ಸದ್ಗುರು ಜಗ್ಗಿ ವಾಸುದೇವ್, ಈಶ ಫೌಂಡೇಶನ್
(Sadguru Jaggi Vasudev, Isha Foundation)
ಕಳೆದ ಒಂದೂವರೆ ವರ್ಷಗಳಿಂದ ಜಗತ್ತಿನ ಎಲ್ಲಾ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (Artificial Intelligence) ಕಾನ್ಫರೆನ್ಸ್‌ಗಳಿಗೆ ನನ್ನನ್ನು ಆಹ್ವಾನಿಸುತ್ತಿದ್ದಾರೆ. ನನಗೆ ಆಶ್ಚರ್ಯ, ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಬಗ್ಗೆ ಮಾತನಾಡುವುದಕ್ಕೆ ನನ್ನನ್ನು ಏಕೆ ಕರೆಯುತ್ತಿದ್ದಾರೆ ಎಂದು. ಏಕೆಂದರೆ ನಾನು ಅದರಲ್ಲಿ ಪರಿಣಿತ ಅಲ್ಲ. ನಾನು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಕೂಡ ಅಲ್ಲ (Sadguru Column).
ಒಮ್ಮೆ ಸೇಂಟ್ ಪೀಟರ್ಸ್‌ಬರ್ಗ್‌ನ ಕಾನ್ಫರೆನ್ಸಿನಲ್ಲಿ, ‘ಆರ್ಟಿಫಿಶಿಯಲ್ ಇಂಟೆಲಿಜೆನ್ಸ್‌ನ ಎಲ್ಲಾ ಕಾನ್ಫರೆನ್ಸ್‌ಗಳಿಗೆ ನನ್ನನ್ನು ಏಕೆ ಕರೆಯುತ್ತಿದ್ದೀರಿ, ನಾನು ಸಹಜ ಬುದ್ಧಿಮತ್ತೆ, ಕೃತಕ ಬುದ್ಧಿಮತ್ತೆ ಅಲ್ಲ’ ಎಂದು ಕೇಳಿದೆ. ಅದಕ್ಕವರು, “ಸಮಸ್ಯೆ ಏನಂದರೆ, ನಾವೆಲ್ಲ ಕೆಲಸ ಕಳೆದುಕೊಳ್ಳುವ ಪರಿಸ್ಥಿತಿ ಬಂದಿದೆ. ಇನ್ನು ಹತ್ತು ವರ್ಷ ಕಳೆದ ಮೇಲೆ ನಾವೇನು ಮಾಡಬೇಕು” ಎಂದರು. ಅವರೆಲ್ಲ ದೊಡ್ಡ ಯೂನಿವರ್ಸಿಟಿಗಳಲ್ಲಿ ಪ್ರೊಫೆಸರ್‌ಗಳು – ಎಮ್.ಐ.ಟಿ, ಹಾರ್ವರ್ಡ್‍ನಂತಹ ಜಾಗಗಳಲ್ಲಿದ್ದವರು ಅವರಿಗೆ ಈ ಪ್ರಶ್ನೆ ಉದ್ಭವಿಸಿದೆ, ಏಕೆಂದರೆ ನಮಗೆ ಗೊತ್ತಿದ್ದ ಎಲ್ಲವೂ, ನಮ್ಮ ಸೀಮಿತದಲ್ಲಿದ್ದೆಲ್ಲವೂ ದಿಢೀರನೇ ಈಗ ಆ ಯಂತ್ರದಲ್ಲಿರುತ್ತದೆ.
ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಎಂದರೇನು ಎಂದು ಅರ್ಥ ಮಾಡಿಕೊಳ್ಳಿ – ಮಾಹಿತಿಗಳನ್ನು ಶೇಖರಿಸಿ, ಅದನ್ನು ವಿಶ್ಲೇಷಿಸಿ, ಅಗತ್ಯ ಬಿದ್ದಾಗ ನಿಮಗೆ ಬೇಕಾದ ಹಾಗೆ ಬಳಸುವುದು- ಇವು ಇನ್ನು ಮುಂದೆ ಮಾನವ ಸಾಮರ್ಥ್ಯಗಳಲ್ಲಿ ಅಮೂಲ್ಯವಾಗಿ ಉಳಿಯುವುದಿಲ್ಲ. ಏಕೆಂದರೆ ಒಂದು ಸರಳ ಯಂತ್ರ ಅದನ್ನು ಮನುಷ್ಯರಿಗಿಂತ ಉತ್ತಮವಾಗಿ ಮಾಡುತ್ತದೆ. ಈಗಾಗಲೇ ಗೂಗಲ್ ಲೇಡಿ ನಿಮಗಿಂತ ಬುದ್ಧಿವಂತಳಾಗಿ ಕಾಣುತ್ತಿದ್ದಾಳೆ.
ಅವಳು ‘ನನಗಿಂತ ಬುದ್ಧಿವಂತೆ’ ಎಂದರೆ ನನಗೇನೂ ಪರವಾಗಿಲ್ಲ, ಏಕೆಂದರೆ ನಾನೇನು ಶಿಕ್ಷಿತ ಅಲ್ಲ. ಆದರೆ ನೀವು? ಬುದ್ಧಿವಂತರು. ನಮ್ಮೆಲ್ಲರಿಗಿಂತ ಬುದ್ಧಿವಂತೆ ಅಲ್ಲವಾ ಅವಳು? ಏನಾದರೂ ಕೇಳಿ, ಕಣ್ಮುಚ್ಚಿಬಿಡುವುದರಲ್ಲಿ ಹೇಳುತ್ತಾಳೆ.
ಇದು ಯಾವ ದಿಕ್ಕಿನಲ್ಲಿ ಹೋಗುತ್ತಿದೆ ಎಂದರೆ, ಬೌದ್ಧಿಕವಾಗಿ ನೀವು ಮಾಡುತ್ತಿರುವ ಎಲ್ಲವೂ ಮೂರ್ಖವಾಗಿ, ಅರ್ಥಹೀನವಾಗಿ ಕಾಣುತ್ತಿದೆ.
ಇದು ಆಗಿದ್ದು ನಾನು ಹದಿಮೂರು ವರ್ಷದವನಾಗಿದ್ದಾಗ ಎನ್ನಿಸುತ್ತದೆ. ಮೊದಲ ಬಾರಿಗೆ ನಾನು ಕ್ಯಾಲ್ಕು ಲೇಟರನ್ನು ನೋಡಿದೆ. ಪ್ಯಾನಸಾನಿಕ್ ಕ್ಯಾಲ್ಕುಲೇಟರ್. ಆ ಕಾಲದಲ್ಲಿ ಅದಕ್ಕೆ 100-110 ರೂಪಾಯಿ. ತುಂಬಾ ದುಬಾರಿ. ಇವತ್ತು ಅದಕ್ಕಿಂತ ಜಾಸ್ತಿ ಬೆಲೆಯ ಕಾಫಿ ಕುಡಿಯುತ್ತೀರಿ! 110 ರೂಪಾಯಿ ಪ್ಯಾನಸಾನಿಕ್‍ಗೆ, ಸೋನಿಗೆ 125. ಹಾಗಾಗಿ ಕಡಿಮೆ ಬೆಲೆಯ ಪ್ಯಾನಸಾನಿಕ್ ತೆಗೆದುಕೊಳ್ಳುತ್ತಿದ್ದೆವು. ಆದರೆ ನಾನು ತೆಗೆದುಕೊಂಡಿರಲಿಲ್ಲ. ಯಾರೋ ತಂದು ತೋರಿಸಿದ್ದರು. ಟುಕ್ ಟುಕ್ ಟುಕ್ ಉತ್ತರ ಬಂದಿತ್ತು. ಅದನ್ನು ಮೊದಲು ನೋಡಿದಾಗ, ಗಣಿತದ ತರಗತಿಯಲ್ಲಿ ಯಾಕೆ ಸಮಯ ವ್ಯರ್ಥ ಮಾಡುತ್ತಿದ್ದೇನೆ ಎನ್ನಿಸಿತ್ತು. ಈ 100 ರೂ ವಸ್ತು ಎಲ್ಲವನ್ನು ಉತ್ತರಿಸುವುದಾದರೆ, ನಮಗೆ ಹತ್ತು ವರ್ಷಗಳ ಹಿಂಸೆ ಏಕೆ? ಈ ಸಂಖ್ಯಾಶಾಸ್ತ್ರ, ಗಣಿತ ಇವೆಲ್ಲ ಏಕೆ? ಅದು ಸೈನ್ ತೀಟಾ, ಕಾಸ್ ತೀಟಾ ಎಲ್ಲವನ್ನೂ ಮಾಡುತ್ತದೆ. ಆಗಲೇ ಅನಿಸಿತ್ತು, ಹೀಗೆ ಎಲ್ಲವನ್ನೂ ಮಾಡುವ ದೊಡ್ಡ ಯಂತ್ರ ಬರಬೇಕು. ಆಗ ನಾನು ಶಾಲೆಗೆ ಹೋಗುವುದು ಬೇಕಾಗುವುದಿಲ್ಲ ಅಂತ. ಕೊನೆಗೂ ನನ್ನ ಕನಸು ನನಸಾಗುತ್ತಿದೆ.
ಮುಂದಿನ ಹತ್ತು ಹದಿನೈದು ವರ್ಷಗಳಲ್ಲಿ ಇವತ್ತಿರುವ ಶಿಕ್ಷಣ, ವೃತ್ತಿಗಳು ಅರ್ಥಹೀನವಾಗುತ್ತವೆ. ಏಕೆಂದರೆ, ಈಗ ಈ ಯಂತ್ರಗಳನ್ನು ನಿರ್ಮಿಸುತ್ತಿದ್ದಾರೆ, ಕಲಿಕೆಗೆ ಹಲವಾರು ವರ್ಷಗಳ ಸಮಯ ವ್ಯಯಿಸುವುದು ಅರ್ಥಹೀನವಾಗುತ್ತದೆ. ಒಬ್ಬ ಗ್ರಾಹಕ ಬಂದು ತನಗೆ ಯಾವ ರೀತಿ ಮನೆ ಬೇಕು, ತನ್ನ ಅಭಿರುಚಿ ಏನು, ಸಂಸ್ಕೃತಿ ಏನು, ತನಗೇನಿಷ್ಟ, ಅದು ಹೇಗಿರಬೇಕು, ತನ್ನ ಬಂಡವಾಳ ಎಷ್ಟು ಎಂದು ಹೇಳಿದರೆ, ಆ ಯಂತ್ರ ಒಂದು ಇಡೀ ಮನೆಯ ವಿನ್ಯಾಸ ಮಾಡಿ, ಹತ್ತು ಭಿನ್ನ ಆಯ್ಕೆಗಳನ್ನ ಕೊಡುತ್ತದೆ – ಪೇಂಟಿಂಗ್, ಗೋಡೆಯ ಅಲಂಕಾರ, ಪೀಠೋಪಕರಣ ಎಲ್ಲವನ್ನೂ ಕೂಡ. ಈಗ ಹೇಳುತ್ತಿದ್ದಾರೆ, ಇನ್ನು 5-7 ವರ್ಷಗಳಲ್ಲಿ ಅದು ಮನೆಯ ವಿನ್ಯಾಸ ಮಾಡಿ, ಕಟ್ಟುತ್ತದೆ ಕೂಡ ಎಂದು. ಮನೆಗಳ ವಿನ್ಯಾಸ ಮಾಡುವವರ ಬಗ್ಗೆ ಯೋಚಿಸಿ!
ನೀವು ಸಾಕಷ್ಟು ಜನರು ಕೆಲಸ ಕಳೆದುಕೊಳ್ಳುತ್ತೀರಿ – ಯಂತ್ರಕ್ಕೆ ಮಾಡಲಾಗದೆ ಇರುವುದನ್ನು ನೀವು ಮಾಡದಿದ್ದರೆ! ನೀವೆಲ್ಲ ಇದಕ್ಕೆ ಸಿದ್ಧರಿರಬೇಕು. ನಿಮ್ಮ ಬುದ್ಧಿಗೆ ಮೀರಿದ್ದನ್ನು ಏನಾದರೂ ಮಾಡಲು ಸಾಧ್ಯವಾಗಬೇಕು. ಮನುಷ್ಯರ ಪ್ರಜ್ಞಾಶಕ್ತಿಗೆ ಹಲವು ಪದರಗಳಿವೆ. ಬುದ್ಧಿ ತುಂಬಾ ಸಣ್ಣ ಭಾಗ ಅಷ್ಟೇ. ಈಗಿನ ಶಿಕ್ಷಣ ವ್ಯವಸ್ಥೆ ಸಂಪೂರ್ಣವಾಗಿ ಮೀಸಲಾಗಿರುವುದು ಮನುಷ್ಯರ ಬೌದ್ಧಿಕ ಬೆಳವಣಿಗೆಗೆ ಮಾತ್ರ. ಹಾಗೆ ಬದುಕುವುದು ಶ್ರೇಷ್ಠ ಎಂದುಕೊಂಡಿದ್ದೀವಿ. ಆದರೆ ಅದು ಹಾಗಲ್ಲ.
ಆದರೆ ಯೋಗದಲ್ಲಿ ಮನುಷ್ಯರ ಪ್ರಜ್ಞಾಶಕ್ತಿಯನ್ನು ಹದಿನಾರು ಭಾಗಗಳಾಗಿ ನೋಡುತ್ತೇವೆ. ನೀವು ಪ್ರಜ್ಞಾಶಕ್ತಿಯ ಇತರ ಆಯಾಮಗಳನ್ನು ಪರಿಶೋಧಿಸಿದರೆ, ಆಗ ಮಾತ್ರ ಪ್ರಸ್ತುತರಾಗುತ್ತೀರಿ. ಬೌದ್ಧಿಕತೆ ಎಂದರೆ ನಿಮ್ಮ ಬುದ್ಧಿಯು ಶೇಖರಿಸಿದ ಮಾಹಿತಿ ಇಲ್ಲದೆ ಕೆಲಸ ಮಾಡಲಾಗುವುದಿಲ್ಲ. ಮಾಹಿತಿಗಳ ಶೇಖರಣೆ, ವಿಶ್ಲೇಷಣೆ ಮತ್ತು ವಿಶ್ಲೇಷಣೆಯ ಕಾರ್ಯರೂಪಕ್ಕೆ ತರುವುದನ್ನು ನಿಮಗಿಂತ ಚೆನ್ನಾಗಿ ಯಂತ್ರ ಮಾಡುತ್ತದೆ. ಮನುಷ್ಯರು ಯಾವಾಗಲೂ ತಪ್ಪು ಮಾಡಬಹುದು, ಮಾಹಿತಿಯನ್ನು ತಪ್ಪಾಗಿಸಬಹುದು. ಆದರೆ ಯಂತ್ರ ತುಂಬಾ ನಿಖರ. ಆರಾಮವಾಗಿ ಮಾಡುತ್ತದೆ. ಹಾಗಾಗಿ ಬೌದ್ಧಿಕವಾಗಿ ನೀವು ಮಾಡಬಹುದಾದ ಎಲ್ಲವೂ ಮುಂದಿನ ಹತ್ತು ಹದಿನೈದು ವರ್ಷಗಳಲ್ಲಿ ಅರ್ಥಹೀನವಾಗುತ್ತವೆ. ಬುದ್ಧಿಯನ್ನು ಮೀರಿದ್ದನ್ನೇನಾದರೂ ನೀವು ಹೊಂದಬೇಕು.
ಬುದ್ಧಿಯನ್ನು ಮೀರಿದ್ದು ಎಂದಾಗ ಅದನ್ನು ಅನೇಕ ರೀತಿಯಲ್ಲಿ ನೋಡಬಹುದು. ಒಂದು ಸರಳವಾದ ಉದಾಹರಣೆ ತೆಗೆದುಕೊಳ್ಳಿ. ನೀವು ತಿನ್ನುವ ಆಹಾರ ಮೂರು ನಾಲ್ಕು ಗಂಟೆಯೊಳಗೆ ಒಂದು ಮನುಷ್ಯನಾಗತ್ತೆ ಅಲ್ವಾ? ಎಂದರೆ ನೀವು ಆಹಾರದಿಂದ ಅಷ್ಟು ಸಂಕೀರ್ಣ ಯಂತ್ರವನ್ನು ತಯಾರಿಸುತ್ತಿದ್ದೀರ. ಅದೊಂದು ರೀತಿಯ ಥ್ರೀಡಿ ಪ್ರಿಂಟರ್. ನೀವು ಮ್ಯಾಗಿ ಹಾಕಿದ್ರೂ, ಚಪಾತಿ ಹಾಕಿದ್ರೂ ಅದೊಂದು ಮನುಷ್ಯ ಆಗುತ್ತೆ. ಇದು ಭೂಮಿಯ ಮೇಲಿರುವ ಅತ್ಯಂತ ಸಂಕೀರ್ಣ ಯಂತ್ರ. ಇದನ್ನು ನೀವು ತಿನ್ನುವ ಆಹಾರದಿಂದ ನಿರ್ಮಿಸಿರುವುದು. ನೀವು ತಿನ್ನುವ ಆಹಾರ ನಿಮ್ಮ ಕಾಲಕೆಳಗಿರುವ ಮಣ್ಣು. ಅದು ಮೈದಳೆದಿದೆ. ಆ ಪ್ರಜ್ಞಾಶಕ್ತಿ ನಿಮ್ಮೊಳಗೆ ಇದೆಯೇ? ಇಲ್ಲವೇ? ನೀವು ಪ್ರಜ್ಞಾಶಕ್ತಿಯ ಈ ಆಯಾಮಕ್ಕೆ ಪ್ರಜ್ಞಾಪೂರ್ವಕ ಸಂಪರ್ಕ ಸಾಧಿಸಿದರೆ ಚಮತ್ಕಾರಿಕ ಎನ್ನುವ ಹಾಗೆ ಜೀವಿಸುತ್ತೀರಿ. ಆಗ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ನಿಮ್ಮನ್ನು ತೊಂದರೆ ಮಾಡುವುದಿಲ್ಲ. ತುಂಬಾ ಸಂತೋಷವಾಗಿರುತ್ತೀರಿ. ಏಕೆಂದರೆ, ಕ್ಷುಲ್ಲಕ ಕೆಲಸವನ್ನೆಲ್ಲ ಯಂತ್ರ ಮಾಡುತ್ತಿದ್ದರೆ – ಎಂಥಾ ಅದ್ಭುತ ಪ್ರಪಂಚ ಇದಾಗುತ್ತದೆ! ನಾನದನ್ನು ಎದುರು ನೋಡುತ್ತಿದ್ದೇನೆ.
ಸದ್ಗುರುಗಳು ಯೋಗಿ, ದಾರ್ಶನಿಕ ಹಾಗೂ ಆಧ್ಯಾತ್ಮಿಕ ನಾಯಕ. isha.sadhguru.org/in/kn
ಸದ್ಗುರುಗಳ ಇತರ ಪುಸ್ತಕ/ವಿವರಗಳಿಗೆ ಸಂಪರ್ಕಿಸಿ – kannadapublications@ishafoundation.org
ಈ ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಮೆಂಟ್ ಮೂಲಕ ತಿಳಿಸಿ