ಬೆಂಗಳೂರು: ಸಿಎಂ ಸಿದ್ದರಾಮಯ್ಯ (CM siddaramaiah) ಅವರ ಸರ್ಕಾರದಲ್ಲಿ ಮಗ ಯತೀಂದ್ರ ಸಿದ್ದರಾಮಯ್ಯ (Yathindra Siddaramaiah) ಹಸ್ತಕ್ಷೇಪ ಬಹಳವಾಗಿದೆ ಎಂಬ ಆರೋಪಕ್ಕೆ ಪೂರಕವಾಗಿ ವಿಡಿಯೊ ಸಾಕ್ಷಿಯೊಂದು ಲಭ್ಯವಾಗಿದ್ದು, ಈಗ ಪ್ರತಿಪಕ್ಷ ಬಿಜೆಪಿ ಸಿಎಂ ಸಿದ್ದರಾಮಯ್ಯ ಅವರ ರಾಜೀನಾಮೆಗೆ ಪಟ್ಟು ಹಿಡಿದಿದೆ. ರಾಜ್ಯದಲ್ಲಿ ವೈಎಸ್‌ಟಿ ಟ್ಯಾಕ್ಸ್ ಹೆಚ್ಚಾಗಿದ್ದು, ಇದು ಎಟಿಎಂ ಸರ್ಕಾರವಾಗಿದೆ ಎಂದು ಹರಿಹಾಯ್ದಿದೆ. ಸಂಪೂರ್ಣ ವರ್ಗಾವಣೆ ದಂಧೆಗೆ ಇಳಿಯಲಾಗಿದೆ ಎಂದು ಬಿಜೆಪಿ (BJP Karnataka) ಕಿಡಿಕಾರಿದೆ.
ಈ ಬಗ್ಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಮಾಜಿ ಡಿಸಿಎಂ ಅಶ್ವತ್ಥ್ ನಾರಾಯಣ್ ಮಾತನಾಡಿ, ರಾಜ್ಯದಲ್ಲಿ ಮತ್ತೊಮ್ಮೆ ವೈಎಸ್‌ಟಿ (YST) ಟ್ಯಾಕ್ಸ್ ಅನ್ನೋದು ಸುದ್ದಿಯಾಗಿದೆ. ಚುನಾಯಿತ ಪ್ರತಿನಿಧಿ ಅಲ್ಲದವರು ವರ್ಗಾವಣೆ ದಂಧೆಗೆ ಇಳಿದಿದ್ದಾರೆ. ಇದೊಂದು ಎಟಿಎಂ ಸರ್ಕಾರ (ATM Sarkar) ಆಗಿದೆ. ತಂದೆಯ ಹೆಸರಲ್ಲಿ ಅಧಿಕಾರ ದುರ್ಬಳಕೆ ಆಗುತ್ತಿದೆ. ಈ ರೀತಿ ವ್ಯವಸ್ಥೆಯ ಕಣ್ಣ ಮುಂದೆಯೇ ಸಾಕ್ಷಿ ಸಿಕ್ಕಿದೆ. ಇದರ ಬಗ್ಗೆ ಈಗ ಕಾನೂನಿನ ಕ್ರಮ ಆಗಬೇಕು. ಅದು ಒಳ್ಳೆಯ ಸಂದೇಶ ಆಗಲಿದೆ. ಕಾನೂನಿನ ಬಗ್ಗೆ ಮಾತನಾಡುವ ಸಿಎಂ ಸಿದ್ದರಾಮಯ್ಯ ಈಗ ಏನು ಹೇಳುತ್ತಾರೆ ಎಂದು ಪ್ರಶ್ನೆ ಮಾಡಿದರು.
ಇದನ್ನೂ ಓದಿ: Yathindra Siddaramaiah : ಯತೀಂದ್ರ ಸಿದ್ದರಾಮಯ್ಯ ಲಿಸ್ಟ್ ತಿದ್ದಿದ ಮಹದೇವ್ ಯಾರು!?
ವರ್ಗಾವಣೆಗೆ ಟೈಮ್‌ಲೈನ್ ಎಲ್ಲಿದೆ? 50% ಗಿಂತ ಹೆಚ್ಚು ವರ್ಗಾವಣೆ ಆಗಿರುವ ಉದಾಹರಣೆ ಇದೆ. ಕಾನೂನಿನ ಬಗ್ಗೆ ಎಳ್ಳಷ್ಟೂ ಗೌರವ ಇಲ್ಲ. ಟ್ರಾನ್ಸ್‌ಫರ್ ಲಾಬಿ, ಭ್ರಷ್ಟಾಚಾರ ಎಲ್ಲವೂ ನಡೆಯುತ್ತಿದೆ. ವರ್ಷವಿಡೀ ಇವರಿಗೆ ಹಬ್ಬವೇ ಆಗಿದೆ ಎಂದು ಅಶ್ವತ್ಥ್ ನಾರಾಯಣ್ ಹೇಳಿದರು.
ಪೊಲೀಸ್ ಇಲಾಖೆಯಲ್ಲಿ ವರ್ಗಾವಣೆಗೆ ಪೊಲೀಸ್ ಬೋರ್ಡ್ ಅಂತಿದೆ. ಅಲ್ಲಿ ಪಟ್ಟಿ ತಯಾರಾದ ಮೇಲೆ ತಡೆಯುವಂತೆ ಇಲ್ಲ. ಆದರೆ, ಈ ಸರ್ಕಾರ ತಡೆಯುತ್ತಿದೆ. ನೀವೇನಾದರೂ ಮಾಡಿಕೊಳ್ಳಿ, ನಾವಿರೋದೇ ಲೂಟಿ ಮಾಡೋಕೆ. ನಮ್ಮದು ATM ಸರ್ಕಾರವೆಂದು ಹೇಳುತ್ತಾ ಇದ್ದಾರೆ ಎಂದು ಮಾಜಿ ಡಿಸಿಎಂ ಅಶ್ವತ್ಥ್ ನಾರಾಯಣ್ ಕಿಡಿಕಾರಿದರು.
ಸರ್ಕಾರದ ವಿರುದ್ಧ ಅಶ್ವತ್ಥ ನಾರಾಯಣ ಗುಡುಗು
ಈ ಸರ್ಕಾರದಲ್ಲಿ ಎಲ್ಲ ಕಡೆಯೂ ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರ ಹಸ್ತಕ್ಷೇಪ ನಡೆಯುತ್ತಿದೆ. ಎಲ್ಲದರಲ್ಲೂ ಕ್ಯಾಂಪೇನ್ ಮಾಡೋಕೆ ಶುರು ಮಾಡಿದ್ದಾರೆ. ಬರ ನಿರ್ವಹಣೆಯಲ್ಲಿ ವಿಫಲ ಆಗಿದ್ದಾರೆ. ಲೂಟಿ ಹೊಡೆದಿರೋದಕ್ಕೆ ಸಾಕ್ಷಿ ಸಿಕ್ಕಿದೆ. ಈ ಹಿಂದೆ ಐಟಿ ರೇಡ್ ಮಾಡಿದಾಗಲೇ ಸಾಕ್ಷಿ ಸಿಕ್ಕಿದೆ. ಆರ್.ಡಿ ಪಾಟೀಲ್ ಕಾಲ್ ಚೆಕ್ ಮಾಡಿದಾಗ 30 ಕಾಲ್ ಲಿಸ್ಟ್ ಸಿಕ್ಕಿದೆ. ಇವರ ಬೆಂಬಲ ಸಿಕ್ಕಿದೆ. ಎಷ್ಟು ಜನಕ್ಕೆ ಅವನು ಸಹಾಯ ಮಾಡಿದ್ದಾನೆ ಎಂದು ಅಶ್ವತ್ಥ್ ನಾರಾಯಣ್ ಪ್ರಶ್ನೆ ಮಾಡಿದರು.
ಯತೀಂದ್ರ ಅವರಿಂದ ಅಧಿಕಾರದ ದುರ್ಬಳಕೆ; ಅಶ್ವತ್ಥ್ ನಾರಾಯಣ ಹೇಳಿಕೆ ಇಲ್ಲಿದೆ
ಯತೀಂದ್ರ ಶ್ಯಾಡೋ ಸಿಎಂ: ವಿಧಾನ ಪರಿಷತ್ ಸದಸ್ಯ ರವಿಕುಮಾರ್
ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, ನಾನು ಬೆಳಗ್ಗೆ ಟಿವಿ ನೋಡುತ್ತಿದ್ದೆ. ಎಲ್ಲವೂ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸಭೆಯಲ್ಲಿ ಹೊರಗೆ ಬಂದು ಯತೀಂದ್ರ ಅವರು ಅವರ ತಂದೆಗೆ ಫೋನ್ ಮಾಡುತ್ತಾರೆ. ಅಪ್ಪ ನಾನು ಹೇಳಿದ ನಾಲ್ಕೈದು ಹೆಸರು ಮಾತ್ರ ಮಾಡಿ. ಉಳಿದದ್ದು ಮಾಡಬೇಡಿ ಅಂತ ಹೇಳುತ್ತಾರೆ. ಮಹದೇವ್ ನಾನು ಹೇಳಿದ ನಾಲ್ಕು ಮಾತ್ರ ಮಾಡಿ, ಅದನ್ನು ಬಿಟ್ಟು ಮಾಡಬೇಡಿ ಅಂತ. ಹೇಳಿದ್ದಾರೆ. ಅಂದ್ರೆ ಯಾವುದು ಡೀಲ್ ಆಗಿದೆಯೋ ಅದನ್ನು ಮಾತ್ರ ಮಾಡಿ. ಡೀಲ್ ಆಗದಿರೋದು ಬೇಡ ಅಂತ ಹೇಳಿದ್ದಾರೆ. ಇವರು ಶ್ಯಾಡೋ ಸಿಎಂ ಎಂದು ಕಿಡಿಕಾರಿದರು.
ಸಿಎಂ ಬಳಿ ಕೆಲಸ ಆಗಬೇಕು ಅಂದ್ರೆ ಯತೀಂದ್ರ ಸಿದ್ದರಾಮಯ್ಯ ಚೀಟಿ ಕಳಿಸಬೇಕು. ಸಿಎಂ ಬಳಿ ಒಂದಷ್ಟು ಭ್ರಷ್ಟಾಚಾರ ನಡೆಯುತ್ತಿದೆ. ಡಿಸಿಎಂ ವಿರುದ್ಧ ಕಂಟ್ರಾಕ್ಟರ್ಸ್ ಭ್ರಷ್ಟಾಚಾರ ಆರೋಪ ಮಾಡುತ್ತಿದ್ದಾರೆ. ಈ ಸರ್ಕಾರ ಬಂದ ಮೇಲೆ ವಿಪರೀತ ಭ್ರಷ್ಟಾಚಾರ ನಡೆಯುತ್ತಿದೆ. ಯಾರನ್ನು ಕೇಳಿದರೂ ಹೇಳುತ್ತಾರೆ. ನಮ್ಮ ಬಿಜೆಪಿ ಮೇಲೆ 40% ಸರ್ಕಾರ ಅಂತ ಆರೋಪ ಮಾಡಿದರು. ಯಾವುದನ್ನೂ ಸಾಬೀತು ಮಾಡಲು ಆಗಲಿಲ್ಲ. ಇವರದ್ದು 60%, 80% ಎಷ್ಟು ಪರ್ಸೆಂಟ್ ಸರ್ಕಾರ ಅಂತ ಸ್ಪಷ್ಟಪಡಿಸಬೇಕು. ನೈತಿಕ ಹೊಣೆ ಹೊತ್ತು ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕು ಅಂತ ರವಿಕುಮಾರ್ ಆಗ್ರಹಿಸಿದರು.
ಇದನ್ನೂ ಓದಿ: Yathindra Siddaramaiah : ಲಿಸ್ಟ್ ಫೈನಲ್ ಮುಜುಗರ; ಯತೀಂದ್ರ ಮೇಲೆ ಸಿದ್ದರಾಮಯ್ಯ ಕೆಂಡಾಮಂಡಲ
ಏನಿದು ಪ್ರಕರಣ?
ಮೈಸೂರು ತಾಲೂಕಿನ ಕೀಳನಪುರ ಗ್ರಾಮದಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿದ್ದ ವೇಳೆ ಸಿದ್ದರಾಮಯ್ಯ ಅವರಿಂದ ಬಂದ ಫೋನ್ ಕರೆಗೆ ಉತ್ತರಿಸುವ ವೇಳೆ ಯತೀಂದ್ರ ಸಿದ್ದರಾಮಯ್ಯ ಎಡವಟ್ಟು ಮಾಡಿಕೊಂಡಿದ್ದಾರೆ. ಸಾರ್ವಜನಿಕರ ಮುಂದೆಯೇ ತಾನು ನೀಡಿದ ಲಿಸ್ಟ್ ಬಗ್ಗೆ ಅವರು ತಂದೆಯ ಜತೆ ಮಾತುಕತೆ ನಡೆಸಿದ್ದರು. ಫೋನ್ ಮಾಡಿ ಮಾತನಾಡಿದ ಯತೀಂದ್ರ, ತಾನು ನೀಡಿದ ಲಿಸ್ಟ್ ಬಗ್ಗೆ ಮಾತನಾಡಿದ್ದಾರೆ. ಸಿದ್ದರಾಮಯ್ಯ ಅವರು ವಿವೇಕಾನಂದರ ಹೆಸರು ಎತ್ತಿದ್ದು, ಇದಕ್ಕೆ ಯಾರು ಎಂದು ಯತೀಂದ್ರ ಅವರು ಪ್ರಶ್ನೆ ಮಾಡಿದ್ದಾರೆ. ಅಲ್ಲದೆ, ಬೇರೊಂದು ಲಿಸ್ಟ್ ನೀಡಿದ ಬಗ್ಗೆ ಅಸಮಾಧಾನಗೊಂಡ ಯತೀಂದ್ರ, ನಾನು ಕೊಟ್ಟಿರುವುದೇ ಐದು ಅಂತ ಹೇಳಿ ಮಹದೇವರಿಗೆ ಫೋನ್ ನೀಡುವಂತೆ ಸಿದ್ದರಾಮಯ್ಯಗೆ ಸೂಚಿಸಿದ್ದರು. ಬಳಿಕ ಮಹದೇವ್ ಜೊತೆ ಮಾತನಾಡಿದ ಯತೀಂದ್ರ, ʼಮಹದೇವ್ ಯಾಕೆ ಯಾವ್ದ್ಯಾವುದು ಕೊಡ್ತಾ ಇದ್ದೀರಿ? ಮತ್ತೆ ಇದೆಲ್ಲ ಯಾರು ಕೊಡ್ತಿರೋದುʼ ಅಂತ ಪ್ರಶ್ನೆ ಮಾಡಿದ್ದಾರೆ. ʼಅದೆಲ್ಲ ಬೇಡ. ನಾನು ಯಾವುದು ನಾಲ್ಕೈದು ಕೊಟ್ಟಿದ್ದೇನೋ ಅಷ್ಟೇ ಮಾತ್ರ ಮಾಡಿʼ ಅಂತ ಯತೀಂದ್ರ ಅವರು ಮಹದೇವರಿಗೆ ಸೂಚಿಸಿದ್ದಾರೆ. ಈ ವಿಡಿಯೊ ಈಗ ಪ್ರತಿಪಕ್ಷಗಳಿಗೆ ದೊಡ್ಡ ಅಸ್ತ್ರವಾಗಿದೆ.