ಬೆಂಗಳೂರು: ಸ್ಯಾಂಡಲ್‌ವುಡ್ ನಟ, ಕಲಾ ನಿರ್ದೇಶಕ ಅರುಣ್ ಸಾಗರ್ (Arun Sagar) ಅವರ ಪುತ್ರ ಸೂರ್ಯ ಸಾಗರ್ (Surya Sagar) ಥಾಯ್ಲೆಂಡ್‌ನ ರಾಜದಮ್ನರ್ ಕ್ರೀಡಾಂಗಣದಲ್ಲಿ (Rajadamnern stadium) ನಡೆದ ವೃತ್ತಿಪರ ಮುಯ್ ಥಾಯ್ (Muay thai) ಸ್ಪರ್ಧೆಯಲ್ಲಿ ವಿಜೇತರಾಗಿದ್ದಾರೆ. ಅಮೆರಿಕದ ಟೈಲಾರ್ ಟಿಂಗ್ಟೂರ್ ಅವರನ್ನು ಸೋಲಿಸಿ ಸೂರ್ಯ ಪ್ರಚಂಡ ಜಯ ಗಳಿಸಿದರು ಎಂದು ಅರುಣ್ ಸಾಗರ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ತಿಳಿಸಿದ್ದಾರೆ.
ಸ್ಪರ್ಧೆಯ ವಿಡಿಯೊವನ್ನು ಪೋಸ್ಟ್ ಮಾಡಿರುವ ಅವರು, ʼನಾಕೌಟ್ ಸರಣಿಯ 70 ಕೆಜಿ ವಿಭಾಗದಲ್ಲಿ ಟೈಲಾರ್ ಟಿಂಗ್ಟೂರ್ ವಿರುದ್ಧ ಸೂರ್ಯ ಸೆಣಸಿದರು. 3 ಸುತ್ತುಗಳ ಆಟದ ನಂತರ ಸೂರ್ಯನನ್ನು ವಿಜಯಿ ಎಂದು ಘೋಷಿಸಲಾಯಿತು. ರಾಜದಮ್ನರ್ ಕ್ರೀಡಾಂಗಣದಲ್ಲಿ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಸೂರ್ಯ ಪಾತ್ರರಾಗಿದ್ದಾರೆ. ಹಿಂದೆಯೂ ಇದೇ ಕ್ರೀಡಾಂಗಣದಲ್ಲಿ ಸೂರ್ಯ ವಿಜೇತರಾಗಿದ್ದರು. ಈ ಬಗ್ಗೆ ತುಂಬ ಹೆಮ್ಮೆ ಇದೆʼ ಎಂದು ಅರುಣ್ ಸಾಗರ್ ಬರೆದುಕೊಂಡಿದ್ದಾರೆ. ʼಇವು ಚಾಂಪಿಯನ್ ಶಿಪ್ ಪಂದ್ಯಗಳಲ್ಲ. ಇವು ಏಕೈಕ ವೃತ್ತಿಪರ ಸ್ಪರ್ಧೆʼ ಎಂದು ಅರುಣ್ ಸಾಗರ್ ತಿಳಿಸಿದ್ದಾರೆ.
ಕಳೆದ ಬಾರಿಯೂ ವಿಜೇತರಾಗಿದ್ದ ಸೂರ್ಯ ಸಾಗರ್
ಕಳೆದ ವರ್ಷ ಆಗಸ್ಟ್‌ನಲ್ಲಿ ರಾಜದಮ್ನರ್ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಮುಯ್ ಥಾಯ್ ಸ್ಪರ್ಧೆಯಲ್ಲೂ ಸೂರ್ಯ ಸಾಗರ್ ವಿಜೇತರಾಗಿದ್ದರು. ಥಾಯ್ಲೆಂಡ್‌ನ ಚಟಾಪೆಚ್ ಸಪಿಡಾ ಅವರನ್ನು ಮೂರು ಸುತ್ತುಗಳ ಹೋರಾಟದ ಬಳಿಕ ಸೂರ್ಯ ಸಾಗರ್ ಮಣಿಸುವ ಮೂಲಕ ಈ ಕ್ರೀಡಾಂಗಣದಲ್ಲಿ ಗೆದ್ದ ಮೊದಲ ಭಾರತೀಯ ಎನಿಸಿಕೊಂಡಿದ್ದರು. ಬಳಿಕ ಮಾತನಾಡಿದ್ದ ಅವರು, ʼʼತುಂಬಾ ಹೆಮ್ಮೆಯಾಗುತ್ತಿದೆ. ಈ ಉತ್ತಮ ಫಲಿತಾಂಶಕ್ಕಾಗಿ ನಾನು ಸುಮಾರು ಎರಡು ತಿಂಗಳು ಇಲ್ಲೇ ವಾಸ್ತವ್ಯ ಹೂಡಿದ್ದೆ. ಥಾಯ್ಲೆಂಡ್‌ನ ಆಟಗಾರರನ್ನು ಸೋಲಿಸುವುದು ಸುಲಭವಾಗಿರಲಿಲ್ಲ. ಜತೆಗೆ ಈ ಗೆಲುವು ನಾನು ಸಾಗಲಿರುವ ಮುಂದಿನ ದಾರಿಗೆ ಸ್ಫೂರ್ತಿಯಾಗಿರಲಿದೆ. ಥಾಯ್ಲೆಂಡ್‌ನಲ್ಲಿ ಉತ್ತಮ ಆಟಗಾರರಿದ್ದಾರೆ. ಅವರ ವಿರುದ್ಧ ಕಣಕ್ಕಿಳಿಯಲು ಸಾಕಷ್ಟು ತರಬೇತಿ ಮತ್ತು ಕಠಿಣ ಪರಿಶ್ರಮದ ಅಗತ್ಯವಿರಬೇಕಾಗುತ್ತದೆʼʼ ಎಂದು ಹೇಳಿದ್ದರು.
ಥಾಯ್ಲೆಂಡ್‌ನಲ್ಲಿ ಜನಪ್ರಿಯ
ಇನ್ನು ಮುಯ್ ಥಾಯ್ ಬಗ್ಗೆ ಮಾಹಿತಿ ನೀಡಿದ್ದ ಸೂರ್ಯ, ʼʼಈ ಆಟ ಥಾಯ್ಲೆಂಡ್‌ನಲ್ಲಿ ಬಹಳ ಜನಪ್ರಿಯಾಗಿದೆ. ಈ ಕ್ರೀಡಾಂಗಣವನ್ನು ಮುಯ್ ಥಾಯ್ ಪ್ರದರ್ಶನಕ್ಕಾಗಿಯೇ ನಿರ್ಮಿಸಲಾಗಿದೆ. ಇಲ್ಲಿನ ವಾತಾವರಣ ಬಹಳ ಸ್ಫೂರ್ತಿದಾಯಕವಾಗಿದೆ. ಇಲ್ಲಿ ಉತ್ತಮ ಆಟಗಾರರಿಗೆ ಮಾತ್ರ ಅವಕಾಶ ನೀಡಲಾಗುತ್ತದೆ. ಇದು ಕೂಡ ನನಗೆ ಹೆಮ್ಮೆ ತಂದಿರುವ ಸಂಗತಿʼʼ ಎಂದು ಸೂರ್ಯ ಖುಷಿ ವ್ಯಕ್ತಪಡಿಸಿದ್ದರು.
ಗಾಯಗೊಂಡಿದ್ದರು
ಕಳೆದ ಬಾರಿ ಟ್ರೈನಿಂಗ್ ವೇಳೆ ಸೂರ್ಯ ಅವರ ಮೂಗಿಗೆ ಗಾಯಗಳಾಗಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿದ್ದ ಅವರು, ʼʼಸದೃಢವಾಗಿರಲು ನಾನು ಶ್ಯಾಡೋ ಬಾಕ್ಸಿಂಗ್, ಸ್ಕಿಪ್ಪಿಂಗ್ ಮತ್ತು ಓಟದಲ್ಲಿ ತೊಡಗಿರುತ್ತೇನೆ. ಈ ಸಮಯದಲ್ಲಿ ಸ್ವಲ್ಪ ಏಟಾಗಿತ್ತು. ಮುಯ್ ಥಾಯ್ ಸಮಯದಲ್ಲಿ ಗಾಯಗಳಾಗುವುದು ಸಹಜ. ಇದನ್ನು ಮರೆತು ಉತ್ತಮ ಪ್ರದರ್ಶನ ನೀಡಲು ಮುಂದಾಗುತ್ತೇನೆʼʼ ಎಂದು ಹೇಳಿದ್ದರು.
ರಾಜದಮ್ನರ್ ಕ್ರೀಡಾಂಗಣದಲ್ಲಿ ಪ್ರತಿ ಸೋಮವಾರ, ಬುಧವಾರ, ಗುರುವಾರ ಮತ್ತು ಭಾನುವಾರ ಮುಯ್ ಥಾಯ್ ಅನ್ನು ಆಯೋಜಿಸಲಾಗುತ್ತದೆ. 1945ರಲ್ಲಿ ಇಲ್ಲಿ ಮೊದಲ ಬಾರಿಗೆ ಪ್ರದರ್ಶನ ಏರ್ಪಡಿಸಲಾಗಿತ್ತು.
ಇದನ್ನೂ ಓದಿ: ಕೊಹ್ಲಿಯ ದಾಖಲೆ ಸರಿಗಟ್ಟಿ, ರಾಹುಲ್ ದಾಖಲೆ ಮುರಿದ ಸೂರ್ಯಕುಮಾರ್