ಬೆಂಗಳೂರು : ಭಾರತದ ಕ್ರೀಡಾ ಕ್ಷೇತ್ರದಲ್ಲಿ ಕ್ರಿಕೆಟ್ಗೆ ಅಗಣಿತ ಅಭಿಮಾನಿಗಳಿದ್ದಾರೆ. ಹೀಗಾಗಿ ಅದು ಅತ್ಯಂತ ಶ್ರೀಮಂತ ಹಾಗೂ ಜನಪ್ರಿಯ ಆಟ. ಕ್ರಿಕೆಟ್ ಭಾರತೀಯರ ಜೀವಾಳ ಹಾಗೂ ಅದರಲ್ಲೇ ನೋವು, ನಲಿವುಗಳನ್ನು ಕಾಣುವವರಿದ್ದಾರೆ. ಹೀಗಾಗಿ ಪ್ರತಿ ಬಾರಿಯೂ ಕ್ರಿಕೆಟ್ನಲ್ಲಿ ಏನು ನಡೆಯುತ್ತಿದೆ ಎಂದು ಗಮನಿಸುತ್ತಿರುತ್ತೇವೆ. ಅಂತೆಯೇ ಭಾರತ ಕ್ರಿಕೆಟ್ ಕಾರಿಡಾರ್ನಲ್ಲಿ 2022ರಲ್ಲಿ (Year-ender) ಹಲವು ಏಳು, ಬೀಳುಗಳು ಸಂಭವಿಸಿವೆ. ಅದರ ಸಂಕ್ಷಿಪ್ತ ನೋಟ ಇಲ್ಲಿದೆ.
19ರ ವಯೋಮಿತಿಯ ವಿಶ್ವ ಕಪ್
ವರ್ಷಾರಂಭದಲ್ಲಿ ನಡೆದ 19 ವರ್ಷದೊಳಗಿನವರ ಕ್ರಿಕೆಟ್ ವಿಶ್ವ ಕಪ್ನಲ್ಲಿ ಭಾರತ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿತು. ಕೋಚಿಂಗ್ ಸಿಬ್ಬಂದಿ ಸೇರಿದಂತೆ ಭಾರತ ಬಳಗದ 11 ಮಂದಿ ಕೊರೊನಾ ಸೋಂಕಿಗೆ ಒಳಗಾದ ಹೊರತಾಗಿಯೂ ಯಶ್ ಧುಲ್ ನಾಯಕತ್ವದ ಭಾರತ ತಂಡ ಟೂರ್ನಿಯಲ್ಲಿ ಒಂದೇ ಒಂದು ಪಂದ್ಯ ಸೋಲದೇ ವಿಶ್ವ ಕಿರೀಟ ತನ್ನದಾಗಿಸಿಕೊಂಡಿತ್ತು. ಇದೇ ವೇಳೆ 19ರ ವಯೋಮಿತಿಯ ತಂಡದ ಪ್ರಾಬಲ್ಯ ಮುಂದುವರಿಯಿತಲ್ಲದೆ, ಕಳೆದ 32 ಪಂದ್ಯಗಳಲ್ಲಿ ಕೇವಲ ನಾಲ್ಕು ಪಂದ್ಯಗಳನ್ನು ಸೋತ ಸಾಧನೆಯನ್ನೂ ಮಾಡಿದೆ.
ಟಿ20 ವಿಶ್ವ ಕಪ್ನಲ್ಲಿ ನಿರಾಸೆ
ರೋಹಿತ್ ಶರ್ಮ ನೇತೃತ್ವದ ಭಾರತ ತಂಡ ಟಿ20 ವಿಶ್ವ ಕಪ್ ಗೆಲ್ಲುವ ಯೋಜನೆಯೊಂದಿಗೆ ಆಸ್ಟ್ರೇಲಿಯಾಗೆ ತೆರಳಿತ್ತು. ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಭಾರತ ತಂಡ ವಿರೋಚಿತ ಜಯ ದಾಖಲಿಸಿದ ಹೊರತಾಗಿಯೂ ದಕ್ಷಿಣ ಆಫ್ರಿಕಾ ವಿರುದ್ಧ ಗುಂಪು ಹಂತದ ಪಂದ್ಯದಲ್ಲಿ ಭಾರತ ತಂಡಕ್ಕೆ ಸೋಲು ಎದರಾಯಿತು. ಆದರೆ, ಸೆಮಿ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 10 ವಿಕೆಟ್ಗಳ ಹೀನಾಯ ಸೋಲು ಅನುಭವಿಸಿದಾಗ ಭಾರತೀಯರ ಹೃದಯವೇ ಒಡೆದು ಹೋಯಿತು. ಜತೆಗೆ ಒಂದು ದಶಕದ ಐಸಿಸಿ ಟ್ರೋಫಿಯ ಬರ ಮುಂದುವರಿಯಿತು.
ವಿರಾಟ್ ಕೊಹ್ಲಿಯ ಸಿಕ್ಸರ್
ಭಾರತ ತಂಡ ವಿಶ್ವ ಕಪ್ ಗೆಲ್ಲದ ಹೊರತಾಗಿಯೂ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಬಾರಿಸಿದ ಸಿಕ್ಸರ್ ಸ್ಮರಣೀಯ ಎನಿಸಿಕೊಂಡಿತು. ಹ್ಯಾರಿಸ್ ರವೂಫ್ ಅವರ ಎಸೆತಕ್ಕೆ ವಿರಾಟ್ ಕೊಹ್ಲಿ ಬಾರಿಸಿದ ಸಿಕ್ಸರ್ ಕ್ರಿಕೆಟ್ ಇತಿಹಾಸದ ಅಪರೂಪದ ಹೊಡೆತ ಎಂದೇ ಖ್ಯಾತಿ ಪಡೆದುಕೊಂಡಿದೆ. ಈ ಪಂದ್ಯದಲ್ಲಿ ಅಜೇಯವಾಗಿ ಬಾರಿಸಿರುವ 82 ರನ್ ಅವರ ವೃತ್ತಿ ಕ್ರಿಕೆಟ್ನ ಶ್ರೇಷ್ಠ ಇನಿಂಗ್ಸ್ಗಳಲ್ಲೊಂದು.
ಕಾಮನ್ವೆಲ್ತ್ ಗೇಮ್ಸ್ನಲ್ಲಿ ವನಿತೆಯರಿಗೆ ಸೋಲು
ಹರ್ಮನ್ ಪ್ರೀತ್ ಕೌರ್ ನೇತೃತ್ವದ ಭಾರತ ಮಹಿಳೆಯರ ಕ್ರಿಕೆಟ್ ತಂಡಕ್ಕೆ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಚಿನ್ನದ ಪದಕ ಗೆಲ್ಲುವ ಅವಕಾಶವಿತ್ತು. ಆಸ್ಟ್ರೇಲಿಯಾ ತಂಡದ ವಿರುದ್ಧದ ಫೈನಲ್ನಲ್ಲಿ ಭಾರತ ತಂಡಕ್ಕೆ ಕೊನೇ 27 ಎಸೆತಗಳಲ್ಲಿ 41 ರನ್ ಬೇಕಾಗಿತ್ತು. ಆದರೆ, ಆಲ್ಔಟ್ ಆದ ಭಾರತ ತಂಡ ಬಂಗಾರ ಗೆಲ್ಲುವ ಅವಕಾಶ ನಷ್ಟ ಮಾಡಿಕೊಂಡಿತು.
ಏಷ್ಯಾ ಕಪ್ನಲ್ಲಿ ರೋಹಿತ್ ಬಳಗಕ್ಕೆ ಬೇಸರ
ಶ್ರೀಲಂಕಾದ ಆತಿಥ್ಯದಲ್ಲಿ ಈ ಬಾರಿ ಯುಎಇನಲ್ಲಿ ಏಷ್ಯಾ ಕಪ್ ನಡೆದಿತ್ತು. ಪಾಕಿಸ್ತಾನ ವಿರುದ್ಧ ಹಾಗೂ ಶ್ರೀಲಂಕಾ ವಿರುದ್ಧ ಸೋಲುವ ಮೂಲಕ ಟೂರ್ನಿಯಿಂದಲೇ ಹೊರ ಬಿತ್ತು. ಇಲ್ಲಿಯೂ ಟೀಮ್ ಇಂಡಿಯಾದ ಅಭಿಮಾನಿಗಳಿಗೆ ಬೇಸರ ಮೂಡಿತು.
ದೀಪ್ತಿ ಶರ್ಮಾ ಮಂಕಡಿಂಗ್ ವಿವಾದ
ಇಂಗ್ಲೆಂಡ್ ಪ್ರವಾಸ ಹೋಗಿದ್ದ ಭಾರತ ಮಹಿಳೆಯರ ತಂಡ ಏಕ ದಿನ ಸರಣಿಯನ್ನು ಗೆದ್ದುಕೊಂಡಿದೆ. ಆದಾಗ್ಯೂ ಸರಣಿಯ ಕೊನೇ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಆಟಗಾರ್ತಿ ಚಾರ್ಲಿ ಡೀನ್ ಅವರನ್ನು ಭಾರತದ ಅಲ್ರೌಂಡರ್ ದೀಪ್ತಿ ಶರ್ಮ ಮಂಕಡಿಂಗ್ ಮಾಡಿದ್ದರು. ಇದು ದೊಡ್ಡ ಮಟ್ಟದ ವಿವಾದಕ್ಕೆ ಕಾರಣವಾಯಿತು. ಕ್ರೀಡಾ ಸ್ಫೂರ್ತಿಯ ಕುರಿತು ಜಾಗತಿಕ ಕ್ರಿಕೆಟ್ ಕ್ಷೇತ್ರದಲ್ಲಿ ದೊಡ್ಡ ಚರ್ಚೆಯೇ ನಡೆಯಿತು.
ಸೂರ್ಯಕುಮಾರ್ ಅಬ್ಬರ
ತಡವಾಗಿ ಭಾರತ ತಂಡದಲ್ಲಿ ಅವಕಾಶ ಪಡೆದಿರುವ ಸ್ಫೋಟಕ ಬ್ಯಾಟರ್ ಸೂರ್ಯಕುಮಾರ್ ಯಾದವ್ ಟಿ20 ಕ್ರಿಕೆಟ್ನಲ್ಲಿ ನಂಬರ್ ಒನ್ ಸ್ಥಾನ ಪಡೆದುಕೊಂಡರು. ಒಟ್ಟು 32 ಪಂದ್ಯಗಳಲ್ಲಿ ಆಡಿರುವ ಅವರು 1214 ರನ್ ಬಾರಿಸಿದ್ದು, ಅದರಲ್ಲಿ ಎರಡು ಶತಕಗಳು ಸೇರಿಕೊಂಡಿವೆ. ಗರಿಷ್ಠ ರನ್ 117. 10 ಅರ್ಧ ಶತಕ, 5 ಬಾರಿ 30 ಪ್ಲಸ್ ರನ್ ಬಾರಿಸಿದ ಅವರು 185.6 ಬ್ಯಾಟಿಂಗ್ ಸರಾಸರಿಯನ್ನು ಹೊಂದಿದ್ದಾರೆ.
ಮಿಥಾಲಿ ರಾಜ್, ಜೂಲನ್ ಗೋಸ್ವಾಮಿ ವಿದಾಯ
ಭಾರತ ಮಹಿಳೆಯರ ಕ್ರಿಕೆಟ್ ತಂಡದ ದಿಗ್ಗಜರೆನಿಸಿಕೊಂಡಿರುವ ಮಿಥಾಲಿ ರಾಜ್ ಹಾಗೂ ಜೂಲನ್ ಗೋಸ್ವಾಮಿ ಅವರು 2022ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದರು. ಇವರಿಬ್ಬರು ಎರಡು ದಶಕಗಳ ಕಾಲ ಭಾರತ ತಂಡದ ಕಾಯಂ ಸದಸ್ಯರಾಗಿದ್ದರು ಹಾಗೂ ಯುವ ಕ್ರಿಕೆಟಿಗರಿಗೆ ಆದರ್ಶವಾಗಿದ್ದರು ಕೂಡ.
ಜಸ್ಪ್ರಿತ್ ಬುಮ್ರಾ ವಿಶ್ವ ದಾಖಲೆ
ಇಂಗ್ಲೆಂಡ್ನ ಎಜ್ಬಾಸ್ಟನ್ನಲ್ಲಿ ನಡೆದ ಟೆಸ್ಟ್ ಸರಣಿಯ ಪಂದ್ಯದಲ್ಲಿ ವೇಗಿ ಜಸ್ಪ್ರಿತ್ ಬುಮ್ರಾ ತಂಡದ ನಾಯಕತ್ವ ವಹಿಸಿದ್ದರು. ಭಾರತದ ಬ್ಯಾಟಿಂಗ್ ಇನಿಂಗ್ಸ್ನಲ್ಲಿ ಎದುರಾಳಿ ತಂಡದ ಬೌಲರ್ ಸ್ಟುವರ್ಟ್ ಬ್ರಾಡ್ ಅವರ ಒಂದೇ ಓವರ್ನಲ್ಲಿ 35 ರನ್ ಬಾರಿಸಿದ್ದರು. ಇದರಲ್ಲಿ ವೈಡ್ ಮತ್ತು ನೋ ಬಾಲ್ ಸೇರಿಕೊಂಡಿದ್ದರೂ, ಟೆಸ್ಟ್ ಕ್ರಿಕೆಟ್ನ ಓವರ್ ಒಂದರಲ್ಲಿ ದಾಖಲಾಗಿರುವ ಗರಿಷ್ಠ ರನ್ ಎನಿಸಿಕೊಂಡಿದೆ.
ಇದನ್ನೂ ಓದಿ | Team India | ಟಿ20 ತಂಡದಿಂದ ಕೆ ಎಲ್ ರಾಹುಲ್ ಔಟ್?; ಗಾಯದಿಂದ ಸುಧಾರಿಸದ ರೋಹಿತ್ ಶರ್ಮ