ಬೆಂಗಳೂರು: ಖಿನ್ನತೆಯಿಂದ ಆತ್ಮಹತ್ಯೆ ಮಾಡಿಕೊಂಡ ಕರ್ನಾಟಕ ಮೂಲದ, ಟೀಮ್ ಇಂಡಿಯಾ ಮಾಜಿ ಆಟಗಾರ ಡೇವಿಡ್ ಜಾನ್ಸನ್(David Johnson) ಭಾರತ ಪರ ಕೇವಲ 2 ಟೆಸ್ಟ್ ಪಂದ್ಯವನ್ನಾಡಿದ್ದರೂ ಕೂಡ ಅವರು ನಿರ್ಮಿಸಿದ ದಾಖಲೆಯೊಂದನ್ನು ಈಗಲೂ ಟೀಮ್ ಇಂಡಿಯಾ ಬೌಲರ್ಗಳಿಂದ ಮುರಿಯಲು ಸಾಧ್ಯವಾಗಿಲ್ಲ. ಈ ದಾಖಲೆ ಯಾವುದು?, ಅವರ ಕ್ರಿಕೆಟ್ ಸಾಧನೆ ಏನು? ಎಂಬ ಮಾಹಿತಿ ಇಂತಿದೆ.
1971ರ ಅಕ್ಟೋಬರ್ 16ರಂದು ಹಾಸನ ಜಿಲ್ಲೆಯ ಅರಸಿಕೆರೆಯಲ್ಲಿ ಜನಿಸಿದ ಡೇವಿಡ್ ಜಾನ್ಸನ್, ಆರಂಭಿಕ ದಿನಗಳಲ್ಲಿ ಟೆನ್ನಿಸ್ ಬಾಲ್ ಕ್ರಿಕೆಟ್ನಲ್ಲಿ ಸ್ಥಳೀಯ ಕ್ರಿಕೆಟ್ ಟೂರ್ನಿಗಳಲ್ಲಿ ವೇಗದ ಬೌಲಿಂಗ್ ನಡೆಸಿ ವಿಕೆಟ್ ಕೀಳುತ್ತಿದ್ದರು. ಪಂದ್ಯವೊಂದರಲ್ಲಿ ಅವರು 8 ವಿಕೆಟ್ ಕಿತ್ತು ಮಿಂಚಿದ್ದರು. ಇದೇ ವೇಳೆ ಈ ಪಂದ್ಯವನ್ನು ನೋಡುತ್ತಿದ್ದ ಅವರ ಗೆಳೆಯನೊಬ್ಬ ಜಾನ್ಸನ್ ಅವರನ್ನು ಸ್ವಸ್ತಿಕ್ ಕ್ರಿಕೆಟ್ ಕ್ಲಬ್ಗೆ ಸೇರಿಸಿದ್ದರು. ಆಗ ಜಾನ್ಸನ್ಗೆ ಕೇವಲ 17 ವರ್ಷವಾಗಿತ್ತು. ಈ ಕ್ರಿಕೆಟ್ ಕ್ಲಬ್ನಲ್ಲಿ ಸ್ಟಿಚ್ ಬೌಲಿಂಗ್ ಅಭ್ಯಾಸ ನಡೆಸಿ ಹಂತ ಹಂತವಾಗಿ ಬೆಳೆದ ಅವರು ಬಳಿಕ ಕರ್ನಾಟಕ ಪರ ಅಂಡರ್-19 ಪಂದ್ಯವನ್ನಾಡಿ ಕೇವಲ ಎರಡು ಪಂದ್ಯಗಳಿಂದ 13 ವಿಕೆಟ್ ಕಿತ್ತು ಎಲ್ಲರನ್ನು ನಿಬ್ಬೆರಗಾಗುವಂತೆ ಮಾಡಿದ್ದರು.
10 ವಿಕೆಟ್ ಸರದಾರ
90ರ ಕಾಲಘಟ್ಟದಲ್ಲಿ ಅತಿವೇಗದ ಬೌಲಿಂಗ್ ಮಾಡುತ್ತಿದ್ದ ಜಾನ್ಸನ್, 1995-96ರಲ್ಲಿ ಕೇರಳದ ವಿರುದ್ಧದ ಪಂದ್ಯದಲ್ಲಿ ಹತ್ತು ವಿಕೆಟ್ ಕಿತ್ತ ಸಾಧನೆ ಮಾಡಿದ್ದರು. ಮೊದಲ ಇನಿಂಗ್ಸ್ನಲ್ಲಿ 63ಕ್ಕೆ 6 ವಿಕೆಟ್ ಮತ್ತು ದ್ವಿತೀಯ ಇನಿಂಗ್ಸ್ನಲ್ಲಿ 89ಕ್ಕೆ 4 ಕೆಡವಿದ್ದರು. ಇದಾದ ಬಳಿಕ ಬಂಗಾಳದ ವಿರುದ್ಧ 49 ಕ್ಕೆ 4 ಮತ್ತು ಬರೋಡಾ ವಿರುದ್ಧ 91 ಕ್ಕೆ 5 ವಿಕೆಟ್ ಕಬಳಿಸಿದ್ದರು. ಅವರ ಈ ಬೌಲಿಂಗ್ ಪ್ರದರ್ಶನ ಕಂಡು ಆಸ್ಟ್ರೇಲಿಯಾ ವಿರುದ್ಧದ ತವರಿನ ಸರಣಿಗೆ ಟೀಮ್ ಇಂಡಿಯಾಕ್ಕೆ ಆಯ್ಕೆ ಮಾಡಲಾಗಿತ್ತು.
ಇದನ್ನು ಓದಿ David Johnson: ಮಾಜಿ ಕ್ರಿಕೆಟಿಗ ಡೇವಿಡ್ ಜಾನ್ಸನ್ ಸಾವು; ಖಿನ್ನತೆಯಿಂದ ಆತ್ಮಹತ್ಯೆ?
ಗಂಟೆಗೆ 157.8 ಕಿ. ಮೀಟರ್ ವೇಗದಲ್ಲಿ ಬೌಲಿಂಗ್…
1996ರಲ್ಲಿ ದೆಹಲಿಯಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದಲ್ಲಿ ಜಾವಗಲ್ ಶ್ರೀನಾಥ್ ಅವರು ಗಾಯಗೊಂಡ ಕಾರಣ ಅವರ ಸ್ಥಾನದಲ್ಲಿ ಜಾನ್ಸನ್ ಆಡುವ ಅವಕಾಶ ಪಡೆದರು. ಅದು ಅವರ ಚೊಚ್ಚಲ ಪಂದ್ಯವಾಗಿತ್ತು. ಮೊದಲ ಇನಿಂಗ್ಸ್ನಲ್ಲಿ ಅವರಿಗೆ ವಿಕೆಟ್ ಕೀಳಲು ಸಾಧ್ಯವಾಗಲಿಲ್ಲ. ಆದರೆ ದ್ವಿತೀಯ ಇನಿಂಗ್ಸ್ನಲ್ಲಿ ಗಂಟೆಗೆ 157.8 ಕಿಲೋ ಮೀಟರ್ ವೇಗದಲ್ಲಿ ಬೆಂಡೆಸೆದು ಆಸ್ಟ್ರೇಲಿಯಾದ ಮೈಕಲ್ ಸ್ಲೇಟರ್ ಅವರ ವಿಕೆಟ್ ಉರುಳಿಸಿದರು. ಇದೇ ವೇಳೆ ಭಾರತ ಪರ ಅತಿ ವೇಗದಲ್ಲಿ ಬೌಲಿಂಗ್ ನಡೆಸಿದ ದಾಖಲೆಯನ್ನು ನಿರ್ಮಿಸಿದರು. ಸದ್ಯ ಭಾರತ ಪರ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಇದು ದಾಖಲೆಯಾಗಿಯೇ ಉಳಿದಿದೆ. ದೇಶೀಯ ಕ್ರಿಕೆಟ್ನಲ್ಲಿ ಅತಿ ವೇಗದ ಬೌಲಿಂಗ್ ನಡೆಸಿದ ದಾಖಲೆ ಮಯಾಂಕ್ ಯಾದವ್ ಹೆಸರಿನಲ್ಲಿದೆ. ಇದೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಲಕ್ನೋ ತಂಡದ ಮಯಾಂಕ್ ಯಾದವ್ 156.7 ಕಿಲೋ ಮೀಟರ್ ವೇಗದಲ್ಲಿ ಬೌಲಿಂಗ್ ನಡೆಸಿದ್ದರು.
ಅವಕಾಶವೇ ನೀಡಲಿಲ್ಲ…
ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ 39 ಪಂದ್ಯಗಳಿಂದ 437 ರನ್, 125 ವಿಕೆಟ್, ಲಿಸ್ಟ್ 2 ಕ್ರಿಕೆಟ್ನಲ್ಲಿ 33 ಪಂದ್ಯಗಳನ್ನಾಡಿ 118 ರನ್, 41 ವಿಕೆಟ್ ಕಲೆಹಾಕಿದ್ದಾರೆ. ಭಾರತ ಪರ 2 ಟೆಸ್ಟ್ ಪಂದ್ಯಗಳನ್ನಾಡಿ 8 ರನ್ ಸಹಿತ 3 ವಿಕೆಟ್ ಕಿತ್ತಿದ್ದಾರೆ. ವಿಪರ್ಯಾಸವೆಂದರೆ ಉತ್ತಮ ಬೌಲಿಂಗ್ ಸಾಧನೆ ತೋರಿದ್ದರೂ ಕೂಡ ಅವರನ್ನು ಕೇವಲ 2 ಪಂದ್ಯಗಳಿಗೆ ಸೀಮಿತರನ್ನಾಗಿ ಮಾಡಿ ಆ ಬಳಿಕ ತಂಡದಿಂದ ಕೈಬಿಡಲಾಗಿತ್ತು. ಕೊನೆಯ ಪಂದ್ಯವಾಡಿದ ದಕ್ಷಿಣ ಆಫ್ರಿಕಾ ವಿರುದ್ಧ 2 ವಿಕೆಟ್ ಕಿತ್ತಿದ್ದರು.
ವಿಪರೀತ ಕುಡಿತದ ಚಟ ಹೊಂದಿದ್ದ ಡೇವಿಡ್ ಜಾನ್ಸನ್ ಕೆಲ ವರ್ಷಗಳಿಂದ ಅನಾರೋಗ್ಯಕ್ಕೆ ಒಳಗಾಗಿದ್ದರು. ಹೀಗಾಗಿ ಖಿನ್ನತೆಗೆ ಜಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅವರ ನಿಧನಕ್ಕೆ ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ಸೇರಿ ಹಲವು ಕ್ರಿಕೆಟಿಗರು ಕಂಬನಿ ಮಿಡಿದಿದ್ದಾರೆ.