ನವ ದೆಹಲಿ : ಸ್ವಿಜರ್ಲೆಂಡ್ನ ಟೆನಿಸ್ ತಾರೆ ರೋಜರ್ ಫೆಡರರ್(Roger Federer) ಗುರುವಾರ (ಸೆಪ್ಟೆಂಬರ್ ೧೫) ವೃತ್ತಿ ಟೆನಿಸ್ಗೆ ವಿದಾಯ ಹೇಳಿದ್ದಾರೆ. ೪೧ ವರ್ಷದ ಹಿರಿಯ ಆಟಗಾರ ಸುದೀರ್ಘ ವಿದಾಯ ಪತ್ರದೊಂದಿಗೆ ಟೆನಿಸ್ ಅಂಗಣದಿಂದ ವಿಮುಖರಾಗುವ ಸುದ್ದಿಯನ್ನು ಪ್ರಕಟಿಸಿದ್ದಾರೆ. ೧೯ ವರ್ಷಗಳ ಕಾಲ ಅಂತಾರಾಷ್ಟ್ರೀಯ ಟೆನಿಸ್ ಕ್ಷೇತ್ರವನ್ನು ಆಳಿದ ಫೆಡರರ್ ಅವರ ಕೆಲವೊಂದು ಸಾಧನೆಗಳು ಇಲ್ಲಿವೆ.
- ೨೦ ಗ್ರ್ಯಾನ್ ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದಿದ್ದು, ರಾಫೆಲ್ ನಡಾಲ್ (೨೨), ನೊವಾಕ್ ಜೊಕೊವಿಕ್ (೨೧) ಅವರಿಗಿಂತ ಹಿಂದಿದ್ದಾರೆ.
- ಒಟ್ಟು ೧೦೩ ಪ್ರಶಸ್ತಿಗಳನ್ನು ಗೆದ್ದಿದ್ದು, ಆಧುನಿಕ ಯುಗದ ಟೆನಿಸ್ನಲ್ಲಿ ಅವರು ಈ ಸಾಧನೆಯಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ. ಜಿಮ್ಮಿ ಕನ್ನೋರ್ಸ್ (೧೦೯) ಮೊದಲ ಸ್ಥಾನ ಪಡೆದುಕೊಂಡಿದ್ದಾರೆ.
- ೧೨೫೧ ಸಿಂಗಲ್ಸ್ ಪಂದ್ಯಗಳನ್ನು ಗೆದ್ದಿದ್ದು, ಆಧುನಿಕ ಯುಗದ ಟೆನಿಸ್ನಲ್ಲಿ ಈ ಸಾಲಿನಲ್ಲೂ ದ್ವಿತೀಯ ಸ್ಥಾನ ಪಡೆದಿದ್ದಾರೆ. ಜಿಮ್ಮಿ ೧೨೭೪ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ.
- ೨೩೭ ವಾರಗಳ ಕಾಲ ಅವರು ಸತತವಾಗಿ ಎಟಿಪಿ rank ಪಟ್ಟಿಯಲ್ಲಿ ನಂಬರ್ ಒನ್ ಸ್ಥಾನ ಪಡೆದುಕೊಂಡಿದ್ದರು.
- ೩೬ ವರ್ಷ ೩೨೦ ದಿನಗಳಾಗಿದ್ದಾಗ ಅವರು (೨೦೧೮) ಎಟಿಪಿ ನಂಬರ್ ಒನ್ ಸ್ಥಾನ ಪಡೆದುಕೊಂಡಿದ್ದರು. ಈ ಮೂಲಕ ನಂಬರ್ ಒನ್ ಸ್ಥಾನ ಪಡೆದ ಹಿರಿಯ ಆಟಗಾರ ಎನಿಸಿಕೊಂಡಿದ್ದಾರೆ.
- ೮ ವಿಂಬಲ್ಡನ್ ಪ್ರಶಸ್ತಿ ಗೆಲ್ಲುವ ಮೂಲಕ ಈ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ.
- ೨೦೧೭ರಲ್ಲಿ ವಿಂಬಲ್ಡನ್ ಆಡುವಾಗ ಫೆಡರರ್ಗೆ ೩೫ ವರ್ಷ ೩೪೨ ದಿನಗಳು. ಈ ಮೂಲಕ ವಿಂಬಲ್ಡನ್ನಲ್ಲಿ ಆಡಿದ ಪುರುಷರ ಸಿಂಗಲ್ಸ್ನ ಹಿರಿಯ ಆಟಗಾರ ಎನಿಸಿಕೊಂಡಿದ್ದಾರೆ.
- ೧೫೨೫ ಸಿಂಗಲ್ಸ್, ೨೨೩ ಡಬಲ್ಸ್ ಪಂದ್ಯಗಳನ್ನು ಆಡಿರುವ ಅವರು ಒಂದೇ ಒಂದು ಬಾರಿಯೂ ಪಂದ್ಯದ ನಡುವೆ ನಿವೃತ್ತಿ ಪಡೆದಿಲ್ಲ.
- ಎರಡು ಗ್ರ್ಯಾನ್ ಸ್ಲಾಮ್ ಪ್ರಶಸ್ತಿಗಳನ್ನು ಸತತವಾಗಿ ಐದು ಬಾರಿಗೆ ಗೆದ್ದಿರುವ ಏಕೈಕ ಟೆನಿಸ್ ಅಟಗಾರ. ವಿಂಬಲ್ಡನ್ (೨೦೩ರಿಂದ ೨೦೦೭ ನಡುವೆ). ಯುಎಸ್ ಓಪನ್ (೨೦೦೪ರಿಂದ೨೦೦೮ರವರೆಗೆ).
- ಸತತವಾಗಿ ೧೦ ಗ್ರ್ಯಾನ್ ಸ್ಲಾಮ್ ಟೂರ್ನಿಯ ಫೈನಲ್ಗೇರಿದ ಏಕೈಕ ಟೆನಿಸ್ ಆಟಗಾರ. ರೋಜರ್ ಒಟ್ಟಾರೆ ೩೧ ಫೈನಲ್ಗಳಲ್ಲಿ ಆಡಿದ್ದು, ನೊವಾಕ್ ಜೊಕೊವಿಕ್ (೩೨) ಅವರಿಗಿಂತ ಹಿಂದಿದ್ದಾರೆ.
- ಮೂರು ಬಾರಿ ಒಂದೇ ಋತುವಿನ ಗ್ರ್ಯಾನ್ ಸ್ಲಾಮ್ ಟೂರ್ನಿಗಳಲ್ಲಿ ಫೈನಲ್ಗೇರಿದ ಏಕೈಕ ಟೆನಿಸ್ ಅಟಗಾರ (೨೦೦೬, ೨೦೦೭, ೨೦೦೯).
- ಟೆನಿಸ್ನ ಹುಲ್ಲಿನಂಗಣದಲ್ಲಿ ಸುದೀರ್ಘ ೬೫ ಗೆಲುವಿನ ಸಾಧನೆ ಹಾಗೂ ೫೬ ವಾರಗಳ ಕಾಲ ಹಾರ್ಡ್ ಕೋರ್ಟ್ನಲ್ಲಿ ಸತತ ಗೆಲುವು ಸಾಧಿಸಿದ ಸಾರ್ವಕಾಲಿಕ ದಾಖಲೆ ಹೊಂದಿರುವ ಆಟಗಾರ.
- ಆವೆಮಣ್ಣಿನ, ಹುಲ್ಲಿನಂಗಣ ಹಾಗೂ ಹಾರ್ಡ್ ಕೋರ್ಟ್ ಸೇರಿ ಮೂರೂ ಮಾದರಿಯ ಕೋರ್ಟ್ಗಳಲ್ಲಿ ೧೦ ಅಥವಾ ಅದಕ್ಕಿಂತ ಹೆಚ್ಚು ಪ್ರಶಸ್ತಿಗಳನ್ನು ಗೆದ್ದಿರುವ ಏಕೈಕ ಆಟಗಾರ
- ಎಟಿಪಿ ಟೂರ್ನಲ್ಲಿ ಸತತವಾಗಿ ೨೪ ಫೈನಲ್ಗೇರಿದ ಆಟಗಾರ (೨೦೦೩-೦೫)
- ಇಯರ್ ಎಂಡ್ ಟೂರ್ ನಲ್ಲಿ ಗರಿಷ್ಠ (೬) ಪ್ರಶಸ್ತಿಗಳನ್ನು ಗೆದ್ದಿರುವ ಸಾಧನೆ.