ದೋಹಾ : ಅತ್ಯಂತ ರೋಚಕವಾಗಿ ನಡೆದ ಫಿಫಾ ವಿಶ್ವ ಕಪ್ ಫೈನಲ್ ಪಂದ್ಯದಲ್ಲಿ ಫ್ರಾನ್ಸ್ ತಂಡವನ್ನು ಸೋಲಿಸಿದ ಅರ್ಜೆಂಟೀನಾ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿತು. ಪಂದ್ಯದ ಪೂರ್ಣ ಅವಧಿ 90 ನಿಮಿಷ ಹಾಗೂ ಹೆಚ್ಚುವರಿ 30 ನಿಮಿಷಗಳ ಆಟದಲ್ಲಿ ಇತ್ತಂಡಗಳು 3-3 ಗೋಲ್ಗಳನ್ನು ಬಾರಿಸಿದ ಕಾರಣ ಪೆನಾಲ್ಟಿ ಮೊರೆ ಹೋಗಲಾಯಿತು. ಅಲ್ಲಿ 4-2 ಗೋಲ್ಗಳ ಅಂತರದಿಂದ ಗೆದ್ದ ಅರ್ಜೆಂಟೀನಾ ತಂಡ ವಿಜಯೋತ್ಸವ ಆಚರಿಸಿತು.
ಫೈನಲ್ ಎಂಬ ಘನತೆಗೆ ತಕ್ಕುದಾಗಿ ಹೋರಾಟ ನಡೆಯಿತು. ಅರ್ಜೆಂಟೀನಾ ತಂಡದ ಮೊದಲಾರ್ಧದಲ್ಲಿ ಎರಡು ಗೋಲ್ ದಾಲಿಸಿದರೆ, ಫ್ರಾನ್ಸ್ ಬಳಗ ದ್ವಿತೀಯಾರ್ಧದಲ್ಲಿ ಸತತವಾಗಿ ಎರಡು ಗೋಲ್ ಬಾರಿಸಿತು. ಅರ್ಜೆಂಟೀನಾ ತಂಡದ ನಾಯಕ ಲಿಯೋನೆಲ್ ಮೆಸ್ಸಿ (23ನೇ ನಿಮಿಷ), ಏಂಜೆಲೊ ಡಿ ಮಾರಿಯಾ (36ನೇ ನಿಮಿಷ) ಗೋಲ್ಗಳನ್ನು ಬಾರಿಸಿದರೆ, ಫ್ರಾನ್ಸ್ ತಂಡದ ಕೈಲಿಯಾನ್ ಎಂಬಾಪೆ 80 ಹಾಗೂ 81ನೇ ನಿಮಿಷದಲ್ಲಿ ಗೋಲ್ ಬಾರಿಸಿ ಸಮಬಲದ ಸಾಧನೆ ಮಾಡಿದರು. ಬಳಿಕ ನಡೆದ 30 ನಿಮಿಷಗಳ ಹೆಚ್ಚುವರಿ ಆಟದಲ್ಲಿ ಅರ್ಜೆಂಟೀನಾ ಪರ ಲಿಯೋನೆಲ್ ಮೆಸ್ಸಿ 108ನೇ ನಿಮಿಷದಲ್ಲಿ ಗೋಲ್ ಬಾರಿಸಿದರೆ, ಎಂಬಾಪೆ 118 ನೇ ನಿಮಿಷದಲ್ಲಿ ಯಶಸ್ಸು ಸಾಧಿಸಿದರು.
ಫ್ರಾನ್ಸ್ ತಂಡದ ಪರ ಕೈಲಿಯಾನ್ ಎಂಬಾಪೆ ಹ್ಯಾಟ್ರಿಕ್ ಗೋಲ್ ದಾಖಲಿಸಿ ಸಾಧನೆ ಮಾಡಿದ ಹೊರತಾಗಿಯೂ ಅವರಿಗೆ ಗೆಲುವಿನ ಸವಿ ಸಿಗಲಿಲ್ಲ. ಒಟ್ಟಾರೆ ಟೂರ್ನಿಯಲ್ಲಿ ಒಟ್ಟು 8 ಗೋಲ್ಗಳನ್ನು ಬಾರಿಸಿದ ಕೈಲಿಯಾನ್ಗೆ ಗೋಲ್ಡನ್ ಬೂಟ್ ಗೌರವ ಲಭಿಸಿತು.
ಅರ್ಜೆಂಟೀನಾ ತಂಡ ಈ ಹಿಂದೆ 1978 ಹಾಗೂ 1986ರಲ್ಲಿ ವಿಶ್ವ ಕಪ್ ಗೆದ್ದಿತ್ತು. ಇದೀಗ 36 ವರ್ಷಗಳ ಬಳಿಕ ಟ್ರೋಫಿ ಗೆದ್ದಂತಾಗಿದೆ. ಇದೇ ವೇಳೆ ಕಳೆದ ಬಾರಿಯ ಚಾಂಪಿಯನ್ ಹಾಗೂ ಗೋಲ್ಕೀಪರ್ ಹ್ಯೂಗೋ ಲೊರಿಸ್ ನೇತೃತ್ವದ ಫ್ರಾನ್ಸ್ ತಂಡದ ಎರಡನೇ ಬಾರಿ ಪ್ರಶಸ್ತಿ ಗೆಲ್ಲುವ ಕನಸು ಕಮರಿ ಹೋಯಿತು.
ಲುಸೈಲ್ ಸ್ಟೇಡಿಯಮ್ನಲ್ಲಿ ನಡೆದ ಹಣಾಹಣಿಯಲ್ಲಿ ಆರಂಭದಿಂದಲೇ ಆಕ್ರಮಣಕಾರಿ ಆಟ ಪ್ರದರ್ಶಿಸಿದ ಅರ್ಜೆಂಟೀನಾ ಬಳಗ ಪ್ರಥಮಾರ್ಧಕ್ಕೆ ಮೊದಲೇ ಎರಡು ಗೋಲ್ಗಳನ್ನು ಬಾರಿಸಿ ವಿಶ್ವಾಸ ಪ್ರದರ್ಶಿಸಿತು. ಅದೇ ಲಯದಲ್ಲಿ ಆಡಿದರೂ ಎದುರಾಳಿ ತಂಡದಿಂದ ಪ್ರತಿರೋಧ ಎದುರಾಯಿತು. ನಿಗದಿತ ಅವಧಿ ಮುಕ್ತಾಯಕ್ಕೆ 10 ನಿಮಿಷ ಮೊದಲು ಕೈಲ್ ಎಂಬಾಪೆ ಎರಡು ಗೋಲ್ಗಳನ್ನು ಬಾರಿಸಿ ಅರ್ಜೆಂಟೀನಾ ತಂಡಕ್ಕೆ ಆಘಾತ ಕೊಟ್ಟರು. ಹೀಗಾಗಿ ಪಂದ್ಯ ಹೆಚ್ಚುವರಿ 30 ನಿಮಿಷಗಳ ಕಡೆಗೆ ಸಾಗಿತು. ಅಲ್ಲೂ 108ನೇ ನಿಮಿಷದಲ್ಲಿ ಮೆಸ್ಸಿ ಗೋಲ್ ಬಾರಿಸಿದರೆ, 118ನೇ ನಿಮಿಷದಲ್ಲಿ ಎಂಬಾಪೆ ಗೋಲ್ ಬಾರಿಸಿದರು.
ಫೈನಲ್ ಪಂದ್ಯ ಕ್ಷಣಕ್ಷಣಕ್ಕೂ ರೋಚಕವಾಗಿ ನಡೆಯಿತು. ಆರಂಭದಲ್ಲಿ ಅರ್ಜೆಂಟೀನಾ ತಂಡ ಪಾಸ್ ಹಾಗೂ ನಿಖರತೆಯ ಮೂಲಕ ಚೆಂಡಿನ ಮೇಲೆ ಹಿಡಿತ ಸಾಧಿಸಿದ್ದರೆ, ದ್ವಿತೀಯಾರ್ಧದಲ್ಲಿ ಫ್ರಾನ್ಸ್ ತಂಡ ಹೆಚ್ಚು ಪ್ರಭಾವಿ ಆಟ ಪ್ರದರ್ಶಿಸಿತು. ಹೆಚ್ಚುವರಿ 30 ನಿಮಿಷದಲ್ಲಂತೂ ಇತ್ತಂಡಗಳು ರಣರಂಗದಲ್ಲಿರುವ ಸೇನಾನಿಗಳಂತೆ ಹೋರಾಟ ನಡೆಸಿದರು.
ಲುಸೈಲ್ ಸ್ಟೇಡಿಯಮ್ನಲ್ಲಿ ಮೆಸ್ಸಿ ನಾಯಕತ್ವದ ಅರ್ಜೆಂಟೀನಾ ತಂಡದ ಅಭಿಮಾನಿಗಳೇ ಹೆಚ್ಚಿದ್ದರು. ಭಾರತೀಯ ಫುಟ್ಬಾಲ್ ಅಭಿಮಾನಿಗಳೂ ಮೆಸ್ಸಿ ಬಗಳಕ್ಕೆ ತಮ್ಮ ಬೆಂಬಲ ವ್ಯಕ್ತಪಡಿಸಿದ್ದರು. ಮಲಯಾಳಂ ಸಿನಿಮಾ ನಟರಾದ ಮೋಹನ್ ಲಾಲ್ ಹಾಗೂ ಮಮ್ಮೂಟಿ ಕೂಡ ಪಂದ್ಯ ವೀಕ್ಷಿಸಿದರು.
ಅರ್ಜೆಂಟೀನಾ ಸಾಧನೆ
ಮೆಸ್ಸಿ ನಾಯಕ್ವದ ಅರ್ಜೆಂಟೀನಾ ತಂಡ 2021ರಲ್ಲಿ ನಡೆದ ಕೋಪಾ ಅಮೇರಿಕ ಫುಟ್ಬಾಲ್ ಟೂರ್ನಿಯಲ್ಲಿ ಬಲಿಷ್ಠ ಪ್ರತಿಸ್ಪರ್ಧಿ ಬ್ರೆಜಿಲ್ ವಿರುದ್ಧ 1-0 ಗೋಲ್ಗಳನ್ನು ದಾಖಲಿಸಿ ಜಯ ಸಾಧಿಸಿತು. ಈ ಮೂಲಕ ವಿದಾಯಕ್ಕೆ ಮೊದಲು ಫುಟ್ಬಾಲ್ ಕ್ಷೇತ್ರದ ಆರಾಧ್ಯ ದೈವ್ಯ ಲಿಯೋನೆಲ್ ಮೆಸ್ಸಿ ಎರಡು ಪ್ರಮುಖ ಪ್ರಶಸ್ತಿಗಳನ್ನು ಗೆದ್ದಂತಾಯಿತು.
ಇದನ್ನೂ ಓದಿ | Fifa World Cup | ಫಿಫಾ ವಿಶ್ವ ಕಪ್ ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾದ ನೆಚ್ಚಿನ ತಂಡ ಯಾವುದು; ರಾಹುಲ್ ಹೇಳಿದ ಉತ್ತರವೇನು?