Site icon Vistara News

New Year 2023 | ಭಾರತದ ಕ್ರೀಡಾ ಕ್ಷೇತ್ರಕ್ಕೆ ಶುಭ ಸುದ್ದಿ ತರಬಹುದಾದ 2023ರ ಕ್ರೀಡಾಕೂಟಗಳು ಎಲ್ಲೆಲ್ಲಿ ನಡೆಯುತ್ತವೆ?

new year 2023

ಬೆಂಗಳೂರು : 2022 ಮುಗಿದೇ ಹೋಯಿತು. ಕಳೆದ ಹೋದ ವರ್ಷದಲ್ಲಿ ಭಾರತದ ಕ್ರೀಡಾ ಕ್ಷೇತ್ರವೂ ಮಿಶ್ರ ಫಲ ಉಂಡಿತು. ಕೆಲವೊಂದು ಟೂರ್ನಿಗಳಲ್ಲಿ ಭಾರತಕ್ಕೆ ಟ್ರೋಫಿ ಸಿಕ್ಕಿದರೆ ಇನ್ನು ಕೆಲವು ಟೂರ್ನಮೆಂಟ್​ಗಳಲ್ಲಿ ನಿರಾಸೆಯೂ ಉಂಟಾಯಿತು. ಇನ್ನೇನಿದ್ದರೂ ಮುಂದಿನ ವರ್ಷದಲ್ಲಿ (New Year 2023) ನಡೆಯಲಿರುವ ಟೂರ್ನಿಗಳ ಕಡೆಗೆ ಗಮನ. ಕ್ರಿಕೆಟ್​ ತಂಡ, ಅಥ್ಲೀಟ್​ಗಳು, ಬ್ಯಾಡ್ಮಿಂಟನ್​ ಆಟಗಾರರು ಮುಂದಿನ ವರ್ಷದ ಅಭಿಯಾನಕ್ಕೆ ಸಜ್ಜಾಗಬೇಕಾಗಿದೆ. ಈ ರೀತಿಯಾಗಿ ಭಾರತ ಆಥ್ಲೀಟ್​ಗಳಿಗೆ ಪದಕ ಗೆಲ್ಲುವ ಅವಕಾಶ ಇರುವ ಕೆಲವು ಟೂರ್ನಿಗಳ ಪಟ್ಟಿ ಇಲ್ಲಿದೆ.

ಪುರುಷರ ಹಾಕಿ ವಿಶ್ವ ಕಪ್​ 2023

ವರ್ಷಾರಂಭದಲ್ಲೇ ಪುರುಷರ ಹಾಕಿ ವಿಶ್ವ ಕಪ್​ ನಡೆಯಲಿದೆ. ಜನವರಿ 13ರಿಂದ 29ರವರೆಗೆ ಒಡಿಶಾದ ಭುವನೇಶ್ವರ ಹಾಗೂ ರೂರ್​ಕೆಲಾದಲ್ಲಿ ಟೂರ್ನಿ ಆಯೋಜನೆಗೊಂಡಿದೆ. ಭಾರತವೇ ಇದಕ್ಕೆ ಆತಿಥ್ಯ ವಹಿಸುತ್ತಿದ್ದು, ಒಟ್ಟು 44 ಪಂದ್ಯಗಳು ನಡೆಯಲಿವೆ. ಒಟ್ಟು 16 ತಂಡಗಳು ಈ ಟೂರ್ನಿಯಲ್ಲಿ ಪಾಲ್ಗೊಳ್ಳಲಿವೆ. ಎಫ್​ಐಎಚ್​ ರ್ಯಾಂಕಿಂಗ್​ನಲ್ಲಿ ಭಾರತ ನಾಲ್ಕನೇ ಸ್ಥಾನ ಪಡೆದಿದ್ದು, ನೆದರ್ಲೆಂಡ್ಸ್, ಬೆಲ್ಜಿಯಮ್ ಹಾಗೂ ಆಸ್ಟ್ರೇಲಿಯಾ ತಂಡ ಕ್ರಮವಾಗಿ ಮೂರು, ಎರಡು ಹಾಗೂ ಒಂದನೇ ಸ್ಥಾನ ಪಡೆದುಕೊಂಡಿದ್ದಾರೆ. ಟೋಕಿಯೊ ಒಲಿಂಪಿಕ್ಸ್​ನಲ್ಲಿ ಕಂಚಿನ ಪದಕ ಗೆದ್ದಿರುವ ಭಾರತಕ್ಕೆ ಚಾಂಪಿಯನ್​ಪಟ್ಟ ಅಲಂಕರಿಸುವ ಎಲ್ಲ ಅವಕಾಶಗಳಿವೆ.

ಮಹಿಳೆಯರ ಟಿ20 ವಿಶ್ವ ಕಪ್

ಎಂಟನೇ ಆವೃತ್ತಿಯ ಮಹಿಳೆಯರ ಟಿ20 ವಿಶ್ವ ಕಪ್​ ದಕ್ಷಿಣ ಆಫ್ರಿಕಾದಲ್ಲಿ ಆಯೋಜನೆಗೊಂಡಿದೆ. ಫೆಬ್ರವರಿ 10ರಿಂದ 26ವರೆಗೆ ಟೂರ್ನಿ ನಡೆಯಲಿದೆ. 10 ತಂಡಗಳು ಈ ಟೂರ್ನಿಯಲ್ಲಿ ಪ್ರಶಸ್ತಿಗಾಗಿ ಸೆಣಸಾಡಲಿವೆ. 2022ರಲ್ಲಿನಡೆದ ಕಾಮನ್ವೆಲ್ತ್​ ಗೇಮ್ಸ್​ನಲ್ಲಿ ಬೆಳ್ಳಿಯ ಪದಕ ಗೆದ್ದಿರುವ ಹರ್ಮನ್​ಪ್ರೀತ್​ಕೌರ್​ ನೇತೃತ್ವದ ತಂಡಕ್ಕೆ ಇಲ್ಲೂ ಚಾಂಪಿಯನ್​ ಪಟ್ಟ ಅಲಂಕರಿಸುವ ಅವಕಾಶಗಳಿವೆ. ಇದುವರೆಗಿನ ಏಳು ಆವೃತ್ತಿಗಳಲ್ಲಿ ಆಸ್ಟ್ರೇಲಿಯಾ ಐದು ಬಾರಿ ಚಾಂಪಿಯನ್​ಪಟ್ಟ ಅಲಂಕರಿಸಿದೆ. ಭಾರತ ಕಳೆದ ಆವೃತ್ತಿಯ ರನ್ನರ್​ಅಪ್ ತಂಡವಾಗಿದೆ. ಐಸಿಸಿ ಮಹಿಳೆಯರ ಟಿ20 ರ್ಯಾಂಕ್​ ಪಟ್ಟಿಯಲ್ಲಿ ಭಾರತಕ್ಕೆ ನಾಲ್ಕನೇ ಸ್ಥಾನವಿದೆ.

ಐಪಿಎಲ್​ 2023

ವಿಶ್ವದ ಶ್ರೀಮಂತ ಕ್ರಿಕೆಟ್​ ಲೀಗ್​ ಐಪಿಎಲ್​ ಈ ವರ್ಷ ಮಾರ್ಚ್ 26ರಿಂದ ಮೇ 28ವರೆಗೆ ನಡೆಯಲಿದೆ. ಈಗಾಗಲೇ ಆಟಗಾರರ ಹರಾಜು ಸೇರಿದಂತೆ ಬಹುತೇಕ ಎಲ್ಲ ಪ್ರಕ್ರಿಯೆಗಳು ಮುಕ್ತಾಯಗೊಂಡಿವೆ. ಮುಂದಿನ ಬೇಸಿಗೆಯಲ್ಲಿ ಈ ಕ್ರಿಕೆಟ್​ ಜಾತ್ರೆ ನಡೆಯಲಿದೆ. ಕೊರೊನಾ ಬಳಿಕ ನಡೆಯಲಿರುವ ಮೊದಲ ಬಾರಿ ಹೋಮ್​- ಅವೇ (ತವರು ನೆಲ ಹಾಗೂ ಬೇರೆ ರಾಜ್ಯಗಳ ಸ್ಥಳಗಳು) ಮಾದರಿಯಲ್ಲಿ ಟೂರ್ನಿ ನಡೆಯಲಿದೆ. 10 ಫ್ರಾಂಚೈಸಿಗಳ ನಡುವಿನ ಈ ಟೂರ್ನಿಗಾಗಿ ಭಾರತೀಯ ಕ್ರಿಕೆಟ್​ ಅಭಿಮಾನಿಗಳು ಕಾಯುತ್ತಿದ್ದಾರೆ.

ಫಿಫಾ ಮಹಿಳೆಯರ ಫುಟ್ಬಾಲ್​ ವಿಶ್ವ ಕಪ್​

2022ರಲ್ಲಿ ಕತಾರ್​ನಲ್ಲಿ ಪುರುಷರ ತಂಡಗಳ ವಿಶ್ವ ಕಪ್​ ನಡೆದಿದ್ದು, ಅರ್ಜೆಂಟೀನಾ ಚಾಂಪಿಯನ್ ಆಗಿದೆ. ಅಂತೆಯೇ 2023ರಲ್ಲಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್​ ತಂಡಗಳ ಜಂಟಿ ಆತಿಥ್ಯದಲ್ಲಿ ಮಹಿಳೆಯರ ವಿಶ್ವ ಕಪ್​ ನಡೆಯಲಿದೆ. ಭಾರತ ತಂಡ ಈ ಟೂರ್ನಿಗೆ ಅರ್ಹತೆ ಪಡೆದಿಲ್ಲ. ಆದರೆ, ವಿಶ್ವ ಮಟ್ಟದಲ್ಲಿ ನಡೆಯುವ ದೊಡ್ಡ ಟೂರ್ನಿ ಎನಿಸಿಕೊಳ್ಳಲಿದ್ದು ಫುಟ್ಬಾಲ್​ ಅಭಿಮಾನಿಗಳ ಪಾಲಿಗೆ ದೊಡ್ಡ ಜಾತ್ರೆಯಾಗಿರಲಿದೆ. ಜುಲೈ 20ರಿಂದ ಆಗಸ್ಟ್​​ 20ರವರೆಗೆ ಟೂರ್ನಿ ನಡೆಯಲಿದೆ.

ಏಷ್ಯಾ ಕಪ್​ ಕ್ರಿಕೆಟ್

ಏಷ್ಯಾ ಕ್ರಿಕೆಟ್​ ಕೌನ್ಸಿಲ್​ ಅಯೋಜಿಸುವ ಏಷ್ಯಾ ಕಪ್​ ಕ್ರಿಕೆಟ್​ ಈ ಬಾರಿ ಪಾಕಿಸ್ತಾನದ ಆತಿಥ್ಯದಲ್ಲಿ ನಡೆಯಲಿದೆ. ಆದರೆ, ಟೂರ್ನಿ ಎಲ್ಲಿ ನಡೆಯುತ್ತದೆ ಎಂಬುದು ಇನ್ನೂ ಖಾತರಿಯಾಗಿಲ್ಲ. ಬಿಸಿಸಿಐ ಕಾರ್ಯದರ್ಶಿ ಜಯ್​ಶಾ ಅವರೇ ಏಷ್ಯಾ ಕ್ರಿಕೆಟ್​ ಕೌನ್ಸಿಲ್​ನ ಮುಖ್ಯಸ್ಥರಾಗಿರುವ ಕಾರಣ ಯುಎಇನಲ್ಲಿ ಆಯೋಜನೆಗೊಳ್ಳಬಹುದು ಎನ್ನಲಾಗಿದೆ. ಸೆಪ್ಟೆಂಬರ್​ 2ರಿಂದ 17ರವರೆಗೆ ಟೂರ್ನಿ ನಡೆಯಲಿದ್ದು, ಏಷ್ಯಾದ ಆರು ತಂಡಗಳು ಪಾಲ್ಗೊಳ್ಳಲಿವೆ. ಕಳೆದ ಬಾರಿ ಭಾರತ ತಂಡದ ಚಾಂಪಿಯನ್​ ಪಟ್ಟ ಅಲಂಕರಿಸಲು ವಿಫಲಗೊಂಡಿತ್ತು. ಈ ಬಾರಿ ಮತ್ತೊಂದು ಪ್ರಯತ್ನ ಮಾಡಲಿದೆ.

ವರ್ಲ್ಡ್​​ ಅಥ್ಲೆಟಿಕ್ಸ್​ ಚಾಂಪಿಯನ್​ಶಿಪ್​

ಹಂಗರಿಯ ಬುಡಾಪೆಸ್ಟ್​ನಲ್ಲಿ 19ನೇ ಆವೃತ್ತಿಯ ವರ್ಲ್ಡ್​ ಅಥ್ಲೆಟಿಕ್​ ಚಾಂಪಿಯನ್​ಶಿಪ್​ ನಡೆಯಲಿದೆ. ಜಾವೆಲಿನ್​ ಎಸೆತಗಾರ ನೀರಜ್​ ಚೋಪ್ರಾ ಅವರು ಈ ಟೂರ್ನಿಯಲ್ಲಿ ಭಾರತದ ಪದಕದ ಭರವಸೆಯಾಗಿದ್ದಾರೆ. ಅವರು ಚಿನ್ನದ ಭರವಸೆ ಮೂಡಿಸಿದ್ದಾರೆ. 48 ಪದಕದ ಸ್ಪರ್ಧೆಗಳ ಇಲ್ಲಿ ನಡೆಯಲಿವೆ.

ಏಷ್ಯನ್ ಗೇಮ್ಸ್​

2022ರ ಸೆಪ್ಟೆಂಬರ್​ನಲ್ಲಿ ಚೀನಾದಲ್ಲಿ ನಡೆಯಬೇಕಾಗಿದ್ದ ಏಷ್ಯನ್ ಗೇಮ್ಸ್​ 2023ಕ್ಕೆ ಮುಂದೂಡಿಕೆಯಾಗಿದೆ. ಸೆಪ್ಟೆಂಬರ್​ 23ರಿಂದ ಅಕ್ಟೋಬರ್​ 8ರ ವರೆಗೆ ಈ ಬಹು ಕ್ರೀಡೆಗಳ ಕೂಟ ನಡೆಯಲಿದೆ. ಏಷ್ಯಾದ 45 ದೇಶಗಳು ಈ ಕೂಟದಲ್ಲಿ ನಡೆಯಲಿವೆ. 2018ರ ಏಷ್ಯಾ ಕಪ್​ನಲ್ಲಿ ಭಾರತ 1 5 ಚಿನ್ನ, 24 ಬೆಳ್ಳಿ ಹಾಗೂ 30 ಕಂಚಿನ ಪದಕಗಳನ್ನು ಗೆದ್ದಿತ್ತು. ಮುಂದಿನ ಆವೃತ್ತಿಯಲ್ಲಿ ಇದರ ಸಂಖ್ಯೆ ಹೆಚ್ಚಳವಾಗುವ ನಿರೀಕ್ಷೆಯಿದೆ.

ಏಕ ದಿನ ವಿಶ್ವ ಕಪ್​

ಭಾರತದ ಆತಿಥ್ಯದಲ್ಲಿ ಐಸಿಸಿ ಏಕ ದಿನ ಕ್ರಿಕೆಟ್​ ವಿಶ್ವ ಕಪ್​ ನಡೆಯಲಿದೆ. ಅಕ್ಟೋಬರ್​ ಮತ್ತು ನವೆಂಬರ್​ ತಿಂಗಳಲ್ಲಿ ಈ ಟೂರ್ನಿ ನಡೆಯುವ ಸಾಧ್ಯತೆಗಳಿವೆ. ದಿನಾಂಕ ಇನ್ನೂ ಪ್ರಕಟಗೊಂಡಿಲ್ಲ. 2019ರಲ್ಲಿ ಇಂಗ್ಲೆಂಡ್​ ಆತಿಥ್ಯದಲ್ಲಿ ಟೂರ್ನಿ ನಡೆದು, ಆತಿಥೇಯ ತಂಡವೇ ಚಾಂಪಿಯನ್ ಆಗಿತ್ತು. 12 ವರ್ಷಗಳಿಂದ ಐಸಿಸಿ ಟ್ರೋಫಿಯ ಬರ ಎದುರಿಸುತ್ತಿರುವ ಭಾರತಕ್ಕೆ ಕಪ್ ಗೆಲ್ಲಲು ಇದು ಸುವರ್ಣವಕಾಶ. 2011ರಲ್ಲಿ ಭಾರತದಲ್ಲಿ ನಡೆದ ವಿಶ್ವ ಕಪ್​ನಲ್ಲಿ ಧೋನಿ ನೇತೃತ್ವದ ಭಾರತ ತಂಡ ಚಾಂಪಿಯನ್ ಆಗಿತ್ತು.

ಇನ್ನೇನು ಇವೆ?

ಉಳಿದಂತೆ ವಾರ್ಷಿಕವಾಗಿ ನಡೆಯುವ ಬ್ಯಾಡ್ಮಿಂಟನ್​ ಟೂರ್​ ಮತ್ತು ಚಾಂಪಿಯನ್​ಶಿಪ್​ಗಳು, ಹಾಕಿ ಟೂರ್​ಗಳು, ಕ್ರಿಕೆಟ್​ ದ್ವಿಪಕ್ಷೀಯ ಸರಣಿಗಳು, 2023ರ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್, ಬಾಕ್ಸಿಂಗ್, ಕುಸ್ತಿ, ಶೂಟಿಂಗ್​ ಕೂಟಗಳು ನಡೆಯಲಿವೆ.

ಇದನ್ನೂ ಓದಿ | Year Ender 2022 | ಟೀಮ್​ ಇಂಡಿಯಾ ನಾಯಕ ರೋಹಿತ್​ ಶರ್ಮ ನಾಯಕತ್ವದ ಏಳು, ಬೀಳುಗಳು

Exit mobile version