ವಾಷಿಂಗ್ಟನ್: ಕ್ಯಾನ್ಸರ್ ʻಗುಣಪಡಿಸುವ ಮಾಯಾ ಔಷಧʼದ ಬಗ್ಗೆ ಈಗ ಭಾರಿ ಚರ್ಚೆ ನಡೆಯುತ್ತಿದೆ. ವಿಜ್ಞಾನ ವಲಯವನ್ನೂ ಮೀರಿ ಜನ ಸಾಮಾನ್ಯರೂ ಮಾತನಾಡಿಕೊಳ್ಳುತ್ತಿದ್ದಾರೆ. ಆದರೆ ಕ್ಯಾನ್ಸರ್‌ಗೆ ಡೋಸ್ಟರ್‌ಲಿಮಬ್ (Dostarlimab) ʻಮಾಯಾಮದ್ದುʼ ಹೌದೇ ಎಂಬ ಬಗ್ಗೆ ಇಷ್ಟು ಬೇಗನೇ ತೀರ್ಮಾನಕ್ಕೆ ಬರಲಾಗದು ಎನ್ನುತ್ತಾರೆ ವಿಜ್ಞಾನಿಗಳು.
ಹನ್ನೆರಡು ಮಂದಿ ಗುದನಾಳ ಕ್ಯಾನ್ಸರ್ ಪೀಡಿತರ ಮೇಲೆ ನಡೆಸಿದ ಪ್ರಯೋಗದ ಫಲಿತಾಂಶದ ಪ್ರಕಾರ, ಯಾವುದೇ ಕೀಮೊ, ಶಸ್ತ್ರಚಿಕಿತ್ಸೆಗಳ ನೆರವಿಲ್ಲದೆ ಆರು ತಿಂಗಳ ಅವಧಿಯಲ್ಲಿ ನೀಡಲಾದ ಡೋಸ್ಟರ್‌ಲಿ ಮಬ್ ಔಷಧ, ಹೆಚ್ಚಿನ ಅಡ್ಡಪರಿಣಾಮಗಳಿಲ್ಲದೆ ರೋಗಿಗಳಲ್ಲಿ ಕ್ಯಾನ್ಸರ್ ಗುಣಪಡಿಸಿತ್ತು. ದೇಹದ ನೈಸರ್ಗಿಕ ಪ್ರತಿಕಾಯಗಳನ್ನು ಉದ್ದೀಪಿಸುವ ತಂತ್ರವನ್ನಾಧರಿಸಿ ಕೆಲಸ ಮಾಡುವ ಈ ಔಷಧ ʻಹೊಸದಲ್ಲʼ. ಅಮೆರಿಕ ಮತ್ತು ಐರೋಪ್ಯ ಒಕ್ಕೂಟದಲ್ಲಿ 2021ರ ಏಪ್ರಿಲ್‌ನಲ್ಲೇ ಬಳಕೆಗೆ ಮುಕ್ತವಾದ ಔಷಧವಿದು. ಆದರೆ ಕ್ಯಾನ್ಸರ್ ಪೀಡಿತರಿಗೆ ಈ ಔಷಧವೊಂದು ಆಶಾಕಿರಣ ಎಂದೇ ಎಲ್ಲೆಡೆ ಬಿಂಬಿಸಲಾಗುತ್ತಿರುವ ಸಂದರ್ಭದಲ್ಲಿ, ವಿಷಯವನ್ನು ಸ್ವಲ್ಪ ತಾಳ್ಮೆಯಿಂದ ಪರಾಂಬರಿಸುವ ಅಗತ್ಯವನ್ನು ವೈದ್ಯ ಮತ್ತು ವಿಜ್ಞಾನ ವಲಯ ಒತ್ತಿ ಹೇಳುತ್ತಿದೆ. ಹಾಗಾದರೆ ಏನವರ ಇಂಗಿತ?
ಸೀಮಿತ ಪ್ರಯೋಗ: ಪ್ರಯೋಗಕ್ಕೆ ಒಳಪಡಿಸಿದ ರೋಗಿಗಳ ಸಂಖ್ಯೆ ತೀರಾ ಸೀಮಿತ. ಎಲ್ಲರೂ ಒಂದೇ ರೀತಿಯ ಲಕ್ಷಣಗಳನ್ನು ಹೊಂದಿದ್ದ ಗುದನಾಳದ ಕ್ಯಾನ್ಸರ್‌ಗೆ ತುತ್ತಾಗಿದ್ದವರು. ಇವರೆಲ್ಲ ಪ್ರತಿಕಾಯ ಚಿಕಿತ್ಸೆಗೆ ಸ್ಪಂದಿಸುವಂತಹ ಲಕ್ಷಣಗಳನ್ನೇ ತೋರಿಸುತ್ತಿದ್ದರು ಎನ್ನುತ್ತಾರೆ ಟಾಟಾ ಸ್ಮಾರಕ ಕೇಂದ್ರದ ನಿರ್ದೇಶಕ ಡಾ. ಸಿ.ಎಸ್. ಪ್ರಮೇಶ್
ವೆಚ್ಚ ವಿಪರೀತ: ಈ ಬಗ್ಗೆ ಟ್ವಿಟರ್ ನಲ್ಲಿ ವಿವರ ನೀಡಿರುವ ಡಾ. ಪ್ರಮೇಶ್, ʻಈ ಚಿಕಿತ್ಸೆಯ ವೆಚ್ಚ ಸಾಮಾನ್ಯದ್ದಲ್ಲ. ಆರು ತಿಂಗಳಲ್ಲಿ 9 ಡೋಸ್‌ಗಳಲ್ಲಿ ನೀಡಲಾಗಿರುವ ಈ ಔಷಧದ ವೆಚ್ಚ 50 ಲಕ್ಷ ರೂ. ಗಳಿಂದ ಒಂದು ಕೋಟಿ ರೂ.! ಶೇ. 70ರಷ್ಟು ಕ್ಯಾನ್ಸರ್ ಪ್ರಕರಣಗಳು ವರದಿಯಾಗುವುದು, ಭಾರತವೂ ಸೇರಿದಂತೆ, ಕೆಳ ಮತ್ತು ಮಧ್ಯಮ ಆದಾಯವಿರುವ ದೇಶಗಳಲ್ಲಿ ಎಂಬುದನ್ನು ನಾವು ಗಮನಿಸಿದರೆ, ಇಷ್ಟೊಂದು ವೆಚ್ಚವನ್ನು ಭರಿಸುವವರು ಯಾರು? ಇದು ಜನರ ಕೈಗೆಟಕುವುದು ಹೇಗೆ?ʼ ಎಂದು ಕಳಕಳಿ ಅವರದ್ದು.
ಮರುಕಳಿಸುತ್ತದೆಯೇ?: ಗುಣಮುಖರಾದವರಲ್ಲಿ ಈ ರೋಗ ಮರುಕಳಿಸುತ್ತದೆಯೇ ಎಂಬುದನ್ನು ತಿಳಿದುಕೊಳ್ಳಲು ಸಾಕಷ್ಟು ಸಮಯಾವಕಾಶ ನೀಡಲಾಗಿಲ್ಲ ಎನ್ನುತ್ತಾರೆ ಸಾರ್ವಜನಿಕ ಆರೋಗ್ಯ ತಜ್ಞ ಡಾ. ಆಶ್ ಪಾಲ್. ಇನ್ನೂ ಕನಿಷ್ಟ 6-8 ತಿಂಗಳಷ್ಟು ಅವಧಿಯ ನಂತರ ಚೇತರಿಕೆಯ ಪ್ರಮಾಣವನ್ನು ಆಧರಿಸಿದರೆ ಫಲಿತಾಂಶ ಹೆಚ್ಚು ನಿಖರ ಎನಿಸಬಹುದು ಎಂಬುದು ಅವರ ಅಭಿಪ್ರಾಯ
ಸೀಮಿತ ಮಾದರಿ: ಆರಂಭಿಕ ಫಲಿತಾಂಶ ಭರವಸೆದಾಯಕವಾಗಿದ್ದರೂ, ಪ್ರಯೋಗಕ್ಕೆ ತೆಗೆದುಕೊಂಡಿದ್ದ ಮಾದರಿ ಅತ್ಯಂತ ಸೀಮಿತ. ಇದನ್ನು ಬೇರೆ ಬೇರೆ ಜನಾಂಗ ಮತ್ತು ದೇಶಗಳಿಗೆ ಸೇರಿದ ರೋಗಿಗಳ ಮಾದರಿಗಳನ್ನು ಪ್ರಯೋಗಕ್ಕೆ ಒಳಪಡಿಸಿದಾಗ ಈ ಫಲಿತಾಂಶ ಹೆಚ್ಚು ಪ್ರಸ್ತುತ ಎನಿಸುತ್ತದೆ ಎನ್ನುವುದು ದೆಹಲಿಯ ಕ್ಯಾನ್ಸರ್ ಸಂಸ್ಥೆಯೊಂದರ ಹಿರಿಯ ತಜ್ಞವೈದ್ಯ ಡಾ. ಜೆ.ಬಿ. ಶರ್ಮಾ ಅವರ ಅಭಿಮತ.
ಸೀಮಿತ ಕಾರ್ಯಕ್ಷೇತ್ರ: ಇಡೀ ಪ್ರಯೋಗವನ್ನು ಅಮೆರಿಕದ ಎಂಎಸ್‌ಕೆ ಕ್ಯಾನ್ಸರ್ ಕೇಂದ್ರದಲ್ಲಿ ನಡೆಸಲಾಗಿದೆ. ಗುದನಾಳ ಕ್ಯಾನ್ಸರ್ ಚಿಕಿತ್ಸೆಗೆ ಈ ಕೇಂದ್ರದಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಮತ್ತು ಆರೈಕೆ ಲಭ್ಯವಿದೆ. ಹಾಗಾಗಿ ಪ್ರಯೋಗದ ಕಾರ್ಯಕ್ಷೇತ್ರ ಅತ್ಯಾಧುನಿಕ ಮತ್ತು ಸೀಮಿತ ಎನಿಸುವುದು ಒಂದು ಸಮಸ್ಯೆ ಎಂದು ವೈದ್ಯಕೀಯ ವಲಯಕ್ಕೆ ಆತಂಕವಿದೆ.
ಈಗಲೇ ಹೇಳಲಾಗದು: ಬೇರೆ ಬೇರೆ ರೀತಿಯ ಕ್ಯಾನ್ಸರ್‌ಗಳ ಮೇಲೆ ಇದರ ಬಗ್ಗೆ ವಿಸ್ತೃತ ಪ್ರಯೋಗವಾಗದ ಹೊರತು, ಚಿಕಿತ್ಸೆಯ ನಂತರ ದೀರ್ಘ ಅವಧಿಯವರೆಗೆ ಗುಣಮುಖರನ್ನು ನಿಗಾದಲ್ಲಿ ಇರಿಸದ ಹೊರತು ಫಲಿತಾಂಶಕ್ಕೆ ಅಧಿಕೃತತೆ ಬರುವುದಿಲ್ಲ. ಹಾಗಾಗಿ ಕ್ಯಾನ್ಸರ್‌ಗೆ ಡೋಸ್ಟರ್‌ಲಿಮಬ್ ಮಾಯಾಮದ್ದು ಹೌದು ಎಂಬುದನ್ನು ಈಗಲೇ ಹೇಳಲಾಗದು ಎಂದು ವೈದ್ಯ ಮತ್ತು ವಿಜ್ಞಾನ ಕ್ಷೇತ್ರದ ಹಲವು ಪರಿಣಿತ ಅನಿಸಿಕೆ.
ಇದನ್ನೂ ಓದಿ| ಕಾಡುವ ಕ್ಯಾನ್ಸರ್‌ಗೆ ಸಿಕ್ತು ಪವಾಡದ ಔಷಧ, ಪ್ರಾಯೋಗಿಕ ಹಂತದಲ್ಲೇ 18 ಜನ ಗುಣಮುಖ