ಮೈಸೂರು: ರಾಜ್ಯ ವಿಧಾನಸಭಾ ಚುನಾವಣೆಯ (Assembly Elections 2023) ಬಳಿಕ ಇದೇ ಮೊದಲ ಬಾರಿಗೆ ಕೇಂದ್ರ ಗೃಹ ಸಚಿವ, ಬಿಜೆಪಿಯ ನಂಬರ್ 2 ನಾಯಕ ಅಮಿತ್ ಶಾ (Amit Shah) ಅವರು ರಾಜ್ಯಕ್ಕೆ ಆಗಮಿಸಿದ್ದಾರೆ. ಅವರು ಶನಿವಾರ ರಾತ್ರಿ ಮೈಸೂರಿಗೆ ಬಂದಿಳಿದಿದ್ದಾರೆ. ಇಂದು ಮೈಸೂರಿನಲ್ಲಿ ಸುತ್ತೂರು ಜಾತ್ರೆಯಲ್ಲಿ (Suttur Jatre) ಭಾಗವಹಿಸಲಿದ್ದು, ತರುವಾಯ ಲೋಕಸಭಾ ಚುನಾವಣೆಯ (Parliament Election 2024) ತಂತ್ರಗಾರಿಕೆಗೆ ಸಂಬಂಧ ಮಹತ್ವದ ಸಭೆಗಳನ್ನು ನಡೆಸಲಿದ್ದಾರೆ. ಈ ಸಂಬಂಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಪ್ರತಿಕ್ರಿಯೆ, ಅಭ್ಯರ್ಥಿಗಳ ಹುಡುಕಾಟ ಸೇರಿದಂತೆ ಇನ್ನಿತರ ವಿಷಯಗಳ ಬಗ್ಗೆ ಅಮಿತ್ ಶಾ ಜತೆಗೆ ಇಂದು ಚರ್ಚೆ ನಡೆಯಲಿದೆ. ಅಲ್ಲದೆ, ಮಂಡ್ಯ ಕ್ಷೇತ್ರದ ಬಗ್ಗೆ ಇಂದಿನ ಸಭೆಯಲ್ಲಿ ಚರ್ಚೆ ನಡೆದರೂ ನಡೆಯಬಹುದು ಎಂದು ಹೇಳಿದ್ದಾರೆ.
ಮೈಸೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿ, ಇಂದು ಮುಂಜಾನೆ 2.45ಕ್ಕೆ ಅಮಿತ್ ಶಾ ಅವರು ಬಂದಿದ್ದಾರೆ. ಹೀಗಾಗಿ ಕಾರ್ಯಕ್ರಮದಲ್ಲಿ ಬದಲಾವಣೆಯಾಗಿದೆ. ಮೊದಲು ಸುತ್ತೂರು ಮಠಕ್ಕೆ ಭೇಟಿ ನೀಡಲಿದ್ದು, ನಂತರ ಸಭೆ ನಡೆಸುತ್ತಾರೆ ಎಂದು ತಿಳಿಸಿದರು.
ಮಂಡ್ಯದ ಬಗ್ಗೆ ಚರ್ಚೆಯೇ ಆಗಿಲ್ಲ
ನಾಲ್ಕು ಲೋಕಸಭಾ ಕ್ಷೇತ್ರದಿಂದ ಕಾರ್ಯ ತಂತ್ರ ಹೇಗಿರಬೇಕು? ಜೆಡಿಎಸ್ – ಬಿಜೆಪಿ ಹೊಂದಾಣಿಕೆ ಇರುವ ಕಾರಣ ಒಟ್ಟಾಗಿ ಚುನಾವಣೆ ಎದುರಿಸುವುದು ಸೇರಿದಂತೆ ಇನ್ನಿತರ ವಿಷಯಗಳನ್ನು ಇಲ್ಲಿ ಚರ್ಚೆ ನಡೆಸಲಾಗುವುದು. ಸಿಎಂ ತವರೂರಿಂದ ಈ ಬಾರಿ ಚುನಾವಣಾ ಕಾರ್ಯತಂತ್ರ ಆರಂಭವಾಗಿದ್ದು ವಿಶೇಷ ಅಲ್ಲ. ಚಾಮರಾಜನಗರ ಕ್ಷೇತ್ರಕ್ಕೆ ಹೊಸ ಅಭ್ಯರ್ಥಿಯನ್ನು ಹುಡುಕಬೇಕು. ಮಂಡ್ಯದಲ್ಲಿ ಬದಲಾದ ರಾಜಕೀಯ ಸ್ಥಿತಿಯಲ್ಲಿ ಜೆಡಿಎಸ್ ಆ ಸ್ಥಾನ ಕೇಳುತ್ತಿದೆ ಅಂತ ಟಿವಿಯಲ್ಲಿ ನೋಡಿದ್ದೇವೆ. ಆದರೆ, ನಮ್ಮಲ್ಲಿ ಈ ಬಗ್ಗೆ ಚರ್ಚೆ ಆಗಿಲ್ಲ. ಇವತ್ತು ಆ ಬಗ್ಗೆ ಚರ್ಚೆ ಆದರೂ ಆಗಬಹುದು ಎಂದು ಹೇಳಿದರು.
ಇದನ್ನೂ ಓದಿ: Share Market : ಚೀನಾವನ್ನು ಹಿಂದಿಕ್ಕಿ ನಾಗಾಲೋಟದಲ್ಲಿರುವ ಭಾರತದ ಷೇರು ಮಾರುಕಟ್ಟೆ; ಇಲ್ಲಿದೆ ಅಂಕಿ ಅಂಶ
ಸಿಎಂ ನೇತೃತ್ವದಲ್ಲಿ ಹೊಸ ನಾಟಕ
ಕಾಂಗ್ರೆಸ್ ಹೋರಾಟ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಬಿ.ವೈ. ವಿಜಯೇಂದ್ರ, ನನ್ನ ತೆರಿಗೆ ನನ್ನ ಹಕ್ಕು ಅಲ್ಲ. ಅದು ಸರ್ಕಾರದ ವೈಫಲ್ಯ ಮುಚ್ಚಿಕೊಳ್ಳುವ ಹೋರಾಟ ಅಷ್ಟೆ. ನಿಮ್ಮ ಸರ್ಕಾರ ಬಂದು ಎಂಟು ತಿಂಗಳಲ್ಲಿ ಘೋಷಿಸಿದ ಒಂದು ಅಭಿವೃದ್ಧಿ ಕಾರ್ಯ ತಿಳಿಸಿ? ಯಾವ ಯೋಜನೆಯನ್ನೂ ಘೋಷಣೆ ಮಾಡಿಲ್ಲ. ಸಿಎಂ ನೇತೃತ್ವದಲ್ಲಿ ಹೊಸ ನಾಟಕ ನಡೆಯುತ್ತಿದೆ. ಒಂದು ಸುಳ್ಳು ನೂರು ಬಾರಿ ಹೇಳಿ ಜನರಿಗೆ ಮಂಕು ಎರಚುವ ಕೆಲಸವನ್ನು ಸಿಎಂ ಮಾಡುತ್ತಿದ್ದಾರೆ. ಚುನಾವಣೆಯಲ್ಲಿ ಇದು ಕಾಂಗ್ರೆಸ್‌ಗೆ ದುಷ್ಪರಿಣಾಮ ಬೀರುವುದು ನಿಶ್ಚಿತ ಎಂದು ಹೇಳಿದರು.