Site icon Vistara News

IPL 2023: ʼʼರಿಟೈರ್‌ ಆಗೋಕೆ ಸೂಕ್ತ ಸಮಯ, ಆದ್ರೆ…ʼʼ ಐಪಿಎಲ್‌ ಟ್ರೋಫಿ ಗೆದ್ದ ಬಳಿಕ ಧೋನಿ ಹೇಳಿದ್ದೇನು?

dhoni after winning ipl 2023

ಅಹಮದಾಬಾದ್:‌ ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್‌ (IPL 2023) ಅಂತಿಮ ಪಂದ್ಯದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಟ್ರೋಫಿ ಮುಡಿಗೇರಿಸಿಕೊಂಡ ಬಳಿಕ ತಂಡದ ನಾಯಕ ಧೋನಿ (Mahendra Singh Dhoni) ʼʼನಿವೃತ್ತಿʼʼ ಎಂಬ ಪದವನ್ನು ಉಚ್ಚರಿಸಿದರು. ಸ್ಟೇಡಿಯಂನಲ್ಲಿದ್ದ ಅಷ್ಟೂ ಜನ ಒಮ್ಮೆ ತಲ್ಲಣಗೊಂಡರು.

ಆದರೆ ಅವರು ನಿರೀಕ್ಷಿಸಿದಂತೆ ನಡೆಯಲಿಲ್ಲ. ಆದದ್ದೇ ಬೇರೆ.

ಮಹೇಂದ್ರ ಸಿಂಗ್‌ ಧೋನಿ ಅವರ ನಿವೃತ್ತಿಯ ಕುರಿತ ಚರ್ಚೆ ಒಂದೆರಡು ವರ್ಷಗಳಿಂದ ಚಾಲನೆಯಲ್ಲಿದೆ. ಅಹಮದಾಬಾದ್‌ನಲ್ಲಿ ಗುಜರಾತ್‌ ಟೈಟಾನ್ಸ್‌ ಹಾಗೂ ಸಿಎಸ್‌ಕೆ ತಂಡದ ನಡುವೆ ಐಪಿಎಲ್‌ ಅಂತಿಮ ಹಣಾಹಣಿಯಲ್ಲಿ ಧೋನಿ ನೇತೃತ್ವದ ತಂಡ ಟ್ರೋಫಿ ಗೆದ್ದಿತು. ಆದರೆ ಈ ಪಂದ್ಯದಲ್ಲಿ ಧೋನಿ ʼಗೋಲ್ಡನ್‌ ಡಕ್‌ʼ ಗಳಿಸಿ ಪೆವಿಲಿಯನ್‌ಗೆ ವಾಪಸಾದರು. ಆದರೂ ತಂಡವನ್ನು ಜೋಶ್‌ನಲ್ಲಿ ಮುನ್ನಡೆಸಿ ಪದಕವನ್ನು ತಂಡದ ಪಾಲಾಗಿಸಿದರು.

ಪಂದ್ಯ ಹಾಗೂ ಪದಕಗಳ ವಿತರಣೆ ಬಳಿಕ ವೀಕ್ಷಕ ವಿವರಣಕಾರ ಹರ್ಷ ಭೋಗ್ಲೆ ಹಾಗೂ ಧೋನಿ ನಡುವೆ ನಡೆದ ಮಾತುಕತೆ ಹೀಗಿತ್ತು:

ಭೋಗ್ಲೆ: ನಾವು ಮತ್ತೆ ಭೇಟಿಯಾಗ್ತಿದೇವೆ. ನಾನು ನಿಮ್ಮನ್ನು ಒಂದು ವಿಷಯ ಕೇಳಬೇಕಾ, ಅಥವಾ ನೀವೇ ಏನಾದರೂ ಹೇಳ್ತೀರ?

ಧೋನಿ: ನೀವು ಕೇಳಿದ ಬಳಿಕ ನಾನು ಉತ್ತರಿಸುವುದು ಸೂಕ್ತ.

ಭೋಗ್ಲೆ: ಕಳೆದ ಬಾರಿ ಪದಕ ಗೆದ್ದಾಗ, ಸಿಎಸ್‌ಕೆಯಲ್ಲಿ ಏನು ಚರಿತ್ರೆ ಬಿಟ್ಟು ಹೋಗುತ್ತೀರಿ ಎಂದು ಕೇಳಿದ್ದೆ. ʼʼನಾನಿನ್ನೂ ಬಿಟ್ಟಿಲ್ಲʼʼ ಎಂದು ನೀವು ಹೇಳಿದ್ದಿರಿ.

ಧೋನಿ: ಉತ್ತರ ಬೇಕೇ? ಪರಿಸ್ಥಿತಿಗೆ ಅನುಗುಣವಾಗಿ, ಇದು ನನ್ನ ನಿವೃತ್ತಿಗೆ ಉತ್ತಮ ಸಮಯ. ಆದರೆ ಈ ಕಳೆದ ವರ್ಷದಲ್ಲಿ ನಾನು ಪಡೆದ ಪ್ರೀತಿ ಮತ್ತು ಮನ್ನಣೆ ನೋಡಿದರೆ, ʼಥ್ಯಾಂಕ್‌ ಯುʼ ಎಂದು ಹೇಳಿ ನಿರ್ಗಮಿಸುವುದು ಸುಲಭ ದಾರಿ. ಆದರೆ ಇನ್ನೂ 9 ತಿಂಗಳು ಕಠಿಣವಾಗಿ ದೇಹ ದಂಡಿಸಿ, ಇನ್ನೊಂದು ಸೀಸನ್‌ನಲ್ಲಿ ನನ್ನ ತಂಡವನ್ನು ಮುನ್ನಡೆಸಿ ಆಡುವುದು ಸೂಕ್ತ. ದೇಹವನ್ನು ಕೆಲವು ಅಂಶಗಳು ಅವಲಂಬಿಸಿವೆ; 6-7 ತಿಂಗಳಲ್ಲಿ ನಿರ್ಧರಿಸಬಹುದು. ಇದು ಸುಲಭವಲ್ಲ, ಆದರೆ ನನ್ನ ಕಡೆಯಿಂದ ಇದು ಉಡುಗೊರೆ. ಅವರು ನನಗೆ ತೋರಿಸಿದ ಪ್ರೀತಿ ಅಭಿಮಾನಕ್ಕೆ ನಾನು ಇಷ್ಟಾದರೂ ಮಾಡಬೇಕಿದೆ.

ಇದನ್ನೂ ಓದಿ: IPL 2023 : ಐಪಿಎಲ್​ 16 ಆವೃತ್ತಿಗಳ ಚಾಂಪಿಯನ್​, ರನ್ನರ್ ಅಪ್​ ತಂಡಗಳ ವಿವರ

ʼʼಇದು ನನ್ನ ವೃತ್ತಿಜೀವನದ ಕೊನೆಯ ಭಾಗವಾಗಿರುವುದರಿಂದ ಭಾವುಕರಾಗುವುದು ಸುಲಭ. ಅದು ಇಲ್ಲಿಂದಲೇ ಪ್ರಾರಂಭವಾಯಿತು. ನನ್ನ ಮೊದಲ ಆಟ ಮುಗಿದಾಗ ಎಲ್ಲರೂ ನನ್ನ ಹೆಸರನ್ನು ಕೂಗುತ್ತಿದ್ದರು. ನನ್ನ ಕಣ್ಣುಗಳು ನೀರಿನಿಂದ ತುಂಬಿದ್ದವು. ನಾನು ಸ್ವಲ್ಪ ಸಮಯ ಅಲ್ಲಿಯೇ ನಿಂತಿದ್ದೆ. ಇದನ್ನು ಆನಂದಿಸಲು ಬಯಸುತ್ತೇನೆ ಎಂದು ನಾನು ಅರಿತುಕೊಂಡೆ. ನಾನು ಹಿಂತಿರುಗಿ ಏನು ಮಾಡಬಹುದೋ ಅದನ್ನು ಮಾಡಲು ಬಯಸುತ್ತೇನೆ. ನಾನು ಏನಾಗಿದ್ದೇನೋ ಹಾಗೆಯೇ ಅವರು ನನ್ನನ್ನು ಪ್ರೀತಿಸುತ್ತಾರೆ.”

“ನಾನು ಆಡುವ ರೀತಿಯ ಕ್ರಿಕೆಟ್ ಅನ್ನು ಸ್ಟೇಡಿಯಂನಲ್ಲಿರುವ ಪ್ರತಿಯೊಬ್ಬರೂ ಆಡಬಹುದು ಎಂದು ನಾನು ಭಾವಿಸುತ್ತೇನೆ. ಹಾಗಾಗಿ ಎಲ್ಲರೂ ನನ್ನೊಂದಿಗೆ ತಾದಾತ್ಮ್ಯ ಹೊಂದುತ್ತಾರೆ ಎಂದು ನಾನು ಭಾವಿಸುತ್ತೇನೆ. ನಾನು ನನ್ನನ್ನು ಬದಲಾಯಿಸಿಕೊಳ್ಳಲು, ನಾನಲ್ಲದ ರೀತಿಯಲ್ಲಿ ನನ್ನನ್ನು ಚಿತ್ರಿಸಿಕೊಳ್ಳಲು ಬಯಸುವುದಿಲ್ಲ. ಸರಳವಾಗಿರುತ್ತೇನೆ. ನನಗೆ ಪ್ರತಿಯೊಂದು ಟ್ರೋಫಿಯೂ ವಿಶೇಷ; ಆದರೆ ಐಪಿಎಲ್‌ನ ವಿಶೇಷತೆ ಏನೆಂದರೆ ನೀವು ಪ್ರತಿಕ್ಷಣವೂ ಸಿದ್ಧರಾಗಿರಬೇಕಾದ ಆಟವದು” ಎಂದು ಧೋನಿ ಹೇಳಿದ್ದಾರೆ.

ಇದನ್ನೂ ಓದಿ: IPL 2023 : ಚೆನ್ನೈ ಚಾಂಪಿಯನ್​, ಐದನೇ ಬಾರಿ ಐಪಿಎಲ್​ ಟ್ರೋಫಿ ಗೆದ್ದ ಧೋನಿ ಬಳಗ​​

Exit mobile version