ಪುತ್ತೂರು (ದಕ್ಷಿಣ ಕನ್ನಡ): ನೀವು ಖಂಡಿತವಾಗಿಯೂ ಬೆಕ್ಕಿನ ಕಣ್ಣಿನ ಸುಂದರಿಯರನ್ನು (Cat eyed Beauties) ನೋಡಿರುತ್ತೀರಿ. ನಮ್ಮ ಐಶ್ವರ್ಯ ರೈ (Aishwarya Rai), ಏಮಿ ಜಾಕ್ಸನ್ (Amy Jackson), ಹಾಲಿವುಡ್‌ನ ಹಲವು ನಟಿಯರು ತಮ್ಮ ಸುಂದರವಾದ ಕಣ್ಣುಗಳಿಗಾಗಿಯೇ ಹೆಸರುವಾಸಿ. ಅವರೆಲ್ಲ ನಿಮಗೆ ಗೊತ್ತು. ಆದರೆ, ಬೆಕ್ಕಿನ ಕಣ್ಣಿನ ಹಾವು (Cat Eyed Snake) ನಿಮಗೆ ಗೊತ್ತಾ? ನೋಡಿದ್ದೀರಾ? ನೋಡಿಲ್ಲ ಅಂದರೆ ಒಮ್ಮೆ ನೋಡಿಬಿಡಿ ಅಂತ ಕೆಲವು ದಿನದ ಹಿಂದೆ ಈ ಹಾವೇ ಪುತ್ತೂರಿನ ಒಂದು ಮನೆಗೆ ಬಂದಿತ್ತು!
ಪುತ್ತೂರಿನ ಬಲ್ನಾಡು ನಿವಾಸಿ ರವಿಕೃಷ್ಣ ಕಲ್ಲಜೆ ಎಂಬವರ ಮನೆಗೆ ಇತ್ತೀಚೆಗೆ ಒಂದು ಹಾವು ಬಂದಿತ್ತು. ಬಂದಿತ್ತು ಅನ್ನುವುದಕ್ಕಿಂತಲೂ ನೇರವಾಗಿ ಬಂದು ಮನೆಯೊಂದರ ಒಳಗಿನ ಟೇಬಲ್ ಮೇಲೆ ಆರಾಮವಾಗಿ ಮಲಗಿ ವಿಶ್ರಾಂತಿ ಪಡೆಯುತ್ತಿತ್ತು. ಸಾಮಾನ್ಯವಾಗಿ ಹಾವುಗಳು ಜನ ಸಂಚಾರ ಇದ್ದರೆ ಹೆದರುತ್ತವೆ. ಆದರೆ, ಇದು ಮಾತ್ರ ಮನೆಯ ಸದಸ್ಯನೋ ಎನ್ನುವ ಹಾಗೆ ಮಲಗಿಕೊಂಡಿತ್ತು.
ರವಿಕೃಷ್ಣ ಅವರು ಜಗಲಿಗೆ ಬಂದಾಗ ಟೇಬಲ್ ಮೇಲೆ ಹಳದಿ ಬಣ್ಣದ ವಸ್ತು ಬಿದ್ದಿದೆ ಅನಿಸಿತು. ಹತ್ತಿರ ಹೋಗಿ ನೋಡಿದಾಗಲೇ ಗೊತ್ತಾದದ್ದು ಅದು ಹಾವು ಅಂತ. ನೋಡಿದರೆ ಕಂದು ಬಣ್ಣದ ಪಟ್ಟೆ ಪಟ್ಟೆಗಳನ್ನು ಹೊಂದಿದ್ದ ಅದು ಅತ್ಯಂತ ವಿಷಕಾರಿ ಕನ್ನಡಿ ಹಾವು ಅನಿಸುತ್ತಿತ್ತು. ಅಬ್ಬಾ ದೇವರೇ.. ಕನ್ನಡಿ ಹಾವು ಮನೆಯೊಳಗೆ ಬಂದಿದೆ ಏನು ಮಾಡುವುದು ಎಂದು ಯೋಚಿಸಿದ ರವಿಕೃಷ್ಣ ಅವರಿಗೆ ನೆನಪಾದದ್ದು ಪುತ್ತೂರಿನ ಯುವ ಉರಗತಜ್ಞ ತೇಜಸ್ ಬನ್ನೂರು ಅವರು.
ಸಣ್ಣ ವಯಸ್ಸಿನಿಂದಲೇ ಹಾವುಗಳ ಬಗ್ಗೆ ಕುತೂಹಲ ತಳೆದಿರುವ ತೇಜಸ್ ಅವರು ಕನ್ನಡಿ ಹಾವು ಮನೆಯ ಟೇಬಲ್‌ನಲ್ಲಿ ಮಲಗಿದೆ ಎಂಬ ಸುದ್ದಿ ಕೇಳಿ ಓಡೋಡಿ ಬಂದರು.
ಇದು ಕನ್ನಡಿ ಹಾವಲ್ಲರಿ.. ಬೆಕ್ಕಿನ ಕಣ್ಣಿನ ಹಾವು ಅಂದ್ರು ತೇಜಸ್!
ತೇಜಸ್ ಅವರು ಓಡೋಡಿ ಬಂದು ಟೇಬಲ್ ಹತ್ತಿರ ಹೋದರು. ಮಲಗಿದ್ದ ಹಾವನ್ನು ನೋಡಿ ಅವರು ʻಓ ಇದಾ.. ಇದು ಕನ್ನಡಿ ಹಾವಲ್ಲ ಮಾರಾಯ್ರೆ.. ಇದು ಭಾರಿ ಪಾಪದ ಹಾವುʼ ಎಂದರು. ಕಿರಿಯ ವಯಸ್ಸಿನಲ್ಲೇ ಹಾವು ಹಿಡಿದು ಅವುಗಳ ರಕ್ಷಣೆ ಮಾಡುತ್ತಿರುವ ತೇಜಸ್ ಕಳೆದ ಹಲವು ವರ್ಷಗಳಿಂದ ಹಲವು ರೀತಿಯ, ಹಲವು ಪ್ರಕಾರದ ಹಾವುಗಳನ್ನು ರಕ್ಷಣೆ ಮಾಡಿದ್ದು, ಸುಮಾರು ಹತ್ತು ಸಾವಿರಕ್ಕೂ ಮಿಕ್ಕಿದ ಹಾವನ್ನು ರಕ್ಷಿಸಿದ್ದಾರೆ.
ಹೀಗಾಗಿ ಅವರಿಗೆ ನೋಡಿದ ಕೂಡಲೇ ಹಾವು ಯಾವುದೆಂದು ಗೊತ್ತಾಗಿದೆ. ಅವರು ಹಾವನ್ನು ಕೈಯಲ್ಲೇ ಹಿಡಿದು ಹೇಳಿದರು: ನೋಡಿ ಇದು ಪಶ್ಚಿಮ ಘಟ್ಟದಂತಹ ದಟ್ಟ ಅರಣ್ಯಗಳ ಮಧ್ಯೆಯೂ ಅಪರೂಪವಾಗಿ ಕಾಣಸಿಗುವ ಬೆಕ್ಕು ಕಣ್ಣಿನ ಹಾವು. ನೋಡಿ, ಇದರ ಕಣ್ಣು ನೋಡಿ, ಐಶ್ವರ್ಯ ರೈ ಕಣ್ಣಿನ ಹಾಗೆ ಇಲ್ವಾ? ಈ ಕಣ್ಣಿನಿಂದಲೇ ಈ ಹಾವಿಗೆ ಈ ಹೆಸರು ಬಂದಿದೆ.
ಹಾವನ್ನು ಕೈಯಲ್ಲಿ ಹಿಡಿದೇ ತೇಜಸ್ ಹಾವಿನ ಕಥೆ ಹೇಳುತ್ತಾ ಹೋದರು
- ಇದರ ಹೆಸರು ಫಾರೆಸ್ಟಿನ್ ಕ್ಯಾಟ್ ಸ್ನೇಕ್-Forestian Cat snake (ಬೆಕ್ಕಿನ ಕಣ್ಣಿನ ಹಾವು)
- ದಟ್ಟ ಅರಣ್ಯದಲ್ಲಿ ಸ್ವಚ್ಛಂದವಾಗಿ ವಿಹರಿಸುವ ಅಪರೂಪದ ಹಾವಿದು
- ಬೆಕ್ಕಿನ ಕಣ್ಞಿನಂತೆ ಬಿಳಿ ಕಣ್ಣುಗಳನ್ನು ಹೊಂದಿರುವ ಈ ಹಾವು ರಾತ್ರಿ ವೇಳೆಯಲ್ಲೇ ಸಂಚರಿಸುತ್ತದೆ.
- ರಾತ್ರಿಯಲ್ಲಿ ಬೆಕ್ಕಿನ ಕಣ್ಣುಗಳಂತೆಯೇ ಹೊಳೆಯುವ ಈ ಹಾವಿನ ಕಣ್ಣುಗಳು ಅತ್ಯಂತ ಆಕರ್ಷಕವೂ ಆಗಿದೆ.
- ರಾತ್ರಿ ವೇಳೆಯಲ್ಲೇ ಬೇಟೆಗಿಳಿಯುವ ಈ ಹಾವು ಹಕ್ಕಿಗಳ ಮೊಟ್ಟೆ, ಸಣ್ಣ ಗಾತ್ರದ ಹಕ್ಕಿ, ಓತಿಕ್ಯಾತ ಸೇರಿದಂತೆ ಹಲವು ಸಣ್ಣ ಗಾತ್ರದ ಪ್ರಾಣಿ ಪಕ್ಷಿಗಳನ್ನು ಬೇಟೆಯಾಡುತ್ತದೆ.
- ವಿಷಕಾರಿಯಲ್ಲದ ಈ ಹಾವು ತನ್ನ ರಕ್ಷಣೆಗಾಗಿ ಕಚ್ಚುತ್ತದೆ. ಆದರೆ ಈ ಹಾವು ಕಚ್ಚಿದಲ್ಲಿ ಯಾವುದೇ ತೊಂದರೆಯೂ ಇಲ್ಲ.
- ಹಳದಿ ಬಣ್ಣದಲ್ಲಿ ಕಂದು ಬಣ್ಣದ ಪಟ್ಟೆಗಳನ್ನು ಹೊಂದಿರುವ ಈ ಹಾವು ಕನ್ನಡಿ ಹಾವನ್ನೇ ಹೋಲುತ್ತವೆ.
- ಅಪರೂಪದ ಈ ಹಾವುಗಳು ಜನರ ಕಣ್ಣಿಗೆ ಬಿದ್ದಲ್ಲಿ ಕನ್ನಡಿ ಹಾವಿನ ಚಹರೆಯಿಂದಾಗಿ ಕೊಲ್ಲಲ್ಪಡುವುದೂ ಉಂಟು.
- ಸಣ್ಣ ಗಾತ್ರದಿಂದ ದೊಡ್ಡ ಗಾತ್ರದವರೆಗೆ ಬೆಳೆಯುವ ಈ ಹಾವು ಕೇರೆ ಹಾವಿನಷ್ಟೇ ಉದ್ದಕ್ಕೆ ಬೆಳೆಯುತ್ತದೆ.
ಮರಳಿ ದಟ್ಟ ಕಾನನ ಸೇರಿದ ಬೆಕ್ಕಿನ ಕಣ್ಣಿನ ಹಾವು
ತೇಜಸ್ ಅವರ ಪ್ರೀತಿಯ ಕೈಗಳಿಗೆ ಸಿಕ್ಕಿದ ಈ ಹಾವು ಇದೀಗ ಅದರ ಮೂಲ ವಾಸಸ್ಥಾನವಾದ ದಟ್ಟ ಅರಣ್ಯವನ್ನು ತಲುಪಿದೆ. ಇಂಥ ಹಾವನ್ನು ನೋಡಿದ ಉರಗತಜ್ಞ ತೇಜಸ್ ಪುತ್ತೂರಿನಲ್ಲಿ ಈ ರೀತಿಯ ಹಾವು ಪತ್ತೆಯಾಗಿರುವುದೇ ಅಪರೂಪ ಎಂದಿದ್ದಾರೆ. ಸಿಟಿ ನೋಡ್ಕೊಂಡು ಹೋಗೋಣ ಅಂತ ಬಂದಿರಬೇಕು ಎಂದು ನಕ್ಕರಂತೆ ರವಿಕೃಷ್ಣ ಕಲ್ಲಜೆ.