Site icon Vistara News

Rahul Dravid: ಭಾರತ ಕ್ರಿಕೆಟ್‌ ತಂಡ ಕೋಚ್‌ ಆಗಿ ಮುಂದುವರಿಯಲು ರಾಹುಲ್‌ ದ್ರಾವಿಡ್‌ಗೆ ಬಿಸಿಸಿಐ ಆಫರ್‌

rahul dravid

ಹೊಸದಿಲ್ಲಿ: ಭಾರತ ಕ್ರಿಕೆಟ್‌ ಟೀಮ್‌ನ ಕೋಚ್‌ ಆಗಿ ಮುಂದುವರಿಯುವ ಆಫರ್‌ ಅನ್ನು ಬಿಸಿಸಿಐ (BCCI) ರಾಹುಲ್ ದ್ರಾವಿಡ್‌ಗೆ (Rahul Dravid) ನೀಡಿದೆ. ಕಳೆದ ವಾರ ಬಿಸಿಸಿಐ ದ್ರಾವಿಡ್ ಅವರನ್ನು ಈ ಕುರಿತು ಸಂಪರ್ಕಿಸಿದೆ. ಆದರೆ, ದ್ರಾವಿಡ್ ಈ ಪ್ರಸ್ತಾಪವನ್ನು ಒಪ್ಪಿಕೊಂಡಿದ್ದಾರೆಯೇ ಎಂಬುದು ಇನ್ನೂ ದೃಢಪಟ್ಟಿಲ್ಲ.

ಕಳೆದ ಎರಡು ವರ್ಷಗಳಿಂದ ಭಾರತ ತಂಡಕ್ಕೆ (India cricket team) ಕೋಚ್‌ ಆಗಿದ್ದಾರೆ. ವಿಶ್ವಕಪ್‌ನ ಫೈನಲ್‌ವರೆಗೂ (ICC world cup final) ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿರುವ ದ್ರಾವಿಡ್ ಅವರನ್ನು ಕಳೆದುಕೊಳ್ಳಲು ಬಿಸಿಸಿಐ ಸಿದ್ಧವಿಲ್ಲ. ಅವರನ್ನು ಕೈಬಿಡುವುದರಿಂದ ಟೀಮ್‌ನ ಕಳೆದೆರಡು ವರ್ಷಗಳ ನಿರಂತರತೆಗೆ ಧಕ್ಕೆಯಾಗಲಿದೆ. ಹೊಸ ಮುಖ್ಯ ಕೋಚ್ ನೇಮಕದಿಂದ ಆಗುವ ಬದಲಾವಣೆಗಳಿಗೆ ಸಮಿತಿ ಇದೀಗ ಸಿದ್ಧವಿಲ್ಲ.

ದ್ರಾವಿಡ್‌ ಕೋಚ್‌ ಆಗಿ ಮುಂದುವರಿಯಲು ಒಪ್ಪಿದರೆ, ಅವರ ಮೊದಲ ಅಸೈನ್‌ಮೆಂಟೇ ಡಿಸೆಂಬರ್‌ನಲ್ಲಿ ನಡೆಯಲಿರುವ ದಕ್ಷಿಣ ಆಫ್ರಿಕಾ ಟೂರ್‌ ಆಗಿರಲಿದೆ. ಡಿಸೆಂಬರ್‌ 10ರಿಂದ ವೈಟ್‌ ಬಾಲ್‌ ಸರಣಿ ಶುರುವಾಗಲಿದೆ. ಮೂರು ಟಿ20 ಪಂದ್ಯಗಳು ಹಾಗೂ ಏಕದಿನ ಪದ್ಯಗಳು, ಎರಡು ಟೆಸ್ಟ್‌ಗಳು ನಡೆಯಲಿವೆ. ಜನವರಿ ನಂತರ ತವರಿನಲ್ಲಿ ಇಂಗ್ಲೆಂಡ್‌ ವಿರುದ್ಧ ಐದು ಪಂದ್ಯಗಳ ಟೆಸ್ಟ್‌ ಸರಣಿ ನಡೆಯಲಿದೆ. ಜೂನ್‌ನಲ್ಲಿ T20 ಪಂದ್ಯಗಳು ಶುರುವಾಗುತ್ತವೆ.

2021ರಲ್ಲಿ ಟಿ20 ವಿಶ್ವಕಪ್‌ ಬಳಿಕ, ಕೋಚ್‌ ಆಗಿದ್ದ ರವಿಶಾಸ್ತ್ರಿ ನಿರ್ಗಮನದಿಂದ ತೆರವಾದ ಸ್ಥಾನವನ್ನು ದ್ರಾವಿಡ್‌ ವಹಿಸಿದ್ದರು. ಇತ್ತೀಚೆಗೆ ಮುಗಿದ ವಿಶ್ವಕಪ್‌ ಪಂದ್ಯಾವಳಿಯೊಂದಿಗೆ ಎರಡು ವರ್ಷಗಳ ದ್ರಾವಿಡ್‌ ಅವಧಿ ಮುಗಿದಿದೆ. ಕಳೆದ ಜೂನ್‌ನಲ್ಲಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ನಲ್ಲಿ ಕೂಡ ಆಸ್ಟ್ರೇಲಿಯಾ ಎದುರು ಭಾರತ ತಂಡ ಸೋತಿತ್ತು. ಅದಕ್ಕೂ ಮುನ್ನ ಇಂಗ್ಲೆಂಡ್‌ ಎದುರು T20 ವಿಶ್ವಕಪ್‌ನ ಫೈನಲ್‌ನಲ್ಲಿ 2022ರಲ್ಲಿ ಸೋತಿತ್ತು.

ದ್ರಾವಿಡ್ ಮುಂದುವರಿದರೆ, ಅವರು 2021ರಲ್ಲಿ ಕೈಜೋಡಿಸಿದ ಅದೇ ಸಹಾಯಕ ಕೋಚ್‌ಗಳನ್ನು ಉಳಿಸಿಕೊಳ್ಳುವ ನಿರೀಕ್ಷೆಯಿದೆ: ವಿಕ್ರಮ್ ರಾಥೋರ್ (ಬ್ಯಾಟಿಂಗ್ ಕೋಚ್), ಪಾರಸ್ ಮಾಂಬ್ರೆ (ಬೌಲಿಂಗ್ ಕೋಚ್), ಮತ್ತು ಟಿ. ದಿಲೀಪ್ (ಫೀಲ್ಡಿಂಗ್ ಕೋಚ್).

ವಿಶ್ವಕಪ್ ಫೈನಲ್ ಸೋಲಿನ ನಂತರ ಮಾತನಾಡಿದ ದ್ರಾವಿಡ್, “ಜಾಗತಿಕ ಟ್ರೋಫಿ ಕೈಜಾರಿದುದು ನಿರಾಶೆಯಾಗಿದ್ದರೂ, ಕ್ರಿಕೆಟ್‌ನ ಮೂರೂ ಮಾದರಿಗಳಲ್ಲಿ ಭಾರತವು ನಂ. 1 ರ್ಯಾಂಕಿಂಗ್‌ನಲ್ಲಿದೆ ಎಂದು ಹೆಮ್ಮೆಪಡುತ್ತೇನೆ” ಎಂದು ಹೇಳಿದ್ದರು. ನೀವು ಕೋಚ್‌ ಆಗಿ ಮುಂದುವರಿಯಲು ಬಯಸುತ್ತೀರಾ ಎಂಬ ಪ್ರಶ್ನೆಗೆ, ವಿಶ್ವಕಪ್‌ಗಾಗಿ ತಯಾರಿಯಲ್ಲಿ ಮುಳುಗಿರುವ ನಾನು ಅದರ ಬಗ್ಗೆ ಯೋಚಿಸಿಲ್ಲ ಎಂದಿದ್ದರು. “ನನಗೆ ಅದರ ಬಗ್ಗೆ ಯೋಚಿಸಲು ಸಮಯವಿಲ್ಲ. ಸಮಯ ಬಂದಾಗ ಅದರ ಬಗ್ಗೆ ಯೋಚಿಸುತ್ತೇನೆʼʼ ಎಂದಿದ್ದರು.

ಇದನ್ನೂ ಓದಿ: Rahul Dravid: ಮತ್ತೆ ಐಪಿಎಲ್​ ಕೋಚಿಂಗ್​ನತ್ತ ಮುಖ ಮಾಡಿದ ರಾಹುಲ್‌ ದ್ರಾವಿಡ್‌!

Exit mobile version