ಅಹಮದಾಬಾದ್: ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾನುವಾರ ನಡೆಯಬೇಕಿದ್ದ ಐಪಿಎಲ್ ಪ್ರಶಸ್ತಿ ಸಮರ ಮಳೆಯಿಂದಾಗಿ ರಾತ್ರಿ 11 ಗಂಟೆಯ ತನಕ ಆರಂಭವಾಗಿಲ್ಲ. ಟಾಸ್ ಕೂಡ ಹಾಕಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಅಂಪೈರ್ಗಳು ಈ ಪಂದ್ಯದನ್ನು ಮೀಸಲು ದಿನವಾದ ಸೋಮವಾರಕ್ಕೆ ಮುಂದೂಡಿದರು. ಇದೀಗ ಸೋಮವಾರವೂ ಪಂದ್ಯ ನಡೆಯಲಿದೆಯಾ ಎಂಬ ಅಭಿಮಾನಿಗಳ ಕುತೂಹಲಕ್ಕೆ ಮಳೆ ತಣ್ಣಿರೇರಚುವ ಸಾಧ್ಯತೆ ಅಧಿಕ ಎಂದು ತಿಳಿದುಬಂದಿದೆ.
ಸದ್ಯ ಅಹಮದಾಬಾದ್ನಲ್ಲಿ ಮಳೆಯಾಗುತ್ತಿಲ್ಲ. ಆದರೆ ಸಂಜೆ ವೇಳೆ ಇಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ನೂಚನೆ ನೀಡಿದೆ. ಒಂದು ವೇಳೆ ಮೀಸಲು ದಿನದಂದು ಹೆಚ್ಚುವರಿ ಸಮಯದ ಅಂತ್ಯದ ವೇಳೆಗೆ 5-ಓವರ್‌ಗಳ ಪಂದ್ಯವನ್ನೂ ಪೂರ್ಣಗೊಳಿಸಲು ಸಾಧ್ಯವಾಗದ ಸಂದರ್ಭದಲ್ಲಿ, ಫಲಿತಾಂಶ ಪಡೆಯಲು ಸೂಪರ್ ಓವರ್ ಆಡಲಾಗುತ್ತದೆ. ಆದರೆ ತಂಡಗಳು ಅನುಮತಿಸಿದರೆ ಮಾತ್ರ. ಅಂದರೆ ಪಿಚ್ ಮತ್ತು ಮೈದಾನ ಆಟಕ್ಕೆ ಸಿದ್ಧವಾಗಿರಬೇಕು ಆದ್ದರಿಂದ ಇಂತಹ ಸಂದರ್ಭದಲ್ಲಿ ಸೂಪರ್ ಓವರ್ 1.20 ಕ್ಕೆ ಪ್ರಾರಂಭವಾಗುತ್ತದೆ.
ಮೀಸಲು ದಿನದಂದೂ ಸೂಪರ್ ಓವರ್ ಪೂರ್ಣಗೊಳಿಸಲು ಸಾಧ್ಯವಾಗದಿದ್ದಲ್ಲಿ, ಆಗ ನಿಯಮಿತ ಋತುವಿನ 70 ಪಂದ್ಯಗಳ ನಂತರ ಲೀಗ್ ಟೇಬಲ್‌ನಲ್ಲಿ ಅಗ್ರ ಸ್ಥಾನ ಗಳಿಸಿದ ತಂಡವನ್ನು ವಿಜೇತ ಎಂದು ಘೋಷಿಸಲಾಗುತ್ತದೆ. ಈ ಅದೃಷ್ಟ ಗುಜರಾತ್ ತಂಡಕ್ಕೆ ಒಲಿಯಲಿದೆ. ಸದ್ಯ ಕ್ರಿಕೆಟ್ ಅಭಿಮಾನಿಗಳು ಈ ಪಂದ್ಯಕ್ಕೆ ಮಳೆ ಕಾಡದಿರಲಿ ಎಂದು ಪ್ರಾರ್ಥಿಸುತ್ತಿದ್ದಾರೆ.
ಇದನ್ನೂ ಓದಿ IPL 2023 : ಸತತವಾಗಿ ಸುರಿದ ಮಳೆ, ಐಪಿಎಲ್ ಫೈನಲ್ ಮೀಸಲು ದಿನಕ್ಕೆ ಮುಂದೂಡಿಕೆ
ಫೈನಲ್ ಪಂದ್ಯದ ಕ್ಲೈಮ್ಯಾಕ್ಸ್ ರಿವೀಲ್
ಒಂದೆಡೆ ಮಳೆ ನಿಂತು ಪಂದ್ಯ ಯಾವಾಗ ಆರಂಭಗೊಳ್ಳಲಿದೆ ಎಂದು ಭಾರಿ ನಿರೀಕ್ಷೆಯಿಂದ ಕಾದು ಕುಳಿತಿದ್ದ ಅಭಿಮಾನಿಗಳಿಗೆ ಆಘಾತ ಎದುರಾಗುವಂತಹ ಬರಹವೊಂದು ಭಾನುವಾರ ನರೇಂದ್ರ ಮೋದಿ ಸ್ಟೇಡಿಯಂನ ದೊಡ್ಡ ಪರದೆಯಲ್ಲಿ ಮೂಡಿಬಂದಿತು. “ರನ್ನರ್ ಅಪ್ ಚೆನ್ನೈ ಸೂಪರ್ ಕಿಂಗ್ಸ್’ ಎಂಬ 3 ಸಾಲು ದಿಢೀರನೇ ಪ್ರತ್ಯಕ್ಷವಾಯಿತು. ಈ ವೇಳೆ ಫೈನಲ್ ಪಂದ್ಯ ಫಿಕ್ಸ್ ಆಗಿದೆಯೇ? ಇಲ್ಲವಾದರೆ ದೈತ್ಯ ಪರದೆಯಲ್ಲಿ ಇಂಥ ಸಾಲು ಏಕೆ ಕಾಣಿಸಿಕೊಂಡಿತು? ಎಂಬ ಹತ್ತಾರು ಪ್ರಶ್ನೆಗಳು ಕ್ರಿಕೆಟ್ ಅಭಿಮಾನಿಗಳನ್ನು ಕಾಡತೊಡಗಿತು. ಈ ಬರಹ ಕಾಣಿಸಿಕೊಂಡ ಕೆಲವೇ ಕ್ಷಣದಲ್ಲಿ ಈ ಘಟನೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಗೆ ಕಾರಣವಾಯಿತು. ಒಂದೊಮ್ಮೆ ಚೆನ್ನೈ ತಂಡ ಸೋತು ರನ್ನರ್ ಅಪ್ ಆದರೆ ಇದು ಮತ್ತಷ್ಟು ಅನುಮಾನಗಳಿಗೆ ಎಡೆಮಾಡಿಕೊಂಡುವುದಂತು ನಿಜ.