ನವದೆಹಲಿ: ಐಸಿಸಿ ಏಕದಿನ ವಿಶ್ವಕಪ್ ಟೂರ್ನಿ (ICC Cricket World Cup 2023)ಗೆ ಅದ್ಧೂರಿಯಾಗಿ ತೆರೆ ಎಳೆಯಲಾಗಿದೆ. ನವೆಂಬರ್ 19ರಂದು ನಡೆದ ಫೈನಲ್ ಪಂದ್ಯದಲ್ಲಿ ಭಾರತ ತಂಡವನ್ನು ಸೋಲಿಸಿ ಆಸ್ಟ್ರೇಲಿಯಾ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಫೈನಲ್ ಪಂದ್ಯ ವೀಕ್ಷಣೆಗೆ ಪ್ರಧಾನಮಂತ್ರಿ ನರೆಂದ್ರ ಮೋದಿ (Narendra Modi) ಸ್ಟೇಡಿಯಮ್‌ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಆಗಮಿಸಿದ್ದರು. ಮೋದಿ ʼಪನೌತಿʼ (ದುರದೃಷ್ಟದ ವ್ಯಕ್ತಿ). ಇದರಿಂದಲೇ ಭಾರತ ಸೋಲು ಕಂಡಿತ್ತು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಲೇವಡಿ ಮಾಡಿದ್ದರು. ಇದೀಗ ಈ ಚರ್ಚೆಗೆ ಪಾಕಿಸ್ತಾನದ ಮಾಜಿ ಮಾಜಿ ಕ್ರಿಕೆಟಿಗ ದಾನಿಶ್ ಕನೇರಿಯಾ (Danish Kaneria) ಎಂಟ್ರಿ ಕೊಟ್ಟಿದ್ದು, ಹೆಸರು ಹೇಳದೆ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
Panauti kaun? 😂
— Danish Kaneria (@DanishKaneria61) December 3, 2023
ದಾನಿಶ್ ಕನೇರಿಯಾ ಹೇಳಿದ್ದೇನು?
ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ದಾನಿಶ್ ಕನೇರಿಯಾ “ಪನೌತಿ ಕೌನ್?” (ಈಗ ಯಾರು ದುರದೃಷ್ಟವಂತರು?) ಎಂದು ಪ್ರಶ್ನಿಸಿದ್ದಾರೆ. ಮಧ್ಯ ಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್‌ಗಢ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋತಿದ್ದು, ಇದನ್ನೇ ಮುಂದಿಟ್ಟುಕೊಂಡು ಅವರು ರಾಹುಲ್ ಗಾಂಧಿಯ ಕಾಲೆಳೆದಿದ್ದಾರೆ. ಈ ಮೂರು ರಾಜ್ಯಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆ.
ಮಾಜಿ ಕ್ರಿಕೆಟಿಗ ತಮ್ಮ ಪೋಸ್ಟ್‌ನಲ್ಲಿ ಯಾರ ಹೆಸರನ್ನೂ ಉಲ್ಲೇಖಿಸಿಲ್ಲ. ಆದರೂ ಬಹುತೇಕರು ಇದು ರಾಹುಲ್ ಗಾಂಧಿ ಅವರನ್ನು ಉದ್ದೇಶಿಸಿಯೇ ಹೇಳಿದ್ದು ಎಂದು ಊಹಿಸಿದ್ದಾರೆ. ರಾಜಸ್ಥಾನ ಮತ್ತು ಛತ್ತೀಸ್‌ಗಢದಲ್ಲಿ ಅಧಿಕಾರ ಉಳಿಸಿಕೊಳ್ಳುವಲ್ಲಿ ಕಾಂಗ್ರೆಸ್ ವಿಫಲವಾಗಿದೆ. ಈ ಮಧ್ಯೆ ತೆಲಂಗಾಣದಲ್ಲಿ ಗದ್ದುಗೆಗೆ ಏರಿದ್ದೊಂದೇ ಕೈ ಪಡೆಗೆ ಸ್ವಲ್ಪ ಮಟ್ಟಿನ ಸಮಾಧಾನ ತಂದಕೊಟ್ಟ ಯಶಸ್ಸು.
ರಾಹುಲ್ ಗಾಂಧಿ ಹೇಳಿದ್ದೇನು?
ರಾಜಸ್ಥಾನದಲ್ಲಿ ನಡೆದ ಚುನಾವಣೆ ರ‍್ಯಾಲಿಯಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ, ಭಾರತ ತಂಡ ಸೋತಿದ್ದಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ʼಪನೌತಿʼ (ದುರದೃಷ್ಟದ ವ್ಯಕ್ತಿ) ಎಂದು ಕರೆದಿದ್ದರು. ಮೋದಿ ಕ್ರೀಡಾಂಗಣಕ್ಕೆ ಪ್ರವೇಶಿಸಿದ್ದರಿಂದ ಪಂದ್ಯವನ್ನು ಭಾರತ ತಂಡ ಸೋತಿತು ಎಂದು ಆರೋಪಿಸಿದ್ದರು.
ಈ ಮಧ್ಯೆ ಬಿಜೆಪಿ ನಾಯಕ ಸಿ.ಟಿ.ರವಿ ಕೂಡ ರಾಹುಲ್ ಗಾಂಧಿ ಹೇಳಿಕೆಗೆತಿರುಗೇಟು ನೀಡಿದ್ದಾರೆ. ‘ಅತಿ ದೊಡ್ಡ ಪನೌತಿ ಯಾರು?’ ಎಂದು ಪ್ರಶ್ನಿಸಿದ್ದಾರೆ. ಅವರು ಒಂದು ಹೆಜ್ಜು ಮುಂದೆ ಹೋಗಿ ತಮ್ಮ ಎಕ್ಸ್ ಪೋಸ್ಟ್‌ನಲ್ಲಿ ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ ಅವರನ್ನು ಟ್ಯಾಗ್ ಮಾಡಿದ್ದರು. ಸದ್ಯ ದಾನಿಶ್ ಕನೇರಿಯಾ ಪೋಸ್ಟ್ ಸಾಕಷ್ಟು ಚರ್ಚೆ ಹುಟ್ಟು ಹಾಕಿದೆ. ಪರ ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿದೆ.
ಇದನ್ನೂ ಓದಿ: ಇಲ್ಲ, ಆಕೆ ನನ್ನನ್ನು ಪಿಎಂ ಮಾಡಲ್ಲ! ಪ್ರಣಬ್ ಮುಖರ್ಜಿ ಹಾಗೇಕೆ ಹೇಳಿದ್ದು?
ಯಾರು ಈ ದಾನಿಶ್ ಕನೇರಿಯಾ?
ಪಾಕಿಸ್ತಾನದ ಮಾಜಿ ಕ್ರಿಕೆಟಿಗ ದಾನಿಶ್ ಕನೇರಿಯಾ 2000 ಮತ್ತು 2010ರ ನಡುವೆ ಪಾಕಿಸ್ತಾನ ರಾಷ್ಟ್ರೀಯ ಕ್ರಿಕೆಟ್ ತಂಡದ ಪರವಾಗಿ ಆಡಿದ್ದಾರೆ. ಗೂಗ್ಲಿ ಬೌಲಿಂಗ್ ಮಾಡಬಲ್ಲ ಬಲಗೈ ಲೆಗ್ ಸ್ಪಿನ್ನರ್ ಆಗಿದ್ದ ಕನೇರಿಯಾ ಪಾಕಿಸ್ತಾನ ಪರ 61 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ ಮತ್ತು 34.79 ಸರಾಸರಿಯಲ್ಲಿ 261 ವಿಕೆಟ್ ಪಡೆದುಕೊಂಡಿದ್ದಾರೆ. ಜತೆಗೆ 18 ಏಕದಿನ ಪಂದ್ಯಗಳಲ್ಲಿ ಕಣಕ್ಕಿಳಿದಿದ್ದಾರೆ. ಅವರು ತಮ್ಮ ಸೋದರ ಸಂಬಂಧಿ ಅನಿಲ್ ದಳಪತ್ ನಂತರ ಪಾಕಿಸ್ತಾನ ತಂಡವನ್ನು ಪ್ರತಿನಿಧಿಸಿದ ಎರಡನೇ ಹಿಂದೂ ಮತ್ತು ಒಟ್ಟಾರೆಯಾಗಿ ಏಳನೇ ಮುಸ್ಲಿಮೇತರ ಆಟಗಾರರಾಗಿದ್ದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ