ಕೋಲ್ಕೊತಾ: ಭಾನುವಾರ ರಾತ್ರಿ ಕೋಲ್ಕೊತಾದಲ್ಲಿ ನಡೆದ ಬೃಹತ್ ಮೊತ್ತದ ಐಪಿಎಲ್ ಮೇಲಾಟದಲ್ಲಿ ಚೆನ್ನೈ 49 ರನ್ನುಗಳಿಂದ ಕೆಕೆಆರ್ಗೆ ಆಘಾತವಿಕ್ಕಿದೆ. ಧೋನಿ ಪಡೆ ಈ ಗೆಲುವಿನೊಂದಿಗೆ 10 ಅಂಕ ಗಳಿಸಿ ಅಗ್ರಸ್ಥಾನಕ್ಕೆ ಜಿಗಿದಿದೆ. ಇದಕ್ಕೂ ಮುನ್ನ ಮೂರನೇ ಸ್ಥಾನದಲ್ಲಿತ್ತು. ಚೆನ್ನೈ ಪರ ವಿಸ್ಫೋಟಕ ಬ್ಯಾಟಿಂಗ್ ನಡೆಸಿದ ಅಜಿಂಕ್ಯ ರಹಾನೆ ಕೇವಲ 29 ಎಸೆತಗಳ ಮುಂದೆ 71 ರನ್ ಬಾರಿಸಿ ಮಿಂಚಿದರು.
ಕೋಲ್ಕೊತಾದ ಐತಿಹಾಸಿಕ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಚೆನ್ನೈ ಸೂಪರ್ ಕಿಂಗ್ಸ್ ತಂಡ ನಿಗದಿತ 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 234 ರನ್ ಗಳಿಸಿತು. ದೊಡ್ಡ ಮೊತ್ತವನ್ನು ದಿಟ್ಟ ರೀತಿಯಲ್ಲಿ ಬೆನ್ನಟ್ಟಿ ಹೋದ ಕೆಕೆಆರ್ ತನ್ನ ಪಾಲಿನ ಆಟದಲ್ಲಿ 8 ವಿಕೆಟ್ ಕಳೆದುಕೊಂಡು 186 ರನ್ ಗಳಿಸಲಷ್ಟೇ ಶಕ್ತವಾಯಿತು.
ದೊಡ್ಡ ಮೊತ್ತವನ್ನು ಬೆನ್ನಟ್ಟಿದ ಕೆಕೆಆರ್ ಆರಂಭದಲ್ಲೇ ವಿಕೆಟ್ ಕಳೆದುಕೊಂಡಿತು. ಸುನೀಲ್ ನಾರಾಯಣ್(0), ಎನ್. ಜಗದೀಶನ್(1), ವೆಂಕಟೇಶ್ ಅಯ್ಯರ್(20) ರನ್ಗೆ ಆಟ ಮುಗಿಸಿದರು. ತಂಡದ ಮೊತ್ತ 50 ಆಗುವ ಮೊದಲೇ ಮೂರು ವಿಕೆಟ್ ಬಿತ್ತು. ಇನ್ನೇನು ತಂಡ ನೂರು ಮೊತ್ತವನ್ನು ದಾಟುವುದಿಲ್ಲ ಎನ್ನುವಷ್ಟರಲ್ಲಿ ಕ್ರೀಸ್ಗೆ ಬಂದ ಇಂಗ್ಲೆಂಡ್ ತಂಡದ ಹಾರ್ಡ್ ಹಿಟ್ಟರ್ ಜಾಸನ್ ರಾಯ್ ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ಕೆಕೆಆರ್ಗೆ ಗೆಲುವಿನ ವಿಶ್ವಾಸ ಮೂಡಿಸಿದರು.
ಕೇವಲ 19 ಎಸೆತಗಳ ಮುಂದೆ ಅರ್ಧಶತಕ ಪೂರೈಸಿದರು. ಇದು ಈ ಆವೃತ್ತಿಯಲ್ಲಿ ದಾಖಲಾದ ಮೂರನೇ ಅತಿ ವೇಗದ ಅರ್ಧಶತಕವಾಗಿದೆ. ಅಜಿಂಕ್ಯ ರಹಾನೆ ಕೂಡ 19 ಎಸೆತದಲ್ಲಿ ಅರ್ಧಶತಕ ಬಾರಿಸಿದ್ದರು. ಅಗ್ರ ಸ್ಥಾನದಲ್ಲಿ ಲಕ್ನೋ ತಂಡದ ನಿಕೋಲಸ್ ಪೂರನ್ ಇದ್ದಾರೆ. ಅವರು ಆರ್ಸಿಬಿ ವಿರುದ್ಧ 15 ಎಸೆತದಲ್ಲಿ ಈ ಸಾಧನೆ ಮಾಡಿದ್ದರು. ಸತತ ಬೌಂಡರಿ ಮತ್ತು ಸಿಕ್ಸರ್ ಬಾರಿಸುತ್ತಿದ್ದ ರಾಯ್ ಅವರನ್ನು ಮಹೀಶ್ ತೀಕ್ಷಣ ಕ್ಲೀನ್ ಬೌಲ್ಟ್ ಮಾಡಿದರು. ರಾಯ್ 26 ಎಸೆತದಲ್ಲಿ 61 ರನ್ ಬಾರಿಸಿದರು. ಇದರಲ್ಲಿ 50 ರನ್ ಕೇವಲ ಸಿಕ್ಸರ್ ಮತ್ತು ಬೌಂಡರಿಯಲ್ಲೇ ದಾಖಲಾಯಿತು. ತಲಾ 5 ಸಿಕ್ಸರ್ ಮತ್ತು ಬೌಂಡರಿ ಸಿಡಿಯಿತು. ರಾಯ್ ಅವರ ವಿಕೆಟ್ ಪತನದ ಬಳಿಕ ಕೆಕೆಆರ್ ಸೋಲು ಕೂಡ ಖಚಿತಗೊಂಡಿತು.
ರಿಂಕು ಸಿಂಗ್ ಅವರು ಕೆಳ ಕ್ರಮಾಂಕದಲ್ಲಿ ಏಕಾಂಗಿ ಹೋರಾಟ ನಡೆಸಿದರೂ ಅವರಿಗೆ ಉಳಿದ ಆಟಗಾರರಿಂದ ಸರಿಯಾದ ಬೆಂಬಲ ಸಿಗದ ಕಾರಣ ತಂಡ ಸೋಲು ಕಂಡಿತು. ಅವರ ಅರ್ಧಶತಕ ಇನಿಂಗ್ಸ್ ವ್ಯರ್ಥವಾಯಿತು. ಆದರೆ ದೊಡ್ಡ ಅಂತರದಿಂದ ಸೋಲುವ ಅವಮಾನದಿಂದ ತಂಡ ಪಾರಾಯಿತು. ರಿಂಕು ಅವರು 53 ರನ್ ಬಾರಿಸಿ ಅಜೇಯರಾಗಿ ಉಳಿದರು.
ಇದಕ್ಕೂ ಮುನ್ನ ಇನಿಂಗ್ಸ್ ಆರಂಭಿಸಿದ ಚೆನ್ನೈಗೆ ಆರಂಭಿಕಾರಾದ ಋತುರಾಜ್ ಗಾಯಕ್ವಾಡ್ ಮತ್ತು ಡೆವೋನ್ ಕಾನ್ವೆ ಉತ್ತಮ ಅಡಿಪಾಯ ನಿರ್ಮಿಸಿದರು. ಈ ಜೋಡಿ 10 ಸರಾಸರಿಯಲ್ಲಿ ಬ್ಯಾಟ್ ಬೀಸಿ ಪವರ್ ಪ್ಲೇಯಲ್ಲಿ 59 ರನ್ ಒಟ್ಟುಗೂಡಿಸಿದರು. ಜಿದ್ದಿಗೆ ಬಿದ್ದವರಂತೆ ಬ್ಯಾಟ್ ಬೀಸುತ್ತಿದ್ದ ಈ ಜೋಡಿಯನ್ನು 19 ವರ್ಷದ ನೀಳ ಕೇಶದ ಮಿಸ್ಟ್ರಿ ಸ್ಪಿನ್ನರ್ ಸುಯೇಶ್ ಶರ್ಮಾ ಬೇರ್ಪಡಿಸುವಲ್ಲಿ ಯಶಸ್ವಿಯಾದರು. ಗಾಯಕ್ವಾಡ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದರು. ಅವರ ಗಳಿಕೆ 20 ಎಸೆತಗಳಲ್ಲಿ 35. ಈ ವಿಕೆಟ್ ಬಿದ್ದರೂ ಚೆನ್ನೈಗೆ ಯಾವುದೇ ತೊಂದರೆ ಆಗಲಿಲ್ಲ. ಬಳಿಕ ಆಡಲಿಳಿದ ಅಜಿಂಕ್ಯ ರಹಾನೆ ಕೂಡ ಬಿರುಸಿನಿಂದಲೇ ಬ್ಯಾಟಿಂಗ್ ನಡೆಸಿದರು. ಮತ್ತೊಂದು ಬದಿಯಲ್ಲಿ ಸಿಡಿಯುತ್ತಿದ್ದ ಎಡಗೈ ಬ್ಯಾಟರ್ ಡೆವೋನ್ ಕಾನ್ವೆ 34 ಎಸೆತಗಳ ಮುಂದೆ ಅರ್ಧಶತಕ ಪೂರೈಸಿದರು.
ಇದನ್ನೂ ಓದಿ IPL 2023: ಫೀಲ್ಡಿಂಗ್ನಲ್ಲಿ ದಾಖಲೆ; ಪತ್ನಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ಕೊಹ್ಲಿ; ಇಲ್ಲಿದೆ ವಿಡಿಯೊ
ರಹಾನೆ-ದುಬೆ ಬೊಂಬಾಟ್ ಬ್ಯಾಟಿಂಗ್
12 ಓವರ್ಗಳ ತನಕ ಬ್ಯಾಟಿಂಗ್ ವಿಸ್ತರಿಸಿದ ಕಾನ್ವೆ ಮೂರು ಸಿಕ್ಸರ್ ಮತ್ತು ನಾಲ್ಕು ಬೌಂಡರಿ ಬಾರಿಸಿ 56 ರನ್ ಗಳಿಸಿದರು. ಈ ವಿಕೆಟ್ ಪತನದ ಬಳಿಕ ಕ್ರೀಸ್ಗೆ ಬಂದ ಶಿವಂ ದುಬೆ ಆರಂಭದಿಂದಲೇ ಕೆಕೆಆರ್ ಬೌಲರ್ಗಳ ಮೇಲೆರಗಿ ಈಡನ್ ಗಾರ್ಡನ್ಸ್ನಲ್ಲಿ ಸಿಕ್ಸರ್ ಬೌಂಡರಿಗಳ ಸುರಿಮಳೆಯನ್ನೇ ಸುರಿಸಿದರು. ಮತ್ತೊಂದು ಬದಿಯಲ್ಲಿ ಬ್ಯಾಟಿಂಗ್ ನಡೆಸುತ್ತಿದ್ದ ಅಜಿಂಕ್ಯ ರಹಾನೆ ಕೂಡ ಸಿಡಿಯುತ್ತಿದ್ದರು.
ಉಭಯ ಆಟಗಾರರ ಬ್ಯಾಟಿಂಗ್ ಪ್ರತಾಪದ ಮುಂದೆ ಕೆಕೆಆರ್ ಬೌಲರ್ಗಳು ಸರಿಯಾಗಿ ದಂಡಿಸಿಕೊಂಡರು. ಪ್ರತಿ ಓವರ್ಗೂ ಕನಿಷ್ಠ 2 ಬೌಂಡರಿ ಅಥವಾ ಸಿಕ್ಸರ್ ಸಿಡಿಯುತ್ತಲ್ಲೇ ಇತ್ತು. ರಹಾನೆ ಕೇವಲ 24 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಇದರ ಬೆನ್ನಿಗೆ ದುಬೆ ಕೂಡ 20 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ಔಟಾದರು. ಅವರು 5 ಸಿಕ್ಸರ್ ಮತ್ತು 2 ಬೌಂಡರಿ ನೆರವಿನಿಂದ ಭರ್ತಿ 50 ರನ್ ಬಾರಿಸಿದರು. ಈ ಜೋಡಿ ಮೂರನೇ ವಿಕೆಟ್ಗೆ 85 ರನ್ಗಳನ್ನು ರಾಶಿ ಹಾಕಿತು.
ಅಜೇಯರಾಗಿ ಉಳಿದ ರಹಾನೆ ಕೇವಲ 29 ಎಸೆತಗಳ ಮುಂದೆ 71 ರನ್ ಬಾರಿಸಿದರು. ಈ ಇನಿಂಗ್ಸ್ ವೇಳೆ ಬರೋಬ್ಬರಿ 5 ಸಿಕ್ಸರ್ ಮತ್ತು 6 ಬೌಂಡರಿ ಸಿಡಿಯಿತು. ಅಂತಿಮ ಹಂತದಲ್ಲಿ ಜಡೇಜಾ ಕೂಡ ಸ್ಫೋಟಕ ಬ್ಯಾಟಿಂಗ್ ನಡೆಸಿದ ಪರಿಣಾಮ ತಂಡ ಬೃಹತ್ ಮೊತ್ತ ಕಲೆಹಾಕಿತು. ಜಡೇಜಾ 8 ಎಸೆತದಲ್ಲಿ 18 ರನ್ ಗಳಿಸಿದರು.