Site icon Vistara News

Prerane Column : ದೇವರೆಂದರೆ ಲೈಫ್‌ ಇನ್ಶೂರೆನ್ಸ್‌ ಅಲ್ಲ, ನಿಮ್ಮನ್ನು ಕಾಯೋ ಸೈನಿಕನೂ ಅಲ್ಲ!

Sadguru Jaggi vasudev and Adiyogi

ಸದ್ಗುರು ಜಗ್ಗಿ ವಾಸುದೇವ್, ಈಶ ಫೌಂಡೇಶನ್‌
(Sadguru Jaggi Vasudev, Isha Foundation)

ಪ್ರತಿಯೊಂದು ಸತ್ಸಂಗದ ನಂತರ ಜನರು ನನ್ನನ್ನು ಕೇಳುವುದು, `ದೇವರಿದ್ದಾನೆಯೆ, ಇಲ್ಲವೆ’? (Existence of God)
ಹಠಾತ್ತನೆ ಬಾನಿನಲ್ಲಿ ಬೆಳಕಿನ ಮಿಂಚಿನ ಗೆರೆಗಳು, ಗುಡುಗಿನ ದಡದಡ ಶಬ್ದ, ಎಡೆಬಿಡದೆ ಸುರಿಯುವ ನೀರು, ಅಳೆಯಲಾಗದಷ್ಟು ವಿಶಾಲವಾದ ಆಕಾಶ, ಎಣಿಸಲಾಗದಷ್ಟು ನಕ್ಷತ್ರಗಳು, ಎಲ್ಲೆಗಳಿಲ್ಲದ ಕಡಲಲೆಗಳು. ಇದಾವುದಕ್ಕೂ ಕಾರಣ ತಿಳಿಯದ ಆದಿಮಾನವ ಭಯದಿಂದ ದಿಗ್ಭ್ರಾಂತನಾದ, ದಿಕ್ಕು ತೋಚದಂತಾದ. ಈ ವಿಶ್ವದ ಎದುರಿನಲ್ಲಿ ತಾನೊಂದು ದೂಳಿನ ಕಣವೆಂದು ತಿಳಿದ. ಆ ಶಕ್ತಿಯ ಮುಂದೆ ಶರಣಾಗಿ ತನ್ನನ್ನು ರಕ್ಷಿಸುವಂತೆ ಬೇಡಿಕೊಂಡ. ಮಳೆಗೆ, ಸೂರ್ಯನಿಗೆ ನಮಸ್ಕಾರ ಮಾಡಿದ. ಅಂದಿನಿಂದ ದೇವರನ್ನು ಭೀತಿಯ ಕಾರಣಕ್ಕಾಗಿ ನಂಬುತ್ತ ಬರಲಾಗಿದೆ (Prerane Column).

ಹುಟ್ಟಿದಂದಿನಿಂದಲೇ ನಿಮ್ಮ ತಾಯಿ-ತಂದೆ, ಸಮಾಜವು ದೇವರಿದ್ದಾನೆಂದು ಹೇಳುತ್ತ ಬಂದಿರುವುದರಿಂದಲ್ಲವೆ ನೀವು ಸಹ ದೇವರಿದ್ದಾನೆಂದು ನಂಬುತ್ತಿರುವುದು? ನಿಮ್ಮ ಕುಟುಂಬದವರು ಯಾವ ದೇವರ ಪಕ್ಷಕ್ಕೆ ಸೇರಿದವರೋ ಆ ದೇವರನ್ನು ಮಾತ್ರವೇ ತಾನೆ ನೀವೂ ಸಹ ಒಪ್ಪಿಕೊಂಡಿರುವುದು?

ಒಂದು ಸಮಾಜದಲ್ಲಿ ಕಲ್ಲೇ ದೇವರಾದರೆ, ಬೇರೆ ಸಮಾಜದಲ್ಲಿ ಎರಡು ಕಡ್ಡಿಗಳೇ ದೇವರಾಗಬಹುದು! ಚಿಕ್ಕ ವಯಸ್ಸಿನಿಂದಲೇ ಒಂದು ಕಬ್ಬಿಣದ ತುಂಡನ್ನು ತೋರಿಸಿ ಇದೇ ದೇವರೆಂದು ಹೇಳಿದ್ದರೆ, ಅದನ್ನೇ ದೇವರೆಂದು ಭಾವಿಸುತ್ತಿದ್ದಿರಿ. ದೇವರು, ನಿಮಗೆ ಪರಿಚಿತವಾದ ಜರಿವಸ್ತ್ರಗಳೊಂದಿಗೆ, ಆಭರಣಗಳನ್ನು ಧರಿಸಿ ಬಾರದೆ, ಜೀನ್ಸ್-ಜುಬ್ಬಾ ಧರಿಸಿ ಕಾಣಿಸಿಕೊಂಡರೆ ಅವನನ್ನು ನೀವು ಒಳಗೆ ಬರಲು ಬಿಡುತ್ತೀರಾ? ದೇವರ ಬಗೆಗೆ ನಿಮಗೆ ನೇರವಾದ ಅನುಭವಗಳಿಲ್ಲ. ಆದ್ದರಿಂದ ಬೇರೆಯವರು ಹೇಳಿದುದನ್ನು ಹಾಗೆಯೇ ಒಪ್ಪಿಕೊಂಡು ನಂಬಿದ್ದೀರಿ.

ದೇವಾಲಯಕ್ಕೆ ಏತಕ್ಕಾಗಿ ಹೋಗುತ್ತೀರಿ? ದೇವರನ್ನು ತಿಳಿಯಲೋ, ಅಥವಾ ಅದನ್ನು ಕೊಡಪ್ಪಾ, ಇದನ್ನು ಕೊಡಪ್ಪಾ, ಕಾಪಾಡಪ್ಪಾ ಎಂದು ಬೇಡಿಕೊಳ್ಳಲೋ? ನಿಮ್ಮ ದೇವರ ನಂಬಿಕೆಗಳು ಬಹುಮಟ್ಟಿಗೆ ಮಹತ್ವದ ಆಸೆ ಮತ್ತು ಭೀತಿಗಳ ಅಡಿಪಾಯದಲ್ಲಿ ತಾನೆ ಬೆಳೆದಿರುವುದು? ನಿಮ್ಮ ಮನೆಯಲ್ಲಿ ಡಜನ್‌ಗಟ್ಟಲೆ ದೇವರ ಪಟಗಳನ್ನು ತೂಗುಹಾಕಿದ್ದೀರಲ್ಲವೆ, ಅದರಿಂದಲೂ ಜೀವನದ ಬಗೆಗೆ ಭೀತಿ ತೊಲಗಲಿಲ್ಲವೆ? ಹಾಗಾದರೆ ಅವುಗಳನ್ನೆಲ್ಲಾ ಬೀರುವಿನಲ್ಲಿಟ್ಟು ಬೀಗ ಹಾಕಿ ತಾನೆ ಹೋಗಬೇಕಾಗಿರುವುದು? ಭಯ-ಭಕ್ತಿ ಎಂಬ ಒಂದು ಪದವನ್ನು ನೀವು ಕೇಳಿದ್ದೀರಿ. ದೇವರು ಪ್ರೀತಿಯಿಂದ ಕೂಡಿದವನೆಂದರೆ ಅವನೊಂದಿಗೆ ಭಕ್ತಿ ಇದ್ದರೆ ಸಾಲದೆ? ಭಯವೇತಕ್ಕೆ?

ದೇವರ ಬಗೆಗೆ ತಿಳಿಯದವರೇ ಈಗ ಭಕ್ತಿಯನ್ನು ಕುರಿತು ಹೆಚ್ಚೆಚ್ಚು ಮಾತನಾಡುತ್ತಾರೆ. ದೇವರು ಒಂಬತ್ತು ಅವತಾರಗಳನ್ನು ತಾಳಿದನೆಂದು ಹೇಳುತ್ತೇವೆ. ಆದರೆ ನಿಮ್ಮ ಸುತ್ತಲೂ ಗಮನಿಸಿ. ಅಂತಹ ಅವತಾರಗಳಿಂದ ಈ ಲೋಕದಲ್ಲಿ ಏನಾದರೂ ಪ್ರಯೋಜನ, ಬದಲಾವಣೆ ಆಗಿವೆಯೆ? ನಿಮ್ಮ ಜೀವನವನ್ನು ನೀವಾಗಿಯೇ ಬಾಳಲು ಕಲಿತುಕೊಳ್ಳದಿದ್ದರೆ ಹತ್ತನೆಯ ಬಾರಿ ದೇವರು ಅವತರಿಸಿದರೂ ಅರ್ಥವಿಲ್ಲ. ಹತ್ತುಸಾವಿರ ಸಲ ಮಹಾತ್ಮರು ಬಂದರೂ ಉಪಯೋಗವಿಲ್ಲ.

ಪ್ರಪಂಚದಲ್ಲಿ ತಮಗೆ ಅಗತ್ಯವಾಗಿರುವುದನ್ನು ಹುಡುಕಿ ಪಡೆಯಲು ಎರೆಹುಳುವಿನಿಂದ ಮೊದಲ್ಗೊಂಡು ದೊಡ್ಡ ಪ್ರಾಣಿಯಾದ ಆನೆಯವರೆಗೆ ಅವೆಲ್ಲವೂ ತಮ್ಮ ಸಾಮರ್ಥ್ಯವನ್ನೇ ನಂಬಿರುವುದು. ಅವು ಯಾರ ಬಳಿಯೂ ಹೋಗಿ ಸಹಾಯವನ್ನು ಯಾಚಿಸುವುದಿಲ್ಲ. ಇವೆಲ್ಲವುಗಳಿಗಿಂತ ಹೆಚ್ಚು ಬುದ್ಧಿವಂತಿಕೆಯನ್ನು ಪಡೆದಿರುವ ಮನುಷ್ಯನು ಮಾತ್ರ ತನಗೆ ಬೇಕಾಗಿರುವುದನ್ನು ದೇವರಲ್ಲಿ ಬೇಡುತ್ತಾ ಕುಳಿತುಕೊಂಡಿದ್ದಾನೆ.

ದೇವರು ನಿಮಗಿಂತಲೂ ಹೆಚ್ಚು ಶಕ್ತಿಶಾಲಿ, ಅವನಿಲ್ಲದೆ ಒಂದು ಅಣುವೂ ಸಹ ಅಲುಗಾಡುವುದಿಲ್ಲವೆಂದು ಹೇಳುತ್ತೀರಿ. ಆದರೆ ದೇವರನ್ನು ನಂಬಿ ನಿಜವಾಗಿಯೂ ನಿಮ್ಮನ್ನು ಅರ್ಪಿಸಿಕೊಳ್ಳುತ್ತೀರಾ? ದೇವರ ಬುದ್ಧಿವಂತಿಕೆಯ ಬಗೆಗೆ ನಿಮಗೆ ಸಂದೇಹವುಂಟಾಗಿ ದಿನದಿನವೂ ಅವನು ಹೇಗೆ ನಡೆದುಕೊಳ್ಳಬೇಕೆಂದು ಅವನ ಮುಂದೆ ಕುಳಿತು ಕಣ್ಣುಗಳನ್ನು ಮುಚ್ಚಿಕೊಂಡು ನೀವೇ ಅಲ್ಲವೆ ಹೇಳಿಕೊಡುತ್ತಿರುವುದು? ಕಷ್ಟಪಡದೆ ಊಟ ಮಾಡಲು, ಓದದೆ ಪಾಸ್ ಆಗಲು, ನಿಮ್ಮ ತಪ್ಪುಗಳನ್ನು ಗಮನಿಸದೆ ಇರುವುದಕ್ಕಾಗಿ ನೀವು ದೇವರನ್ನು ಬೇಡುತ್ತೀರಿ.

ಬದುಕು ಕೈಕೊಟ್ಟರೆ ಏನು ಮಾಡುವುದೆಂದು, ದೇವರನ್ನು ಒಂದು ಇನ್‌ಶೂರೆನ್ಸ್ ಪಾಲಿಸಿಯಾಗಿ ಇಟ್ಟುಕೊಂಡಿದ್ದೀರಿ. ಅದಕ್ಕಾಗಿ ದೇವಾಲಯಗಳನ್ನು ಪ್ರೀಮಿಯಂನಂತೆ ಕಟ್ಟುತ್ತಿದ್ದೀರಿ. ಇದೆಲ್ಲವನ್ನೂ ತಂದುಕೊಡು, ಇವೆಲ್ಲವುಗಳಿಂದ ಕಾಪಾಡು, ಎಂದು ನಿಮ್ಮ ಸೇವೆಗಾಗಿ ಹಾಗೂ ರಕ್ಷಣೆಗಾಗಿ, ನೀವು ಅವನನ್ನು ಒಬ್ಬ ಯೋಧನನ್ನಾಗಿ ನೇಮಿಸಿಕೊಳ್ಳಲು ನೋಡುತ್ತಿದ್ದೀರಿ. ಜೀವನದ ಬಗೆಗೆ ಭೀತಿ, ದೇವರನ್ನು ಕುರಿತ ನಂಬಿಕೆಗಳು, ಇವುಗಳನ್ನು ಬೆಳೆಸಿಕೊಂಡರೆ ನಿಮ್ಮಲ್ಲಿ ದೈವವೂ ನಿಲ್ಲುವುದಿಲ್ಲ, ಜೀವನವೂ ಚೆನ್ನಾಗುವುದಿಲ್ಲ.

ಜೀವನವನ್ನು ಕುರಿತ ಯಾವುದೇ ಪುಸ್ತಕವಾದರೂ ಅದು ನಿಮಗೆ ಮಾರ್ಗದರ್ಶನವಾಗಬಹುದೇ ವಿನಾ ಜೀವನವನ್ನು ಪೂರ್ತಿಯಾಗಿ ಅದು ಕಲಿಸುವುದಕ್ಕೆ ಸಾಧ್ಯವಿಲ್ಲ. ಸಂಪೂರ್ಣ ಎಚ್ಚರಿಕೆಯಿಂದ ಕೂಡಿದ ಗ್ರಹಿಕೆಯಿಂದ ಮಾತ್ರ ನೀವು ಜೀವನವನ್ನು ನಿಜವಾದ ಅರ್ಥದಲ್ಲಿ ನಡೆಸಲು ಸಾಧ್ಯ.

ದೇವರು ಎಂಬುವನು ನಿಮಗಿಂತಲೂ ಬೃಹತ್ತಾಗಿರಬೇಕೆಂದು ಕಲ್ಪಿಸಿಕೊಂಡ ನೀವು, ನಿಮ್ಮ ದೇವರಿಗೆ ಹದಿನಾರು ಕೈಗಳಿರುವಂತೆ ಸೃಷ್ಟಿ ಮಾಡಿದ್ದೀರಿ. ದೇವರಿಗೆ ನಾಲ್ಕು ಮುಖಗಳು, ಆರು ಮುಖಗಳು ಎಂದುಕೊಂಡಿದ್ದೀರಿ. ನಿಜ ಹೇಳಿ. ನಿಮಗಿರುವುದು ಎಷ್ಟು ಮುಖ? ಮನೆಯಲ್ಲಿ ಒಂದು, ಆಫೀಸಿನಲ್ಲಿ ಒಂದು, ಸ್ನೇಹಿತರ ಬಳಿ ಇನ್ನೊಂದು, ಶತ್ರುಗಳೊಡನೆ ಮತ್ತೊಂದು, ಬೀದಿಯಿಂದ ಬೀದಿಗೆ ಬದಲಾಯಿಸಲು ಎಷ್ಟು ಮುಖಗಳನ್ನು ಹೊತ್ತುಕೊಂಡಿದ್ದೀರಿ? ಷಣ್ಮುಖನಿಗಿಂತಲೂ ನಿಮಗೇ ಹೆಚ್ಚಾಗಿವೆಯಲ್ಲವೆ ಮುಖಗಳು? ಮುಖಗಳನ್ನು ಎಣಿಸಿ ದೇವರನ್ನು ತೀರ್ಮಾನಿಸುವುದು ಎಂದರೆ ನಿಮ್ಮ ರಾಜಕಾರಣಿಗಳ ಎದುರಿನಲ್ಲಿ ಯಾವ ದೇವರೂ ಸ್ಪರ್ಧಿಸಲು ಸಾಧ್ಯವಾಗುವುದಿಲ್ಲ, ಅಲ್ಲವೆ?

ನಮ್ಮ ಹಿಂದಿನವರು ದೇವರುಗಳಿಗೆ ಆಕಾರಗಳನ್ನು ಕೊಟ್ಟಿರುವುದಕ್ಕೆ ಬೇರೆ ಕೆಲವು ಬುದ್ಧಿವಂತಿಕೆಯ ಕಾರಣಗಳೂ ಇವೆ. ಅವುಗಳನ್ನು ತಿಳಿದುಕೊಳ್ಳದೆ, ದೇವರನ್ನು ತಿಳಿದುಕೊಂಡೆವೆಂದು ಭಾವಿಸುವುದು ನಿಮ್ಮ ಅಹಂಕಾರಕ್ಕೆ ಆಹಾರವೊದಗಿಸಿದಂತೆ.

ಈ ದೇವಾಲಯಕ್ಕೆ ಹೋಗು ಹತ್ತು ರೂಪಾಯಿ ಹಾಕು, ಇಪ್ಪತ್ತು ರೂಪಾಯಿ ಹಿಂತಿರುಗಿ ಬರುತ್ತದೆ. ನೂರರಲ್ಲಿ ಹತ್ತು ಭಾಗ ಕೊಡುತ್ತೇನೆಂದು ಆ ದೇವರಲ್ಲಿ ಬೇಡಿಕೋ, ಅಪಾರ ಲಾಭ ನಿನಗೆ ದೊರೆಯುತ್ತದೆ ಎಂದು ಶಿಫಾರಸ್ಸು ಮಾಡುವಂತಹ ದೇವಾಲಯಗಳಿಗೆ ಹೋಗಿ ಗಂಟೆಗಟ್ಟಲೆ ಕ್ಯೂ ನಿಂತು ಬರುತ್ತೀರಿ? ಹಾಗೆಲ್ಲಾ ಬೆಲೆ ಕೊಟ್ಟು ಕೊಂಡುಕೊಳ್ಳುವಂತೆ ದೇವರು ದೊರೆತುಬಿಟ್ಟರೆ ಅದು ದೊಡ್ಡ ಆಪತ್ತು ತಾನೆ? ಶೇಕಡಾ ಇಪ್ಪತ್ತು ಕೊಡಲು ಬೇರೊಬ್ಬನು ಸಿದ್ಧನಾದರೆ ದೇವರು ನಿಮ್ಮನ್ನು ತೊರೆದುಬಿಡುತ್ತಾನೆಯೇ?

ಲಕ್ಷಾಂತರ ದೇವಾಲಯಗಳಿದ್ದರೂ, ದುಃಖದಿಂದ ಕೂಡಿರುವ ಮುಖಗಳನ್ನು, ಎಲ್ಲಾ ಕಡೆಗಳಲ್ಲಿಯೂ ನೋಡುತ್ತೀರಿ, ಏಕೆ? ನಿಜವನ್ನೂ, ಉಪದೇಶವನ್ನೂ ಒಂದಕ್ಕೊಂದು ಸೇರಿಸಿ ಗೊಂದಲ ಮಾಡಿಕೊಳ್ಳುವುದರಿಂದ ಬಂದಿರುವ ಸಮಸ್ಯೆಯಿದು. ಭಯ ಮತ್ತು ದೇವರ ಬಗೆಗೆ ನಂಬಿಕೆ – ಎರಡನ್ನೂ ಗೊಂದಲ ಪಡಿಸಿಕೊಂಡರೆ ಯಾವುದೂ ಪ್ರಯೋಜನವಾಗುವುದಿಲ್ಲ. ಇದಕ್ಕೆ ಭಕ್ತಿ ಎಂದು ಹೆಸರಿಟ್ಟು ಮೋಸಹೋಗಬೇಡಿ. ದೇವರು ಇದ್ದಾನೆಂದು ಯಾರೋ ಹೇಳಿದುದಕ್ಕಾಗಿ ನಂಬುವುದೋ, ದೇವರಿಲ್ಲ ಎಂದು ಬೇರೊಬ್ಬರು ಹೇಳಿದುದನ್ನು ತಳ್ಳಿಹಾಕುವುದೋ, ಮಾಡಿದರೆ ಅದು ಹೇಗೆ ಬುದ್ಧಿವಂತಿಕೆಯಾಗುತ್ತದೆ?

ರಾಮನಿದ್ದನೆ, ಕೃಷ್ಣನು ಇದ್ದನೆ, ಜೀಸಸ್ ಇದ್ದನೆ, ನಬಿಗಳು ಬಂದರೆ, ಎಂಬುದು ಸಮಸ್ಯೆಯೆ? ನಿಮ್ಮ ಅನುಭವ ಏನು? ಹುಲ್ಲಿನಲ್ಲಿ, ಹೂವಿನಲ್ಲಿ, ಕ್ರಿಮಿಯಲ್ಲಿ, ಕೀಟದಲ್ಲಿ ಯಾವಾಗಲಾದರೂ ದೇವರನ್ನು ನೀವು ಕಂಡಿದ್ದೀರಾ? ದೇವರನ್ನು ನಂಬುವುದು ನಂಬದಿರುವುದು, ದೇವರ ಸಮಸ್ಯೆಯಲ್ಲ. ಅದು ವಾಸ್ತವಾಗಿ ನಿಮ್ಮ ಸಮಸ್ಯೆ.

ಸಂದೇಹವಿರುವ ಮನಸ್ಸಿನಲ್ಲಿ ಭಕ್ತಿಯಿರುವುದಿಲ್ಲ. ದೇವರ ಮುಂದೆ ನೈವೇದ್ಯ ಮುಂತಾದವು ನಡೆಯುತ್ತವೆ. ಭಕ್ತಿ ಎಂಬುದು ನಿಮ್ಮ ಗುರುತುಗಳನ್ನು ಅಳಿಸಿಹಾಕಿ ಯಾವುದರ ಮೇಲೆ ಭಕ್ತಿಯನ್ನಿರಿಸಿಕೊಂಡಿದ್ದೀರೋ ಅದರೊಂದಿಗೆ ಕರಗಿಹೋಗುವುದು.

ನಿಮ್ಮ ತಪ್ಪುಗಳಿಗಾಗಿ ಪ್ರಾಯಶ್ಚಿತ್ತವನ್ನು ಹೊರಲು ನಿಮ್ಮ ಜೊತೆಯಲ್ಲಿರುವವರು ಸಿದ್ಧವಾಗಿಲ್ಲದ ಸಮಯದಲ್ಲಿ, ದೈವಿಕ ಕ್ರಿಯೆ ಎಂದು, ಅವುಗಳನ್ನು ಹೊರಲು ಅನುಕೂಲವಾಗುವಂತಹ ತೋಳುಗಳಂತೆ, ದೇವರನ್ನು ಇರಿಸಿಕೊಂಡಿದ್ದೀರಿ. ಇದರ ಹೆಸರು ಭಕ್ತಿ ಅಲ್ಲ, ಮೋಸಗಾರಿಕೆ. ಏತಕ್ಕಾಗಿ ಪ್ರಾರ್ಥನೆ ಮಾಡಿದಿರಿ? ದೇವರನ್ನು ತಿಳಿದುಕೊಳ್ಳುವ ಸಲುವಾಗಿಯೆ? ನಿಮ್ಮ ಉದ್ದೇಶ ಅದಲ್ಲ. ನಿಮ್ಮ ಕೋರಿಕೆಗಳನ್ನು ನೆರವೇರಿಸುವ ಮೂರ್ಖ ಯಂತ್ರವನ್ನಾಗಿ ದೇವರನ್ನು ನೆನೆಯುತ್ತಿದ್ದೀರಿ.

ಪ್ರಾರ್ಥನೆಯೆಂಬುದು ಕೇವಲ ಒಂದು ಅನುಷ್ಠಾನವಾಗಿ ನಿಲ್ಲದೆ ಒಂದು ರೀತಿಯಲ್ಲಿ ಅನಿಸಿಕೆಯಾಗಬೇಕು. ದೇವಾಲಯದ ಸೇವಕನಂತೆ ನಡೆದುಕೊಳ್ಳಬೇಡಿ. ನಿಮ್ಮ ಕೈಕೆಳಗೆ ಕೆಲಸ ಮಾಡುವವರು, ನಿಮ್ಮೊಂದಿಗೆ ದೇವರಂತೆ ನಡೆದುಕೊಳ್ಳಬೇಕೆಂದು ನಿಮ್ಮ ಧೋರಣೆ. ಪ್ರಾರ್ಥನೆಯ ಅರ್ಥ ಇದೇ ಏನು?

ಜೀವನವು ಬೇರೆ ಲಯದಲ್ಲಿ ಮುಂದುವರಿಯುತ್ತಾ ಹೋಗುತ್ತದೆ. ಶಾಂತಚಿತ್ತದಿಂದ ಗಮನವಿರಿಸಿ ನೋಡಿದರೆ ಸಾಕು. ನಿಮ್ಮ ಕೋರಿಕೆಗಳೆಲ್ಲವೂ ಎಲ್ಲಿದೆ ಎಂಬುದು ಕಂಡುಬರುತ್ತದೆ. ದೇವರೊಂದಿಗೆ ನೀವು ಜೋರುಜೋರಾಗಿ ಮಾತನಾಡುವುದರಿಂದ ಯಾವುದನ್ನೂ ಗಮನಕ್ಕೆ ತಂದುಕೊಳ್ಳಲಾಗುವುದಿಲ್ಲ. ಗಮನಿಸುವುದನ್ನು ಬಿಟ್ಟು ಪ್ರಾರ್ಥನೆಗಳ ಮೂಲಕ ದೇವರನ್ನು ಕರೆದರೆ ಆ ದೇವರು ನಿಮಗಾಗಿ ತನ್ನ ಕಿರುಬೆರಳನ್ನೂ ಸಹ ಕದಲಿಸುವುದಿಲ್ಲ.

ಇದನ್ನು ಅರ್ಥ ಮಾಡಿಕೊಳ್ಳದೆ ನೀವು, ಇದು ಶಾಪ, ಇದು ವರ ಎನ್ನುತ್ತಾ ಮಾತನಾಡಿಕೊಳ್ಳುತ್ತೀರಿ. ನಿಮ್ಮ ಜೀವನಕ್ಕೆ, ದೇವರ ಮೊರೆ, ಹೋಗದೆ ನೀವಾಗಿ ಜೀವಿಸಲು ಕಲಿತುಕೊಂಡಿಡರೆ ನಿಮ್ಮ ಜೀವನ ಉತ್ತಮವಾಗುತ್ತದೆ.
ನಿಮಗೆ ಅಗತ್ಯವಿರುವ ಆಹಾರ ದೊರೆಯಿತು. ಕೋರಿಕೆಯಂತೆ ಜೀವನಸಂಗಾತಿ, ಮಕ್ಕಳು, ಅನುಕೂಲಗಳು ಎಲ್ಲವೂ ದೊರೆತದ್ದಾಯಿತು. ಹೀಗಿದ್ದರೂ ಇನ್ನೂ ಯಾವುದಕ್ಕೋ ಮನಸ್ಸು ಆಸೆಪಡುತ್ತಿದೆ. ಈ ಹುಟ್ಟಿನ ಬೇರು ಏನೆಂದು ತಿಳಿದುಕೊಳ್ಳುವ ಹಂಬಲ, ಆಗ ತಲೆಯೆತ್ತಿ ನಿಂತಿದೆ ಎಂದು ಅರ್ಥ. ಅದೇ ನಿಜವಾದ ಆಧ್ಯಾತ್ಮಿಕತೆ.

ಸದ್ಗುರುಗಳು ಯೋಗಿ, ದಾರ್ಶನಿಕ ಹಾಗೂ ಆಧ್ಯಾತ್ಮಿಕ ನಾಯಕ. isha.sadhguru.org/in/kn
ಸದ್ಗುರುಗಳ ಇತರ ಪುಸ್ತಕ/ವಿವರಗಳಿಗೆ ಸಂಪರ್ಕಿಸಿ – kannadapublications@ishafoundation.org

Exit mobile version