Site icon Vistara News

Abdul Razzaq: ಐಶ್ವರ್ಯಾ ರೈ ಬಗ್ಗೆ ಪಾಕ್‌ ಮಾಜಿ ಕ್ರಿಕೆಟಿಗ ಹೇಳಿಕೆ; ಬೆಂಡೆತ್ತಿದ ಬಳಿಕ ಕ್ಷಮೆಯಾಚನೆ

abdul razzaq and aishwarya rai

Abdul Razzaq apologises for his disrespectful comments on Aishwarya Rai Bachchan

ಇಸ್ಲಾಮಾಬಾದ್:‌ ಬಾಲಿವುಡ್‌ ನಟಿ ಐಶ್ವರ್ಯಾ ರೈ ಬಚ್ಚನ್‌ (Aishwarya Rai) ಅವರ ಕುರಿತು ಕೀಳುಮಟ್ಟದ ಹೇಳಿಕೆ ನೀಡುವ ಮೂಲಕ ವಿವಾದಕ್ಕೆ ಗುರಿಯಾಗಿದ್ದ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಅಬ್ದುಲ್‌ ರಜಾಕ್‌ (Abdul Razzaq) ಈಗ ಕ್ಷಮೆಯಾಚಿಸಿದ್ದಾರೆ. ಪಾಕಿಸ್ತಾನ ಕ್ರಿಕೆಟ್‌ ಮಂಡಳಿಯನ್ನು ಟೀಕಿಸುವ ಭರದಲ್ಲಿ ಅನಗತ್ಯವಾಗಿ ಐಶ್ವರ್ಯ ರೈ ಅವರ ಹೆಸರು ಪ್ರಸ್ತಾಪ ಮಾಡಿದ ಅಬ್ದುಲ್‌ ರಜಾಕ್‌ ವಿರುದ್ಧ ವ್ಯಾಪಕವಾಗಿ ಟೀಕೆಗಳು ವ್ಯಕ್ತವಾಗಿದ್ದವು. ಇದರ ಬೆನ್ನಲ್ಲೇ, ವಿಡಿಯೊ ಪೋಸ್ಟ್‌ ಮಾಡಿರುವ ಅವರು ಕ್ಷಮೆಯಾಚಿಸಿದ್ದಾರೆ.

“ನಾನು ಅಬ್ದುಲ್‌ ರಜಾಕ್.‌ ಸುದ್ದಿಗೋಷ್ಠಿ ವೇಳೆ ಪಾಕಿಸ್ತಾನ ಕ್ರಿಕೆಟ್‌ ತರಬೇತಿ ಹಾಗೂ ಉದ್ದೇಶದ ಕುರಿತು ಮಾತನಾಡುತ್ತಿದ್ದೆ. ಆಗ ನಾನು ಬಾಯಿತಪ್ಪಿನಿಂದಾಗಿ ಐಶ್ವರ್ಯಾ ರೈ ಅವರ ಹೆಸರು ಪ್ರಸ್ತಾಪಿಸಿದೆ. ನಾನು ವೈಯಕ್ತಿಕವಾಗಿ ಅವರ ಕ್ಷಮೆ ಕೇಳುತ್ತೇನೆ. ನಾನು ಯಾರ ಭಾವನೆಗಳಿಗೂ ಧಕ್ಕೆ ತರುವ, ನೋವುಂಟು ಮಾಡುವ ಉದ್ದೇಶ ಹೊಂದಿಲ್ಲ. ನಾನು ಬೇರೆ ಉದಾಹರಣೆ ಕೊಡಬೇಕಿತ್ತು. ಆದರೆ, ಅಚಾತುರ್ಯದಿಂದ ನಟಿಯ ಹೆಸರು ಪ್ರಸ್ತಾಪವಾಯಿತು” ಎಂದು 27 ಸೆಕೆಂಡ್‌ಗಳ ವಿಡಿಯೊವನ್ನು ಅಬ್ದುಲ್‌ ರಜಾಕ್‌ ಪೋಸ್ಟ್‌ ಮಾಡಿದ್ದಾರೆ.

ಅಬ್ದುಲ್‌ ರಜಾಕ್‌ ಹೇಳಿದ್ದೇನು?

ಪಿಸಿಬಿಯ ಆಡಳಿತ ಮಂಡಳಿಯನ್ನು ಟೀಕಿಸುವಾಗ, ಅಬ್ದುಲ್ ಐಶ್ವರ್ಯಾ ರೈ ಅವರನ್ನು ಉದಾಹರಣೆಯಾಗಿ ಬಳಸಿದ್ದರು. ನಾನು ಐಶ್ವರ್ಯಾ ರೈಯನ್ನು ಮದುವೆಯಾಗುವುದರಿಂದ ಉತ್ತಮ ನಡತೆ ಮತ್ತು ಸದ್ಗುಣಶೀಲ ಮಕ್ಕಳು ಹುಟ್ಟುತ್ತವೆ ಎಂಬ ನಿರೀಕ್ಷೆ ಸುಳ್ಳು ಎಂಬ ಅಧಿಕಪ್ರಸಂಗದ ಮಾತನ್ನು ಹೇಳಿದ್ದರು. ಪಾಕಿಸ್ತಾನ ಕ್ರಿಕೆಟ್​ ಮಂಡಳಿಯೂ ಇದೇ ರೀತಿ ಒಳ್ಳೆಯ ಮಕ್ಕಳನ್ನು ಹುಟ್ಟಿಸುವ ಹುಸಿ ನಿರೀಕ್ಷೆಯಲ್ಲಿದೆ. ಆದರೆ ಅದು ಸಾಧ್ಯವಾಗುತ್ತಿಲ್ಲ ಎಂದು ರಜಾಕ್​ ಕಾಮೆಂಟ್ ಮಾಡಿದ್ದರು.

ಇದನ್ನೂ ಓದಿ: ನಾನು ಐಶ್ವರ್ಯಾ ರೈಯನ್ನು ಮದುವೆಯಾಗಿದ್ದರೆ… ಕಿಡಿ ಹಚ್ಚಿದ ಪಾಕ್​ ಮಾಜಿ ಕ್ರಿಕೆಟರ್​ ರಜಾಕ್​ ಹೇಳಿಕೆ

ಐಶ್ವರ್ಯಾ ರೈ ಅವರ ಕುರಿತು ಅಬ್ದುಲ್‌ ರಜಾಕ್‌ ಹೇಳಿಕೆ ನೀಡುತ್ತಲೇ ಭಾರತೀಯರಿಂದ ಭಾರಿ ವಿರೋಧ ವ್ಯಕ್ತವಾಗಿತ್ತು. ನಟಿಯ ಅಭಿಮಾನಿಗಳಂತೂ ಅಬ್ದುಲ್‌ ರಜಾಕ್‌ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು. ಪಾಕಿಸ್ತಾನದ ಮಾಜಿ ಕ್ರಿಕೆಟಿಗರು ಕೂಡ ಅಬ್ದುಲ್‌ ರಜಾಕ್‌ ಹೇಳಿಕೆಯನ್ನು ಟೀಕಿಸಿದ್ದರು. ಇದರ ಬೆನ್ನಲ್ಲೇ ಅಬ್ದುಲ್‌ ರಜಾಕ್‌ ಕ್ಷಮೆಯಾಚಿಸುವ ಮೂಲಕ ವಿವಾದಕ್ಕೆ ತೆರೆ ಎಳೆದಿದ್ದಾರೆ. ಆದಾಗ್ಯೂ, ಪಾಕ್‌ ಮಾಜಿ ಕ್ರಿಕೆಟಿಗನ ಹೇಳಿಕೆ ಕುರಿತು ಐಶ್ವರ್ಯಾ ರೈ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಎಕ್ಸ್‌ ಸಾಮಾಜಿಕ ಜಾಲತಾಣದ ಬಳಕೆದಾರರೊಬ್ಬರು “ಪ್ರತಿದಿನ ಅಬ್ದುಲ್ ರಜಾಕ್ ಅವರ ಹೊಸ ಕಳಪೆ ಹೇಳಿಕೆ” ಎಂದು ಬರೆದರೆ, ಇನ್ನೊಬ್ಬ ಬಳಕೆದಾರರು “ಅಬ್ದುಲ್ ರಜಾಕ್ ನೀಡಿದ ನಾಚಿಕೆಗೇಡಿನ ಉದಾಹರಣೆ” ಎಂದು ಬರೆದಿದ್ದಾರೆ. “ಐಶ್ವರ್ಯಾ ರೈ ಬಚ್ಚನ್ ಮತ್ತು ಶಾಹಿದ್ ಅಫ್ರಿದಿ ಬಗ್ಗೆ ಪಾಕಿಸ್ತಾನದ ದಂತಕಥೆ ಕ್ರಿಕೆಟಿಗ ಅಬ್ದುಲ್ ರಜಾಕ್ ನೀಡಿರುವುದು ಥರ್ಡ್ ಕ್ಲಾಸ್ ಹೇಳಿಕೆಯಾಗಿದೆ. ಹೇಳಿಕೆ ನೀಡುವುದಲ್ಲದೆ ನಾಚಿಕೆಯಿಲ್ಲದೆ ನಗುತ್ತಿದ್ದಾರೆ. ಇದು ಪಾಕಿಸ್ತಾನದ ಜನರ ದುಷ್ಟ ಮನಸ್ಥಿತಿಯನ್ನು ತೋರಿಸುತ್ತದೆ ಎಂದು ನೆಟ್ಟಿಗರೊಬ್ಬರು ಕಾಮೆಂಟ್​ ಮಾಡಿದ್ದಾರೆ. ಪಾಕಿಸ್ತಾನ ಮಹಿಳೆಯರು ತಮ್ಮ ದೇಶದಲ್ಲಿ ಪ್ರತಿದಿನ ಏನನ್ನು ಅನುಭವಿಸುತ್ತಿದ್ದಾರೆ ಎಂಬುದಕ್ಕೆ ರಜಾಕ್ ಅವರ ಮನಸ್ಥಿತಿಯೇ ಉದಾಹರಣೆ ಎಂದು ಮತ್ತೊಬ್ಬರು ಜಾಡಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version