ಅಹಮದಾಬಾದ್: ಕಳೆದ ವರ್ಷ ಪಾತಾಳಕ್ಕೆ ಕುಸಿದಿದ್ದ ಚೆನ್ನೈ ಈ ಬಾರಿ ಫೀನಿಕ್ಸ್ ನಂತೆ ಮೇಲೆದ್ದು ನಿಂತು ತನ್ನ ಸಾಮರ್ಥ್ಯ ಏನೆಂಬುದನ್ನು ನಿರೂಪಿಸಿದೆ. ಇನ್ನೊಂದೆಡೆ ಸತತ ಎರಡನೇ ಬಾರಿಗೆ ಗುಜರಾತ್ ಫೈನಲ್ ಪ್ರವೇಶಿಸಿದೆ. ಉಭಯ ತಂಡಗಳ ಈ ಪ್ರಶಸ್ತಿ ಸಮರ ಭಾನುವಾರ ಅಹಮದಾಬಾದ್ನಲ್ಲಿ ಏರ್ಪಟ್ಟಿದೆ. ಗುಜರಾತ್ಗೆ ತವರಿನ ಲಾಭ ಒಂದೆಡೆಯಾದರೆ, ಚೆನ್ನೈಗೆ ಧೋನಿ ಅವರ ಮಾಸ್ಟರ್ ಪ್ಲ್ಯಾನ್ ನೆರೆವಾಗುವ ಸಾಧ್ಯತೆ ಇದೆ. ಹೀಗಾಗಿ ಇದು ಹೈವೋಲ್ಟೆಜ್ ಕದನ ಎಂದು ನಿರೀಕ್ಷೆ ಮಾಡಬಹುದು.
ಗಿಲ್ ಪ್ರಚಂಡ ಫಾರ್ಮ್
ಯುವ ಆಟಗಾರ ಶುಭಮನ್ ಗಿಲ್ ಅವರು ಪ್ರತಿ ಪಂದ್ಯದಲ್ಲಿಯೂ ತಮ್ಮ ಬ್ಯಾಟಿಂಗ್ ಪ್ರತಾಪವನ್ನು ತೋರಿಸುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದಾರೆ. ಸದ್ಯ ಅವರು ಆಡಿದ 16 ಪಂದ್ಯಗಳಲ್ಲಿ ಮೂರು ಶತಕ ಒಳಗೊಂಡಂತೆ 851 ರನ್ ಬಾರಿಸಿ ಆರೆಂಜ್ ಕ್ಯಾಪ್ ಹೋಲ್ಡರ್ ಆಗಿದ್ದಾರೆ. ಅದರಲ್ಲೂ ಕಳೆದ ಮುಂಬೈ ವಿರುದ್ಧದ ಕ್ವಾಲಿಫೈಯರ್ ಪಂದ್ಯದಲ್ಲಿ ಅವರು ತೋರಿದ ಪ್ರದರ್ಶನಕ್ಕೆ ಕ್ರಿಕೆಟ್ ದಿಗ್ಗಜರು ಕೂಡ ಸಲಾಂ ಹೊಡೆದಿದ್ದರು. ಇದೀಗ ಮಹತ್ವದ ಪಂದ್ಯದಲ್ಲಿಯೂ ಅವರ ಮೇಲೆ ತಂಡ ಬೆಟ್ಟದಷ್ಟು ನಿರೀಕ್ಷೆ ಇರಿಸಿದೆ.
ಗಿಲ್ ಅವರ ಹೊರತಾಗಿಯೂ ಗುಜರಾತ್ ಪಾಳಯದಲ್ಲಿ ಮತ್ತಷ್ಟು ಬ್ಯಾಟರ್ಗಳು ತಂಡದ ಸಂಕಷ್ಟದಲ್ಲಿ ಸಿಡಿದು ನಿಲ್ಲುವ ಸಾಮರ್ಥ್ಯ ಹೊಂದಿದ್ದಾರೆ. ನಾಯಕ ಪಾಂಡ್ಯ, ರಶೀದ್ ಖಾನ್, ಡೇವಿಡ್ ಮಿಲ್ಲರ್ ಅವರು ಯಾವುದೇ ಹಂತದಲ್ಲಿಯೂ ಸ್ಫೋಟಕ ಬ್ಯಾಟಿಂಗ್ ಮೂಲಕ ಪಂದ್ಯದ ಗತಿಯನ್ನೇ ಬದಲಿಸಬಲ್ಲರು. ಹೀಗಾಗಿ ಗುಜರಾತ್ ಬ್ಯಾಟಿಂಗ್ ಬಲಿಷ್ಠವಾಗಿದೆ. ಬೌಲಿಂಗ್ನಲ್ಲಿ ಹಿರಿಯ ವೇಗಿ ಮೋಹಿತ್ ಶರ್ಮ ಅವರಂತು ತಮ್ಮ ಬೌಲಿಂಗ್ ಮೋಡಿಯ ಮೂಲಕ ಎದುರಾಳಿಗಳನ್ನು ಹೆಡೆಮುರಿ ಕಟ್ಟುವಲ್ಲಿ ಸಮರ್ಥರಿದ್ದಾರೆ. ಇದಕ್ಕೆ ಕಳೆದ ಪಂದ್ಯವೇ ಉತ್ತಮ ಸಾಕ್ಷಿ. 2.2 ಓವರ್ ಮಾಡಿದ ಅವರು ಕೇವಲ 10 ರನ್ ನೀಡಿ ಪ್ರಮುಖ 5 ವಿಕೆಟ್ ಉಡಾಯಿಸಿದ್ದರು. ಪಂದ್ಯದ ಬಳಿಕ ಮಾತನಾಡಿದ ಅವರು ಫೈನಲ್ ಪಂದ್ಯದಲ್ಲಿಯೂ ಅವಕಾಶ ಸಿಕ್ಕರೆ ಇದಕ್ಕಿಂತಲೂ ಶ್ರೇಷ್ಠಮಟ್ಟದ ಬೌಲಿಂಗ್ ತೋರ್ಪಡಿಸುವುದಾಗಿ ವಿಶ್ವಾಸದ ಮಾತುಗಳನ್ನು ಆಡಿದ್ದರು. ಉಳಿದಂತೆ ಪರ್ಪಲ್ ಕ್ಯಾಪ್ಧಾರಿ ಮೊಹಮ್ಮದ್ ಶಮಿ, ರಶೀದ್ ಖಾನ್ ಕೂಡ ಉತ್ತಮ ಲಯದಲ್ಲಿದ್ದಾರೆ.
ಇದನ್ನೂ ಓದಿ IPL 2023: ಚೆನ್ನೈ,ಗುಜರಾತ್ ಫೈನಲ್ ಪಂದ್ಯದ ಪಿಚ್ ರಿಪೋರ್ಟ್, ಹವಾಮಾನ ವರದಿಯ ಸಂಪೂರ್ಣ ಮಾಹಿತಿ
ಚೆನ್ನೈಗೆ ಅನುಭವದ ಬಲ
ಹೆಚ್ಚಾಗಿ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿರುವ ಮಹೇಂದ್ರ ಸಿಂಗ್ ಧೋನಿ, ಅಜಿಂಕ್ಯ ರಹಾನೆ, ರವೀಂದ್ರ ಜಡೇಜಾ, ಡೆವೋನ್ ಕಾನ್ವೆ ಮತ್ತು ಮೊಯಿನ್ ಅಲಿ ಅವರ ಅನುಭವದ ಜತೆಗೆ ಯುವ ಆಟಗಾರರ ಹುಮ್ಮಸ್ಸು ಹೊಂದಿರುವ ಚೆನ್ನೈ ತಂಡವು ಬಲಿಷ್ಠವಾಗಿದೆ. ಇದೆಲ್ಲದರ ಹೊರತಾಗಿಯೂ ಕೂಲ್ ಕ್ಯಾಪ್ಟನ್ ಅವರ ಮಾಸ್ಟರ್ ಮೈಂಡ್ ಕೂಡ ಇಲ್ಲಿ ಪ್ರಮುಖ ಪಾತ್ರವಹಿಸಲಿದೆ. ಈ ಬಾರಿ ಮಂಡಿ ನೋವನ್ನು ಲೆಕ್ಕಿಸದೇ ಅವರು ಬ್ಯಾಡೆಂಜ್ ಕಟ್ಟಿಕೊಂಡು ಆಡುತ್ತಿರುವುದನ್ನು ನೋಡಿದರೆ ತಂಡಕ್ಕೆ ಕಪ್ ಗೆಲ್ಲಿಸುವ ಪಣತೊಟ್ಟಿರುವುದು ಪಕ್ಕಾ ಎಂಬಂತಿದೆ.
ಗಿಲ್ ಅವರಂತೆ ಚೆನ್ನೈ ತಂಡದಲ್ಲಿ ಋತುರಾಜ್ ಗಾಯಕ್ವಾಡ್ ಕೂಡ ಉತ್ತಮ ಬ್ಯಾಟಿಂಗ್ ಫಾರ್ಮ್ನಲ್ಲಿದ್ದಾರೆ. ಅವರು ಶತಕ ಬಾರಿಸದಿದ್ದರೂ ಹಕವು ಅರ್ಧಶತಕಗಳನ್ನು ಬಾರಿಸಿ ತಂಡಕ್ಕೆ ಗೆಲುವು ತಂದುಕೊಟ್ಟಿದ್ದಾರೆ. ಇವರಲ್ಲದೆ ಆಲ್ ರೌಂಡರ್ ಶಿವಂ ದುಬೆ ಅವರು ಅತ್ಯಂತ ಅಪಾಯಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಒಂದೊಮ್ಮೆ ಇವರು ಈ ಪಂದ್ಯದಲ್ಲಿ ಕ್ರೀಸ್ ಕಚ್ಚಿನಿಂತರೆ ಎದುರಾಳಿ ಬೌಲರ್ಗಳು ದಂಡಿಸಿಕೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ. ಯುವರಾಜ್ ಸಿಂಗ್ ಅವರ ಶೈಲಿಯಲ್ಲಿ ಬ್ಯಾಟ್ ಬೀಸುವ ಇವರು ಸಿಕ್ಸರ್ಗಳ ಮಳೆಯನ್ನೇ ಸುರಿಸುವುದು ಖಂಡಿತ.