ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ISRO) ತನ್ನ ಮೊದಲ ಮಾನವ ಸಹಿತ ಗಗನಯಾನಕ್ಕೆ (Gaganyaan Mission) ಸರ್ವ ಸಿದ್ಧತೆಯನ್ನು ಮಾಡಿಕೊಳ್ಳುತ್ತಿದೆ. ಅಕ್ಟೋಬರ್ 21ರಂದು ಬೆಳಗಿನ 7 ಗಂಟೆಯಿಂದ 9 ಗಂಟೆಯ ನಡುವೆ ಮಿಷನ್‌ಗೆ ಬಳಸಲಾಗುವ ಮಾನವ ಬಾಹ್ಯಾಕಾಶ ನೌಕೆಯನ್ನು (Spaceflight) ಪರೀಕ್ಷಿಸಲಿದೆ ಎಂದು ಸೋಮವಾರ ಇಸ್ರೋ ಘೋಷಿಸಿದೆ. ಸಿಬ್ಬಂದಿ ತಪ್ಪಿಸಿಕೊಳ್ಳುವ ವ್ಯವಸ್ಥೆಯ (crew escape system) ಕಾರ್ಯಕ್ಷಮತೆಯನ್ನು ಪ್ರದರ್ಶಿಸಲು ಪರೀಕ್ಷಾ ವಾಹನವನ್ನು ಶ್ರೀಹರಿಕೋಟ ಬಾಹ್ಯಾಕಾಶ ನಿಲ್ದಾಣದಿಂದ (Sriharikota spaceport) ಉಡಾವಣೆ ಮಾಡಲಾಗುವುದು ಇಸ್ರೋ ಹೇಳಿದೆ.
ಮಿಷನ್ ಗಗನಯಾನ: ಟಿವಿ-ಡಿಎನ್ ಪರೀಕ್ಷಾ ಹಾರಾಟವನ್ನು 2023ರ ಅಕ್ಟೋಬರ್ 21ರಂದು ಬೆಳಿಗ್ಗೆ 7 ರಿಂದ 9 ರವರೆಗೆ ಶ್ರೀಹರಿಕೋಟಾದ ಎಸ್‌ಡಿಎಸ್‌ಸಿ-ಎಸ್‌ಎಚ್ಎಆರ್‌ನಲ್ಲಿ ನಿಗದಿಪಡಿಸಲಾಗಿದೆ ಎಂದು ಇಸ್ರೋ ತನ್ನ ಎಕ್ಸ್ ವೇದಿಕೆಯ ಖಾತೆಯಲ್ಲಿ ಮಾಹಿತಿ ನೀಡಿದೆ. ಕಳೆದ ವಾರವಷ್ಟೇ ಈ ಪರೀಕ್ಷೆಯನ್ನು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಬಾಹ್ಯಾಕಾಶ ಸಚಿವ ಜಿತೇಂದ್ರ ಸಿಂಗ್ ಅವರು ಖಚಿತಪಡಿಸಿದ್ದರು.
Mission Gaganyaan:
— ISRO (@isro) October 7, 2023
ISRO to commence unmanned flight tests for the Gaganyaan mission.
Preparations for the Flight Test Vehicle Abort Mission-1 (TV-D1), which demonstrates the performance of the Crew Escape System, are underway.https://t.co/HSY0qfVDEH @indiannavy #Gaganyaan pic.twitter.com/XszSDEqs7w
ಖಾಸಗಿ ಸುದ್ದಿ ವಾಹಿನಿಯೊಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಂಗ್, “ಗಗನಯಾನ ಮಿಷನ್‌ನ ನಿರ್ಣಾಯಕ ಭಾಗವಾಗಿರುವ ಸಿಬ್ಬಂದಿ ಪಾರಾಗುವ ವ್ಯವಸ್ಥೆಯ ಪ್ರದರ್ಶನವನ್ನು ಇಸ್ರೋ ಪರೀಕ್ಷಿಸಲಿದೆ. ಬಳಿಕ 2024ರ ವೇಳೆಗೆ ಬಾಹ್ಯಾಕಾಶಕ್ಕೆ ಮಾನವರಹಿತ ಮತ್ತು ಮಾನವಸಹಿತ ಮಿಷನ್‌ಗಳನ್ನು ಕೈಗೊಳ್ಳಲಾಗುವುದು. ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ಈ ಪರೀಕ್ಷೆ ನಡೆಯಲಿದೆ. ಸಿಬ್ಬಂದಿ ಮಾಡ್ಯೂಲ್ ಗಗನಯಾನದ ಸಮಯದಲ್ಲಿ ಬಾಹ್ಯಾಕಾಶಕ್ಕೆ ಗಗನಯಾತ್ರಿಗಳನ್ನು ಒಯ್ಯುತ್ತದೆ ಎಂದು ಅವರು ತಿಳಿಸಿದ್ದರು.
ಈ ಸುದ್ದಿಯನ್ನೂ ಓದಿ: Gaganyaan: ಮಾನವಸಹಿತ ಗಗನಯಾನದ ಮೊದಲ ಪ್ರಾತ್ಯಕ್ಷಿಕೆ ಅಕ್ಟೋಬರ್ 25ರಂದು
ಜನವರಿ ಮಧ್ಯದಲ್ಲಿ ಹಾಲೋ ಕಕ್ಷೆ ಸೇರಲಿದೆ ಆದಿತ್ಯ ಎಲ್ 1
ಸೂರ್ಯನ ಅಧ್ಯಯನಕ್ಕೆ (Sun Study) ಕೈಗೊಳ್ಳಲಾಗಿರುವ ಆದಿತ್ಯ ಎಲ್ 1 ಮಿಷನ್ (Aditya L1 Mission) ಯಶಸ್ಸಿನ ಹಾದಿಯಲ್ಲಿದ್ದು, ಆದಿತ್ಯ ಎಲ್ 1 ಬಾಹ್ಯಾಕಾಶ ನೌಕೆ (Aditya L1 Spacecraft) ಜನವರಿಯಲ್ಲಿ ಹಾಲೋ ಕಕ್ಷೆಯನ್ನು (Halo Orbit) ಸೇರಲಿದೆ ಎಂದು ಇಸ್ರೋ ಹೇಳಿದೆ. ಈ ಕುರಿತು ಮಾಹಿತಿ ನೀಡಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ISRO) ಮುಖ್ಯಸ್ಥ ಎಸ್ ಸೋಮನಾಥ (S Somanath) ಅವರು, ಭಾರತದ ಚೊಚ್ಚಲ ಬಾಹ್ಯಾಕಾಶ ಆಧಾರಿತ ಸೌರ ಮಿಷನ್ ಆದಿತ್ಯ-ಎಲ್ 1 ಬಾಹ್ಯಾಕಾಶ ನೌಕೆಯು ಸುಗಮವಾಗಿ ಸಾಗುತ್ತಿದೆ ಮತ್ತು ಜನವರಿ ಮಧ್ಯದ ವೇಳೆಗೆ ಲಾಗ್ರೇಂಜ್ ಪಾಯಿಂಟ್ 1 (L1) ತಲುಪಲಿದೆ ಎಂದಿದ್ದಾರೆ.
ತಮಿಳುನಾಡಿನ ಮದುರೈನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಇಸ್ರೋ ಮುಖ್ಯಸ್ಥ ಎಸ್ ಸೋಮನಾಥ ಅವರು, ಮಿಷನ್ ತುಂಬಾ ಚೆನ್ನಾಗಿ ಕೆಲಸ ಮಾಡುತ್ತಿದೆ. ಪ್ರಸ್ತುತ ಭೂಮಿಯಿಂದ ಎಲ್1 ಪಾಯಿಂಟ್‌ಗೆ ಪ್ರಯಾಣಿಸಲು ಸುಮಾರು 110 ದಿನಗಳನ್ನು ತೆಗೆದುಕೊಳ್ಳುತ್ತದೆ. ಆದ್ದರಿಂದ ಜನವರಿ ಮಧ್ಯದ ವೇಳೆಗೆ, ಬಾಹ್ಯಾಕಾಶ ನೌಕೆ ಎಲ್1 ಹಂತವನ್ನು ತಲುಪಲಿದೆ. ನಂತರ ಆ ಹಂತದಲ್ಲಿ, ನಾವು ಲಗ್ರೇಂಜ್ ಪಾಯಿಂಟ್‌ಗೆ ಅಳವಡಿಕೆ ಮಾಡುತ್ತೇವೆ. ಅದನ್ನು ಹಾಲೋ ಆರ್ಬಿಟ್ ಎಂದು ಕರೆಯಲಾಗುತ್ತದೆ. ಅದೊಂದು ದೊಡ್ಡ ಕಕ್ಷೆ. ಆದ್ದರಿಂದ ಅದು ಜನವರಿ ಮಧ್ಯದ ವೇಳೆಗೆ ಸಂಭವಿಸುತ್ತದೆ ಎಂದು ತಿಳಿಸಿದ್ದಾರೆ.