ನವದೆಹಲಿ: ಎಲಾನ್ ಮಸ್ಕ್ (Elon Musk) ಒಡೆತನದ ಸ್ಪೇಸ್‌ಎಕ್ಸ್ (SpaceX Starship) ನಿರ್ಮಾಣ ಮಾಡಿದ್ದ ಜಗತ್ತಿನ ಅತ್ಯಂತ ಶಕ್ತಿಶಾಲಿ ಸ್ಟಾರ್‌ಶಿಪ್ ರಾಕೆಟ್ ಪರೀಕ್ಷೆ ನಡೆಸುವಾಗ ಸ್ಫೋಟಗೊಂಡ ಘಟನೆ ಗುರುವಾರ ನಡೆದಿದೆ. ಚಂದ್ರ, ಮಂಗಳ ಹಾಗೂ ಅದರಾಚೆಗೂ ಗಗನಯಾತ್ರಿಗಳನ್ನು ಕಳುಹಿಸಲು ಈ ರಾಕೆಟ್ ವಿನ್ಯಾಸ ಮಾಡಲಾಗಿತ್ತು. 394 ಅಡಿ ಎತ್ತರ ಹಾಗೂ 90 ಅಡಿ ಅಗಲ ಗಾತ್ರದ ಈ ರಾಕೆಟ್ ಹೆಚ್ಚು ಶಕ್ತಿಶಾಲಿಯಾಗಿತ್ತು.
ಟೆಕ್ಸಾಸ್‌ನ ಬೊಕಾ ಚಿಕಾದಲ್ಲಿರುವ ಖಾಸಗಿ ಸ್ಪೇಸ್‌ಎಕ್ಸ್ ಬಾಹ್ಯಾಕಾಶ ನಿಲ್ದಾಣವಾದ ಸ್ಟಾರ್‌ಬೇಸ್‌ನಿಂದ ದೈತ್ಯಾಕಾರದ ರಾಕೆಟ್, ಗುರುವಾರ ಬೆಳಿಗ್ಗೆ 8:33 ಕ್ಕೆ ಲಾಂಚ್ ಮಾಡಲಾಗಿತ್ತು. ಈ ವೇಳೆ, ರಾಕೆಟ್ ಮೇಲೆ ಹೋಗುತ್ತಿದ್ದಂತೆ ಗಾಳಿಯಲ್ಲಿ ಬ್ಲಾಸ್ಟ್ ಆಗಿದೆ.
ಗಾಳಿಯಲ್ಲಿ ಉರಿದು ಬೂದಿಯಾದ ಸ್ಟಾರ್‌ಶಿಪ್ ರಾಕೆಟ್
ಸ್ಟಾರ್‌ಶಿಪ್ ಕ್ಯಾಪ್ಸುಲ್ ಮೊದಲ ಹಂತದ ರಾಕೆಟ್ ಬೂಸ್ಟರ್‌ನಿಂದ ಮೂರು ನಿಮಿಷಗಳ ಹಾರಾಟ ನಂತರ ಬೇರ್ಪಡಿಸಲು ಸಮಯವನ್ನು ನಿಗದಿಪಡಿಸಲಾಗಿತ್ತು. ಆದರೆ ಈ ಬೇರ್ಪಡಿಕೆ ವಿಫಲವಾದ್ದರಿಂದ ಇಡೀ ರಾಕೆಟ್ ಸ್ಫೋಟವಾಯಿತು. ಈ ಬಗ್ಗೆ ಸ್ಪೇಸ್‌ಎಕ್ಸ್ ಟ್ವೀಟ್ ಮಾಡಿ ಖಚಿತಪಡಿಸಿದೆ.
ಏ.17ರಂದು ಉಡಾವಣೆಯಾಗಬೇತ್ತು ಈ ರಾಕೆಟ್
ಚಂದ್ರ ಹಾಗೂ ಮಂಗಳನ ಅಂಗಳಕ್ಕೆ ಜನರನ್ನೂ ಕೊಂಡೊಯ್ಯಬೇಕು, ಬಾಹ್ಯಾಕಾಶ ಪ್ರವಾಸೋದ್ಯಮಕ್ಕೆ ಮುನ್ನುಡಿ ಬರೆಯಬೇಕು ಎಂಬ ಎಲಾನ್ ಮಸ್ಕ್ ಕನಸಿಗೆ ಆರಂಭಿಕ ಹಂತದಲ್ಲಿಯೇ ಹಿನ್ನಡೆಯಾಗಿತ್ತು. ಎಲಾನ್ ಮಸ್ಕ್ ನೇತೃತ್ವದ ಸ್ಪೇಸ್‌ಎಕ್ಸ್‌ನ ಸ್ಟಾರ್‌ಶಿಪ್ ಸೂಪರ್ ಹೆವಿ (Starship Super Heavy) ರಾಕೆಟ್ ಪರೀಕ್ಷಾರ್ಥ ಉಡಾವಣೆಯನ್ನು ಏ.17ರಂದು (Starship Rocket Launch) ಕೊನೆಯ ಕ್ಷಣದಲ್ಲಿ ರದ್ದುಗೊಳಿಸಲಾಗಿತ್ತು.
ಸ್ಟಾರ್‌ಶಿಪ್ ರಾಕೆಟ್ ಲಾಂಚಿಂಗ್ ಕ್ಷಣಗಳು…
ಪರೀಕ್ಷಾರ್ಥ ಉಡಾವಣೆಯನ್ನು ರದ್ದುಗೊಳಿಸಿರುವ ಕುರಿತು ಸ್ಪೇಸ್‌ಎಕ್ಸ್‌ನ ಎಲಾನ್ ಮಸ್ಕ್ ಅವರೇ ಟ್ವಿಟರ್‌ನಲ್ಲಿ ಮಾಹಿತಿ ನೀಡಿದ್ದರು. “ಪ್ರೆಶರಂಟ್ ವಾಲ್ವ್ ಫ್ರೀಜ್ ಆಗಿದೆ. ಹಾಗಾಗಿ, ಇಂದು ಸ್ಟಾರ್‌ಶಿಪ್ ರಾಕೆಟ್ ಉಡಾವಣೆ ಮಾಡುತ್ತಿಲ್ಲ. ಇದರಿಂದ ನಾವು ತುಂಬ ಕಲಿತಿದ್ದೇವೆ. ಕೆಲವೇ ದಿನಗಳಲ್ಲಿ ಮತ್ತೆ ಪರೀಕ್ಷಾರ್ಥ ಉಡಾವಣೆ ಕುರಿತು ಮಾಹಿತಿ ನೀಡಲಾಗುವುದು” ಎಂದು ಹೇಳಿದ್ದರು.
ಇದನ್ನೂ ಓದಿ: Amit Kshatriya: ಚಂದ್ರನಿಂದ ಮಂಗಳನ ಅಂಗಳಕ್ಕೆ ನಾಸಾ ಯೋಜನೆ; ಭಾರತ ಮೂಲದ ಅಮಿತ್ ಮುಖ್ಯಸ್ಥ
ಕೆಲವು ದಿನಗಳ ಹಿಂದಷ್ಟೇ ಸ್ಟಾರ್‌ಶಿಪ್ ಸೂಪರ್ ಹೆವಿ ರಾಕೆಟ್ ಉಡಾವಣೆಗೆ ಅಮೆರಿಕ ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ ಅನುಮತಿ ನೀಡಿತ್ತು. ಸೋಮವಾರ (ಏ.17)ಸ್ಥಳೀಯ ಕಾಲಮಾನದ ಪ್ರಕಾರ ಸಂಜೆ 5 ಗಂಟೆಯಿಂದ 7ರ ಅವಧಿಯಲ್ಲಿ ರಾಕೆಟ್‌ಅನ್ನು ಉಡಾವಣೆ ಮಾಡಲು ತೀರ್ಮಾನಿಸಲಾಗಿತ್ತು. ಆದರೆ, ಕೊನೆಯ ಕ್ಷಣದಲ್ಲಿ ರಾಕೆಟ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಉಡಾವಣೆಯನ್ನು ಮುಂದೂಡಲಾಗಿತ್ತು.