ಧರ್ಮಶಾಲಾ: ದಶಕದ ಬಳಿಕ ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ನಡೆಯುತ್ತಿರುವ ಐಪಿಎಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಭರ್ಜರಿ ಬ್ಯಾಟಿಂಗ್ ನಡೆಸಿ ಬೃಹತ್ ಮೊತ್ತ ಕಲೆಹಾಕಿದೆ. ಆತಿಥೇಯ ಪಂಜಾಬ್ ಗೆಲುವಿಗೆ 214 ರನ್ ಬಾರಿಸಬೇಕಿದೆ.
ಟಾಸ್ ಸೋತು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಡೆಲ್ಲಿ ಜೋಶ್ನಿಂದಲೇ ಬ್ಯಾಟ್ ಬೀಸಿ ನಿಗದಿತ 20 ಓವರ್ಗಳಲ್ಲಿ 2 ವಿಕೆಟ್ನಷ್ಟಕ್ಕೆ 213 ರನ್ ಗಳಿಸಿದೆ. ಡೆಲ್ಲಿ ಪರ ರಿಲೀ ರೊಸೊ(82* ), ಪೃಥ್ವಿ ಶಾ(54) ಡೇವಿಡ್ ವಾರ್ನರ್(46) ರನ್ ಗಳಿಸಿ ಮಿಂಚಿದರು.
ಇನಿಂಗ್ಸ್ ಆರಂಭಿಸಿದ ಡೆಲ್ಲಿ ಆರಂಭಿಕ ಎರಡು ಓವರ್ನಲ್ಲಿ ರಕ್ಷಣಾತ್ಮಕ ಆಟವಾಡಿತು. 2 ಓವರ್ಗೆ ಕೇವಲ 6 ರನ್ ಮಾತ್ರ ಒಟ್ಟುಗೂಡಿತು. ಈ ರನ್ ಗಮನಿಸುವಾಗ ಡೆಲ್ಲಿ ಈ ಪಂದ್ಯದಲ್ಲಿಯೂ ಅಲ್ಪ ಮೊತ್ತ ದಾಖಲಿಸಲಿದೆ ಎಂದು ಊಹಿಸಲಾಯಿತು. ಆದರೆ ಮುಂದಿನ ಓವರ್ನಿಂದ ಜಿದ್ದಿಗೆ ಬಿದ್ದವರಂತೆ ಬಿರುಸಿನ ಬ್ಯಾಟಿಂಗ್ ನಡೆಸಿದ ವಾರ್ನರ್ ಮತ್ತು ಪೃಥ್ವಿ ಶಾ ಪಂಜಾಬ್ ಬೌಲರ್ಗಳಿಗೆ ಸತತ ಸಿಕ್ಸರ್ ಮತ್ತು ಬೌಂಡರಿ ರುಚಿ ತೋರಿಸಲಾರಂಭಿಸಿದರು. ಉಭಯ ಆಟಗಾರರ ಈ ಬ್ಯಾಟಿಂಗ್ ಆರ್ಭಟದಿಂದ ರನ್ ವೇಗ ಹಠಾತ್ 10ರ ಸರಾಸರಿಯಲ್ಲಿ ಸಾಗಿ 7 ಓವರ್ಗೆ 70 ರನ್ಗಳ ಗಡಿ ದಾಟಿತು.
ಬಿರುಸಿನ ಬ್ಯಾಟಿಂಗ್ ನೆಡೆಸುತ್ತಿದ್ದ ವಾರ್ನರ್ ಅವರು 41 ರನ್ ಗಳಿಸಿದ್ದ ವೇಳೆ ರಾಹುಲ್ ಚಹರ್ ಅವರಿಂದ ಜೀವದಾನ ಪಡೆದರು. ಆದರೆ ಈ ಅವಕಾಶವನ್ನು ಅವರು ಹೆಚ್ಚು ಕಾಲ ಬಳಸಿಕೊಳ್ಳುವಲ್ಲಿ ವಿಫಲರಾದರು. ಮುಂದಿನ 5 ರನ್ ಅಂತರದಲ್ಲಿ ಅವರು ವಿಕೆಟ್ ಕೈ ಚೆಲ್ಲಿದರು. ಅಸಾಧ್ಯವಾದ ಕ್ಯಾಚ್ ಒಂದನ್ನು ಚಿರತೆ ವೇಗದಲ್ಲಿ ಓಡಿ ಕ್ಯಾಚ್ ಹಿಡಿಯುವ ಮೂಲಕ ಶಿಖರ್ ಧವನ್ ಅವರು ವಾರ್ನರ್ ಅವರನ್ನು ಪೆವಿಲಿಯನ್ಗೆ ಕಳುಹಿಸಿದರು. ವಾರ್ನರ್ ಮತ್ತು ಪೃಥ್ವಿ ಶಾ ಮೊದಲ ವಿಕೆಟ್ಗೆ 94 ರನ್ ರಾಶಿ ಹಾಕಿದರು. ವಾರ್ನರ್ ಗಳಿಕೆ 46 ರನ್
ಅರ್ಧಶತಕ ಬಾರಿಸಿದ ಪೃಥ್ವಿ ಶಾ
ಆರಂಭಿಕ ಪಂದ್ಯಗಳಲ್ಲಿ ಸತತ ಸೊನ್ನೆ ಸುತ್ತಿ ಬಳಿಕ ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿದರೂ ಬ್ಯಾಟಿಂಗ್ ವೈಫಲ್ಯ ಕಂಡು ಬಾರಿ ಟೀಕೆಗೆ ಗುರಿಯಾಗಿದ್ದ ಪೃಥ್ವಿ ಶಾ, ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಅರ್ಧಶತಕ ಬಾರಿಸಿ ಮಿಂಚಿದರು. ತಮ್ಮ ಹಳೇಯ ಬ್ಯಾಟಿಂಗ್ ಶೈಲಿಯಲ್ಲೇ ಬ್ಯಾಟ್ ಬೀಸಿದ ಅವರು 7 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ 54 ರನ್ ಗಳಿಸಿದರು. ಇದರ ಮಧ್ಯೆ ಅವರು ಎರಡು ಬಾರಿ ಕೈ ಬೆರಳಿನ ಗಾಯಕ್ಕೂ ತುತ್ತಾದರು. ಇದು ಪೃಥ್ವಿ ಶಾ ಅವರು ಈ ಆವೃತ್ತಿಯ ಐಪಿಎಲ್ನಲ್ಲಿ ಬಾರಿಸಿದ ಮೊದಲ ಅರ್ಧಶತಕ ಮತ್ತು ಗರಿಷ್ಠ ಮೊತ್ತವಾಗಿದೆ. ವಾರ್ನರ್ ಜತೆ ಉತ್ತಮ ಇನಿಂಗ್ಸ್ ಕಟ್ಟಿದ ಅವರು ಆ ಬಳಿಕ ದ್ವಿತೀಯ ವಿಕೆಟ್ಗೆ ರೂಸೊ ಜತೆ ಸೇರಿ 54 ರನ್ಗಳ ಅತ್ಯಮೂಲ್ಯ ಜತೆಯಾಟ ನಡೆಸಿದರು.
ವಾರ್ನರ್ ವಿಕೆಟ್ ಪತನದ ಬಳಿಕ ಬ್ಯಾಟ್ ಹಿಡಿದು ಬಂದ ದಕ್ಷಿಣ ಆಫ್ರಿಕಾದ ದೈತ್ಯ ಬ್ಯಾಟರ್ ರಿಲೀ ರೂಸೊ ಅವರು ಸ್ಫೋಟಕ ಬ್ಯಾಟಿಂಗ್ ನಡೆಸಿದರು. ಯುವರಾಜ್ ಸಿಂಗ್ ಶೈಲಿಯಲ್ಲಿ ಬ್ಯಾಟಿಂಗ್ ನಡೆಸಿ ಸಿಕ್ಸರ್ ಮತ್ತು ಬೌಂಡರಿಗಳ ಸುರಿಮಳೆಯನ್ನೇ ಸುರಿಸಿದರು. 26 ಎಸೆತಗಳಲ್ಲಿ ಅರ್ಧಶತಕವನ್ನು ಪೂರೈಸಿದರು. ಡೆಲ್ಲಿ ಆಟಗಾರರ ಆಟವನ್ನು ಗಮನಿಸುತ್ತಿದ್ದ ಕೋಚ್ ರಿಕಿ ಪಾಂಟಿಂಗ್ ಮತ್ತು ತಂಡದ ನಿರ್ದೇಶಕ ಸೌರವ್ ಗಂಗೂಲಿ ಅವರು ಈ ಪ್ರದರ್ಶನವನ್ನು ಆರಂಭದಲ್ಲೇ ತೋರಿಸುತ್ತಿದ್ದರೆ ನಾವು ಕೂಡ ಪ್ಲೇ ಆಫ್ ರೇಸ್ನಲ್ಲಿರಬಹುದಿತ್ತು ಎನ್ನುವ ಅರ್ಥದಲ್ಲಿ ಸಂಭಾಷಣೆ ನಡೆಸುತ್ತಿರುವುದು ಕಂಡು ಬಂತು.
ಇದನ್ನೂ ಓದಿ IPL 2023: ಕೇಶವಿನ್ಯಾಸದಲ್ಲಿ ಅರಳಿದ ಆರ್ಸಿಬಿ, ವಿರಾಟ್ ಕೊಹ್ಲಿ ಚಿತ್ರ
ಒಟ್ಟು 37 ಎಸೆತ ಎದುರಿಸಿದ ರೂಸೊ ಅವರು ತಲಾ 6 ಸಿಕ್ಸರ್ ಮತ್ತು ಬೌಂಡರಿ ಸಿಡಿಸಿ ಅಜೇಯ 82 ರನ್ ಗಳಿಸಿದರು. ಅಂತಿಮ ಹಂತದಲ್ಲಿ ಫಿಲಿಪ್ ಸಾಲ್ಟ್ ಕೂಡ ಅಬ್ಬರ ಬ್ಯಾಟಿಂಗ್ ನಡೆಸಿ 14 ಎಸೆತಗಳ ಮುಂದೆ ಅಜೇಯ 26 ರನ್ ಬಾರಿಸಿದರು. ಪಂಜಾಬ್ ಪರ ಸ್ಯಾಮ್ ಕರನ್ 2 ವಿಕೆಟ್ ಕೆಡವಿದರು.