Site icon Vistara News

DEXA Test | ಏನಿದು ಮೂಳೆ ಸಾಂದ್ರತೆ ಪರೀಕ್ಷೆ? ಹೇಗೆ ಮಾಡುತ್ತಾರೆ? ಯಾಕೆ ಮಹತ್ವದ ಟೆಸ್ಟ್?

DEXA Test

ಹೊಸ ವರ್ಷದ ಮೊದಲ ದಿನವೇ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (BCCI) ಹೊರಡಿಸಿದ್ದ ನೂತನ ಆದೇಶ ಹಲವರಲ್ಲಿ ಕುತೂಹಲ ಮೂಡಿಸಿದೆ. ಭಾರತ ಕ್ರಿಕೆಟ್‌ ತಂಡಕ್ಕೆ ಆಯ್ಕೆ ಮಾಡುವಾಗ ಆಟಗಾರರಿಗೆ ಯೋ ಯೋ ಟೆಸ್ಟ್‌ ಮತ್ತು ಡೆಕ್ಸಾ ಪರೀಕ್ಷೆ (Yo-Yo Test and DEXA test) ಅಗತ್ಯ ಎಂದು ಹೇಳಿದೆ. ಏನಿದು ಡೆಕ್ಸಾ ಟೆಸ್ಟ್‌ ಅಥವಾ ಮೂಳೆ ಸಾಂದ್ರತೆ ಪರೀಕ್ಷೆ? ಇದನ್ನು ಯಾಕೆ, ಯಾರಿಗೆ ಮತ್ತು ಹೇಗೆ ಮಾಡುತ್ತಾರೆ?

ಡೆಕ್ಸಾ ಅಥವಾ ಮೂಳೆ ಸಾಂದ್ರತೆ ಪರೀಕ್ಷೆಯೆಂದರೆ, ಅಸ್ಥಿಹಂದರದ ಕೆಲವು ಭಾಗಗಳಲ್ಲಿ ಖನಿಜಗಳ ಸಾಂದ್ರತೆ ಎಷ್ಟಿದೆ ಎಂಬುದನ್ನು ಪತ್ತೆ ಮಾಡುವುದು. ವಯಸ್ಸು ಮಾಗಿದಂತೆ ಸಹಜವಾಗಿ ಎಲ್ಲರ ದೇಹದ ಮೂಳೆಗಳೂ ತಮ್ಮ ಸಾಂದ್ರತೆಯನ್ನು ಕಳೆದುಕೊಳ್ಳುತ್ತಾ ಹೋಗುತ್ತವೆ. ಎಲ್ಲೆಲ್ಲಿ ಎಷ್ಟೆಷ್ಟು ಬಲವನ್ನು ಅಥವಾ ಸಾಂದ್ರತೆಯನ್ನು ಎಲುಬುಗಳು ಕಳೆದುಕೊಂಡಿವೆ ಎಂಬುದನ್ನು ಕಿರಣಗಳನ್ನು ಹಾಯಿಸಿ ತಿಳಿದುಕೊಳ್ಳುವ ಈ ಪರೀಕ್ಷೆಯನ್ನು ಬೋನ್‌ ಡೆನ್ಸಿಟೋಮೆಟ್ರಿ ಟೆಸ್ಟ್‌ ಎಂದೂ ಕರೆಯಲಾಗುತ್ತದೆ.

ಇದು ಸುರಕ್ಷಿತವೇ?
ಹೀಗೆ ಸ್ಕ್ಯಾನಿಂಗ್‌ ಮೂಲಕ ತಿಳಿದುಕೊಳ್ಳಲಾಗುವ ಈ ಕ್ರಮದಲ್ಲಿ ದೇಹದಲ್ಲಿ ಮಾಂಸಖಂಡಗಳ ಬಲವೆಷ್ಟು, ಕೊಬ್ಬು ಮತ್ತು ನೀರಿನ ಪ್ರಮಾಣವೆಷ್ಟು ಎಂಬುದನ್ನೂ ಮೂಳೆ ಸಾಂದ್ರತೆಯ ಜೊತೆಗೆ ಪತ್ತೆ ಮಾಡಲಾಗುತ್ತದೆ. ಇದಕ್ಕಾಗಿ ದೇಹದೊಳಗೆ ಎಷ್ಟು ವಿಕಿರಣಗಳನ್ನು ಹಾಯಿಸಬೇಕು? ಇವೆಲ್ಲಾ ಸುರಕ್ಷಿತವೇ ಎಂಬ ಪ್ರಶ್ನೆ ಬರುವುದು ಸಹಜ. ಆದರೆ ತಜ್ಞರ ಪ್ರಕಾರ, ಸಾಂಪ್ರದಾಯಿಕವಾದ ಎಕ್ಸ್‌-ರೇಗಳಂತಲ್ಲ ಈ ಕಿರಣಗಳು. ಡೆಕ್ಸಾ ಸ್ಕ್ಯಾನ್‌ನಲ್ಲಿ ಬರುವ ವಿಕಿರಣಗಳ ಮಟ್ಟ ಅತ್ಯಂತ ಕ್ಷೀಣ. ಹಾಗಾಗಿ ಈ ಪರೀಕ್ಷೆ ಮಾಡುವಾಗ ರೇಡಿಯಾಲಜಿಸ್ಟ್‌ ಸಹ ಸ್ಥಳದಲ್ಲಿ ಇರಬಹುದು (ಸಾಂಪ್ರದಾಯಿಕ ಎಕ್ಸ್‌ರೇ ಕ್ರಮದಲ್ಲಿ ರೇಡಿಯಾಲಜಿಸ್ಟ್‌ ಸ್ಥಳದಲ್ಲಿ ಇರುವುದಿಲ್ಲ). ಸುಮಾರು ೨೫-೩೦ ನಿಮಿಷಗಳಲ್ಲಿ ಈ ಪರೀಕ್ಷೆ ಮುಗಿಯಬಹುದು. ಆದರೆ ಗರ್ಭಿಣಿ ಸ್ತ್ರೀಯರಿಗೆ ಇವು ಸುರಕ್ಷಿತವಲ್ಲ. ಕಾರಣ, ಹುಟ್ಟಲಿರುವ ಮಗುವಿನ ಮೇಲೆ ಇದು ಪ್ರತಿಕೂಲ ಪರಿಣಾಮ ಬೀರಬಹುದು.

ಉಪಯೋಗವೇನು?
ಸಾಮಾನ್ಯವಾಗಿ ವರ್ಷ ೫೦ಕ್ಕಿಂತ ಹೆಚ್ಚಾಗಿದ್ದು, ಮೂಳೆ ಮುರಿತಕ್ಕೆ ಒಳಗಾದರೆ ಇಂಥ ಪರೀಕ್ಷೆಯನ್ನು ವೈದ್ಯರು ಹೇಳಬಹುದು. ಆಸ್ಟಿಯೊಪೊರೊಸಿಸ್‌ ಅಥವಾ ಇನ್ನಾವುದಾದರೂ ಮೂಳೆಯ ಸಮಸ್ಯೆ ಕಾಡುತ್ತಿದೆಯೇ ಎಂಬುದನ್ನು ತಿಳಿದುಕೊಳ್ಳಲು ಇದು ಉತ್ತಮ ಮತ್ತು ನಿಖರ ವಿಧಾನ. ಪುರುಷರಿಗಿಂತ ಮಹಿಳೆಯರಿಗೆ ಕಿರಿಯ ವಯಸ್ಸಿನಲ್ಲೇ ಆಸ್ಟಿಯೊಪೊರೊಸಿಸ್‌ ಕಾಡುವುದರಿಂದ, ಋತುಬಂಧದ ನಂತರ ಅಗತ್ಯವಾದರೆ ಇಂಥ ಪರೀಕ್ಷೆಗಳನ್ನು ವೈದ್ಯರು ಹೇಳುವುದಿದೆ.

ಮೂಳೆಯ ಆರೋಗ್ಯದಲ್ಲಿ ಕ್ರಮೇಣ ಆಗುವಂಥ ಬದಲಾವಣೆಗಳನ್ನು ದಾಖಲು ಮಾಡಲು, ಮೂಳೆ ಟೊಳ್ಳಾಗಿಸುವಂಥ ಆಸ್ಟಿಯೊಪೊರೊಸಿಸ್‌ ಅಥವಾ ಬೇರೆ ರೀತಿಯ ಮೂಳೆಯ ಆನಾರೋಗ್ಯಕ್ಕಾಗಿ ಈಗಾಗಲೇ ಔಷಧಗಳ ಮೇಲಿದ್ದರೆ, ಅದರ ಪ್ರಗತಿಯನ್ನು ದಾಖಲಿಸಲು ಅಥವಾ ಕ್ರೀಡಾ ಪಟುಗಳಿಗೆ ಯಾವುದಕ್ಕೆ, ಎಷ್ಟು ತರಬೇತಿ ಬೇಕು ಎಂಬುದನ್ನು ನಿರ್ಧರಿಸಲು- ಹೀಗೆ ಹಲವಾರು ಕಾರಣಗಳಿಗಾಗಿ ಮೂಳೆ ಸಾಂದ್ರತೆ ಪರೀಕ್ಷೆಯನ್ನು ನಡೆಸಲಾಗುತ್ತದೆ.

ಇದನ್ನೂ ಓದಿ| Health Tips | ಈ ಕಾಂಬಿನೇಷನ್‌ ಆಹಾರಗಳು ತೊಂದರೆ ತರಬಹುದು, ಜಾಗ್ರತೆ!

Exit mobile version