Site icon Vistara News

Breakthrough Challenge : ವೃದ್ಧರಿಗೂ ಮರಳಿ ಯೌವನ ನೀಡಬಲ್ಲ ಬೆಂಗಳೂರು ಹುಡುಗಿಗೆ ಸೈನ್ಸ್‌ ಪ್ರಶಸ್ತಿ

Break through Challenge front

ಬೆಂಗಳೂರು: ವರ್ಣತಂತುಗಳಲ್ಲಿ ಸಣ್ಣಪುಟ್ಟ ಬದಲಾವಣೆಯನ್ನು ಮಾಡಿ ಯೌವನವನ್ನು ಮರಳಿ ಪಡೆಯಬಹುದು ಎಂದು ನಿರೂಪಿಸಿದ ಬೆಂಗಳೂರಿನ 17 ವರ್ಷದ ಹುಡುಗಿ ಬ್ರೇಕ್‌ಥ್ರೂ ಜೂನಿಯರ್ ಚಾಲೆಂಜ್ 2023 (Breakthrough Junior Challenge 2023) ಅನ್ನು ಗೆದ್ದಿದ್ದಾಳೆ. ಸಿಯಾ ಗೋಡಿಕಾ (Sia Godika) ಎಂಬ ಈ ಹುಡುಗಿಯ ಈ ಸೃಜನಶೀಲ ಸಂಶೋಧನೆಗೆ ‘ವಿಜ್ಞಾನದ ಆಸ್ಕರ್’ ಎನ್ನಲಾಗುವ ಬ್ರೇಕ್‌ಥ್ರೂ ಜೂನಿಯರ್ ಚಾಲೆಂಜ್‌ ಪ್ರಶಸ್ತಿಯ (Breakthrough Challenge) ಜತೆಗೆ 4,00,000 ಡಾಲರ್ ಬಹುಮಾನ ದೊರಕಿದೆ. 4 ಲಕ್ಷ ಡಾಲರ್‌ ಎಂದರೆ 3,32,16,672.20 ರೂ. (3.3 ಕೋಟಿ ರೂ.) ಬಹುಮಾನ ಸಿಗಲಿದೆ.

ಜಾಗತಿಕ ಮನ್ನಣೆಯ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಆರಂಭ ಮಾಡಿದ್ದು ಬ್ರೇಕ್‌ ಥ್ರೂ ಪ್ರೈಜ್‌ ಫೌಂಡೇಷನ್‌. ಇದನ್ನು ಸ್ಥಾಪನೆ ಮಾಡಿದ್ದು ಗೂಗಲ್ ಸಹ-ಸಂಸ್ಥಾಪಕ ಸೆರ್ಗೆ ಬ್ರಿನ್, ಫೇಸ್‌ಬುಕ್ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್ ಮತ್ತು ಅವರ ಪತ್ನಿ ಪ್ರಿಸ್ಸಿಲ್ಲಾ ಚಾನ್ ಮತ್ತು ರಷ್ಯಾದ ಯೂರಿ ಮಿಲ್ನರ್ ಅವರ ಪತ್ನಿ ಜೂಲಿಯಾ ಮತ್ತು ಅಮೆರಿಕಾದ ವಾಣಿಜ್ಯೋದ್ಯಮಿ ಅನ್ನೆ ವೊಜ್ಸಿಕಿ. ಜೀವ ವಿಜ್ಞಾನ, ಭೌತಶಾಸ್ತ್ರ ಮತ್ತು ಗಣಿತ ಶಾಸ್ತ್ರದ ಮೂಲಭೂತ ಪರಿಕಲ್ಪನೆಗಳ ಸುತ್ತ ಸೃಜನಶೀಲ ಚಿಂತನೆ ಮತ್ತು ಸಂವಹನ ಕೌಶಲ್ಯಗಳನ್ನು ಪ್ರೇರೇಪಿಸಲು ಈ ಚಾಲೆಂಜ್ ವಿನ್ಯಾಸಗೊಂಡಿದೆ.

ಬ್ರೇಕ್‌ ಥ್ರೂ ಜೂನಿಯರ್ ಚಾಲೆಂಜ್ ಸ್ಪರ್ಧೆಯಲ್ಲಿ ಬೆಂಗಳೂರಿನ ಬಾಲಕಿ ಸಿಯಾ ಗೋಡಿಕಾ ಅವರು ಯಮನಕಾ ಫ್ಯಾಕ್ಟರ್ಸ್ ಎಂಬ ವಿಡಿಯೊವನ್ನು ಪ್ರೆಸೆಂಟ್‌ ಮಾಡಿದ್ದರು.

ಏನಿದೆ ಬಾಲಕಿ ಸಿಯಾ ಗೋಡಿಕಾ ಪ್ರದರ್ಶಿಸಿದ ವಿಡಿಯೊದಲ್ಲಿ?

ಸಿಯಾ ಗೋಡಿಕಾ ಅವರು ಪ್ರಸ್ತುತಪಡಿಸಿದ “ಯಮನಕಾ ಫ್ಯಾಕ್ಟರ್ಸ್” ಎಂಬ ಪರಿಕಲ್ಪನೆಯ ವಿಡಿಯೊದಲ್ಲಿ ಆಕೆ ವಯಸ್ಸಾದ ಮಹಿಳೆಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ. ನಂತರ ಅವರು ಹದಿಹರೆಯದ ವಯಸ್ಸಿಗ ಬರುವ ರೀತಿಯಲ್ಲಿ ಕಾಣಿಸಿಕೊಂಡಿದ್ದಾರೆ.

ಯಮನಕಾ ಫ್ಯಾಕ್ಟರ್ಸ್‌ ಎಂದರೆ ಸೆಲ್ಯುಲಾರ್ ರಿಪ್ರೊಗ್ರಾಮಿಂಗ್‌ನಲ್ಲಿ ನೊಬೆಲ್ ಪ್ರಶಸ್ತಿ ವಿಜೇತ ಶಿನ್ಯಾ ಯಮನಕಾ ಅವರ ಆವಿಷ್ಕಾರಗಳು. ಇದರಲ್ಲಿ ವೃದ್ಧರಲ್ಲಿ ಯೌವನವನ್ನು ಮರು ಸ್ಥಾಪನೆಯ ಚಿಂತನೆಗಳನ್ನು ಬಿತ್ತಲಾಗಿದೆ. ಅಂದರೆ ವೃದ್ಧಾಪ್ಯ ಎಂದರೆ ಕೆಲವೊಂದು ಜೀವಕೋಶಗಳು ನಾಶವಾಗುವುದು. ಯವನಕಾ ಫ್ಯಾಕ್ಟರ್ಸ್‌ ಮೂಲಕ ಈ ಜೀವಕೋಶಗಳನ್ನು ಮರುಸೃಷ್ಟಿ ಮಾಡಬಹುದು ಎಂದು ಪ್ರತಿಪಾದಿಸಲಾಗಿದೆ. ಅಂದರೆ ಒಂದು ಕಡೆ ಯೌವನವನ್ನು ಮರಳಿ ಪಡೆಯಬಹುದು, ಅದರ ಜತೆಗೆ, ಜೀವಕೋಶಗಳ ನಾಶದಿಂದ ಉಂಟಾಗುವ ರೋಗಗಳನ್ನು ಕೂಡಾ ನಿವಾರಿಸಿ ಜೀವಮಾನವನ್ನು, ಆಯುಷ್ಯವನ್ನು ವೃದ್ಧಿಸಬಹುದಾಗಿದೆ ಎನ್ನುವುದು ಆಕೆಯ ವಿಡಿಯೊದ ಕುತೂಹಲಕಾರಿ ಅಂಶ.

ನಾಲ್ಕು ಲಕ್ಷ ಡಾಲರ್‌ನಲ್ಲಿ ಸಿಯಾ ಗೋಡಿಕಾಗೆ ಎಷ್ಟು ಮೊತ್ತ ಸಿಗುತ್ತದೆ?

ಬೆಂಗಳೂರಿನ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿರುವ ಸಿಯಾ ಗೋಡಿಕಾಗೆ 2.5 ಲಕ್ಷ ಡಾಲರ್‌ ವಿದ್ಯಾರ್ಥಿ ವೇತನ ದೊರೆಯಲಿದೆ. ಆಕೆಯನ್ನು ಪ್ರಶಸ್ತಿಗೆ ಪ್ರೋತ್ಸಾಹಿಸಿ ಸಿದ್ಧಪಡಿಸಿದ ಶಿಕ್ಷಕರಿಗೆ 50000 ಡಾಲರ್‌ ಬಹುಮಾನ ಸಿಗಲಿದೆ, ಆಕೆ ಕಲಿಯುತ್ತಿರುವ ಶಾಲೆಗೆ 1 ಲಕ್ಷ ಡಾಲರ್‌ ಹಣ ಸಿಗಲಿದೆ.

ಇದನ್ನೂ ಓದಿ : Science News: 800 ಕೋಟಿ ವರ್ಷ ಹಳೆಯ ರೇಡಿಯೋ ಅಲೆಗಳ ಪತ್ತೆ

ಸಿಯಾ ಗೋಡಿಕಾ ಅವರು ಅವರು 2023ರ ಬ್ರೇಕ್‌ ಥ್ರೂ ಚಾಲೆಂಜ್‌ ವಿಜೇತೆ. ಲಾಸ್ ಏಂಜಲೀಸ್‌ನಲ್ಲಿ 2024ರ ಬ್ರೇಕ್‌ಥ್ರೂ ಜೂನಿಯರ್ ಚಾಲೆಂಜ್‌ನ ವಿಜೇತರೊಂದಿಗೆ ಸಿಯಾ ಗೋಡಿಕಾ ಬಹುಮಾನ ಸ್ವೀಕರಿಸುತ್ತಾರೆ.

ನಿಜವೆಂದರೆ ಸಿಯಾ ಗೋಡಿಕಾ ಅವರ ಹಿರಿಯ ಸಹೋದರ ಸಮಯ್ ಗೋಡಿಕಾ ಅವರು ಆರು ವರ್ಷಗಳ ಹಿಂದೆ ಜೂನಿಯರ್ ಚಾಲೆಂಜ್ ಗೆದ್ದಿದ್ದರು.

ಪ್ರಶಸ್ತಿ ಪಡೆದ ಸಿಯಾ ಗೋಡಿಕಾ ಹೇಳಿದ್ದೇನು?

ಕ್ಯಾನ್ಸರ್ ಮತ್ತು ನರವೈಜ್ಞಾನಿಕ ಸಮಸ್ಯೆಗಳ ವಿರುದ್ಧ ತನ್ನ ಅಜ್ಜಿಯರ ಹೋರಾಟವನ್ನು ನೋಡಿ ಸ್ಫೂರ್ತಿ ಪಡೆದು ಈ ವಿಡಿಯೊ ಪ್ರೆಸೆಂಟ್‌‌ ಮಾಡಿದ್ದೇನೆ ಎಂದು ಹೇಳಿದ್ದಾಳೆ 17 ವರ್ಷದ ಬೆಂಗಳೂರಿನ ಬಾಲೆ ಸಿಯಾ ಗೋಡಿಕಾ. ಈ ವರ್ಷದ ಸ್ಪರ್ಧೆಯಲ್ಲಿ 2400 ಮಂದಿ ಅರ್ಜಿ ಸಲ್ಲಿಸಿದ್ದರು.

Exit mobile version