ಬೆಂಗಳೂರು: ನಾಳೆ (ಏಪ್ರಿಲ್ 24) ಬೆಂಗಳೂರಿಗರು ವಿಶಿಷ್ಟ ವಿದ್ಯಾಮಾನವೊಂದಕ್ಕೆ ಸಾಕ್ಷಿಯಾಗಲಿದ್ದಾರೆ. ಪ್ರತಿ ಕ್ಷಣವೂ ನಿಮ್ಮೊಂದಿಗೆ ಇರುವ ನೆರಳು ಕೆಲ ಹೊತ್ತು ನಿಮ್ಮನ್ನು ಬಿಟ್ಟು ದೂರ ಹೋಗಲಿದೆ. ಅಂದರೆ ಯಾವುದೇ ಲಂಬ ವಸ್ತುವೂ ನೆರಳನ್ನು ಹೊಂದಿರುವುದಿಲ್ಲ! ಇದನ್ನೇ ʼಶೂನ್ಯ ನೆರಳಿನ ದಿನʼ (Zero Shadow Day) ಎಂದು ಕರೆಯುತ್ತಾರೆ. ಇದು ಹೇಗೆ ರೂಪುಗೊಳ್ಳುತ್ತದೆ? ಏನಿದರ ವೈಶಿಷ್ಟ್ಯ ? ಮುಂತಾದ ನಿಮ್ಮ ಕುತೂಹಲಗಳಿಗೆ ಇಲ್ಲಿದೆ ಉತ್ತರ.
ಮಧ್ಯಾಹ್ನ 12.17ರಿಂದ 12.23ರ ನಡುವೆ ಈ ವಿದ್ಯಾಮಾನ ಸಂಭವಿಸಲಿದ್ದು, ಈ ವೇಳೆ ಸೂರ್ಯನ ಸ್ಥಾನವು ನಿಖರವಾಗಿ ಉತ್ತುಂಗದಲ್ಲಿರುತ್ತದೆ. ಹೀಗಾಗಿ ಎಲ್ಲ ವಸ್ತುಗಳ ನೆರಳು ಕಣ್ಮರೆಯಾಗುತ್ತದೆ. ಬೆಂಗಳೂರಿನ ಕೋರಮಂಗಲದಲ್ಲಿರುವ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ (IIA) ಈ ಸಂದರ್ಭಕ್ಕಾಗಿ ತನ್ನ ಕ್ಯಾಂಪಸ್‌ನಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಿದೆ.
Join us on 24 April to celebrate #ZeroShadowDay #ZSD for locations at #Bengaluru latitude
— IIAstrophysics (@IIABengaluru) April 22, 2024
Measure shadow lengths & check out our cool demos! We will work with Bhopal & Chennai to calculate Earth's diameter and rotation speed!@asipoec @CosmosMysuru @doot_iia @IndiaDST pic.twitter.com/99u9oD3Hy0
ಏನಿದು ʼಶೂನ್ಯ ನೆರಳಿನ ದಿನʼ ?
ಸೂರ್ಯನು ಮಧ್ಯಾಹ್ನ ನಡು ನೆತ್ತಿಯ ಮೇಲಿರುವಾಗ ಲಂಬವಾಗಿರುವ ವಸ್ತುವಿಗೆ ಸ್ವಲ್ಪ ಮಾತ್ರವಾದರೂ ನೆರಳು ಇದ್ದೇ ಇರುತ್ತದೆ. ಆದರೆ ನಾಳೆ ಅಂಥ ಯಾವುದೇ ನೆರಳು ಇರುವುದಿಲ್ಲ. ಉಷ್ಣವಲಯದ ಸ್ಥಳಗಳಲ್ಲಿ (ಕರ್ಕಾಟಕ ಸಂಕ್ರಾಂತಿ ಮತ್ತು ಮಕರ ಸಂಕ್ರಾಂತಿಯ ನಡುವೆ) ವರ್ಷಕ್ಕೆ ಎರಡು ಬಾರಿ ಶೂನ್ಯ ನೆರಳು ದಿನ ಸಂಭವಿಸುತ್ತದೆ.
ಸೂರ್ಯನ ಸುತ್ತ ಭೂಮಿಯ ಪರಿಭ್ರಮಣೆಯ ಅಕ್ಷವು ತನ್ನ ಸಮತಲದಿಂದ 23.5 ಡಿಗ್ರಿಗಳಷ್ಟು ಬಾಗಿದೆ. ಇದರಿಂದ ವಿವಿಧ ಋತುಗಳು ಸಂಭವಿಸುತ್ತವೆ. ಇದರಿಂದಾಗಿ ಸೂರ್ಯನು ದಿನದ ಅತ್ಯುನ್ನತ ಬಿಂದುವಿನಲ್ಲಿರುವಾಗ, ಉತ್ತರಾಯಣದಲ್ಲಿ ಆಕಾಶ ಸಮಭಾಜಕದ ದಕ್ಷಿಣದ 23.5 ಡಿಗ್ರಿಗಳಿಂದ ಸಮಭಾಜಕದ ಉತ್ತರಕ್ಕೆ 23.5 ಡಿಗ್ರಿಗಳಿಗೆ ಚಲಿಸುತ್ತಾನೆ ಮತ್ತು ದಕ್ಷಿಣಾಯನದಲ್ಲಿ ಇದರ ವಿರುದ್ಧಕ್ಕೆ ಚಲಿಸುತ್ತಾನೆ. ಈ ಪರಿಭ್ರಮಣ ಚಲನೆಯಿಂದಾಗಿ, ಒಂದು ಶೂನ್ಯ ನೆರಳು ದಿನವು ಉತ್ತರಾಯಣದಲ್ಲಿ (ಸೂರ್ಯ ಉತ್ತರದ ಕಡೆಗೆ ಚಲಿಸುವಾಗ) ಬರುತ್ತದೆ ಮತ್ತು ಇನ್ನೊಂದು ದಕ್ಷಿಣಾಯನದಲ್ಲಿ (ಸೂರ್ಯನು ದಕ್ಷಿಣಕ್ಕೆ ಚಲಿಸುವಾಗ) ಬರುತ್ತದೆ. 23.5 ಡಿಗ್ರಿ ಉತ್ತರ ಮತ್ತು 23.5 ಡಿಗ್ರಿ ದಕ್ಷಿಣ ಅಕ್ಷಾಂಶಗಳ ನಡುವೆ ವಾಸಿಸುವ ಜನರಿಗೆ, ಸೂರ್ಯನ ಅವನತಿಯು ಅವರ ಅಕ್ಷಾಂಶಕ್ಕೆ ಎರಡು ಬಾರಿ ಸಮನಾಗಿರುತ್ತದೆ.
ಮಹತ್ವ
ಇದು ಸೂರ್ಯನ ನಿಖರವಾದ ಸ್ಥಾನವನ್ನು ಕಂಡುಹಿಡಿಯಲು ಸಹಾಯ ಮಾಡುತ್ತದೆ. ಜತೆಗೆ ವಿಜ್ಞಾನಿ ಮತ್ತು ಖಗೋಳಶಾಸ್ತ್ರಜ್ಞರಿಗೆ ಸೂರ್ಯನ ಬೆಳಕಿನ ನಡವಳಿಕೆ ಮತ್ತು ಭೂಮಿಯ ವಾತಾವರಣದ ಮೇಲೆ ಅದು ಬೀರುವ ಪರಿಣಾಮಗಳ ಬಗ್ಗೆ ಸಂಶೋಧನೆ ನಡೆಸಲು ಅವಕಾಶವನ್ನು ಕಲ್ಪಿಸುತ್ತದೆ. ಸಾಮಾನ್ಯವಾಗಿ ಶೂನ್ಯ ನೆರಳು ಸುಮಾರು ಒಂದೂವರೆ ನಿಮಿಷ ಕಾಲ ಅನುಭವಕ್ಕೆ ಬರುತ್ತದೆ.
ಎಲ್ಲೆಲ್ಲಿ , ಯಾವಾಗ?
ಶೂನ್ಯ ನೆರಳಿನ ದಿನ ದೇಶದ ವಿವಿಧ ನಗರಗಳಲ್ಲಿ ವರ್ಷದಲ್ಲಿ ಎರಡು ಬಾರಿ ಅನುಭವಕ್ಕೆ ಬರುತ್ತದೆ. ಅದು ಯಾವಾಗ ಎನ್ನುವ ವಿವರ ಇಲ್ಲಿದೆ.
- ಕನ್ಯಾಕುಮಾರಿ: ಏಪ್ರಿಲ್ 10 ಮತ್ತು ಸೆಪ್ಟೆಂಬರ್ 1 (ಮಧ್ಯಾಹ್ನ: 12.21, 12.22)
- ಬೆಂಗಳೂರು: ಏಪ್ರಿಲ್ 24 ಮತ್ತು ಆಗಸ್ಟ್ 18 (ಮಧ್ಯಾಹ್ನ: 12.17, 12.25)
- ಹೈದರಾಬಾದ್: ಮೇ 9 ಮತ್ತು ಆಗಸ್ಟ್ 5 (ಮಧ್ಯಾಹ್ನ: 12.12, 12.19)
- ಮುಂಬೈ: ಮೇ 15 ಮತ್ತು ಜೂನ್ 27 (ಮಧ್ಯಾಹ್ನ: 12.34, 12.45)
- ಭೋಪಾಲ್: ಜೂನ್ 13 ಮತ್ತು ಜೂನ್ 28 (ಮಧ್ಯಾಹ್ನ: 12.20, 12.23)
ಇದನ್ನೂ ಓದಿ: Chandrayaan-3 mission: ಇಸ್ರೋದ ಚಂದ್ರಯಾನ-3 ಟೀಮ್‌ಗೆ ಅಮೆರಿಕದ ಪ್ರಶಸ್ತಿ: ʼಸ್ಫೂರ್ತಿʼ ಎಂದ ಸ್ಪೇಸ್ ಫೌಂಡೇಶನ್