ಕಾರ್ ಅಪಘಾತದಲ್ಲಿ ಅನ್ಯಾಯವಾಗಿ ಮರಣಕ್ಕೀಡಾದ ಆಸ್ಟ್ರೇಲಿಯದ ಕ್ರಿಕೆಟರ್ Andrew Simonds ಜೊತೆ ಭಾರತಕ್ಕೆ ಹಲವು ಕನೆಕ್ಷನ್‌ಗಳಿವೆ. ಮೊದಲನೆಯದಾಗಿ ಆತ ಭಾರತ ಕ್ರಿಕೆಟ್ ಟೀಮಿಗೆ ಸಿಂಹಸ್ವಪ್ನವಾಗಿದ್ದ ಆಸ್ಟ್ರೇಲಿಯ ಟೀಮಿನ ಸದಸ್ಯನಾಗಿದ್ದ. ಹರ್ಭಜನ್ ಜೊತೆಗಿನ ʼಮಂಕಿಗೇಟ್ʼ ಹಗರಣವನ್ನು ಮುನ್ನೆಲೆಗೆ ತಂದವನು. ಆಸ್ಟ್ರೇಲಿಯ- ಭಾರತ ಕ್ರಿಕೆಟ್ ಸಂಬಂಧ ಈ ಪ್ರಕರಣದ ಬಳಿಕ ಸ್ವಲ್ಪ ಹಳಸಿದಂತಾಯಿತು. ಆದರೆ ಆ್ಯಂಡ್ರ್ಯೂ ಸೈಮಂಡ್ಸ್ ವೈಯಕ್ತಿಕ ಪ್ರತಿಭೆ ಅದನ್ನೆಲ್ಲ ಮುಚ್ಚಿಹಾಕಿತು ಎನ್ನಬಹುದು.
ನೂರಾರು ಜನ ಅಂಗಣದಲ್ಲಿ ಇದ್ದರೂ ಇವನನ್ನು ಸುಲಭವಾಗಿ ಗುರುತಿಸಬಹುದಾಗಿತ್ತು. ಅವನ ತಲೆ ಮೇಲೆ ಕೂತಿದ್ದ ಗ್ರೀನ್ ಕ್ಯಾಪ್‌ನ ಸಂದಿಯಿಂದ ಹೊರಬಂದು ಹಾರಾಡುತ್ತಿದ್ದ ಗುಂಗುರು ಕಪ್ಪು ಕೂದಲ ಸುರುಳಿಗಳು, ದಪ್ಪ ತುಟಿಯ ಮೇಲೆ ಬಳಿದುಕೊಂಡ ಬಿಳಿ ಝಿಂಕ್ ಕ್ರೀಮ್‌ಗಳು ಅವನ ಟ್ರೇಡ್ ಮಾರ್ಕ್‌ಗಳಾಗಿದ್ದವು. ಎತ್ತರದ ಆಳ್ತನ ಅವನದು- ಆರಡಿ ಎರಡಿಂಚಿನ ಆಸಾಮಿ.
ಇಂದು ಅಪರೂಪ ಆಗುತ್ತಿರುವ ಆಟಗಾರರ ತಳಿಯಾದ ಆಲ್‌ರೌಂಡರ್ ಆಗಿದ್ದ ಸೈಮಂಡ್ಸ್. ಸ್ಪಿನ್ ಅಥವಾ ಮೀಡಿಯಂ ಪೇಸ್ ಬೌಲಿಂಗ್‌ನಲ್ಲಿ ಶಾರ್ಪ್ ಆಗಿದ್ದ. ದಪ್ಪ ಅಗಲ ಕೈಗಳು ಅವನ ಫೀಲ್ಡಿಂಗ್ ಅನ್ನು ಪರಿಣಾಮಕಾರಿಯಾಗಿಸಿದ್ದವು. ಅವನು ಗ್ರೇಟೆಸ್ಟ್ ಫೀಲ್ಡರ್‌ಗಳಲ್ಲಿ ಒಬ್ಬನಾಗಿದ್ದ. ಆದರೆ ಅವನು ಹೆಚ್ಚು ವಿಧ್ವಂಸಕನಾಗುತ್ತಿದ್ದುದು ಬ್ಯಾಟ್ ಹಿಡಿದಾಗ. 1998ರಿಂದ 2009ರ ವರೆಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿದ್ದ ಅವನ ಹೆಸರಿನಲ್ಲಿ 26 ಟೆಸ್ಟ್‌ಗಳು ಹಾಗೂ 198 ಏಕದಿನ ಪಂದ್ಯಗಳು ದಾಖಲಾಗಿವೆ. 2003 ಹಾಗೂ 2007ರ ಒನ್‌ಡೇ ವಿಶ್ವಕಪ್ ಪಂದ್ಯಾವಳಿಗಳಲ್ಲಿ ಆಸ್ಟ್ರೇಲಿಯ ತಂಡ ಗೆದ್ದಾಗ, ತಂಡದ ಸಮರ್ಥ ಅಂಗವಾಗಿದ್ದ. ಟೆಸ್ಟ್‌ನಲ್ಲಿ 1462 ರನ್ ಹಾಗೂ ಒನ್‌ಡೇ ಪಂದ್ಯಗಳಲ್ಲಿ 5088 ರನ್‌ಗಳನ್ನು ಕಲೆಹಾಕಿದ್ದಾನೆ. ಟೆಸ್ಟ್‌ನಲ್ಲಿ 40.6 ಮತ್ತು ಏಕದಿನದಲ್ಲಿ 39.8 ಸರಾಸರಿ ರನ್‌ರೇಟ್ ಸಾಧಿಸಿದ್ದ.
2008ರಲ್ಲಿ ಸಿಡ್ನಿಯಲ್ಲಿ ಭಾರತ- ಆಸ್ಟ್ರೇಲಿಯಾ ಟೆಸ್ಟ್ ಪಂದ್ಯ ನಡೆಯಿತು. ಅದು ಆ್ಯಂಡ್ರ್ಯೂ ಸೈಮಂಡ್ಸ್ನ ಬೆಸ್ಟ್ ಇನ್ನಿಂಗ್ಸ್. ನಾಟೌಟ್ 162 ರನ್ ಬಾರಿಸಿದ. ಆದರೆ ಈ ಸಾಧನೆಯ ಮೇಲೆ ಮಂಕಿಗೇಟ್ ಹಗರಣ ಕಪ್ಪು ಮಸುಕು ಹೊದೆಸಿತು. ಭಾರತೀಯ ಬೌಲರ್ ಹರ್ಭಜನ್ ಸಿಂಗ್, ತನ್ನನ್ನು “ಮಂಕಿʼ ಎಂದು ಹೀಯಾಳಿಸಿದ ಎಂದು ಆ್ಯಂಡ್ರ್ಯೂ ಸೈಮಂಡ್ಸ್ ಆರೋಪಿಸಿದ. ಅದು ಜನಾಂಗೀಯ ನಿಂದನೆ ಎಂದು ಆಸ್ಟ್ರೇಲಿಯನ್ ಆಟಗಾರರು ತಗಾದೆಗೆ ನಿಂತುಬಿಟ್ಟರು. ಆದರೆ ತಾನು ಹಾಗೆ ಹೇಳಿಲ್ಲ, ಅದು ʼತೇರಿ ಮಾಕಿʼ ಎಂದದ್ದು ಎಂದು ಹರ್ಭಜನ್ ಸಾಧಿಸಿದ.
ಯಾವುದೇ ಕ್ರಿಕೆಟ್ ತಂಡ ಎದುರಿಗೆ ಇದ್ದರೂ ಸ್ಲೆಡ್ಜಿಂಗ್ ಮೂಲಕ ಅವರ ನೈತಿಕ ಧೈರ್ಯ ಕುಸಿಯುವಂತೆ ಮಾಡುವುದು ಆಸ್ಟ್ರೇಲಿಯನ್ ಕ್ರಿಕೆಟ್ ತಂಡ ಮೊದಲಿನಿಂದಲೂ ಅನುಸರಿಸಿಕೊಂಡು ಬಂದ ಕುಖ್ಯಾತ ರೂಢಿ. ಆದರೆ ಅವರ ನೆಲದಲ್ಲೇ, ಅವರಿಗೆ ಸೆಡ್ಡು ಹೊಡೆಯುವಂತೆ ನಿಂತ ಹರ್ಭಜನ್ ನಿಲುವು ಭಾರತೀಯರಿಗೆ ಖುಷಿ ಕೊಟ್ಟಿತು. Andrew Simonds ವಿಲನ್ ಎನಿಸಿಕೊಂಡ. ಇದಾದ ಬಳಿಕ ಅವನೇನೂ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹೆಚ್ಚು ದಿನ ಉಳಿಯಲಿಲ್ಲ. 18 ತಿಂಗಳ ಬಳಿಕ ವಿದಾಯ ಹೇಳಿದ.
ಆದರೆ ಇದೇ ಸಮಯದಲ್ಲಿ ಆರಂಭವಾದ ಇಂಡಿಯನ ಪ್ರೀಮಿಯರ್ ಲೀಗ್ಸ್ ಹಾಗೂ ಟಿ-ಟ್ವೆಂಟಿ ಆಟಗಳು ಕ್ರಿಕೆಟ್ ಆಟಗಾರರ ಸಾಧನೆ, ಭವಿಷ್ಯ, ಬಾಂಧವ್ಯಗಳಲ್ಲಿ ಹೊಸ ಸಮೀಕರಣಗಳನ್ನು ಬರೆದವು. 2011ರ ಐಪಿಎಲ್ ಪಂದ್ಯಾಟದಲ್ಲಿ ಮುಖಾಮುಖಿಯಾದಾಗ ಅವರಿಬ್ಬರೂ ಪರಸ್ಪರ ʼಸಾರಿʼ ಕೇಳಿಕೊಂಡರು. ಮೂರು ವರ್ಷ ಡೆಕ್ಕನ್ ಚಾರ್ಜರ್ಸ್ ತಂಡದಲ್ಲಿ ಆಡಿದ ಸೈಮಂಡ್ಸ್, ನಂತರ 2011ರಲ್ಲಿ ಮುಂಬಯಿ ಇಂಡಿಯನ್ಸ್ ತಂಡ ಸೇರಿಕೊಂಡ. ಆಗ ತಂಡದ ಕ್ಯಾಪ್ಟನ್ ಆಗಿದ್ದವನು ಹರ್ಭಜನ್ ಸಿಂಗ್. ಆ ಹೊತ್ತಿಗೆ ಇಬ್ಬರೂ ಯಾವುದೇ ಹಳೆಯ ಕಹಿಗಳನ್ನು ಉಳಿಸಿಕೊಳ್ಳದೆ ಆಪ್ತರಾಗಿದ್ದರು. ಹರ್ಭಜನ್‌ನನ್ನು ಸೈಮಂಡ್ಸ್ “ಸರ್ʼ ಎಂದು ಕರೆಯುತ್ತಿದ್ದ.
ಸೈಮಂಡ್ಸ್ ಸಾವಿಗೆ ತುಂಬಾ ಮಂದಿ ಶೋಕ ವ್ಯಕ್ತಪಡಿಸಿದ್ದಾರೆ. ಇದೆಲ್ಲದರ ನಡುವೆ ಮುಖ್ಯವಾಗುವುದು ಹರ್ಭಜನ್ ಏನು ಹೇಳಿದ್ದಾನೆ ಎಂಬುದು. ತನಗಾದ ಆಘಾತ, ಅಪನಂಬಿಕೆಯನ್ನು ಆತ ವ್ಯಕ್ತಪಡಿಸಿದ್ದಾನೆ. ʼʼನನಗಿದ್ದ ಆಪ್ತ ಗೆಳೆಯರಲ್ಲಿ ಅವನೊಬ್ಬ. ನಾವು ಹೇಗಿದ್ದೆವು ಎಂದರೆ, ರಾತ್ರಿ ಎರಡೂವರೆ ಹೊತ್ತಿನಲ್ಲಿ ನಾನು ಅವನಿಗೆ ಫೋನ್ ಮಾಡಿ, ಏನು ಮಾಡ್ತಿದೀಯ ಎಂದು ಕೇಳಬಹುದಾಗಿತ್ತು. ನಾವು ಜೊತೆಯಾಗಿ ಕೂತು ಕುಡಿಯುತ್ತಿದ್ದೆವು, ನಗುತ್ತಿದ್ದೆವು, ಸಾಕಷ್ಟು ಕತೆಗಳನ್ನು ಹಂಚಿಕೊಳ್ಳುತ್ತಿದ್ದೆವುʼʼ ಎಂದು ಹರ್ಭಜನ್ ಸಂದರ್ಶನವೊಂದರಲ್ಲಿ ಹೇಳಿದ್ದಾನೆ.
ಕುತೂಹಲಕಾರಿ ಸಂಗತಿ ಎಂದರೆ ಆ್ಯಂಡ್ರ್ಯೂ ಸೈಮಂಡ್ಸ್ ಮೂಲತಃ ಆಸ್ಟ್ರೇಲಿಯನ್ ಅಲ್ಲ. ಆತನ ತಂದೆ ಆಫ್ರಿಕನ್ ಕೆರಿಬಿಯನ್ ಮತ್ತು ತಾಯಿ ಸ್ಕಾಂಡಿನೇವಿಯಾ ಮೂಲದವಳು ಎಂದು ನಂಬಲಾಗಿದೆ. ಮಗುವಿಗೆ ಮೂರು ವರ್ಷವಿದ್ದಾಗ ಈತನನ್ನು ಆಸ್ಟ್ರೇಲಿಯಾದ ಬಾರ್ಬರಾ ಮತ್ತು ಕೆನ್ ಸೈಮಂಡ್ಸ್ ದಂಪತಿ ದತ್ತು ಪಡೆದರು. ಒರಟು ಸ್ವಭಾವದ ಈತ ತಂಡದಲ್ಲಿ ಕೆಲವು ಬಾರಿ ಶಿಸ್ತುಕ್ರಮಕ್ಕೆ ಒಳಗಾದದ್ದೂ ಉಂಟು. ಫ್ಯಾಮಿಲಿ ಬದುಕನ್ನು ಅತ್ಯಂತ ಖಾಸಗಿಯಾಗಿಟ್ಟಿದ್ದ ಈತನಿಗೆ ಕ್ಲೋಯೆ ಎಂಬ ಮಗಳು, ಬಿಲ್ಲಿ ಎಂಬ ಮಗ ಇದ್ದಾರೆ. ಪತ್ನಿಯ ಹೆಸರು ಲಾರಾ.
ಇದನ್ನೂ ಓದಿ: ಯುವರಾಜ್ ಸಿಂಗ್‌ಗೆ ಟಿ20 ತಂಡದ ನಾಯಕತ್ವ ತಪ್ಪಿದ್ದು ಹೇಗೆ?