Site icon Vistara News

ವಿಸ್ತಾರ ಸಂಪಾದಕೀಯ: ವಿಶ್ವಕಪ್ ನಲ್ಲಿ ಹೊಸ ದಾಖಲೆಗಳು ಹುಟ್ಟಲಿ, ಅಂತಿಮವಾಗಿ ಕ್ರಿಕೆಟ್ ಗೆಲ್ಲಲಿ

Team India

ಜಗತ್ತಿನ ಕ್ರಿಕೆಟ್‌ ಪ್ರೇಮಿಗಳು ಕಾತರದಿಂದ ಕಾಯುವ ಇವೆಂಟ್‌ ಆಗಿರುವ ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿ (ICC World Cup 2023) ಇಂದು ಆರಂಭವಾಗುತ್ತಿದೆ. ಭಾರತವು ಆತಿಥ್ಯ ವಹಿಸಿರುವ 13ನೇ ವಿಶ್ವಕಪ್ ಕ್ರಿಕೆಟ್ ಕೂಟ ತೆರೆದುಕೊಳ್ಳುತ್ತಿದ್ದು, ಇದು ಭಾರತಕ್ಕೂ ಮಹತ್ವದ್ದು. ಅಕ್ಟೋಬರ್‌ ಐದರಿಂದ ಮುಂದಿನ ಒಂದೂವರೆ ತಿಂಗಳು ಭಾರತದ ಕೋಟಿ ಕೋಟಿ ಕ್ರಿಕೆಟ್ ಅಭಿಮಾನಿಗಳು ಕಣ್ಣು ರೆಪ್ಪೆ ಮುಚ್ಚದೆ ಪಂದ್ಯಗಳನ್ನು ಆಸ್ವಾದಿಸುತ್ತಾರೆ. ಭಾರತ ಈ ಬಾರಿ ಟ್ರೋಫಿ ಎತ್ತಿಕೊಳ್ಳಬೇಕು ಎಂಬುದು ಭಾರತೀಯರ ಹೆಬ್ಬಯಕೆ. ಇದುವರೆಗೂ ಭಾರತ ಎರಡು ಏಕದಿನ ಕ್ರಿಕೆಟ್‌ ವಿಶ್ವಕಪ್‌ಗಳನ್ನು ಗೆದ್ದಿದೆ. ಕಪಿಲ್‌ ದೇವ್‌ ನಾಯಕತ್ವದಲ್ಲಿ 1983ರಲ್ಲಿ ಹಾಗೂ ಎಂ.ಎಸ್‌ ಧೋನಿ ನೇತೃತ್ವದಲ್ಲಿ 2011ರಲ್ಲಿ. 12 ವರ್ಷಗಳಿಂದ ಭಾರತ ಮತ್ತೊಂದು ಏಕದಿನ ವಿಶ್ವಕಪ್‌ಗಾಗಿ ಹಸಿದಿದೆ. ಹೀಗಾಗಿ ಭಾರತ ಕಪ್‌ ಗೆಲ್ಲಲಿ ಎಂಬ ಆಶಯ ನಮ್ಮ ಮನದಲ್ಲಿರಲಿ; ಜತೆಗೆ ಆಟವನ್ನು ಆಸ್ವಾದಿಸುವ ಮನವೂ ಇರಲಿ. ಭಾರತ ತಂಡ ಸಾಕಷ್ಟು ಬಲಿಷ್ಠವಾಗಿದೆ; ಆದರೆ ಇತರ ಕೆಲವು ತಂಡಗಳೂ ಅಷ್ಟೇ ಬಲಿಷ್ಠವಾಗಿವೆ ಮಾತ್ರವಲ್ಲ; ಕ್ರಿಕೆಟ್‌ ಆಟ ಎನ್ನುವುದು ಪರಿಶ್ರಮ- ಪ್ರತಿಭೆಯ ಜತೆಗೆ ಸ್ವಲ್ಪ ಅದೃಷ್ಟವನ್ನೂ ಹೊಂದಿಕೊಂಡಿದೆ.

ನಾಲ್ಕು ವರ್ಷಕ್ಕೊಮ್ಮೆ ನಡೆಯುವ ಈ ಪಂದ್ಯಾವಳಿ ಏಕದಿನ ಕ್ರಿಕೆಟ್‌ನ ಸಂಪೂರ್ಣ ಬೆರಗನ್ನೂ ಅದ್ಭುತವನ್ನೂ ಸಾದರಪಡಿಸುತ್ತದೆ. ಅನೇಕ ಪ್ರತಿಭೆಗಳ ಆಗಮನ ನಿರ್ಗಮನಗಳು, ಹಳೆಯ ದಾಖಲೆಗಳ ಭಂಗ, ಹೊಸ ದಾಖಲೆಗಳ ಸೃಷ್ಟಿಗಳಿಗೆ ಕಾರಣವಾಗುತ್ತದೆ. ವಿಶ್ವ ಕಪ್‌ನಲ್ಲಿ ಆಡಲಿರುವ ಭಾರತ ಕ್ರಿಕೆಟ್‌ ತಂಡ ಸಾಕಷ್ಟು ಮುಂದಾಲೋಚನೆಯಿಂದ ರಚಿತವಾಗಿದೆ. ಹಿರಿಯ ಬ್ಯಾಟರ್​ಗಳು ಹಾಗೂ ಅನುಭವಿ ಹಾಗೂ ಅತ್ಯುತ್ತಮ ಫಾರ್ಮ್​ನಲ್ಲಿರುವ ಬೌಲರ್​ಗಳಿಂದ ತುಂಬಿರುವ 15 ಸದಸ್ಯರ ಭಾರತ ತಂಡ ವಿಶ್ವ ಕಪ್ ಗೆಲ್ಲುವ ಎಲ್ಲ ಸಾಮರ್ಥ್ಯ ಹೊಂದಿದೆ. ಭಾರತ ತಂಡದ ಆಟಗಾರರ ಆಯ್ಕೆ ಅತ್ಯಂತ ಸಮತೋಲಿತವಾಗಿದೆ. ಆರಂಭಿಕ ಜೋಡಿಯಾಗಿ ಶುಬ್ಮನ್​ ಗಿಲ್​, ರೋಹಿತ್ ಶರ್ಮಾ, ಮಧ್ಯಮ ಕ್ರಮಾಂಕದಲ್ಲಿ ವಿರಾಟ್​ ಕೊಹ್ಲಿ, ಶ್ರೇಯಸ್ ಅಯ್ಯರ್ ದೊಡ್ಡ ಇನಿಂಗ್ಸ್​ ಕಟ್ಟುವ ಸಾಮರ್ಥ್ಯ ಹೊಂದಿದ್ದಾರೆ. ಮಧ್ಯಮ ಕ್ರಮಾಂಕದ ಬ್ಯಾಕ್ಅಪ್ ಆಟಗಾರನಾಗಿ ಸೂರ್ಯಕುಮಾರ್ ಯಾದವ್​ ಇದ್ದಾರೆ. ಇವರು ಸ್ಫೋಟಕ ಬ್ಯಾಟರ್ ಆಗಿದ್ದಾರೆ. ಹಾರ್ದಿಕ್ ಪಾಂಡ್ಯ ಹಾಗೂ ಶಾರ್ದೂಲ್ ಠಾಕೂರ್​ ವೇಗದ ಬೌಲಿಂಗ್ ಆಲ್ರೌಂಡರ್​ಗಳಾದರೆ, ರವೀಂದ್ರ ಜಡೇಜಾ ಮತ್ತು ಆರ್​. ಅಶ್ವಿನ್​ ಸ್ಪಿನ್ ಬೌಲಿಂಗ್ ಆಲ್​ರೌಂಡರ್​ಗಳು. ಇಬ್ಬರೂ ಬೌಲಿಂಗ್ ಹಾಗೂ ಬ್ಯಾಟಿಂಗ್​ನಲ್ಲಿ ಪರಿಸ್ಥಿತಿಯಲ್ಲಿ ಚೆನ್ನಾಗಿ ನಿಭಾಯಿಸಬಲ್ಲರು.

ಭಾರತ ಉಪಖಂಡ ಸ್ಪಿನ್ ಬೌಲಿಂಗ್​ಗೆ ಹೆಚ್ಚು ನೆರವಾಗುತ್ತದೆ. ಹೀಗಾಗಿ ಆಯ್ಕೆಯಾಗಿರುವ ತಂಡದ ಬ್ಯಾಟಿಂಗ್ ಹಾಗೂ ಬೌಲಿಂಗ್ ಸಾಮರ್ಥ್ಯ ಈ ಸ್ಥಿತಿಗೆ ಪೂರಕವಾಗಿದೆ. ಹಿರಿಯ ಆಟಗಾರರಾದ ರೋಹಿತ್ ಹಾಗೂ ವಿರಾಟ್ ಕೊಹ್ಲಿ ಭಾರತ ತಂಡದ ಪಾಲಿಗೆ ಪ್ಲಸ್ ಪಾಯಿಂಟ್​. ಇವರಿಬ್ಬರು ಅನುಭವಿಗಳು ಹಾಗೂ ವಿಶ್ವ ಕಪ್​ಗೆ ಪಾತ್ರರಾಗಲೇಬೇಕಾದ ಆಟಗಾರರು. ರಾಹುಲ್ ಉತ್ತಮ ಬ್ಯಾಟರ್ ಹಾಗೂ ವಿಕೆಟ್​ ಕೀಪಿಂಗ್ ಜವಾಬ್ದಾರಿ ನಿರ್ವಹಿಸುವುದು ಭಾರತ ತಂಡದ ಪಾಲಿಗೆ ಪೂರಕ ಅಂಶ. ಜಸ್​ಪ್ರಿತ್ ಬುಮ್ರಾ, ಮೊಹಮ್ಮದ್​ ಸಿರಾಜ್ ಹಾಗೂ ಮೊಹಮ್ಮದ್​ ಶಮಿ ವೇಗದ ಬೌಲರ್​ಗಳು. ಇವರಲ್ಲಿ ಎಲ್ಲರಿಗೂ ಸಿಡಿದೇಳುವ ಹವ್ಯಾಸವಿದೆ. ಎದುರಾಳಿ ತಂಡದ ಬ್ಯಾಟರ್​ಗಳ ಬೆನ್ನೆಲುಬು ಮುರಿಯುವ ತಾಕತ್ತಿದೆ. ಅಶ್ವಿನ್ ಕ್ರಿಕೆಟ್​ ತಂತ್ರಗಾರಿಕೆಯಲ್ಲಿ ನಿಸ್ಸೀಮ. ಒಟ್ಟಾರೆ ಭಾರತದ ಪಿಚ್ ಹಾಗೂ ಇನ್ನಿತರ ಕಂಡೀಷನ್​ಗಳನ್ನು ಪರಿಗಣಿಸಿದರೆ ಭಾರತ ಪ್ರಶಸ್ತಿ ಗಳಿಸುವ ಫೇವರಿಟ್​.

ಇದನ್ನೂ ಓದಿ : ವಿಸ್ತಾರ ಸಂಪಾದಕೀಯ: ಮಹಾರಾಷ್ಟ್ರದ ಸರ್ಕಾರಿ ಆಸ್ಪತ್ರೆಗಳಲ್ಲಿನ ಸರಣಿ ಸಾವು ಆಘಾತಕರ

ಈಗಾಗಲೇ ಐದು ಬಾರಿ ವಿಶ್ವಕಪ್ ಗೆದ್ದು ಬೀಗಿರುವ ಆಸ್ಟ್ರೇಲಿಯಾ, ಒಮ್ಮೆ ಗೆದ್ದಿರುವ ಪಾಕಿಸ್ತಾನ ಮತ್ತು ಶ್ರೀಲಂಕಾ, ಕಳೆದ ಬಾರಿಯ ವಿನ್ನರ್ ಇಂಗ್ಲೆಂಡ್‌ ಈ ಬಾರಿಯೂ ಗೆಲ್ಲಲು ತುದಿಗಾಲಲ್ಲಿ ನಿಂತಿವೆ. ಒಮ್ಮೆಯೂ ವಿಶ್ವಕಪ್ ಗೆಲ್ಲದ ಸ್ಟ್ರಾಂಗ್ ಟೀಮ್ ನ್ಯೂಜಿಲ್ಯಾಂಡ್, ಅದೃಷ್ಟವೇ ಇಲ್ಲದ ದಕ್ಷಿಣ ಆಫ್ರಿಕ, ಅಚ್ಚರಿಯ ಫಲಿತಾಂಶವನ್ನು ತಂದುಕೊಡುವ ಶಕ್ತಿ ಇರುವ ಬಾಂಗ್ಲಾ ದೇಶ, ನೆದರ್ಲ್ಯಾಂಡ್, ಅಫ್ಘಾನಿಸ್ತಾನ್ ಇವುಗಳು ಇತರ ತಂಡಗಳು. ಎರಡು ಬಾರಿಯ ವಿನ್ನರ್ ವಿಂಡೀಸ್ ಈ ಬಾರಿ ಕೂಟದಲ್ಲಿ ಸ್ಥಾನ ಪಡೆದಿಲ್ಲ ಎಂಬ ಸಣ್ಣ ಒಂದು ಕೊರಗು ಕ್ರಿಕೆಟ್ ಪ್ರೇಮಿಗಳದ್ದು. 48 ವರ್ಷಗಳ ವಿಶ್ವಕಪ್ ಇತಿಹಾಸದಲ್ಲಿ ಕ್ರಿಕೆಟ್ ಲೆಕ್ಕಾಚಾರಗಳಂತೆ ಯಾವುದೂ ನಡೆದಿಲ್ಲ. ಭಾರತವೇ ಬಲಿಷ್ಠ ಎಂದು ಬುಕ್ಕಿಗಳು ಅಂದುಕೊಂಡಿದ್ದಾರೆ. ಈ ವಿಶ್ವಕಪ್‌ನ ನಿಮಿತ್ತದಲ್ಲಿ ಕೋಟ್ಯಂತರ ಹಣದ ವಹಿವಾಟು ನಡೆಯುತ್ತದೆ. ನೇರ ಪ್ರಸಾರ, ಜಾಹಿರಾತುಗಳು, ಆಟಗಾರರ ಬ್ರಾಂಡ್‌ಗಳು, ಮಾಧ್ಯಮ ಕವರೇಜ್‌, ಬೆಟ್ಟಿಂಗ್‌ ಹೀಗೆ ಹಣ ನೀರಿನಂತೆ ಹರಿಯುತ್ತದೆ. ಎಲ್ಲವೂ ಎರಡು ತಿಂಗಳ ಕಾಲದ ಹಬ್ಬ.

ಈ ಕೂಟದಲ್ಲಿ ಹತ್ತು ತಂಡಗಳು ಭಾಗವಹಿಸಲಿದ್ದು ಮೊದಲ ಹಂತದಲ್ಲಿ ರೌಂಡ್ ರಾಬಿನ್ ಲೀಗ್ ಮಾದರಿಯಲ್ಲಿ ಪ್ರತೀ ತಂಡವೂ ಪ್ರತೀ ತಂಡವನ್ನು ಎದುರಿಸಬೇಕು. ನವೆಂಬರ್ 19ರತನಕ ನಡೆಯುವ ಒಟ್ಟು ಪಂದ್ಯಗಳು 48. ಒಟ್ಟು ಹತ್ತು ಕ್ರಿಕೆಟ್ ತಾಣಗಳು ಈ ಐತಿಹಾಸಿಕ ಪಂದ್ಯಗಳಿಗೆ ಸಾಕ್ಷಿ ಆಗಲಿವೆ. ಅದರಲ್ಲಿಯೂ ಅಹಮದಾಬಾದಿನ ಅತ್ಯಂತ ವೈಭವದ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಆರಂಭದ ಪಂದ್ಯ, ಫೈನಲ್ ಪಂದ್ಯ ಮತ್ತು ಭಾರತ, ಪಾಕ್ ನಡುವೆ ಸ್ಫೋಟಕ ಆಗಬಹುದಾದ ಪಂದ್ಯಗಳು ಜರುಗಲಿವೆ. 1,35,000 ಪ್ರೇಕ್ಷಕರು ತುಂಬಿ ತುಳುಕುವ ಜಗತ್ತಿನ ಅತೀ ದೊಡ್ಡ ಸ್ಟೇಡಿಯಂ ಇದು. ಜಗತ್ತಿನಲ್ಲಿ ಅತೀ ಹೆಚ್ಚು ಕ್ರಿಕೆಟ್ ಅಭಿಮಾನಿಗಳು ಇರುವ ದೇಶ ಅದು ಭಾರತ. ಅತ್ಯಂತ ಶ್ರೀಮಂತ ಕ್ರಿಕೆಟ್ ಬೋರ್ಡ್, ಜಗತ್ತಿನಾದ್ಯಂತದ ಕ್ರಿಕೆಟ್‌ ಆಟಗಾರರನ್ನು ಐಪಿಎಲ್‌ ಹೆಸರಿನಲ್ಲಿ ಸಾಕುತ್ತಿರುವ ದೇಶ ಎಂದರೆ ಭಾರತ. ಇಲ್ಲಿ ಕ್ರಿಕೆಟ್‌ಗಾಗಿ ಹುಟ್ಟುವ ಹಣ ಅಷ್ಟಿಷ್ಟಲ್ಲ. ದೊಡ್ಡ ಮೊತ್ತದ ಹಣ ಇದ್ದಾಗ ವೈಭವ, ಅದ್ಧೂರಿತನ, ನಿರೀಕ್ಷೆಗಳು ಸಾಕಷ್ಟು ಇರುತ್ತವೆ. ಅದೆಲ್ಲವೂ ಇರಲಿ. ಅದರ ಜತೆಗೆ ಎಲ್ಲ ಕ್ರಿಕೆಟ್‌ ಆಟಗಾರರ ಪ್ರತಿಭೆ ಹಾಗೂ ಆಟವನ್ನು ಸವಿಯುವ ಗುಣವೂ ನಮ್ಮಲ್ಲಿರಲಿ. ಆಗ ವಿಶ್ವಕಪ್‌ ಸಾರ್ಥಕವಾಗುತ್ತದೆ.

Exit mobile version