ನವ ದೆಹಲಿ: ನಮ್ಮ ನಾಲಿಗೆ ಪತ್ತೆ ಹಚ್ಚುವ ಮೂಲ ರುಚಿಗೆ (Basic taste) ಇನ್ನೊಂದು ಸೇರ್ಪಡೆಯಾಗಿದೆ. ಸಿಹಿ, ಹುಳಿ, ಉಪ್ಪು, ಕಹಿ ಮತ್ತು ಉಮಾಮಿ ಜತೆಗೆ 6ನೇ ಮೂಲ ರುಚಿಯಾಗಿ ಅಮೋನಿಯಂ ಕ್ಲೋರೈಡ್ (Ammonium chloride) ಅನ್ನು ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ. ನೇಚರ್ ಕಮ್ಯುನಿಕೇಷನ್ಸ್ ಜರ್ನಲ್‌ನಲ್ಲಿ ಗುರುವಾರ ಪ್ರಕಟವಾದ ಸಂಶೋಧನ ವರದಿಯು ಹುಳಿ ರುಚಿಯನ್ನು ಪತ್ತೆಹಚ್ಚಲು ಸಹಾಯ ಮಾಡುವ ನಾಲಿಗೆಯ ಮೇಲಿನ ಪ್ರೋಟೀನ್ ಅಂಶಗಳು ಅಮೋನಿಯಂ ಕ್ಲೋರೈಡ್‌ಗೂ ಪ್ರತಿಕ್ರಿಯಿಸುತ್ತವೆ ಎಂದು ಹೇಳಿದೆ.
ಕ್ಯಾಲಿಫೋರ್ನಿಯಾ ವಿಶ್ವ ವಿದ್ಯಾನಿಯದ ವಿಜ್ಞಾನಿಗಳು ಈ ಹೊಸ ಮೂಲ ರಚನೆಯನ್ನು ಪತ್ತೆ ಹಚ್ಚಿದ್ದಾರೆ. ಸ್ಕ್ಯಾಂಡಿನೇವಿಯನ್ ಕ್ಯಾಂಡಿಗಳಲ್ಲಿ ಅಮೋನಿಯಂ ಕ್ಲೋರೈಡ್ ಜನಪ್ರಿಯ ಫ್ಲೇವರ್‌ಗಳಲ್ಲಿ ಒಂದು. 20ನೇ ಶತಮಾನದ ಆರಂಭದಿಂದಲೂ ಕೆಲವು ಉತ್ತರ ಯುರೋಪಿಯನ್ ದೇಶಗಳಲ್ಲಿ ಸಾಲ್ಟ್ ಲೈಕೋರೈಸ್ ಜನಪ್ರಿಯ ಕ್ಯಾಂಡಿ ಮತ್ತು ಇದು ಸಾಲ್ಮಿಯಾಕ್ ಸಾಲ್ಟ್ ಅಥವಾ ಅಮೋನಿಯಂ ಕ್ಲೋರೈಡ್ ಅನ್ನು ಒಳಗೊಂಡಿವೆ.
ನಮ್ಮ ನಾಲಿಗೆ ಅಮೋನಿಯಂ ಕ್ಲೋರೈಡ್‌ಗೆ ಹಲವು ರೀತಿಯಲ್ಲಿ ಪ್ರತಿಕ್ರಿಯಿಸುತ್ತದೆ ಎಂದು ವಿಜ್ಞಾನಿಗಳಿಗೆ ಕೆಲವು ದಶಕಗಳ ಹಿಂದೆಯೇ ತಿಳಿತ್ತು. ಆದರೆ ಅದಕ್ಕೆ ಪ್ರತಿಕ್ರಿಯಿಸುವ ನಾಲಿಗೆಯ ಮೇಲಿನ ನಿರ್ದಿಷ್ಟ ಪ್ರೋಟೀನ್ ಅಂಶಗಳ ಬಗ್ಗೆ ಸ್ಪಷ್ಟತೆ ಇರಲಿಲ್ಲ. ಹುಳಿ ರುಚಿಯ ಪತ್ತೆಗೆ ನೆರವಾಗುವ ನಾಲಗೆಯ ಪ್ರೋಟೀನ್ ಅಂಶಕ್ಕೆ ಒಟಿಒಪಿ 1 (OTOP1) ಎಂದು ಹೆಸರು. ಇದರ ಸಂಶೋಧನೆ ಅಮೋನಿಯಂ ಕ್ಲೋರೈಡ್‌ನತ್ತ ವಿಜ್ಞಾನಿಗಳನ್ನು ಕರೆ ತಂದಿತ್ತು. ಈ ಪ್ರೋಟೀನ್ ನಾಲಿಗೆಯಲ್ಲಿರುವ ಜೀವಕೋಶಗಳ ಪೊರೆಯೊಳಗೆ ಇರುತ್ತದೆ ಮತ್ತು ಹುಳಿ ಆಹಾರದ ಪ್ರಮುಖ ಅಂಶವಾದ ಹೈಡ್ರೋಜನ್ ಅಯಾನುಗಳು ಜೀವಕೋಶದೊಳಗೆ ಚಲಿಸಲು ದಾರಿ ಕಲ್ಪಿಸುತ್ತದೆ.
ಸಿಟ್ರಿಕ್ ಮತ್ತು ಆಸ್ಕೋರ್ಬಿಕ್ ಆಮ್ಲಗಳಿಂದ ಸಮೃದ್ಧವಾಗಿರುವ ನಿಂಬೆರಸ ಮತ್ತು ವಿನೇಗರ್‌ನಂತಹ ಆಮ್ಲೀಯ ಆಹಾರಗಳನ್ನು ನಾವು ಚಪ್ಪರಿಸಿದಾಗ ಹುಳಿ ರುಚಿಯ ಅನುಭವವನ್ನು ನೀಡುವ ಹಿಂದೆ ಒಟಿಒಪಿ 1 ಪ್ರಮುಖ ಪಾತ್ರ ವಹಿಸುತ್ತದೆ. ಅದೇ ರೀತಿ ಅಮೋನಿಯಂ ಕ್ಲೋರೈಡ್ ಜೀವಕೋಶದೊಳಗಿನ ಹೈಡ್ರೋಜನ್ ಅಯಾನುಗಳ ಸಾಂದ್ರತೆಯ ಮೇಲೆ ಪರಿಣಾಮ ಬೀರುತ್ತದೆ. ಅಲ್ಲದೆ ಇದು ಒಟಿಒಪಿ 1 ಅನ್ನು ಸಹ ಪ್ರಚೋದಿಸುವುದನ್ನು ವಿಜ್ಞಾನಿಗಳು ಕಂಡಕೊಂಡರು.
ಇದನ್ನೂ ಓದಿ: Nobel Prize 2023: ಅಮೆರಿಕದ ಮೌಂಗಿ ಬವೆಂಡಿ, ಲೂಯಿಸ್ ಬ್ರಸ್, ಅಲೆಕ್ಸಿ ಎಕಿಮೊವ್‌ಗೆ ಕೆಮೆಸ್ಟ್ರಿ ನೊಬೆಲ್ ಪ್ರಶಸ್ತಿ
4 ಮೂಲ ರುಚಿಯಿಂದ 6ಕ್ಕೆ ಏರಿಕೆ
ಕೆಲವು ವರ್ಷಗಳ ಹಿಂದೆ ನಾಲಿಗೆಯು ನಾಲ್ಕು ವಿಭಿನ್ನ ರುಚಿಗಳನ್ನು ಗುರುತಿಸುತ್ತವೆ ಎಂದು ಭಾವಿಸಲಾಗಿತ್ತು. ಸಿಹಿ, ಹುಳಿ, ಉಪ್ಪು ಮತ್ತು ಕಹಿ ಇವು ಮೂಲ 4 ರುಚಿಗಳು ಎಂದು ಭಾವಿಸಲಾಗಿತ್ತು. ನಂತರ ಒಂದು ಶತಮಾನದ ಹಿಂದೆ ಜಪಾನಿನ ವಿಜ್ಞಾನಿ ಕಿಕುನೆ ಇಕೆಡಾ ಮೊದಲ ಬಾರಿಗೆ ಉಮಾಮಿಯನ್ನು ಮೂಲ ರುಚಿಯಾಗಿ ಪ್ರಸ್ತಾಪಿಸಿದರು. ಸುಮಾರು ಎಂಟು ದಶಕಗಳ ನಂತರ ಇದನ್ನು ವಿಜ್ಞಾನಿಗಳು ಒಪ್ಪಿಕೊಂಡರು. ಇದೀಗ ಸಂಶೋಧಕರು 6ನೇ ಮೂಲ ರುಚಿಯನ್ನು ಕಂಡುಕೊಂಡಿದ್ದಾರೆ.
“ಅಮೋನಿಯಂ ರಸಗೊಬ್ಬರದಂತಹ ತ್ಯಾಜ್ಯ ಉತ್ಪನ್ನಗಳಲ್ಲಿ ಕಂಡುಬರುತ್ತದೆ ಮತ್ತು ಸ್ವಲ್ಪ ಮಟ್ಟಿಗೆ ವಿಷಕಾರಿʼʼ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
ಭಾರತೀಯ ಸಂಪ್ರದಾಯವು ಆರು ರಸಗಳನ್ನು ತುಂಬಾ ಮೊದಲೇ ಗುರುತಿಸಿಟ್ಟಿದೆ. ಅವುಗಳನ್ನು ಷಡ್ರಸಗಳು ಎಂದು ಕರೆಯಲಾಗಿದೆ: ಸಿಹಿ, ಕಹಿ, ಉಪ್ಪು. ಹುಳಿ, ಒಗರು ಮತ್ತು ಖಾರ.