ಚೀನಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್‌ನಲ್ಲಿ (Asian Games) ಭಾರತೀಯ ಕ್ರೀಡಾಡುಗಳ ಆತ್ಮವಿಶ್ವಾಸ ಹಾಗೂ ಪ್ರದರ್ಶನದ ಗುಣಮಟ್ಟವನ್ನು ಕುಗ್ಗಿಸುವ ಕೆಲಸವನ್ನು ಚೀನಾ ಮಾಡುತ್ತಿದೆ. ಸ್ವಜನ ಪಕ್ಷಪಾತ ಹಾಗೂ ವಿವಾದಗಳು ನಿರಂತರವಾಗಿ ನಡೆಯುತ್ತಿವೆ. ಬೇರೆ ದೇಶಗಳ ಅದರಲ್ಲೂ ಭಾರತೀಯ ಅಥ್ಲೀಟ್ಗಳ ವಿಚಾರದಲ್ಲಿ ಅಲ್ಲಿನ ಅಧಿಕಾರಿಗಳು ಉದ್ದೇಶಪೂರ್ವಕ ತಪ್ಪುಗಳನ್ನು ಮಾಡುತ್ತಿದ್ದಾರೆ. ಈ ಮೂಲಕ ಭಾರತದ ಅಥ್ಲೀಟ್ಗಳ ಮಾನಸಿಕ ಸ್ಥೈರ್ಯವನ್ನು ಕುಗ್ಗಿಸುವ ಕೆಲಸ ಮಾಡಲಾಗುತ್ತಿದೆ. ಈ ಆರೋಪಗಳಿಗೆ ಸಾಕಷ್ಟು ಉದಾಹರಣೆಗಳೂ ಲಭಿಸುತ್ತಿವೆ. ಈ ಬಗ್ಗೆ ವಿವರಗಳೊಂದಿಗೆ ಮಾತನಾಡಿರುವ ಭಾರತದ ಮಾಜಿ ಅಥ್ಲೀಟ್ ಅಂಜು ಬಾಬಿ ಜಾರ್ಜ್ ಅವರು, ಹರ್ಡಲ್ಸ್ ವೇಳೆ ಜ್ಯೋತಿ ಯರ್ರಾಜಿ, ಮಹಿಳೆಯರ ಜಾವೆಲಿನ್ ಎಸೆತದ ವೇಳೆ ಅನ್ನುರಾಣಿ, ಪುರುಷರ ಜಾವೆಲಿನ್ ಎಸೆತದ ವೇಳೆ ನೀರಜ್ ಚೋಪ್ರಾ ಹಾಗೂ ಕಿಶೋರ್ ಕುಮಾರ್ ಜೆನಾ ಅವರ ಮಾನಸಿಕ ಸ್ಥೈಯವನ್ನು ಕುಗ್ಗಿಸುವ ಕೆಲಸ ಮಾಡಲಾಗಿದೆ ಎಂದು ಹೇಳಿದ್ದಾರೆ.
ನಮ್ಮವರು ಚೀನಾದಲ್ಲಿ ನಡೆಯುತ್ತಿರುವ ಹಾಲಿ ಆವೃತ್ತಿಯ ಏಷ್ಯನ್ ಗೇಮ್ಸ್‌ನಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ದಾಖಲೆ ಪದಕಗಳ ಸಾಧನೆ ಮಾಡುವ ಹಾದಿಯಲ್ಲಿದ್ದಾರೆ. ಚೀನಾದಲ್ಲಿ ಪದಕ ಗೆಲ್ಲುವುದು ನಮ್ಮ ಅಥ್ಲೀಟ್ಗಳ ಪಾಲಿಗೆ ಸವಾಲಿನ ಸಂಗತಿಯಾಗಿತ್ತು. ಅಲ್ಲಿನ ಕ್ರೀಡಾಕೂಟದ ಅಧಿಕಾರಿಗಳು ಭಾರತದ ಅಥ್ಲೀಟ್ಗಳಿಗೆ ಮೋಸ ಮಾಡಲು ಯತ್ನಿಸಿದ್ದಾರೆ. ಭಾರತದ ನೀರಜ್ ಚೋಪ್ರಾ ಮತ್ತು ಕಿಶೋರ್ ಜೆನಾ ಭಾಗವಹಿಸಿದ್ದ ಪುರುಷರ ಜಾವೆಲಿನ್ ಥ್ರೋ ಫೈನಲ್ನಲ್ಲಿ ಚೀನಾದ ಅಧಿಕಾರಿಗಳು ಉದ್ದೇಶಪೂರ್ವಕ ತಪ್ಪುಗಳನ್ನು ಮಾಡಿದ್ದಾರೆ. ನೀರಜ್ ಚೋಪ್ರಾ ಅವರ ಮೊದಲ ಎಸೆತವು ಸ್ಪಷ್ಟವಾಗಿ 85 ಮೀಟರ್ ಗಡಿಯನ್ನು ದಾಟಿದ್ದರೂ, ಕೆಲವು ತಾಂತ್ರಿಕ ಸಮಸ್ಯೆ ಇದೆ ಎಂದು ಅಧಿಕಾರಿಗಳು ಉದ್ದೇಶಪೂರ್ವಕವಾಗಿ ಎಸೆತವನ್ನು ದಾಖಲು ಮಾಡಲಿಲ್ಲ. ಅದೇ ಸ್ಪರ್ಧೆಯಲ್ಲಿ, ಕಿಶೋರ್ ಜೆನಾ ಅವರ ಎರಡನೇ ಎಸೆತವನ್ನು ಫೌಲ್ ಎಂದು ಪರಿಗಣಿಸಿದ್ದರು. ಆದರೆ ಜೆನಾ ನಂತರ ಬೆಳ್ಳಿ ಪದಕಕ್ಕೆ ಅರ್ಹರೆಂದು ಗೊತ್ತಾಯಿತು. 100 ಮೀಟರ್ ಹರ್ಡಲ್ಸ್ನಲ್ಲಿ ಜ್ಯೋತಿ ಯರ್ರಾಜಿ ಅವರಿಗೂ ಅನ್ಯಾಯ ಮಾಡಲು ಅಧಿಕಾರಿಗಳು ಯತ್ನಿಸಿದ್ದರು. ಭಾರತವು ಆಕ್ಷೇಪ ಮಾಡಿದ ಬಳಿಕ ಚೀನಾ ಸ್ಪರ್ಧಾಳುವನ್ನು ಅಮಾನತು ಮಾಡಿ ಜ್ಯೋತಿಗೆ ಬೆಳ್ಳಿಯ ಪದಕ ಕೊಟ್ಟಿದ್ದಾರೆ.
ಈ ಎಲ್ಲಾ ಪ್ರಕರಣಗಳಲ್ಲೂ ಭಾರತೀಯ ಅಧಿಕಾರಿಗಳು ಪ್ರತಿಭಟಿಸಿದ ನಂತರ ಈ ಸಮಸ್ಯೆಯನ್ನು ತಕ್ಷಣ ಪರಿಹರಿಸಲಾಯಿತು. ಅಂದರೆ ಚೀನಾದ ಅಧಿಕಾರಿಗಳು ಕ್ರೀಡಾಕೂಟದ ಉದ್ದಕ್ಕೂ ಈ ರೀತಿಯ ಉದ್ದೇಶಪೂರ್ವಕ ತಪ್ಪುಗಳನ್ನು ಮಾಡಲು ಯತ್ನಿಸಿದ್ದಾರೆ ಎಂಬುದು ಸ್ಪಷ್ಟ. ಇದರಿಂದ ಚೀನಾಕ್ಕೆ ಏನು ದೊರೆಯುತ್ತದೆ? ಕಳಂಕ ಮಾತ್ರವೇ ಮೆತ್ತಿಕೊಳ್ಳುತ್ತದೆ ಹೊರತು ಇನ್ನೇನೂ ಆಗದು. ಚೀನಾ ಏಷ್ಯನ್ ಗೇಮ್ಸ್‌ನಲ್ಲಿ ಸಾಕಷ್ಟು ಪದಕಗಳನ್ನು ಗೆದ್ದುಕೊಂಡಿದೆ. ಇನ್ಯಾವ ದೇಶಕ್ಕೂ ಚೀನಾದ ಸನಿಹಕ್ಕೂ ಬರಲೂ ಆಗದು; ಅಷ್ಟೂ ಪದಕಗಳನ್ನು ಅದು ಬುಟ್ಟಿಗೆ ಹಾಕಿಕೊಂಡಿದೆ. ಚೀನಾ ಅದಕ್ಕೆ ಅರ್ಹವೇ ಇದೆ ಎನ್ನೋಣ. ಅಲ್ಲಿನ ಕ್ರೀಡಾಳುಗಳ ಸಂಖ್ಯೆಯೂ ಹೆಚ್ಚು, ಅಥ್ಲೆಟಿಕ್ಸ್ ಮುಂತಾದ ಕ್ರೀಡೆಗಳಲ್ಲಿ ಅದರ ಸಾಧನೆಯೂ ಭರ್ಜರಿ. ಅಂತಾರಾಷ್ಟ್ರೀಯ ಕ್ರೀಡಾಕೂಟಗಳಿಗಾಗಿಯೇ ಅಲ್ಲಿನ ಪ್ರತಿಭೆಗಳನ್ನು ಬಾಲ್ಯದಿಂದಲೂ ಭಾರಿ ಪರಿಶ್ರಮದಿಂದ ಸಿದ್ಧಪಡಿಸಲಾಗುತ್ತದೆ ಎನ್ನುವುದು ನಮಗೆ ಗೊತ್ತಿದೆ. ಪ್ರತಿಭೆಗೂ ಪರಿಶ್ರಮಕ್ಕೂ ಮತ್ಸರ ಬೇಕಿಲ್ಲ. ಆದರೆ ಇತರ ದೇಶಗಳ ಕ್ರೀಡಾಸಾಧನೆಗೆ ಕಲ್ಲು ಹಾಕುವುದರಿಂದ ವಂಚಕ ದೇಶ ಎಂಬ ಹೆಸರು ಮಾತ್ರ ಕ್ರೀಡಾ ಇತಿಹಾಸದಲ್ಲಿ ಚೀನಾಕ್ಕೆ ಉಳಿಯಲಿದೆ.
ಇದನ್ನೂ ಓದಿ : ವಿಸ್ತಾರ ಸಂಪಾದಕೀಯ: ವಿಶ್ವಕಪ್ ನಲ್ಲಿ ಹೊಸ ದಾಖಲೆಗಳು ಹುಟ್ಟಲಿ, ಅಂತಿಮವಾಗಿ ಕ್ರಿಕೆಟ್ ಗೆಲ್ಲಲಿ
ಕ್ರೀಡಾಸ್ಫೂರ್ತಿಯ ಬಗೆಗೆ ನಾವು ಮಾತನಾಡುತ್ತೇವೆ. ಕ್ರೀಡಾಸ್ಫೂರ್ತಿ ಎಂದರೆ ಇನ್ನೇನಲ್ಲ, ಸಾಧ್ಯವಾದಷ್ಟೂ ಗೆಲುವನ್ನು ಸಾಧಿಸಲು ಪ್ರಾಮಾಣಿಕವಾಗಿ ಪರಿಶ್ರಮಿಸುವುದು, ಸೋತರೆ ಸೋಲನ್ನು ದಿಟ್ಟವಾಗಿ ಒಪ್ಪಿಕೊಳ್ಳುವುದು ಮತ್ತು ಮರು ಪ್ರಯತ್ನಿಸುವುದು. ಸೋಲನ್ನು ಒಪ್ಪಿಕೊಳ್ಳಲಾಗದೆ ವಂಚನೆಯ ಹಾದಿ ಹಿಡಿದಿರುವ ಚೀನಾದ ಮಾರ್ಗ ಅದರ ಒಟ್ಟಾರೆ ಕುತ್ಸಿತ ಬುದ್ಧಿಗೆ ಅನುಗುಣವಾಗಿಯೇ ಇದೆ ಎನ್ನಬಹುದು. ಅದು ಭಾರತದ ವಿಷಯದಲ್ಲಿ ಗಡಿಯಲ್ಲಿ ಮಾಡುತ್ತಿರುವುದೂ ಅದನ್ನೇ ತಾನೆ. ರಕ್ಷಣಾ ವಲಯದಲ್ಲಿ ತಾನು ಕೈಗೊಳ್ಳುತ್ತಿರುವ ವಂಚಕ ನಡೆಗಳನ್ನು ಅದು ಕ್ರೀಡೆಗೆ ವಿಸ್ತರಿಸಿದೆ ಎಂದಾಯಿತು. ಈ ಬಗ್ಗೆ ಏಷ್ಯನ್ ಗೇಮ್ಸ್ ಫೆಡರೇಶನ್‌ನಲ್ಲಿ ದೂರು ದಾಖಲಿಸುವ ಬಗ್ಗೆ ಅಂಜು ಬಾಬಿ ಹೇಳಿದ್ದಾರೆ. ದೂರು ದಾಖಲಿಸಿ ಸೂಕ್ತ ತನಿಖೆ ನಡೆಯುವಂತೆ ನೋಡಿಕೊಳ್ಳಬೇಕು. ಈ ಹಿಂದೆ ಅರುಣಾಚಲ ಪ್ರದೇಶದ ಕ್ರೀಡಾಳುಗಳನ್ನು ಒಳಬಿಟ್ಟುಕೊಳ್ಳದೆ ಭಾರತದ ಕುರಿತು ತನ್ನ ವಂಚನೆಯ ಇನ್ನೊಂದು ಇನ್ನೊಂದು ಮುಖವನ್ನು ಚೀನಾ ತೋರಿಸಿತ್ತು. ಇದರಿಂದ ಭಾರತದ ಸಾಧನೆಗೇನೂ ಕುಂದಿಲ್ಲ ಎನ್ನೋಣ. ಆದರೆ ಅರ್ಹವಾಗಿಯೇ ನಮಗೆ ಸಲ್ಲಬೇಕಾದ ಪದಕ, ಸ್ಥಾನಮಾನಗಳ ವಿಚಾರದಲ್ಲಿ ರಾಜಿ ಮಾಡಿಕೊಳ್ಳುವ ಮಾತಿಲ್ಲ.