ನ್ಯೂಯಾರ್ಕ್: ಭೂಮಿಯಂತೆಯೇ (Earth like) ಇರುವ, ವಾಸಯೋಗ್ಯ ಗ್ರಹವೊಂದನ್ನು (Habitable Planet) ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ (NASA) ಕಂಡುಹಿಡಿದಿದೆ. ಆದರೆ ಇದು ಭೂಮಿಯಿಂದ 137 ಬೆಳಕಿನ ವರ್ಷ (Light year) ದೂರದಲ್ಲಿದೆಯಂತೆ!
ಬೆಳಕಿನ ವರ್ಷ (ಜ್ಯೋತಿರ್ವರ್ಷ) ಎಂದರೆ ಬೆಳಕು ಒಂದು ವರ್ಷದಲ್ಲಿ ಪ್ರಯಾಣಿಸುವ ದೂರ. ಇದು 9 ಲಕ್ಷ ಕೋಟಿ ಕಿಲೋಮೀಟರ್. ಅಂದರೆ ಈ ಗ್ರಹ ಭೂಮಿಯಿಂದ 1233 ಲಕ್ಷ ಕೋಟಿ ಕಿಲೋಮೀಟರ್ ದೂರದಲ್ಲಿದೆ ಎನ್ನಬಹುದು. ನೀವು ನೌಕೆ ಹತ್ತಿ ಬೆಳಕಿನ ವೇಗದಲ್ಲಿ ಹೋದರೂ ಅಲ್ಲಿಗೆ ತಲುಪಲು 137 ವರ್ಷ ಬೇಕು.
ಇದೊಂದು ʼಸೂಪರ್ ಅರ್ತ್ʼ ಅಥವಾ ಜೀವ ಹುಟ್ಟಿ ಬೆಳೆದು ಬದುಕಬಲ್ಲ ಗ್ರಹ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಖಗೋಳಶಾಸ್ತ್ರದ ಮಾನದಂಡಗಳ ಪ್ರಕಾರ ಇದೇ ನಮಗೆ ತಕ್ಕಮಟ್ಟಿಗೆ ಹತ್ತಿರದಲ್ಲಿರುವ ಸೂಪರ್-ಅರ್ತ್. ಸಣ್ಣ, ಕೆಂಪು ಬಣ್ಣದ ನಕ್ಷತ್ರವನ್ನು ಸುತ್ತುತ್ತಿದೆಯಂತೆ. ಇದೇ ನಕ್ಷತ್ರದ ವ್ಯವಸ್ಥೆಯಲ್ಲಿ ಇನ್ನೊಂದು ಭೂಮಿ ಗಾತ್ರದ ವಾಸಯೋಗ್ಯ ಗ್ರಹವೂ ಇರಬಹುದಂತೆ.
ಈ ಗ್ರಹವನ್ನು TOI-715b ಎಂದು ಕರೆಯಲಾಗಿದೆ. ಇದು ಭೂಮಿಗಿಂತ ಸುಮಾರು ಒಂದೂವರೆ ಪಟ್ಟು ಅಗಲವಿದೆ. ಮೂಲ ನಕ್ಷತ್ರದ ಸುತ್ತ ʼವಾಸಯೋಗ್ಯ ವಲಯʼದೊಳಗೆ ಪರಿಭ್ರಮಿಸುತ್ತಿದೆ. NASA ಪ್ರಕಾರ ಅದರ ಮೇಲ್ಮೈಯಲ್ಲಿ ದ್ರವ ನೀರು ಇರಬಹುದು. ಇದು ಕೇವಲ 19 ದಿನಗಳಲ್ಲಿ ಪೂರ್ಣ ಕಕ್ಷೆಯನ್ನು ಪೂರ್ಣಗೊಳಿಸುತ್ತದೆ. ಅಂದರೆ ಇಲ್ಲಿನ 19 ದಿನಗಳು ಅದಕ್ಕೆ ಒಂದು ವರ್ಷ.
“ಗ್ರಹದ ಮೇಲ್ಮೈಯಲ್ಲಿ ನೀರು ಇರಲು, ಬದುಕಲು ಸೂಕ್ತವಾದ ವಾತಾವರಣವನ್ನು ಹೊಂದಲು ಹಲವಾರು ಅಂಶಗಳು ಸೇರಬೇಕಾಗುತ್ತದೆ. ಸಾಮಾನ್ಯ ವಾಸಯೋಗ್ಯ ವಲಯವು ವಿಶಾಲವಾದ ʼಆಶಾವಾದಿ’ ವಾಸಯೋಗ್ಯ ವಲಯಕ್ಕಿಂತ ಹೆಚ್ಚು ವಾಸಯೋಗ್ಯತೆ ಗಳಿಸಿಕೊಂಡಿರುವಂಥದು. ಇದುವರೆಗೆ ಮಾಡಲಾದ ಲೆಕ್ಕಾಚಾರದ ಪ್ರಕಾರ ಚಿಕ್ಕ ಗ್ರಹವು ಭೂಮಿಗಿಂತ ಸ್ವಲ್ಪ ದೊಡ್ಡದು” ಎಂದಿದ್ದಾರೆ ವಿಜ್ಞಾನಿಗಳು.
ಈ ಗ್ರಹವು ʼಕೆಂಪು ಕುಬ್ಜʼ ಎಂದು ಕರೆಯಲಾಗುವ ಕೆಂಪು ನಕ್ಷತ್ರವೊಂದನ್ನು ಸುತ್ತುತ್ತಿದೆ. ಇದುಇ ಸೂರ್ಯನಿಗಿಂತ ತಂಪು. ಇಂಥ ನಕ್ಷತ್ರಗಳ ಸುತ್ತಮುತ್ತ ಸಣ್ಣ, ಬಂಡೆಗಳಿಂದ ಕೂಡಿದ ವಲಯವಿರುತ್ತದೆ. ಗ್ರಹಗಳು ಒತ್ತೊತ್ತಾಗಿರುತ್ತವೆ. ಅವುಗಳ ಪಥಗಳು ಜಟಿಲವಾಗಿ ಒಂದಕ್ಕೊಂದು ಕ್ರಾಸ್ ಆಗುತ್ತವೆ.
“ಗ್ರಹ ಎಷ್ಟು ದೊಡ್ಡದಾಗಿದೆ, ಅದನ್ನು “ವಾಟರ್ ವರ್ಲ್ಡ್” ಎಂದು ವರ್ಗೀಕರಿಸಬಹುದೇ ಎಂಬಿತ್ಯಾದಿ ಗ್ರಹದ ಹಲವು ಇತರ ಗುಣಲಕ್ಷಣಗಳ ಮೇಲೆ ಎಂಬುದರ ಮೇಲೆ ಅದರ ವಾಸಯೋಗ್ಯತೆ ಅವಲಂಬಿತವಾಗಿರುತ್ತದೆ. ಅಲ್ಲಿ ದಟ್ಟವಾದ ಮತ್ತು ಶುಷ್ಕ ಜಗತ್ತು ಇರಲು ಸಾಧ್ಯ. ಅದರ ಕೆಳ ವಾತಾವರಣ ಮೇಲ್ಮೈಗೆ ಹತ್ತಿರದಲ್ಲಿ ಇರುವ ಸಾಧ್ಯತೆಯಿದೆ” ಎಂದು ನಾಸಾ ಪ್ರಕಟಣೆಯಲ್ಲಿ ತಿಳಿಸಿದೆ.
ಇದನ್ನೂ ಓದಿ:ಚಂದ್ರಯಾನ-3 ಯಶಸ್ಸಿನ ಬಳಿಕ ಇಸ್ರೋ ಬಗ್ಗೆ ಗೌರವ ಹೆಚ್ಚಳ ಎಂದ ಅಮೆರಿಕದ ನಾಸಾ!