ನಿತ್ಯಾನಂದ ವಿವೇಕವಂಶಿ
ಬಾಂಗ್ಲಾದೇಶದ ವಿರುದ್ಧ ಎರಡನೇ ಟೆಸ್ಟ್ ನಲ್ಲಿ ಭಾರತದ ಗೆಲುವಿಗೆ ಕಾರಣಕರ್ತರಾದ ಆರ್ ಅಶ್ವಿನ್ ಎಲೆ ಮರೆ ಕಾಯಿಯಂತೆ ಇದ್ದುಕೊಂಡು ಮಾಡಿರುವ ಸಾಧನೆ ಅಮೋಘ. ಆದರೆ ಕೊಹ್ಲಿ, ಧೋನಿ ಇವರಿಗೆ ಸಿಕ್ಕ ಸ್ಟಾರ್ ವ್ಯಾಲ್ಯೂ ಅಶ್ವಿನ್ ಗೆ ಸಿಗದಿದ್ದುದು ಆಶ್ಚರ್ಯ. ಬನ್ನಿ ಅಶ್ವಿನ್ ಮಾಡಿರುವ ಸಾಧನೆಯನ್ನು ಗಮನಿಸೋಣ.
ಟೆಸ್ಟ್ ನಲ್ಲಿ 3,000 ರನ್ ಗಳು ಮತ್ತು 400 ವಿಕೆಟ್ ಗಳಿಸಿರುವ ಭಾರತದ ಇಬ್ಬರೇ ಆಲ್ ರೌಂಡರ್ಗಳಲ್ಲಿ ಆಶ್ವಿನ್ ಒಬ್ಬರು. ಇನ್ನೊಬ್ಬರು ಕಪಿಲ್ ದೇವ್ (131 ಟೆಸ್ಟ್). ಪ್ರಪಂಚದಲ್ಲಿ ಈ ಸಾಧನೆ ಮಾಡಿರುವವ ಇನ್ನೂ ಮೂವರೆಂದರೆ ಶಾನ್ ಪೊಲಾಕ್(108 ಟೆಸ್ಟ್), ಸ್ಟುವರ್ಟ್ ಬ್ರಾಡ್ (159 ಟೆಸ್ಟ್), ಶೇನ್ ವಾರ್ನ್(145 ಟೆಸ್ಟ್), ರಿಚರ್ಡ್ ಹ್ಯಾಡ್ಲಿ (86 ಟೆಸ್ಟ್). ಆದರೆ ಇಷ್ಟು ಸಾಧನೆ ಮಾಡಲು ಅಶ್ವಿನ್ ತೆಗೆದುಕೊಂಡಿರುವುದು ಕೇವಲ 88 ಟೆಸ್ಟ್. ಅಂದರೆ ಆಶ್ವಿನ್ ಎಂತಹ ಪ್ರತಿಭಾನ್ವಿತ ಎಂಬುದನ್ನು ಅರ್ಥ ಮಾಡಿಕೊಳ್ಳಬಹುದು.
ಟೆಸ್ಟ್ನಲ್ಲಿ 449 ವಿಕೆಟ್ ಗಳಿಸಿರುವ ಅಶ್ವಿನ್ ಇನ್ನೊಂದು ವಿಕೆಟ್ ತೆಗೆದ ತಕ್ಷಣ ಟೆಸ್ಟ್ ಕ್ರಿಕೆಟ್ನಲ್ಲಿ 450 ವಿಕೆಟ್ಗಳ ಸರದಾರನಾಗುತ್ತಾರೆ. ಆಗ ಟೆಸ್ಟ್ ಕ್ರಿಕೆಟ್ನಲ್ಲಿ 450 ವಿಕೆಟ್ ಮತ್ತು 3,000 ರನ್ ಗಳಿಸಿದ ವಿಶ್ವದ ಮೂರೇ ಆಟಗಾರರಲ್ಲಿ ಒಬ್ಬರಾಗುತ್ತಾರೆ. ಈ ಸಾಧನೆ ಮಾಡಿದ ಏಕೈಕ ಭಾರತೀಯನಾಗುತ್ತಾರೆ. ಅಶ್ವಿನ್ ಬಿಟ್ಟರೆ ಈ ಸಾಧನೆ ಮಾಡಿರುವ ಇನ್ನಿಬ್ಬರು ಶೇನ್ ವಾರ್ನ್ ಮತ್ತು ಸ್ಟುವರ್ಟ್ ಬ್ರಾಡ್ ಮಾತ್ರ.
ಅತಿ ಹೆಚ್ಚು ಬಾರಿ ಟೆಸ್ಟ್ ಇನ್ನಿಂಗ್ಸ್ ಒಂದರಲ್ಲಿ ಸೆಂಚುರಿ ಮತ್ತು ಐದು ವಿಕೆಟ್ ಪಡೆದಿರುವವರಲ್ಲಿ ಎರಡನೇ ಸ್ಥಾನದಲ್ಲಿರುವವರು ಆಲ್ ರೌಂಡರ್ ಅಶ್ವಿನ್ (ಒಟ್ಟು 3 ಬಾರಿ). ಮೊದಲ ಸ್ಥಾನದಲ್ಲಿರುವ ಇಂಗ್ಲೆಂಡ್ನ ಇಯಾನ್ ಬಾಥಮ್ 5 ಬಾರಿ ಈ ಸಾಧನೆ ಮಾಡಿದ್ದಾರೆ. ಭಾರತದ ಪರವಾಗಿ ಈ ಸಾಧನೆ ಮಾಡಿರುವ ಇತರರೆಂದರೆ ಎಮ್ ಎಚ್ ಮಂಕಂಡ್ (1 ಬಾರಿ), ಉಮ್ರಿಗರ್ (1 ಬಾರಿ) ರವೀಂದ್ರ ಜಡೇಜಾ (1ಬಾರಿ).
ಪ್ರಪಂಚದ ಟೆಸ್ಟ್ ಇತಿಹಾಸದಲ್ಲಿ ಅತಿ ಹೆಚ್ಚು ಬಾರಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದಿರುವ ಎರಡನೇ ಆಟಗಾರ ಆರ್ ಅಶ್ವಿನ್. (ಒಟ್ಟು 9 ಬಾರಿ) ಇದಕ್ಕಾಗಿ ಅವರು ಕೇವಲ 88 ಟೆಸ್ಟ್ ಮತ್ತು 36 ಸರಣಿಗಳಲ್ಲಿ ಆಡಿದ್ದಾರೆ. ಮೊದಲ ಸ್ಥಾನದಲ್ಲಿ 133 ಟೆಸ್ಟ್ ಆಡಿ 61 ಸರಣಿಗಳಲ್ಲಿ ಭಾಗವಹಿಸಿರುವ ಮುತ್ತಯ್ಯ ಮುರಳೀಧರನ್(11 ಬಾರಿ ಸರಣಿ ಶ್ರೇಷ್ಠ) ಇದ್ದರೆ, ಅಶ್ವಿನ್ ರ ಜೊತೆ ಜಂಟಿ ಎರಡನೇ ಸ್ಥಾನವನ್ನು ಹಂಚಿಕೊಂಡಿರುವ ದಕ್ಷಿಣ ಆಫ್ರಿಕಾದ ಜಾಕ್ ಕಾಲೀಸ್ 9 ಬಾರಿ ಸರಣಿ ಶ್ರೇಷ್ಠರಾಗಲು 166 ಟೆಸ್ಟ್ ಮತ್ತು 61 ಸರಣಿಗಳಲ್ಲಿ ಭಾಗವಹಿಸಿದ್ದರು. ಇನ್ನು ಭಾರತೀಯ ಸಾಧಕರಿಗೆ ಹೋಲಿಸಿದರೆ ಅಶ್ವಿನ್ಗಿಂತ ಹಿಂದೆ ಇರುವವರು ವೀರೇಂದ್ರ ಸೆಹ್ವಾಗ್( 104 ಟೆಸ್ಟ್ 39 ಸರಣಿ) ಮತ್ತು ಸಚಿನ್ ತೆಂಡೂಲ್ಕರ್ (200 ಟೆಸ್ಟ್ 74 ಸರಣಿ). ಇವರಿಬ್ಬರು ಕೇವಲ 5 ಬಾರಿ ಸರಣಿ ಶ್ರೇಷ್ಠ ಗೌರವಕ್ಕೆ ಪಾತ್ರರಾಗಿದ್ದಾರೆ. ಇದನ್ನು ಗಮನಿಸಿದರೆ ತಂಡದ ಗೆಲುವಿನಲ್ಲಿ ಅಶ್ವಿನ್ ಪಾತ್ರ ಮತ್ತು ಅವರ ನಿರಂತರ ಮತ್ತು ಯಶಸ್ಸನ್ನು ಗುರುತಿಸಬಹುದು.
ಟೆಸ್ಟ್ ಮ್ಯಾಚ್ ಒಂದರಲ್ಲಿ ಅತಿ ಹೆಚ್ಚು ಬಾರಿ ಹತ್ತು ವಿಕೆಟ್ ಗೊಂಚಲು (ಒಟ್ಟು 7 ಬಾರಿ) ಗಳಿಸಿದ ಭಾರತದ ಎರಡನೇ ಮತ್ತು ಪ್ರಪಂಚದ ಒಂಭತ್ತನೇ ಬೌಲರ್. ಈ ಸಾಧನೆ ಮಾಡಿರುವ ಇನ್ನೊಬ್ಬ ಭಾರತೀಯ ಬೌಲರ್ ಎಂದರೆ ಅನಿಲ್ ಕುಂಬ್ಳೆ(8 ಬಾರಿ). ಅಶ್ವಿನ್ ತಾವು ನಿವೃತ್ತರಾಗುವುದರೊಳಗೆ ಇನ್ನೊಂದು ಬಾರಿ ಈ ಸಾಧನೆ ಮಾಡಿದರೆ ಕುಂಬ್ಳೆ(8ಬಾರಿ) ಯವರನ್ನು ಸರಿಗಟ್ಟುವುದಲ್ಲದೇ ಭಾರತದ ಪಟ್ಟಿಯಲ್ಲಿ ಕುಂಬ್ಳೆಯವರೊಂದಿಗೆ ಜಂಟಿ ಮೊದಲ ಸ್ಥಾನ ಮತ್ತು ಪ್ರಪಂಚದ ಪಟ್ಟಿಯಲ್ಲಿ ಕುಂಬ್ಳೆಯವರೊಂದಿಗೆ ಜಂಟಿ ನಾಲ್ಕನೇ ಸ್ಥಾನ ಗಳಿಸಲಿದ್ದಾರೆ. ನಿವೃತ್ತರಾಗುವುದರೊಳಗೆ ಎರಡು ಬಾರಿ ಏನಾದರೂ ಈ ಸಾಧನೆ ಮಾಡಿದರೆ ಅನಿಲ್ ಕುಂಬ್ಳೆಯವರನ್ನು ಹಿಂದಿಕ್ಕಿ ಈ ಸಾಧನೆ ಮಾಡಿದ ಭಾರತದ ಏಕೈಕ ಬೌಲರ್ ಎನಿಸುವುದಲ್ಲದೇ ಪ್ರಪಂಚದ ಪಟ್ಟಿಯಲ್ಲಿ ನ್ಯೂಜಿಲೆಂಡ್ ನ ರಿಚರ್ಡ್ ಹ್ಯಾಡ್ಲಿ(9 ಬಾರಿ) ಮತ್ತು ಶ್ರೀಲಂಕಾದ ಹೇರತ್(9 ಬಾರಿ) ಜೊತಗೆ ಜಂಟಿ ಮೂರನೇ ಸ್ಥಾನ ಪಡೆಯಲಿದ್ದಾರೆ. ಇನ್ನೂ ಮೂರು ಬಾರಿ ಏನಾದರೂ ಈ ಸಾಧನೆ ಮಾಡಿಬಿಟ್ಟರೆ ಶೇನ್ ವಾರ್ನ್ (10 ಬಾರಿ) ರವರ ಜೊತೆ ಜಂಟಿ ಎರಡನೇ ಸ್ಥಾನ ಪಡೆಯಲಿದ್ದಾರೆ. ಮೊದಲ ಸ್ಥಾನದಲ್ಲಿ 22 ಬಾರಿ ಈ ಸಾಧನೆ ಮಾಡಿರುವ ಶ್ರೀಲಂಕಾ ದ ಮುತ್ತಯ್ಯ ಮುರಳೀಧರನ್ ಹೆಸರಿದ್ದು, ಭಾರತದ ಅಶ್ವಿನ್ ಸೇರಿದಂತೆ ಪ್ರಪಂಚದ ಇನ್ಯಾವ ಬೌಲರ್ ಕೈಲೂ ಮುರಿಯುವುದು ಅಸಾಧ್ಯವಾದ ದಾಖಲೆಯಾಗಿದೆ.
ಟೆಸ್ಟ್ ಇನ್ನಿಂಗ್ಸ್ ಒಂದರಲ್ಲಿ ಪ್ರಪಂಚದಲ್ಲೇ ಅತಿ ಹೆಚ್ಚು ಬಾರಿ ಐದು ವಿಕೆಟ್ ಗಳಿಸಿದ ಬೌಲರ್ಗಳ ಪೈಕಿಯೂ ಟಾಪ್ 10 ರ ಪಟ್ಟಿಯಲ್ಲಿ ಇದ್ದಾರೆ ಅಶ್ವಿನ್. (ಒಟ್ಟು 30 ಬಾರಿ, 10ನೇ ಸ್ಥಾನ). ಪ್ರಪಂಚದ ಟಾಪ್ 10 ಪಟ್ಟಿಯಲ್ಲಿ ಇರುವ ಇನ್ನೊಬ್ಬ ಭಾರತೀಯ ಅನಿಲ್ ಕುಂಬ್ಳೆ ಮಾತ್ರ. (4 ನೇ ಸ್ಥಾನ 35 ಬಾರಿ). ಹೀಗಾಗಿ ನಿವೃತ್ತರಾಗುವುದರೊಳಗೆ ಅಶ್ವಿನ್ಗೆ ಕುಂಬ್ಳೆ ಯವರ ದಾಖಲೆ ಮುರಿಯುವ ಸಾಮರ್ಥ್ಯವಿದೆ. ಕುಂಬ್ಳೆಯವರಿಗಿಂಥ ಮೇಲಿರುವವರೆಂದರೆ ಶೇನ್ ವಾರ್ನ್ (37 ಬಾರಿ) ಹ್ಯಾಡ್ಲಿ ( 36 ಬಾರಿ) ಮುರಳೀಧರನ್(67 ಬಾರಿ) ಮಾತ್ರ. ಪ್ರಯತ್ನ ಪಟ್ಟರೆ ಅಶ್ವಿನ್ ನಿವೃತ್ತರಾಗುವುದರೊಳಗೆ ನಂ 2 ಸ್ಥಾನಕ್ಕೇರಬಹುದು.
ಬ್ಯಾಟ್ಸ್ಮನ್ಗಳನ್ನು ಅತಿ ಹೆಚ್ಚು ಬಾರಿ ಎಲ್ಬಿಡಬ್ಲ್ಯು ಬಲೆಗೆ ಕೆಡವಿದ ಪ್ರಪಂಚದ ಹತ್ತು ಬೌಲರ್ಗಳಲ್ಲಿ ಅಶ್ವಿನ್ ಕೂಡಾ ಒಬ್ಬರು (96 ಬಾರಿ). ಇನ್ನೂ ಆರು ವಿಕೆಟ್ಗಳನ್ನು ಎಲ್ಬಿಡಬ್ಲ್ಯು ರೂಪದಲ್ಲಿ ಅಶ್ವಿನ್ ಪಡೆದರೆ 100 ಬಾರಿ ಈ ಸಾಧನೆ ಮಾಡಿದವರಾಗಿ 100 ಎಲ್ಬಿಡಬ್ಲ್ಯು ವಿಕೆಟ್ ಕ್ಲಬ್ಗೆ ಸೇರುತ್ತಾರೆ. ಪ್ರಪಂಚದಲ್ಲಿ ಇದುವರೆಗೂ ಈ ಸಾಧನೆ ಮಾಡಿರುವವರು ಕೇವಲ 9 ಬೌಲರ್ ಗಳು ಮಾತ್ರ. ಅಂದ ಹಾಗೆ ಪ್ರಪಂಚದ ಈ ಪಟ್ಟಿಯಲ್ಲಿ ಮೊದಲ ಸ್ಥಾನ ಭಾರತದ ಅನಿಲ್ ಕುಂಬ್ಳೆ ಎಂಬುದು ಹೆಮ್ಮೆಯ ಸಂಗತಿ. (ಒಟ್ಟು 150 ಸಲ) ಈ ಪಟ್ಟಿಯಲ್ಲಿ ಇರುವ ಇನ್ನೊಬ್ಬ ಭಾರತೀಯ ಕಪಿಲ್ ದೇವ್ (111 ಸಲ) ಮಾತ್ರ.
ಟೆಸ್ಟ್ನಲ್ಲಿ ಅತಿ ಹೆಚ್ಚು ಬಾರಿ ಎಡಗೈ ಬ್ಯಾಟ್ಸ್ಮನ್ ಗಳನ್ನು ಔಟ್ ಮಾಡಿದ ಬೌಲರ್ಗಳ ಪಟ್ಟಿಯಲ್ಲಿ ಮೊದಲನೇ ಸ್ಥಾನ ಅಶ್ವಿನ್ ಅವರದ್ದು. ಇನ್ನೂರು ಎಡಗೈ ಆಟಗಾರರನ್ನು ಪೆವಿಲಿಯನ್ಗೆ ಕಳುಹಿಸಿದ ಪ್ರಪಂಚದ ಏಕೈಕ ಬೌಲರ್ ಅಶ್ವಿನ್ ಅನ್ನುವುದು ವಿಶೇಷ.
ಪ್ರಪಂಚದಲ್ಲಿ ಅತಿವೇಗದ 250, 300, 350 ವಿಕೆಟ್ ಗಳಿಸಿದವರ ಪೈಕಿ ಅಶ್ವಿನ್ ಮೊದಲ ಸ್ಥಾನದಲ್ಲಿದ್ದಾರೆ. ಕ್ರಮವಾಗಿ ಕೇವಲ 45, 54, 66 ಟೆಸ್ಟ್ಗಳಲ್ಲಿ ಅವರು ಈ ಸಾಧನೆ ಮಾಡಿದ್ದರು.
ಅಶ್ವಿನ್ ರೊಂದಿಗೆ ಅತಿ ವೇಗದ 350 ವಿಕೆಟ್ ಸಾಧನೆಯಲ್ಲಿ ಜಂಟಿ ಮೊದಲ ಸ್ಥಾನ ಪಡೆದಿರುವ ಮುತ್ತಯ್ಯ ಮುರಳಿಧರನ್ ಈ ಸಾಧನೆ ಮಾಡಲು ವೃತ್ತಿ ಜೀವನದ 9 ವರ್ಷ 9 ದಿನಗಳನ್ನು ತೆಗೆದುಕೊಂಡಿದ್ದರೆ ಅಶ್ವಿನ್ ಕೇವಲ 7 ವರ್ಷ 330 ದಿನಗಳಲ್ಲಿ ಈ ಸಾಧನೆ ಮಾಡಿದ್ದರು ಎಂಬುದು ಗಮನಾರ್ಹ. ಇನ್ನುಳಿದಂತೆ ವೇಗದ 350 ವಿಕೆಟ್ ಪಟ್ಟಿಯಲ್ಲಿರುವ ಇತರ ಭಾರತೀಯರೆಂದರೆ ಅನಿಲ್ ಕುಂಬ್ಳೆ (77 ಟೆಸ್ಟ್ 6 ನೇ ಸ್ಥಾನ), ಹರ್ಭಜನ್ ಸಿಂಗ್(83 ಟೆಸ್ಟ್ 11 ನೇ ಸ್ಥಾನ) ಮತ್ತು ಕಪಿಲ್ ದೇವ್ (100 ಟೆಸ್ಟ್ 19 ನೇ ಸ್ಥಾನ) ಮಾತ್ರ.
ಇನ್ನು ಅತಿ ವೇಗದ 400 ವಿಕೆಟ್ ಸಾಧನೆಯಲ್ಲಿ ಅಶ್ವಿನ್ ಎರಡನೇ ಸ್ಥಾನ ಪಡೆದಿದ್ದಾರೆ (77 ಟೆಸ್ಟ್). ಮೊದಲ ಸ್ಥಾನದಲ್ಲಿರುವ ಮುತ್ತಯ್ಯ ಮುರಳೀಧರನ್ 72 ಟೆಸ್ಟ್ಗಳಲ್ಲಿ ಈ ಸಾಧನೆ ಮಾಡಿದ್ದರು. ಮೂರನೇ ಸ್ಥಾನದಲ್ಲಿ ರಿಚರ್ಡ್ ಹ್ಯಾಡ್ಲಿ 80 ಟೆಸ್ಟ್ಗಳಲ್ಲಿ ಈ ಸಾಧನೆ ಮಾಡಿದ್ದರು. ಕುಂಬ್ಳೆ (85 ಟೆಸ್ಟ್), ಹರ್ಭಜನ್ (96 ಟೆಸ್ಟ್) ಮತ್ತು ಕಪಿಲ್ ದೇವ್(115 ಟೆಸ್ಟ್) ಈ ರೇಸ್ ನಲ್ಲಿರುವ ಭಾರತೀಯರು.
ಮುಂದಿನ ಟೆಸ್ಟ್ನಲ್ಲಿ ಇನ್ನೊಂದು ವಿಕೆಟ್ ಕಿತ್ತರೆ ಅತಿ ವೇಗದ 450 ವಿಕೆಟ್ ರೇಸ್ನಲ್ಲೂ ಅಶ್ವಿನ್ (89 ಟೆಸ್ಟ್) ಮತ್ತೆ 2ನೇ ಸ್ಥಾನ ಪಡೆಯಲಿದ್ದಾರೆ. ಮೊದಲ ಸ್ಥಾನ ಶ್ರೀಲಂಕಾದ ಮುತ್ತಯ್ಯ ಮುರಳೀಧರನ್(80 ಟೆಸ್ಟ್) ಮತ್ತು ಮೂರನೇ ಸ್ಥಾನ ನಮ್ಮ ಅನಿಲ್ ಕುಂಬ್ಳೆ (93 ಟೆಸ್ಟ್) ಅವರದ್ದಾಗಿದೆ. ಪ್ರಪಂಚದಲ್ಲಿ ಕೇವಲ 10 ಜನ ಮಾತ್ರ ಮಾಡಿರುವ ಈ ಸಾಧನೆಯ ರೇಸ್ನಲ್ಲಿ ಅಶ್ವಿನ್ ಮತ್ತು ಕುಂಬ್ಳೆ ಬಿಟ್ಟರೆ ಇನ್ಯಾವ ಭಾರತೀಯನೂ ಇಲ್ಲ.
ಒಂದು ವೇಳೆ ಅಶ್ವಿನ್ 500 ವಿಕೆಟ್ನ ಗುರಿ ಮುಟ್ಟಿದರೆ ಬಹುಶಃ ಈ ಸಾಧನೆ ಮಾಡಿದ ವಿಶ್ವದ 8 ನೇ ಆಟಗಾರರಾಗಲಿದ್ದಾರೆ. ವೇಗದ 500 ವಿಕೆಟ್ ಗಳಿಸುವಲ್ಲಿ ಎರಡನೇ ಸ್ಥಾನ ಗಳಿಸುವ ಸಾಧ್ಯತೆ ಇದೆ. ಅಶ್ವಿನ್ ಆ ಸ್ಥಾನ ಪಡೆಯಬೇಕಿದ್ದರೆ ಕುಂಬ್ಳೆ(105 ಟೆಸ್ಟ್) ಯವರಿಗಿಂತ ಮೊದಲು ಅಂದರೆ ಇನ್ನು 17 ಟೆಸ್ಟ್ ಪಂದ್ಯದ ಒಳಗೆ 51 ವಿಕೆಟ್ ಗಳಿಸಬೇಕು. ಅಷ್ಟು ಟೆಸ್ಟ್ಗಳಲ್ಲಿ ಆಡುವ ಅವಕಾಶ ಅಶ್ವಿನ್ಗೆ ದೊರೆತರೆ ನೀರು ಕುಡಿದಷ್ಟೇ ಸುಲಭವಾಗಿ ಈ ರೆಕಾರ್ಡ್ ಅನ್ನು ಮುರಿದುಹಾಕುವುದು ಖಚಿತ. ಇನ್ನು ಮೊದಲ ಸ್ಥಾನದಲ್ಲಿರುವ ಮುತ್ತಯ್ಯ ಮುರಳೀಧರನ್ (87 ಟೆಸ್ಟ್) ರವರ ದಾಖಲೆ ಮುರಿಯಲು ಸಾಧ್ಯವೇ ಇಲ್ಲ. ಯಾಕೆಂದರೆ ಅದಾಗಲೇ ಅಶ್ವಿನ್ 88 ಟೆಸ್ಟ್ ಮ್ಯಾಚ್ ಆಡಿಯಾಗಿದೆ. ಆದರೆ ಭವಿಷ್ಯದಲ್ಲಿ ಅಶ್ವಿನ್ ಅವರ ಎರಡನೇ ಅತಿ ವೇಗದ 500 ವಿಕೆಟ್ ಗಳ ದಾಖಲೆಯನ್ನೂ ಮುರಿಯುವುದು ಕಷ್ಟಸಾಧ್ಯ. ಏಕೆಂದರೆ ಈಗ ಆಡುತ್ತಿರುವವರಲ್ಲಿ ಅಶ್ವಿನ್ ಅವರ ಸನಿಹದಲ್ಲೂ ಯಾರೂ ಇಲ್ಲ.
ಭಾರತ ಟೆಸ್ಟ್ ಬೌಲರ್ ಗಳಲ್ಲಿ ವೇಗದ 50, 100, 150, 200, 250, 300, 350, 400, 450 ವಿಕೆಟ್ ಗಳ ದಾಖಲೆಯೂ ಅಶ್ವಿನ್ ಹೆಸರಿನಲ್ಲಿಯೇ ಇದೆ. ವೇಗದ 500 ಕೂಡಾ ಕೆಲವೇ ದಿನಗಳಲ್ಲಿ ಅವರದ್ದೇ ಆಗಲಿದೆ.
ಅಶ್ವಿನ್ ಐಸಿಸಿಯ ಪ್ರಪಂಚದ ಸರ್ವಕಾಲಿಕ ಶ್ರೇಷ್ಠ ಆಲ್ ರೌಂಡರ್ ಗಳ ಪೈಕಿ 12 ನೇ ಸ್ಥಾನ ಗಳಿಸಿದ್ದಾರೆ. 20 ಆಟಗಾರರ ಈ ಪಟ್ಟಿಯಲ್ಲಿ ಅಶ್ವಿನ್ ಬಿಟ್ಟರೆ ಇನ್ನೊಬ್ಬ ಭಾರತೀಯ ಆಟಗಾರನಿಲ್ಲ . ಹಾಗೆಯೇ ಬೌಲರ್ ಗಳ ಪಟ್ಟಿಯಲ್ಲಿ ಅಶ್ವಿನ್ 19ನೇ ಸ್ಥಾನದಲ್ಲಿದ್ದಾರೆ. ಈ ಪಟ್ಟಿಯಲ್ಲೂ ಸಹಾ ಅಶ್ವಿನ್ ಹೊರತುಪಡಿಸಿ ಇನ್ನೊಬ್ಬ ಭಾರತೀಯ ಆಟಗಾರನಿಲ್ಲ ಅನ್ನುವುದು ಅಶ್ವಿನ್ ಶ್ರೇಷ್ಠ ನಿರ್ವಹಣೆಯನ್ನು ಎತ್ತಿ ತೋರಿಸುತ್ತದೆ. ಇನ್ನು ಬ್ಯಾಟಿಂಗ್ ವಿಭಾಗದಲ್ಲಿ ವಿರಾಟ್ ಕೊಹ್ಲಿ 11 ನೇ ಸ್ಥಾನದಲ್ಲಿದ್ದು ಕೊಹ್ಲಿಯನ್ನು ಹೊರತುಪಡಿಸಿ ಇನ್ನೊಬ್ಬ ಈ ಪಟ್ಟಿಯಲ್ಲಿ ಭಾರತೀಯ ಇಲ್ಲ. ಅಂದರೆ ಪ್ರಪಂಚದ ಸಾರ್ವಕಾಲಿಕ ಟೆಸ್ಟ್ ಆಟಗಾರರಲ್ಲಿ ಇರುವ ಇಬ್ಬರೇ ಇಬ್ಬರು ಭಾರತೀಯರಲ್ಲಿ ಅಶ್ವಿನ್ ಒಬ್ಬರು. ಕೊಹ್ಲಿ ಬ್ಯಾಟಿಂಗ್ ನಲ್ಲಿ ಸ್ಥಾನ ಪಡೆದಿದ್ದರೆ ಅಶ್ವಿನ್ ಬೌಲಿಂಗ್ ಮತ್ತು ಆಲ್ ರೌಂಡರ್ ಎರಡೂ ವಿಭಾಗಗಳಲ್ಲಿ ಸ್ಥಾನ ಪಡೆದಿದ್ದಾರೆ. ಇಷ್ಟಾದರೂ ಭಾರತೀಯ ಕ್ರಿಕೆಟ್ ಲೋಕ ಈ ಆಟಗಾರನನ್ನು ಸ್ಟಾರ್ ಎಂದು ನೋಡುವುದೇ ಇಲ್ಲ ಎನ್ನುವುದೇ ಅಚ್ಚರಿಯ ಸಂಗತಿ.
ಪ್ರಪಂಚದ ಸರ್ವ ಶ್ರೇಷ್ಠ ಟೆಸ್ಟ್ ಆಲ್ ರೌಂಡರ್ ಆಗಿರುವ ಈ ಅಶ್ವಿನ್ ಟೆಸ್ಟ್ ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದಿರುವ ಪ್ರಪಂಚದ ಟಾಪ್ ಟೆನ್ ಪಟ್ಟಿಯಲ್ಲಿ ಸ್ಥಾನ ಪಡೆದಿರುವುದು ಸಾಮಾನ್ಯದ ಮಾತಲ್ಲ. ಇನ್ನು ಕೆಲವೇ ಕೆಲವು ಟೆಸ್ಟ್ ಮ್ಯಾಚ್ ಗಳಲ್ಲಿ ಆಡುವ ಅವಕಾಶ ಸಿಕ್ಕರೆ ಟೆಸ್ಟ್ ವಿಕೆಟ್ ಗಳಿಕೆಯ ದೃಷ್ಟಿಯಲ್ಲಿ ಪ್ರಪಂಚದ ಟಾಪ್ 7 ಸ್ಥಾನ ಪಡೆಯುವುದು ಗ್ಯಾರಂಟಿ. ಇನ್ನು 12 ಟೆಸ್ಟ್ ಗಳಲ್ಲಿ ಆಡಿದರೆ ಸಾಕು ಅಶ್ವಿನ್ ಒಟ್ಟು100 ಟೆಸ್ಟ್ ಆಡಿದಂತಾಗುತ್ತದೆ. ಉತ್ತಮ ಫಾರ್ಮ್ ನಲ್ಲಿರುವ ಅಶ್ವಿನ್ ಇನ್ನಿಂಗ್ಸ್ ಒಂದರಲ್ಲಿ 3 ವಿಕೆಟ್ ತೆಗೆದರೂ ತನ್ನ ಖಾತೆಗೆ 72 ವಿಕೆಟ್ ಸೇರಿಸಿಕೊಳ್ಳುತ್ತಾರೆ. ಆ ಮೂಲಕ ಕರ್ಟ್ನಿ ವಾಲ್ಷ್ ರ 519 ವಿಕೆಟ್ಗಳ ದಾಖಲೆ ಪುಡಿಯಾಗಿ 521 ವಿಕೆಟ್ ಗಳಿಸುವ ಅಶ್ವಿನ್ ಪ್ರಪಂಚದ ಅತಿ ಹೆಚ್ಚು ಟೆಸ್ಟ್ ವಿಕೆಟ್ ಗಳಿಸಿದವರ ಪೈಕಿ 7 ನೇ ಸ್ಥಾನಕ್ಕೇರುತ್ತಾರೆ.
ಅಶ್ವಿನ್ ಅವರು ಭಾರತದ ಪರ ನೂರು ಟೆಸ್ಟ್ ಆಡಿದ ಕೇವಲ 15 ಜನರ ಪೈಕಿಯೂ ಸ್ಥಾನ ಪಡೆಯುತ್ತಾರೆ. ಈಗಾಗಲೇ ಹನ್ನೆರಡು ಜನರಿರುವ ಈ ಕ್ಲಬ್ ಸೇರುವ ಅರ್ಹತೆ ಇರುವ ಇನ್ನೂ ಮೂವರೆಂದರೆ 88 ಟೆಸ್ಟ್ ಆಡಿರುವ ಅಶ್ವಿನ್, 98 ಟೆಸ್ಟ್ ಆಡಿರುವ ಚೇತೇಶ್ವರ ಪೂಜಾರ, 82 ಟೆಸ್ಟ್ ಆಡಿರುವ ಅಜಿಂಕ್ಯ ರಹಾನೆ. ಸದ್ಯಕ್ಕೆ ಆಡುತ್ತಿರುವವರಲ್ಲಿ ಈ ಮೂವರಿಗೆ ಹತ್ತಿರ ಇರುವ ಇನ್ನೊಬ್ಬ ಆಟಗಾರ ಅಂದರೆ 60 ಟೆಸ್ಟ್ ಆಡಿರುವ ಜಡೇಜಾ. ಅಂದರೆ 20-20 ಯುಗದಲ್ಲಿ ಜಡೇಜಾ ಸೇರಿದಂತೆ ಈ ದಾಖಲೆಯನ್ನು ಇನ್ನು ಯಾರೂ ಮುರಿಯಲು ಸಾಧ್ಯವಿಲ್ಲ. ಆದರೆ ಆಯ್ಕೆ ಸಮಿತಿ ಅಶ್ವಿನ್ ಎಂಬ ಈ ಅನುಭವಿ ಆಟಗಾರನಿಗೆ ಇನ್ನೂ 12 ಟೆಸ್ಟ್ ಆಡುವ ಅವಕಾಶ ನೀಡುವುದೇ? ಟ್ವೆಂಟಿ ಟ್ವೆಂಟಿ ಯುಗದಲ್ಲಿ ಟೀಮ್ ಇಂಡಿಯಾ ಅಷ್ಟು ಮ್ಯಾಚ್ ಆಡಲು ಇನ್ನೂ ಎಷ್ಟು ವರ್ಷ ಬೇಕೋ? ಅಲ್ಲಿಯವರೆಗೂ ಅಶ್ವಿನ್ ಗೆ ಎಷ್ಟು ವರ್ಷಗಳಾಗುತ್ತವೆ? ಅಲ್ಲದೆ ಅವರು ಫಿಟ್ ಇರುತ್ತಾರೆಯೇ ಅನ್ನುವುದೇ ಪ್ರಶ್ನೆ.
ಟೆಸ್ಟ್ ಆಡುತ್ತಿರುವ ಪ್ರಪಂಚದ ಆಟಗಾರರಲ್ಲಿ ಹಿರಿತನದ ದೃಷ್ಟಿಯಿಂದ 9 ನೇ ಸ್ಥಾನ ಅಶ್ವಿನ್ ಅವರದ್ದು. ಭಾರತ ತಂಡದಲ್ಲೇ ಅತ್ಯಂತ ಹಿರಿಯನಾದ ಈ ಆಟಗಾರನಿಗೆ ಈಗ 36 ವರ್ಷ ವಯಸ್ಸು. ಇನ್ನೈದು ವರ್ಷ ಏನಾದರೂ ಅಶ್ವಿನ್ ಟೆಸ್ಟ್ ಕ್ರಿಕೆಟ್ ಆಡಿದರೆ ಒಟ್ಟು 42 ಟೆಸ್ಟ್ ಗಳು ಆಡಲು ಸಿಗುತ್ತವೆ. ಈಗಿರುವ ಸರಾಸರಿಯಲ್ಲೇ ಆಡಿದರೆ ಇನ್ನೂ 200 ವಿಕೆಟ್ ಗಳಿಸಲು ಶಕ್ತ ಅಶ್ವಿನ್. ಹಾಗಾದಲ್ಲಿ ನಿವೃತ್ತಿ ಆಗುವ ವೇಳೆಗೆ ಪ್ರಪಂಚದ ಬೌಲಿಂಗ್ ವಿಭಾಗದಲ್ಲಿ ಮುತ್ತಯ್ಯ ಮುರಳೀಧರನ್ ಶೇನ್ ವಾರ್ನ್ ಮತ್ತು ಕುಂಬ್ಳೆಯಂಥ ದಿಗ್ಗಜರ ಸಾಲಿನಲ್ಲಿ ಅಶ್ವಿನ್ ವಿರಾಜಮಾನರಾಗಲಿದ್ದಾರೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ.
ಅಶ್ವಿನ್ ಇನ್ನೂ ಅನೇಕ ದಾಖಲೆಗಳನ್ನು ಮುರಿದು ಹೊಸಾ ದಾಖಲೆಗಳನ್ನು ಸೃಷ್ಟಿಸಲಿ, ಪದ್ಮಶ್ರೀ, ಪದ್ಮಭೂಷಣ, ಪದ್ಮವಿಭೂಷಣಗಳಂಥಾ ಗೌರವವನ್ನು ಪಡೆಯಲಿ.
ಇದನ್ನೂ ಓದಿ ’ R Ashwin | ಟೀಮ್ ಇಂಡಿಯಾದ ಸ್ಪಿನ್ ಬೌಲರ್ ಆರ್ ಅಶ್ವಿನ್ ಅವರ ಟೆಸ್ಟ್ ಬೌಲಿಂಗ್ ಸಾಧನೆ ಈ ರೀತಿ ಇದೆ