Site icon Vistara News

Mosquito magnets | ಸೊಳ್ಳೆಗಳು ನಿಮ್ಮನ್ನೇ ಹುಡುಕಿ ಬರುತ್ತವೆಯೇ! ಇಲ್ಲಿದೆ ಕಾರಣ

Mosquito

ಹತ್ತಾರು ಜನರ ನಡುವೆ ಕುಳಿತಾಗ ನಿಮಗೆ ಮಾತ್ರ ಸೊಳ್ಳೆ ಕಚ್ಚುವಂತೆ ಭಾಸವಾಗುತ್ತದೆಯೇ? ಯಾರಿಗೂ ಕಾಣದ ಸೊಳ್ಳೆಗಳು ನಿಮ್ಮನ್ನೇ ಹುಡುಕಿಕೊಂಡು ಬಂದು ಕಚ್ಚುತ್ತವೆಯೆಂಬ ಭ್ರಮೆ ನಿಮಗಿದೆಯೇ? ಇದು ಭ್ರಮೆಯಲ್ಲ ಎನ್ನುತ್ತವೆ ವೈಜ್ಞಾನಿಕ ಅಧ್ಯಯನಗಳು. ಸೊಳ್ಳೆಗಳು ಕೆಲವರತ್ತಲೇ ಸದಾ ಆಕರ್ಷಿತವಾಗುತ್ತವೆ ಎಂಬುದು ಇತ್ತೀಚಿನ ಸಂಶೋಧನೆಯೊಂದರ ಸಾರ.

ಇದೆಂಥ ಆಕರ್ಷಣೆ ಮಾರಾಯರೆ! ಸಂಪತ್ತು, ಯಶಸ್ಸು, ಕೀರ್ತಿ ಅಥವಾ ಹೆಸರನ್ನೋ ಆಕರ್ಷಿಸುವಂತಿದ್ದರೆ ಎಷ್ಟು ಒಳ್ಳೆಯದಿತ್ತು. ಸುಂದರ ರೂಪಿನಿಂದ ಸಂಗಾತಿಯನ್ನು ಆಕರ್ಷಿಸುವುದಾಗಿದ್ದರೆ ಇನ್ನೂ ಒಳ್ಳೆಯದಿತ್ತು. ಎಲ್ಲಾ ಬಿಟ್ಟು ರಕ್ತ ಹೀರಿ, ರೋಗ ತರಿಸುವ ಸೊಳ್ಳೆ! ಅದೂ ಹೆಣ್ಣು ಸೊಳ್ಳೆ!! ನಮ್ಮದೃಷ್ಟವೇ ಖೊಟ್ಟಿ ಎಂದು ಲೊಚಗುಟ್ಟಬಹುದು. ವಿಷಯವೇನೆಂದರೆ, ಸೊಳ್ಳೆಗಳನ್ನು ಸೂಜಿಗಲ್ಲಿನಂತೆ (“mosquito magnets”) ಸೆಳೆಯುವ ಈ ಮಹಾಶಯರ ಚರ್ಮದ ಮೇಲೆ ಉಳಿದವರಿಗಿಂತ ಹೆಚ್ಚಿನ ಪ್ರಮಾಣದ ಕಾರ್ಬಾಕ್ಸಿಲಿಕ್‌ ಆಮ್ಲ ಜಮಾವಣೆ ಆಗುತ್ತದೆ. ಎಲ್ಲರ ಚರ್ಮದ ಮೇಲೂ ಜಮಾವಣೆಯಾಗುವ ಈ ಆಮ್ಲದ ಪ್ರಮಾಣ ಬೇರೆಯಾಗಿಯೇ ಇರುತ್ತದೆ. ಹಾಗಾಗಿ ಕಾರ್ಬಾಕ್ಸಿಲಿಕ್‌ ಆಮ್ಲದ ವಾಸನೆ ಹೆಚ್ಚು ಸೂಸುವವರು ಉಳಿದವರಿಗಿಂತ ನೂರು ಪಟ್ಟು ಹೆಚ್ಚಾಗಿ ಸೊಳ್ಳೆಗಳನ್ನು ಆಕರ್ಷಿಸುತ್ತಾರೆ ಎನ್ನುತ್ತಾರೆ ನ್ಯೂಯಾರ್ಕ್‌ನ ರಾಕ್ಫೆಲ್ಲರ್‌ ವಿಶ್ವವಿದ್ಯಾಲಯದ ಅಧ್ಯಯನಕಾರರು.

ಇದನ್ನೂ ಓದಿ | ಚೀತಾ, ಚಿರತೆ, ಜಾಗ್ವಾರ್‌ | ಇವುಗಳ ನಡುವಿನ ವ್ಯತ್ಯಾಸ ತಿಳಿದಿರಲಿ!

ಸೊಳ್ಳೆಗಳನ್ನು ಸೂಜಿಗಲ್ಲಿನಂತೆ ಸೆಳೆಯುವ ಈ ಜನ ಎಲ್ಲೇ ಹೋಗಲಿ, ಎಂಥಾ ವಸ್ತ್ರಗಳನ್ನೇ ತೊಡಲಿ, ಎಂಥಾ ಆಹಾರವನ್ನೇ ಸೇವಿಸಲಿ, ಎಂಥಾ ಡಿಯೋಡರೆಂಟ್‌ ಸುರಿದುಕೊಳ್ಳಲಿ ಅಥವಾ ಅವರಿಗೆ ಎಷ್ಟೇ ವಯಸ್ಸಾಗಲಿ- ಗಂಟುಬಿದ್ದಿರುವ ಈ ಗ್ರಹಚಾರ ಸುಲಭಕ್ಕೆ ಬಿಡುವುದಿಲ್ಲ ಎನ್ನುತ್ತಾರೆ ತಜ್ಞರು. ಇದಕ್ಕಾಗಿ ಹಲವಾರು ತಿಂಗಳುಗಳವರೆಗೆ ವಿಸ್ತೃತವಾಗಿ ಪ್ರಯೋಗಗಳನ್ನು ನಡೆಸಲಾಯಿತು. “ಈ ಸುದ್ದಿ ಸಿಹಿಯೋ ಕಹಿಯೋ ಗೊತ್ತಿಲ್ಲ, ಆದರೆ ಸೊಳ್ಳೆಗಳನ್ನು ಸೆಳೆಯುವವರು ತಮ್ಮ ಜೀವನವಿಡೀ ಬದಲಾಗುವುದಿಲ್ಲ. ಅವರಿಗೆ ಸೊಳ್ಳೆ ಕಾಟ ತಪ್ಪಿದ್ದಲ್ಲ” ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಪ್ರಯೋಗದ ವಿವರ: ಒಟ್ಟು ೬೪ ಮಂದಿ ಪಾಲ್ಗೊಂಡಿದ್ದ ಈ ಪ್ರಯೋಗದ ವಿವರ ಹೀಗಿದೆ. ಚರ್ಮದ ವಾಸನೆಯನ್ನು ಚನ್ನಾಗಿ ಹೀರಬಲ್ಲಂಥ ನೈಲಾನ್‌ ಸ್ಟಾಕಿಂಗ್ಸ್‌ ಹಾಕಿಕೊಳ್ಳಲು ಎಲ್ಲರಿಗೂ ಹೇಳಲಾಗಿತ್ತು. ನಂತರ ಈ ವಸ್ತ್ರಗಳನ್ನು ಉದ್ದನೆಯ ಕೊಳವೆಯೊಂದರ ತುದಿಗೆ ಇರಿಸಿ, ಅದರೊಳಗೆ ಈಡೆಸ್ ಹೆಣ್ಣು ಸೊಳ್ಳೆಗಳನ್ನು ಬಿಡಲಾಗಿತು. ಒಬ್ಬೊಬ್ಬ ವ್ಯಕ್ತಿಯ ವಸ್ತವನ್ನೂ ಒಂದಕ್ಕಿಂತ ಹೆಚ್ಚು ಕೊಳವೆಯೊಳಗೆ ಇರಿಸಿ, ಎಲ್ಲಾ ಕೊಳವೆಯೊಳಗೂ ಆಯಾ ವಸ್ತ್ರಗಳಿಗೆ ಇಂಥವೇ ಪ್ರತಿಕ್ರಿಯೆ ಬರುತ್ತದೆಯೇ ಎಂಬುದನ್ನು ಪರಿಶೀಲಿಸಲಾಯಿತು. ಹೌದು, ಕೆಲವರ ವಸ್ತ್ರಗಳು ಸೊಳ್ಳೆಗಳು ಸೂಜಿಗಲ್ಲಿನಂತೆ ಸೆಳೆದವು. ಕೆಲವರ ವಸ್ತ್ರಗಳಂತೂ ಸುಮಾರು ನೂರು ಪಟ್ಟು ಹೆಚ್ಚು ಆಕರ್ಷಣೀಯವಾಗಿ ಸೊಳ್ಳೆಗಳಿಗೆ ಕಂಡವು. ಈ ರೀತಿಯ ಪ್ರಯೋಗಗಳನ್ನು ಮತ್ತೆಮತ್ತೆ ಮಾಡಿದಾಗಲೂ ಫಲಿತಾಂಶದಲ್ಲಿ ವಿಶೇಷ ವ್ಯತ್ಯಾಸ ಕಂಡುಬರಲಿಲ್ಲ ಎನ್ನುತ್ತಾರೆ ಅಧ್ಯಯನಕಾರರು. ಸೊಳ್ಳೆಗಳು ಪದೇಪದೆ ಕಚ್ಚುತ್ತಿವೆ ಎಂದರೆ ಯಾವುದಕ್ಕೂ ಸ್ವಲ್ಪ ಜಾಗ್ರತೆ ವಹಿಸಿ.

ಇದನ್ನೂ ಓದಿ | Egg usage: ಹೊಟ್ಟೆ ಸೇರುವ ಮೊದಲೇ ಮೊಟ್ಟೆಯ ಬಗೆಗೆ ನಿಮಗಿವು ತಿಳಿದಿರಲಿ!

Exit mobile version