪರಿಶೀಲನೆ ನಡೆಸಿ ಸಮ್ಮತಿ ಸೂಚಿಸಿದರೆ ಭಾರತೀಯ ವಿದೇಶಾಂಗ ಇಲಾಖೆಯು ಪಾಸ್‌ಪೋರ್ಟ್ ಅನ್ನು ರದ್ದು ಮಾಡುತ್ತದೆ.

ಪಾಸ್‌ಪೋರ್ಟ್‌ ರದ್ದಾದರೆ ಮುಂದೇನು?

ಒಮ್ಮೆ ಪಾಸ್‌ಪೋರ್ಟ್ ರದ್ದಾದರೆ ಈ ಬಗ್ಗೆ ಎಲ್ಲ ದೇಶಗಳ ಇಮಿಗ್ರೇಷನ್‌ಗೂ ಮಾಹಿತಿಯನ್ನು ರವಾನೆ ಮಾಡಲಾಗುತ್ತದೆ. ಹೀಗಾಗಿ ಪ್ರಜ್ವಲ್ ರೇವಣ್ಣ ಭಾರತಕ್ಕೆ ಬರಲೇಬೇಕಾದ ಅನಿವಾರ್ಯತೆ ಸೃಷ್ಟಿಯಾಗುತ್ತದೆ. ಇಲ್ಲವೇ ಐಡೆಂಟಿಟಿ ಬದಲಾಯಿಸಿ ತಲೆಮರೆಸಿಕೊಂಡು ಓಡಾಡಬೇಕು. ಹೀಗಾಗಿ ಪ್ರಜ್ವಲ್ ರೇವಣ್ಣ ಭಾರತಕ್ಕೆ ಶೀಘ್ರದಲ್ಲೇ ಬರುವ ಸಾಧ್ಯತೆ ಇದೆ.

ಪಾಸ್‌ಪೋರ್ಟ್ ರದ್ದಾದರೆ ಪ್ರಜ್ವಲ್‌ ಕರೆತರುವುದು ಹೇಗೆ?

ಒಂದು ವೇಳೆ ಪಾಸ್‌ಪೋರ್ಟ್‌ ರದ್ದು ಮಾಡಿದರೆ, ಎರಡು ವಿಧಾನಗಳಲ್ಲಿ ಪ್ರಜ್ವಲ್ ರೇವಣ್ಣ ಅವರನ್ನು ಭಾರತಕ್ಕೆ ಕರೆತರಬಹುದು. ಪ್ರಜ್ವಲ್‌ ಯಾವ ದೇಶದಲ್ಲಿದ್ದಾರೋ ಅಲ್ಲಿ ಅವರನ್ನು ಹಸ್ತಾಂತರ ಪ್ರಕ್ರಿಯೆ (Extradition) ಅಡಿ ವಾಪಸ್‌ ಕರೆತರಬಹುದಾಗಿದೆ. ಆದರೆ, ಆ ದೇಶದ ನಡುವೆ ಭಾರತವು ಈ ಮೊದಲು ಒಪ್ಪಂದ ಮಾಡಿಕೊಂಡಿರಬೇಕು. ಇಲ್ಲವಾದಲ್ಲಿ, ಗಡಿಪಾರು ಪ್ರಕ್ರಿಯೆ (Deportation) ಮೂಲಕವೂ ಪ್ರಜ್ವಲ್‌ ಅವರನ್ನು ಕರೆತರಬಹುದು.

ಹಸ್ತಾಂತರ, ಗಡಿಪಾರು ಪ್ರಕ್ರಿಯೆಗಳು ಹೇಗೆ ನಡೆಯುತ್ತವೆ?

  1. ಆರೋಪಿ ಮೊದಲು ಯಾವ ದೇಶದಲ್ಲಿ ಇದ್ದಾನೆ ಎನ್ನುವುದರ ಮಾಹಿತಿಯನ್ನು ಸಂಗ್ರಹಿಸಬೇಕು
  2. ನಂತರ ಆ ದೇಶದೊಟ್ಟಿಗೆ MLAT ( mutual legal assistance treaty) ಪ್ರಕ್ರಿಯೆಯನ್ನು ಆರಂಭ ಮಾಡಬೇಕು
  3. ಅದಾದ ಬಳಿಕ ದೇಶಕ್ಕೆ ಸಂಬಂಧಪಟ್ಟ ಪ್ರಕರಣದ ಮಾಹಿತಿಯನ್ನು ಒದಗಿಸಬೇಕು
  4. ಆಗ ಆ ದೇಶವು ಆರೋಪಿಯನ್ನು ಬಂಧನ ಮಾಡಿ ಇಲ್ಲಿಯ ವಿದೇಶಾಂಗ ಇಲಾಖೆಗೆ ಮಾಹಿತಿ ನೀಡುತ್ತದೆ
  5. ಆಗ ಹಸ್ತಾಂತರ ಪ್ರಕ್ರಿಯೆ ಮುಖಾಂತರವಾದರೆ ಇಲ್ಲಿಯ ತನಿಖಾಧಿಕಾರಿಗಳ ತಂಡ ಅಲ್ಲಿ ಬಂಧನವಾದ ವ್ಯಕ್ತಿಯನ್ನು ತಮ್ಮ ವಶಕ್ಕೆ ಹಸ್ತಾಂತರ ಮಾಡಿಕೊಳ್ಳಬೇಕು
  6. ಇದಕ್ಕಾಗಿ ಇಲ್ಲಿಯ ಪ್ರಕರಣದ ಕಡತವನ್ನು ಸಂಬಂಧಪಟ್ಟ ದೇಶದ ಭಾಷೆಗೆ ತರ್ಜುಮೆ‌ ಮಾಡಿ ನ್ಯಾಯಾಲಯಕ್ಕೆ ಸಲ್ಲಿಸಿ ಅನುಮತಿ ಪಡೆಯಬೇಕು
  7. ಗಡಿಪಾರು ಪ್ರಕ್ರಿಯೆಗೊಳಪಡುವುದಾದರೆ, ಇದರಲ್ಲಿ ಆ ದೇಶವೇ ಇಲ್ಲಿಯ ಪ್ರಕರಣದ ಮಾಹಿತಿಯನ್ನು ಅಲ್ಲಿಯ ನ್ಯಾಯಾಲಯಕ್ಕೆ ನೀಡಿ ಗಡಿಪಾರು ಮಾಡಲು ಅನುಮತಿ ಪಡೆಯುತ್ತದೆ
  8. ನಂತರ ಇಲ್ಲಿಯ ವಿದೇಶಾಂಗ ಇಲಾಖೆಗೆ ಆ ದೇಶ ಮಾಹಿತಿ ನೀಡಿ ನಿರ್ದಿಷ್ಟ ವಿಮಾನದಲ್ಲಿ ಆರೋಪಿಯನ್ನು ಕಳಿಸಿಕೊಡುತ್ತದೆ

ಪಿಎಂಗೆ ಸಿದ್ದರಾಮಯ್ಯ ಇನ್ನೊಂದು ಪತ್ರ

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಮತ್ತೊಂದು ಪತ್ರ ಬರೆದಿರುವ ಸಿಎಂ ಸಿದ್ದರಾಮಯ್ಯ ಅವರು ಪ್ರಜ್ವಲ್ ರೇವಣ್ಣನ ರಾಜತಾಂತ್ರಿಕ ಪಾಸ್‌ಪೋರ್ಟ್ ರದ್ದು ಮಾಡಿ ಎಂದು ಮನವಿ ಮಾಡಿದ್ದಾರೆ. ರಾಜ್ಯ ಸರ್ಕಾರದ ಪತ್ರ ಆಧರಿಸಿ ಕೆಲಸಕ್ಕೆ ಆರಂಭಿಸಿರುವ ಕೇಂದ್ರ ವಿದೇಶಾಂಗ ಇಲಾಖೆ, ಪ್ರಜ್ವಲ್‌ ರೇವಣ್ಣ ಪಾಸ್‌ಪೋರ್ಟ್‌ ರದ್ದು ಮಾಡುವ ಪ್ರಕ್ರಿಯೆ ಆರಂಭಿಸಿದೆ. ಪಾಸ್‌ಪೋರ್ಟ್ ಆ್ಯಕ್ಟ್ 1967ರ ಸೆಕ್ಷನ್ 10(3)(h) ಅಡಿ ಪಾಸ್‌ಪೋರ್ಟ್ ರದ್ದು ಮಾಡಿ. ಭಾರತಕ್ಕೆ ವಾಪಸ್ ಕರೆ ತರಲು ಕ್ರಮ ಕೈಗೊಳ್ಳಿ ಎಂದು ಒತ್ತಾಯಿಸಿ ಪತ್ರದ ಮೂಲಕ ಕೇಂದ್ರದ ಸಹಕಾರವನ್ನು ಸಿಎಂ ಸಿದ್ದರಾಮಯ್ಯ ಕೋರಿದ್ದಾರೆ. ಎಸ್‌ಐಟಿ ಹೊರಡಿಸಿದ ಅರೆಸ್ಟ್‌ ವಾರಂಟ್‌ ಸಮೇತ ಪತ್ರದ ಜೊತೆಗೆ ಲಗತ್ತಿಸಲಾಗಿದೆ.

ಪ್ರಕರಣ ಪ್ರಧಾನ ಆರೋಪಿಯಾಗಿರುವ ಪ್ರಜ್ವಲ್‌ ರೇವಣ್ಣ ಹಾಲಿ ಸಂಸದ ಹಾಗೂ ಮಾಜಿ ಪ್ರಧಾನಿಗಳ ಕುಟುಂಬದ ಸದಸ್ಯನಾಗಿದ್ದು, ರಾಜತಾಂತ್ರಿಕ ಪಾಸ್‌ಪೋರ್ಟ್ ಬಳಸಿ ಪ್ರಯಾಣ ಮಾಡಿದ್ದಾರೆ. FIR ದಾಖಲಾಗುವ ಕೆಲ ಗಂಟೆಗಳಿಗೆ ಮುನ್ನ ದೇಶ ತೊರೆದಿದ್ದಾರೆ. ಅವರ ಮೇಲೆ ಅತ್ಯಾಚಾರ, ಲೈಂಗಿಕ ದೌರ್ಜನ್ಯ, ಒತ್ತಾಯ ಪೂರ್ವಕವಾಗಿ ವಿಡಿಯೋ ಮಾಡಿರುವ ಆರೋಪಗಳಿವೆ. ಇಂತಹ ಆರೋಪಿ ರಾಜತಾಂತ್ರಿಕ ಪಾಸ್‌ಪೋರ್ಟ್ ಬಳಸಿ ಕಾನೂನು ಕ್ರಮಗಳಿಂದ ತಪ್ಪಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಆರೋಪಿ ಪ್ರಜ್ವಲ್ ರೇವಣ್ಣ ರಾಜತಾಂತ್ರಿಕ ಪಾಸ್‌ಪೋರ್ಟ್ ರದ್ದು ಮಾಡಿ. ಈ ವಿಚಾರವನ್ನು ಅತ್ಯಂತ ಗಂಭೀರ ಎಂದು ಪರಿಗಣಿಸಿ. ಸಾರ್ವಜನಿಕ ಹಿತಾಸಕ್ತಿ ಕಾರಣಕ್ಕಾಗಿ ಪಾಸ್‌ಪೋರ್ಟ್ ರದ್ದುಗೊಳಿಸಿ ಭಾರತಕ್ಕೆ ಬರುವಂತೆ ಮಾಡಿ ಎಂದು ಪತ್ರದಲ್ಲಿ ಮನವಿ ಮಾಡಲಾಗಿದೆ.

ಮುಜುಗರ, ಇಕ್ಕಟ್ಟಿಗೆ ಸಿಲುಕಿಸಲು ಪತ್ರ?

ಇದು ಸಿಎಂ ಕೇಂದ್ರಕ್ಕೆ ಎರಡನೇ ಬಾರಿ ಬರೆಯುತ್ತಿರುವ ಪತ್ರವಾಗಿದೆ. ಈ ಹಿಂದೆಯೂ ಒಮ್ಮೆ ಅವರು ಪತ್ರ ಬರೆದಿದ್ದರು. ಪ್ರಕರಣದ ಪ್ರಮುಖ ಆರೋಪಿ ಜೆಡಿಎಸ್‌ ಸಂಸದರಾಗಿದ್ದು, ಜೆಡಿಎಸ್‌ ಜತೆಗೆ ಮೈತ್ರಿ ಮಾಡಿಕೊಂಡಿರುವ ಬಿಜೆಪಿಯನ್ನು ಮುಜುಗರ ಹಾಗೂ ಇಕ್ಕಟ್ಟಿಗೆ ಸಿಕ್ಕಿಸುವುದು ಈ ಪತ್ರಗಳ ಉದ್ದೇಶವಾಗಿದೆ ಎಂದು ವಿಶ್ಲೇಷಿಸಲಾಗಿದೆ.

ಈ ಬಾರಿ ವಿದೇಶಾಂಗ ಇಲಾಖೆ ಪ್ರಕ್ರಿಯೆ ಚುರುಕುಗೊಳಿಸಿರುವುದರಿಂದ, ವಿದೇಶದಲ್ಲಿ ತಲೆಮರೆಸಿಕೊಂಡಿರುವ ಪ್ರಜ್ವಲ್‌ಗೆ ನಿಜವಾಗಿಯೂ ಸಂಕಷ್ಟ ಎದುರಾಗಿದೆ. ರಾಜತಾಂತ್ರಿಕ ಪಾಸ್‌ಪೋರ್ಟ್‌ ರದ್ದು ಮಾಡಿದರೆ ಪ್ರಜ್ವಲ್‌ ವಿದೇಶ ಯಾನ ಕಷ್ಟವಾಗಲಿದೆ. ಚಾಲ್ತಿಯಲ್ಲಿಲ್ಲದ ಪಾಸ್‌ಪೋರ್ಟ್‌ ಬಳಸಿದರೆ ಅಧಿಕಾರಿಗಳು ಅವರನ್ನು ಬಂಧಿಸಿ ಭಾರತಕ್ಕೆ ಹಸ್ತಾಂತರಿಸಲು ಸುಲಭವಾಗಲಿದೆ. ಇದರೊಂದಿಗೆ ಪ್ರಜ್ವಲ್‌ಗೆ ಪಲಾಯನದ ದಾರಿಗಳು ಬಂದ್‌ ಆಗಿವೆ.

ವಿದೇಶಾಂಗ ಇಲಾಖೆಗೆ ಎಸ್‌ಐಟಿ ಪತ್ರ

ಹಾಸನ ಪೆನ್‌ಡ್ರೈವ್‌ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಸಂಸದ ಪ್ರಜ್ವಲ್‌ ರೇವಣ್ಣ (Prajwal Revanna Case) ವಿದೇಶದಲ್ಲಿ ತಲೆಮರೆಸಿಕೊಂಡ ಹಿನ್ನೆಲೆಯಲ್ಲಿ ನಗರದ 42ನೇ ಎಸಿಎಂಎಂ ಕೋರ್ಟ್‌, ಇತ್ತೀಚೆಗೆ ಸಂಸದನ ವಿರುದ್ಧ ಬಂಧನ ವಾರಂಟ್‌ ಹೊರಡಿಸಿ, ಪಾಸ್‌ಪೋರ್ಟ್ ಕ್ಯಾನ್ಸಲ್ ಮಾಡಲು ಅನುಮತಿ ನೀಡಿತ್ತು. ಹೀಗಾಗಿ‌ ಪ್ರಜ್ವಲ್ ಪಾಸ್‌ಪೋರ್ಟ್ ರದ್ದು ಮಾಡುವಂತೆ ಕೋರಿ, ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಎಸ್‌ಐಟಿ ಪತ್ರ ಬರೆದಿದೆ.

ಇದನ್ನೂ ಓದಿ: Prajwal Revanna Case: 400 ಮಹಿಳೆಯರ ಮೇಲೆ ಪ್ರಜ್ವಲ್‌ ಮಾಸ್‌ ರೇಪ್‌ ಆರೋಪ; ರಾಹುಲ್ ಗಾಂಧಿ ವಿರುದ್ಧ ಡಿಜಿಗೆ ಜೆಡಿಎಸ್‌ ದೂರು

ಈ ಕೂಡಲೇ ಸಂಸದ ಪ್ರಜ್ವಲ್‌ ರೇವಣ್ಣ ಅವರ ಪಾಸ್‌ಪೋರ್ಟ್ ರದ್ದು ಮಾಡಬೇಕು ಎಂದು ಮನವಿ ಮಾಡಿರುವ ಎಸ್‌ಐಟಿ, ಲುಕ್ ಔಟ್ ನೋಟಿಸ್, ಬ್ಲೂ ಕಾರ್ನರ್ ನೋಟಿಸ್ ಎಲ್ಲವನ್ನೂ ಪತ್ರದ ಜತೆ ಟ್ಯಾಗ್ ಮಾಡಿದೆ. ಜತೆಗೆ ಪ್ರಜ್ವಲ್ ವಿರುದ್ಧದ ಪ್ರಕರಣಗಳ ಬಗ್ಗೆ ವಿದೇಶಾಂಗ ಇಲಾಖೆಗೆ ಮಾಹಿತಿ ನೀಡಿದ್ದು, ಸಂಸದ ಯಾವ ದೇಶದಲ್ಲಿ ಇದ್ದಾನೆ ಎಂಬ ಮಾಹಿತಿ ನೀಡುವಂತೆ ಮನವಿ ಮಾಡಿದೆ.

Exit mobile version