ನವದೆಹಲಿ: ಭಾರತೀಯ ಕುಸ್ತಿ ಒಕ್ಕೂಟದ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಹೊರೆಸಿ, ಬ್ರಿಜ್ ಭೂಷಣ್ರನ್ನು ಅಧ್ಯಕ್ಷ ಸ್ಥಾನದಿಂದ ಇಳಿಸಬೇಕು, ಅವರು ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಮಂಪರು ಪರೀಕ್ಷೆಗೆ ಒಳಪಡಿಸಬೇಕು, ಒಟ್ನಲ್ಲಿ ನಮಗೆ ನ್ಯಾಯ ಬೇಕು ಎಂದು ಆಗ್ರಹಿಸಿ ದೆಹಲಿಯ ಜಂತರ್ಮಂತರ್ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಕುಸ್ತಿಪಟುಗಳನ್ನು (Wrestlers Protest) ಇಂದು ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇನ್ನು ಬಂಧನದ ಬಳಿಕ ಕುಸ್ತಿಪಟು ವಿನೇಶ್ ಫೋಗಟ್ ಮತ್ತು ಅವರ ಸೋದರಿ ಸಂಗೀತಾ ಫೋಗಟ್ ಅವರು ಪೊಲೀಸ್ ವ್ಯಾನ್‌ನಲ್ಲಿ ನಗುತ್ತ ಸೆಲ್ಫಿ ತೆಗೆದುಕೊಂಡ ಫೋಟೊ ವೈರಲ್ ಆಗಿದೆ. ಆದರೆ, ಆ ಫೋಟೊ ತಿರುಚಿದ್ದು ಎಂಬುದು ಬಳಿಕ ಗೊತ್ತಾಗಿದೆ.
ವಿನೇಶ್ ಫೋಗಟ್, ಸಂಗೀತಾ ಫೋಗಟ್ ಸೇರಿ ಹಲವು ಕುಸ್ತಿಪಟುಗಳು ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಷಡ್ಯಂತ್ರ ಮಾಡುತ್ತಿದ್ದಾರೆ. ಹಾಗಾಗಿಯೇ ಅವರು ಪ್ರತಿಭಟನೆ ನಡೆಸುತ್ತಿದ್ದಾರೆ. ಅದಲ್ಲದೆ, ಪೊಲೀಸರು ಬಂಧಿಸಿದ ಬಳಿಕ ಅವರು ನಗುತ್ತ ಸೆಲ್ಫಿ ತೆಗೆಸಿಕೊಂಡಿದ್ದಾರೆ. ಇದು ಟೂಲ್‌ಕಿಟ್‌ನ ಒಂದು ಭಾಗ ಎಂಬ ಆರೋಪ ಕೇಳಿಬಂದಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಫೋಗಟ್ ಸಹೋದರಿಯರು ಪೊಲೀಸ್ ವಾಹನದಲ್ಲಿ ನಗುತ್ತ ಇರುವ ಫೋಟೊ ಹರಿದಾಡಿತ್ತು.
ಬಜರಂಗ್ ಪುನಿಯಾ ಸ್ಪಷ್ಟನೆ ಏನು?
ವಿನೇಶ್ ಫೋಗಟ್ ಹಾಗೂ ಸಂಗೀತಾ ಫೋಗಟ್ ಅವರ ಫೋಟೊ ವೈರಲ್ ಆಗುತ್ತಲೇ ಮತ್ತೊಬ್ಬ ಕುಸ್ತಿಪಟು ಬಜರಂಗ್ ಪುನಿಯಾ ಸ್ಪಷ್ಟನೆ ನೀಡಿದ್ದಾರೆ. ವಿನೇಶ್ ಫೋಗಟ್ ಹಾಗೂ ಸಂಗೀತಾ ಫೋಗಟ್ ಅವರು ನಗುತ್ತ ಇರುವ ನಕಲಿ ಫೋಟೊವನ್ನು ಐಟಿ ಸೆಲ್‌ನ ಮಂದಿ ವೈರಲ್ ಮಾಡಿದ್ದಾರೆ. ಆದರೆ, ಅದು ನಕಲಿ ಫೋಟೊ. ಅಸಲಿ ಫೋಟೊ ಇಲ್ಲಿದೆ ಎಂದು ಟ್ವೀಟ್ ಮಾಡಿದ್ದಾರೆ. ಆ ಮೂಲಕ ಪರೋಕ್ಷವಾಗಿ ಬಿಜೆಪಿಗೆ ತಿರುಗೇಟು ನೀಡಿದ್ದಾರೆ.
ಅಸಲಿ ಯಾವುದು, ನಕಲಿ ಯಾವುದು?
IT Cell वाले ये झूठी तस्वीर फैला रहे हैं। हम ये साफ़ कर देते हैं की जो भी ये फ़र्ज़ी तस्वीर पोस्ट करेगा उसके ख़िलाफ़ शिकायत दर्ज की जाएगी। #WrestlersProtest pic.twitter.com/a0MngT1kUa
— Bajrang Punia 🇮🇳 (@BajrangPunia) May 28, 2023
ತಿಂಗಳುಗಳಿಂದ ದೆಹಲಿಯಲ್ಲಿ ನಡೆಯುತ್ತಿರುವ ಕುಸ್ತಿಪಟುಗಳ ಪ್ರತಿಭಟನೆಗೆ ದೆಹಲಿ ಸುತ್ತಲಿನ ರಾಜ್ಯಗಳ ರೈತರು, ವಿವಿಧ ಕ್ಷೇತ್ರದ ಮುಖಂಡರು ಸಾಥ್ ಕೊಟ್ಟಿದ್ದಾರೆ. ನೂತನ ಸಂಸತ್ ಭವನದ ಉದ್ಘಾಟನೆ ದಿನವಾದ ಇಂದು ಪ್ರತಿಭಟನಾಕಾರರೆಲ್ಲ ಸೇರಿ ಮಹಿಳಾ ಸಮ್ಮಾನ್ ಮಹಾಪಂಚಾಯತ್ ಹಮ್ಮಿಕೊಂಡಿದ್ದರು. ಅದರ ಭಾಗವಾಗಿ, ರಾಷ್ಟ್ರಧ್ವಜವನ್ನು ಹಿಡಿದು ಹೊಸ ಸಂಸತ್ ಭವನದತ್ತ ಮೆರವಣಿಗೆ ಹೊರಟಿದ್ದರು. ಜಂತರ್ಮಂತರ್ ಸುತ್ತ ಪೊಲೀಸರು ಹಾಕಿದ್ದ ಬ್ಯಾರಿಕೇಡ್ಗಳನ್ನು ಅವರು ಜಂಪ್ ಮಾಡಿದ್ದಾರೆ. ಆಗ ಪೊಲೀಸರು ಅವರನ್ನೆಲ್ಲ ತಡೆದಿದ್ದಾರೆ. ಈ ವೇಳೆ ನೂಕು ನುಗ್ಗಲು ಉಂಟಾಯಿತು. ಕುಸ್ತಿಪಟು ವಿನೇಶ್ ಫೋಗಟ್ ಮತ್ತು ಅವರ ಸೋದರಿ ಸಂಗೀತಾ ಫೋಗಟ್ ಒಬ್ಬರ ಮೇಲೊಬ್ಬರು ಬಿದ್ದರು. ಈ ವೇಳೆ ರಾಷ್ಟ್ರಧ್ವಜವೂ ನೆಲಕ್ಕೆ ಬಿದ್ದ ಫೋಟೋ ವೈರಲ್ ಆಗುತ್ತಿದೆ.
ಇದನ್ನೂ ಓದಿ: Wrestlers Protest: ಕುಸ್ತಿಪಟುಗಳ ಪ್ರತಿಭಟನೆಗೆ ಬೆಂಬಲ ಸೂಚಿಸಿದ ವಿಶ್ವ ಚಾಂಪಿಯನ್ ಕವಾಯ್