ಇಂದಿಗೆ 50 ವರ್ಷಗಳ ಹಿಂದೆ ಭಾರತದ (India) ಇತಿಹಾಸದಲ್ಲಿ ಒಂದು ಅಭೂತಪೂರ್ವ ಕ್ಷಣ ದಾಖಲಾಗಿತ್ತು. ಅದುವೇ ಅಣು ಪರೀಕ್ಷೆ. ಪೋಖ್ರಾನ್‌ನಲ್ಲಿ ಪರಮಾಣು ಪರೀಕ್ಷೆ (Nuclear Test In Pokhran) ನಡೆಸಲು ಭಾರತಕ್ಕೆ ಸುಮಾರು ಎರಡು ವರ್ಷಗಳ ತಯಾರಿ ಬೇಕಾಯಿತು. ಆಗಿನ ಪ್ರಧಾನಿಯಾಗಿದ್ದ (Prime Minister) ಇಂದಿರಾ ಗಾಂಧಿಯವರು (Indira gandhi) 1972ರ ಸೆಪ್ಟೆಂಬರ್‌ನಲ್ಲಿ ಸ್ವದೇಶಿ ವಿನ್ಯಾಸದ ಪರಮಾಣು ಸಾಧನವನ್ನು ಸ್ಫೋಟಿಸಲು ಬಿಎಆರ್‌ಸಿ (BARC) ವಿಜ್ಞಾನಿಗಳಿಗೆ ಅನುಮತಿ ನೀಡಿದ್ದರು.
ಭಾರತ ಇಂದು ರಾಜಸ್ಥಾನದ ಪೋಖ್ರಾನ್‌ನಲ್ಲಿ ತನ್ನ ಮೊದಲ ಪರಮಾಣು ಪರೀಕ್ಷೆಯ 50ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದೆ. ಅಂದಿನ ಪರೀಕ್ಷೆ ಭಾರತವನ್ನು ಪರಮಾಣು ಶಕ್ತಿಯನ್ನಾಗಿ ರೂಪಿಸಿತು.
ಸ್ಮೈಲಿಂಗ್ ಬುದ್ಧ ಹೆಸರು ನೀಡಿದ್ದು ಯಾಕೆ?
ಈ ಪರೀಕ್ಷೆಗೆ ‘ಸ್ಮೈಲಿಂಗ್ ಬುದ್ಧ’ ಎಂಬ ಸಂಕೇತನಾಮವನ್ನು ನೀಡಲಾಯಿತು. 1974ರ ಮೇ 18ರಂದು ಆ ವರ್ಷದ ಬುದ್ಧ ಪೂರ್ಣಿಮೆಯಂದು ಪರೀಕ್ಷೆಯನ್ನು ನಡೆಸಲಾಗಿದ್ದರಿಂದ ಈ ಹೆಸರನ್ನು ಆಯ್ಕೆ ಮಾಡಲಾಯಿತು. “ಬುದ್ಧ ಅಂತಿಮವಾಗಿ ಮುಗುಳ್ನಕ್ಕ” ಎಂಬುದು ಭಾರತದ ಪ್ರಧಾನ ಪರಮಾಣು ಸಂಶೋಧನಾ ಸಂಸ್ಥೆ ಭಾಭಾ ಪರಮಾಣು ಸಂಶೋಧನಾ ಕೇಂದ್ರದ (BARC) ನಿರ್ದೇಶಕ ರಾಜಾ ರಾಮಣ್ಣ ಅವರು ಪ್ರಧಾನಿ ಇಂದಿರಾ ಗಾಂಧಿ ಅವರಿಗೆ ಸಂದೇಶವನ್ನು ರವಾನಿಸಿದ್ದರು!
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ (ಯುಎನ್‌ಎಸ್‌ಸಿ) ಕಾಯಂ ಸದಸ್ಯತ್ವ ಹೊಂದಿರದ ರಾಷ್ಟ್ರವೊಂದು ನಡೆಸಿದ ಮೊದಲ ಪರಮಾಣು ಪರೀಕ್ಷೆ ಇದಾಗಿದೆ.
ಪೋಖ್ರಾನ್‌ನಲ್ಲಿ ಸ್ಫೋಟಿಸಿದ ಸಾಧನದ ಬಗ್ಗೆ ಚರ್ಚೆಯಾಗಿದ್ದರೂ, ಇದು ಸುಮಾರು 8- 12 ಕಿಲೋ ಟನ್‌ಗಳಷ್ಟು ಟಿಎನ್‌ಟಿ (ಪರಮಾಣು ಪರೀಕ್ಷೆ ಮಾಪನ) ಎಂದು ನಂಬಲಾಗಿದೆ. ಪರೀಕ್ಷೆಯ ಪ್ರಮುಖ ಅಂಶವೆಂದರೆ ಭಾರತವು ಯುನೈಟೆಡ್ ಸ್ಟೇಟ್ಸ್ ಮತ್ತು ಇತರ ಗುಪ್ತಚರ ಸಂಸ್ಥೆಗಳ ಪತ್ತೆಯನ್ನು ತಪ್ಪಿಸುವಲ್ಲಿ ಯಶಸ್ವಿಯಾಗಿದ್ದು. ಇಂತಹ ಪರೀಕ್ಷೆಗಳು ಪರಮಾಣು ಪ್ರಸರಣಕ್ಕೆ ಕಾರಣವಾಗಬಹುದು ಎಂದು ಹೇಳಿದ ಅಮೆರಿಕದಂತಹ ರಾಷ್ಟ್ರದ ನಿರ್ಬಂಧಗಳ ಸರಣಿಯನ್ನು ದೇಶವು ಎದುರಿಸಿತು.
ಎರಡು ವರ್ಷಗಳ ತಯಾರಿ
ಈ ಪರೀಕ್ಷೆಯನ್ನು ನಡೆಸಲು ಭಾರತಕ್ಕೆ ಸುಮಾರು ಎರಡು ವರ್ಷಗಳ ತಯಾರಿ ಬೇಕಾಯಿತು. ಇಂದಿರಾ ಗಾಂಧಿಯವರು 1972ರ ಸೆಪ್ಟೆಂಬರ್‌ನಲ್ಲಿ ಸ್ವದೇಶಿ ವಿನ್ಯಾಸದ ಪರಮಾಣು ಸಾಧನವನ್ನು ಸ್ಫೋಟಿಸಲು ಬಿಎಆರ್‌ಸಿ ವಿಜ್ಞಾನಿಗಳಿಗೆ ಅನುಮತಿ ನೀಡಿದ್ದರು.
ಇದನ್ನೂ ಓದಿ: Chinese Scientists: ಇನ್ನು ಮನುಷ್ಯರು 130 ವರ್ಷ ಬದುಕಬಹುದು! ಚೀನಾ ವಿಜ್ಞಾನಿಗಳ ಸಂಶೋಧನೆ
ಪೋಖ್ರಾನ್-II ಪರೀಕ್ಷೆ
1974ರ ಅನಂತರ ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ 1998ರಲ್ಲಿ ಭಾರತವು ಅದೇ ಸ್ಥಳದಲ್ಲಿ ಪೋಖ್ರಾನ್- II ಹೆಸರಿನಲ್ಲಿ ಮತ್ತೊಂದು ಪರಮಾಣು ಪರೀಕ್ಷೆ ನಡೆಸಿತು. ಈ ಪರೀಕ್ಷೆ ಮೇ 1998ರಲ್ಲಿ ಪೋಖ್ರಾನ್‌ನಲ್ಲಿ ಐದು ಪರಮಾಣು ಸ್ಫೋಟಗಳ ಸರಣಿಯನ್ನು ಕಂಡವು. ಪೋಖ್ರಾನ್-II ಪರೀಕ್ಷೆಗಳ ವಾರ್ಷಿಕೋತ್ಸವದ ನೆನಪಿಗಾಗಿ ಪ್ರತಿ ವರ್ಷ ಮೇ 11ರಂದು ರಾಷ್ಟ್ರೀಯ ತಂತ್ರಜ್ಞಾನ ದಿನವನ್ನು ಆಚರಿಸಲಾಗುತ್ತದೆ. 2020ರಿಂದ ಭಾರತವು 1974ರ ಪೋಖ್ರಾನ್ ಪರೀಕ್ಷೆಗಳ ವಾರ್ಷಿಕೋತ್ಸವವನ್ನು ಆಚರಿಸಲು ಪ್ರಾರಂಭಿಸಿತ್ತು.