ಬೆಂಗಳೂರು: ಲೋಕಸಭಾ ಚುನಾವಣೆಗೆ (Lok Sabha Election 2024) ಭರ್ಜರಿ ತಯಾರಿಗಳು ನಡೆಯುತ್ತಿದೆ. ಈ ವೇಳೆ ಎಲ್ಲ ರಾಜಕೀಯ ಪಕ್ಷಗಳೂ ತಂತ್ರ- ರಣತಂತ್ರಗಳನ್ನು ಹೆಣೆಯುತ್ತಿವೆ. ಸೂಕ್ತ ಅಭ್ಯರ್ಥಿಯನ್ನು ನಿಲ್ಲಿಸುವ ಮೂಲಕ ಪಕ್ಷಕ್ಕೆ ಭಾರಿ ಮುನ್ನಡೆಯನ್ನು ಸಾಧಿಸಬೇಕು ಎಂಬ ನಿಟ್ಟಿನಲ್ಲಿ ಹಲವು ಆಯಾಮಗಳಲ್ಲಿ ಚಿಂತನೆ ನಡೆಸುತ್ತಿವೆ. ಈ ನಿಟ್ಟಿನಲ್ಲಿ ಮೈಸೂರು – ಕೊಡಗು ಲೋಕಸಭಾ ಕ್ಷೇತ್ರ (Mysuru-Kodagu Lok Sabha constituency) ಈಗ ಎಲ್ಲರ ಗಮನ ಸೆಳೆಯುತ್ತಿದೆ. ಈ ಕ್ಷೇತ್ರದಲ್ಲಿ ಬಿಜೆಪಿ ಕಪಿಮುಷ್ಠಿಯಲ್ಲಿದ್ದು, ಶತಾಯಗತಾಯ ಗೆಲುವು ಸಾಧಿಸಬೇಕು ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ. ಆದರೆ, ವಿಚಿತ್ರವೆಂದರೆ ಈ ಬಾರಿ ಒಂದೇ ಅಭ್ಯರ್ಥಿ ಮೇಲೆ ಎರಡೂ ರಾಷ್ಟ್ರೀಯ ಪಕ್ಷದ ಅಭ್ಯರ್ಥಿಗಳು ದೃಷ್ಟಿ ನೆಟ್ಟಿದ್ದಾರೆ. ಬಿಜೆಪಿ ಈಗ ಹೊಸ ಅಭ್ಯರ್ಥಿಯನ್ನು ನಿಲ್ಲಿಸುವ ಸಲುವಾಗಿ ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್‌ಗೆ (Yaduveer Krishnadatta Chamaraja Wadiyar) ಟಿಕೆಟ್ ನೀಡಲು ಮುಂದಾಗಿದ್ದರೆ, ಕಾಂಗ್ರೆಸ್ ಸಹ ಅವರ ಮನವೊಲಿಸಿ ಕಣಕ್ಕಿಳಿಸಲು ಚಿಂತನೆ ನಡೆಸಿದೆ.
ಆದರೆ, ಬಿಜೆಪಿಯಿಂದ ಮತ್ತೊಮ್ಮೆ ಸ್ಪರ್ಧೆಗೆ ಹಾಲಿ ಸಂಸದ ಪ್ರತಾಪ್ ಸಿಂಹ ಉತ್ಸಾಹ ತೋರಿದ್ದಾರೆ. ಹಾಗಾಗಿ ಪ್ರತಾಪ್ ಸಿಂಹ ಅವರನ್ನು ಸೋಲಿಸಲೇ ಬೇಕು ಎಂದು ಸಿಎಂ ಸಿದ್ದರಾಮಯ್ಯ ಪಣ ತೊಟ್ಟಿದ್ದಾರೆ. ಹೀಗಾಗಿ ಮೈಸೂರು ಲೋಕಸಭಾ ಕ್ಷೇತ್ರಕ್ಕೆ ಹೊಸ ಅಭ್ಯರ್ಥಿ ಎಂಟ್ರಿ ಆಗಲಿದ್ದಾರೆ ಎಂದು ಹೇಳಲಾಗುತ್ತಿದೆ.
ಸಿಎಂ ಸಿದ್ದರಾಮಯ್ಯ ವಿರುದ್ಧ ಆಗಾಗ ಹರಿಹಾಯುತ್ತಲೇ ಬಂದಿರುವ ಪ್ರತಾಪ್ ಸಿಂಹ, ಕಾಂಗ್ರೆಸ್ ನಿಲುವುಗಳನ್ನು ಹಾಗೂ ಆಡಳಿತ ವೈಖರಿಯನ್ನು ಟೀಕಿಸುತ್ತಲೇ ಬರುತ್ತಿದ್ದಾರೆ. ಹೀಗಾಗಿ ಅವರನ್ನು ಈ ಬಾರಿ ಸೋಲಿಸಲೇ ಬೇಕು. ಅದಕ್ಕಾಗಿ ಪ್ರಬಲ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕು ಎಂದು ಸೂಚನೆ ನೀಡಿದ್ದಾರೆ.
ಪ್ರತಾಪಸಿಂಹ ವಿರುದ್ಧ ಸಿದ್ದರಾಮಯ್ಯ ಅಸ್ತ್ರ!
ಪ್ರಬಲ ಅಭ್ಯರ್ಥಿ ಕಣಕ್ಕೆ ಇಳಿಸಲು ಸಿದ್ದರಾಮಯ್ಯ ಟೀಮ್ ನಿರ್ಧಾರ ಮಾಡಿದ್ದು, ಯಾರನ್ನು ಇಳಿಸಿದರೆ ಸೂಕ್ತ ಎಂಬ ನಿಟ್ಟಿನಲ್ಲಿ ಚರ್ಚೆ ನಡೆಸುತ್ತಿದೆ. ಜಾತಿ ಸಮೀಕರಣ ಒಂದೆಡೆಯಾದರೆ ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರನ್ನೇ ಕಣಕ್ಕೆ ಇಳಿಸುವ ಬಗ್ಗೆಯೂ ಚಿಂತನೆ ಇದೆ. ಆದರೆ, ಇದು ಸ್ವಲ್ಪ ರಿಸ್ಕ್ ಎಂಬುದು ಕೆಲವರ ವಾದವಾಗಿದೆ. ಜೆಡಿಎಸ್ ಸಹ ಈಗ ಬಿಜೆಪಿ ಜತೆಯಾಗಿದೆ. ಬಿಜೆಪಿಯಿಂದ ಪ್ರತಾಪ್ ಸಿಂಹ ಅವರೇ ನಿಂತರೆ ಒಕ್ಕಲಿಗ ಮತಗಳು ಸಂಪೂರ್ಣವಾಗಿ ಬಿಜೆಪಿ ಪಾಲಾಗುತ್ತದೆ. ಹಾಗಾಗಿ ಗೆಲುವು ಕಷ್ಟ ಎಂದು ಹೇಳುತ್ತಿದ್ದಾರೆ.
ಸರ್ವೆ ಮಾಡಲು ಸಿಎಂ ಸಿದ್ದರಾಮಯ್ಯ ಸೂಚನೆ
ಕಾಂಗ್ರೆಸ್‌ನಿಂದ ಯಾರು ಅಭ್ಯರ್ಥಿಯಾದರೆ ಸೂಕ್ತ ಎಂಬ ನಿಟ್ಟಿನಲ್ಲಿ ಒಂದು ಸರ್ವೆಯನ್ನು ಮಾಡಿ ಎಂದು ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ. ಈ ಸರ್ವೆಯಲ್ಲಿ ಯತೀಂದ್ರ ಸಿದ್ದರಾಮಯ್ಯ, ಡಾ. ಸುಶೃತ ಗೌಡ, ಲಕ್ಷ್ಮಣ್ ಅವರ ಹೆಸರುಗಳನ್ನು ತೆಗೆದುಕೊಳ್ಳಲಾಗುತ್ತದೆ. ಯಾರಿಗೆ ಅತಿ ಹೆಚ್ಚು ಒಲವು ವ್ಯಕ್ತವಾಗುತ್ತದೆಯೋ, ಅವರನ್ನೇ ಮುಂದಿನ ಅಭ್ಯರ್ಥಿಯನ್ನಾಗಿ ಮಾಡಬಹುದು. ಅದನ್ನು ಮುಂದಿನ ದಿನಗಳಲ್ಲಿ ಚರ್ಚೆ ಮಾಡಬಹುದು ಎಂದು ಹೇಳಿದ್ದಾರೆನ್ನಲಾಗಿದೆ.
ಇದನ್ನೂ ಓದಿ: Road Accident : ಮಲಗಿದ್ದವರ ಮೇಲೆ ಹರಿದ ಲಾರಿ; ಅಸುನೀಗಿದ ಇಬ್ಬರು ಕುರಿಗಾಯಿಗಳು
ಯುದುವೀರ್ ಒಡೆಯರ್‌ಗೆ ಗಾಳ ಹಾಕಲು ಸಿಎಂ ಯತ್ನ!
ಇನ್ನು ಮೈಸೂರಿನಲ್ಲಿ ರಾಜಕೀಯ ಪ್ರವೇಶ ಸಂಬಂಧ ಕಳೆದ ಹಲವು ವರ್ಷಗಳಿಂದ ಕೇಳಿ ಬರುತ್ತಿರುವ ಹೆಸರು ಎಂದರೆ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್. ಇವರಿಗೆ ಬಿಜೆಪಿ ಈಗಾಗಲೇ ಗಾಳ ಹಾಕಿದ್ದು, ಒಂದು ಸುತ್ತಿನ ಮಾತುಕತೆ ನಡೆದಿದೆ ಎನ್ನಲಾಗಿದೆ. ಅಲ್ಲದೆ, ಯದುವೀರ್ ಸಹ ರಾಜಕೀಯಕ್ಕೆ ಬರಲು ಉತ್ಸಾಹ ತೋರಿದ್ದಾರೆ ಎಂದು ತಿಳಿದುಬಂದಿದೆ. ಇದನ್ನೇ ಪ್ಲಸ್ ಆಗಿ ಇಟ್ಟುಕೊಂಡಿರುವ ಸಿಎಂ ಸಿದ್ದರಾಮಯ್ಯ, ಅಗತ್ಯ ಬಿದ್ದರೆ ಮಹಾರಾಜರ ಮನವೊಲಿಸಿ, ಅವರನ್ನೇ ಮೈಸೂರು ಕ್ಷೇತ್ರಕ್ಕೆ ಅಭ್ಯರ್ಥಿಯನ್ನಾಗಿ ಮಾಡೋಣ. ಬೇಕಿದ್ದರೆ ನಾನೂ ಸಹ ಅವರೊಂದಿಗೆ ಮಾತನಾಡುತ್ತೇನೆ ಎಂದು ಹೇಳಿದ್ದಾರೆ. ಹೀಗಾಗಿ ಯದುವೀರ್ ಅವರಿಗೆ ಈಗ ಫುಲ್ ಡಿಮ್ಯಾಂಡ್ ಸೃಷ್ಟಿಯಾಗಿದೆ.