Site icon Vistara News

Year Ender | ಹೊಸ ಪದಕಗಳು, ವಿಶ್ವ ದಾಖಲೆಗಳು; ಭಾರತದ ಕ್ರೀಡಾ ಕ್ಷೇತ್ರಕ್ಕೆ ಚೈತನ್ಯ ತಂದ 2022

ಬೆಂಗಳೂರು : 2022 (Year Ender) ಭಾರತದ ಕ್ರೀಡಾ ಕ್ಷೇತ್ರಕ್ಕೆ ನಲಿವಿನ ವರ್ಷ. ಪುರುಷರ ಕ್ರಿಕೆಟ್ ತಂಡ ಐಸಿಸಿ ಟ್ರೋಫಿಯನ್ನು ಗೆಲ್ಲದ ಬೇಸರದ ನಡುವೆಯೂ ಉಳಿದ ಕ್ರೀಡೆಗಳ ಸಾಧಕರು ವಿಶ್ವದ ನಾನಾ ಕಡೆ ತ್ರಿವರ್ಣ ಧ್ವಜ ಆಕಾಶದೆತ್ತರಕ್ಕೆ ಏರುವಂತೆ ಮಾಡಿದ್ದಾರೆ. ಜಾವೆಲಿನ್​ ಎಸೆತ, ಬ್ಯಾಡ್ಮಿಂಟನ್ ತಂಡ, ಟೇಬಲ್​ ಟೆನಿಸ್ ತಂಡ, ಲಾನ್​ ಬೌಲ್ಸ್​​, ಮಹಿಳೆಯರ ಕ್ರಿಕೆಟ್​ ತಂಡ ಭಾರತೀಯರೆಲ್ಲರೂ ಹೆಮ್ಮೆ ಪಡುವಂಥ ಸಾಧನೆ ಮಾಡಿವೆ. ಈ ಯಶಸ್ಸು ಭಾರತದ ಕ್ರೀಡಾ ಕ್ಷೇತ್ರ ಪ್ರಗತಿಯ ಪಥದಲ್ಲಿದೆ ಎಂಬ ಸೂಚನೆಯನ್ನೂ ಕೊಟ್ಟಿದೆ. ಅಂಥ ಕೆಲವು ಸ್ಮರಣೀಯ ಸಂದರ್ಭಗಳು ಇಂತಿವೆ…

ಥಾಮಸ್ ಕಪ್​ ವಿಜಯ

ಭಾರತದ ಬ್ಯಾಡ್ಮಿಂಟನ್​ ಕ್ಷೇತ್ರ ಹಲವು ವರ್ಷಗಳಿಂದ ವೈಯುಕ್ತಿಕ ಪದಕಗಳನ್ನು ಕಂಡಿತ್ತಾದರೂ ಪುರುಷರ ತಂಡದ ವಿಶ್ವ ಕಪ್​ ಎಂದೇ ಪರಿಗಣಿಸಲಾಗುವ ಥಾಮಸ್​ ಕಪ್​ನಲ್ಲಿ ಪ್ರಶಸ್ತಿಯ ಬರ ಎದುರಿಸಿತ್ತು. ಆದರೆ, 2022ರ ಮೇ ತಿಂಗಳಲ್ಲಿ ಭಾರತದ ಬ್ಯಾಡ್ಮಿಂಟನ್​ ತಂಡ ಚರಿತ್ರೆ ಬರೆಯಿತು. 14 ಬಾರಿಯ ಚಾಂಪಿಯನ್​ ಇಂಡೋನೇಷ್ಯಾ ತಂಡವನ್ನು ಫೈನಲ್​ನಲ್ಲಿ 3-0 ಅಂತರದಿಂದ ಮಣಿಸಿ ಟ್ರೋಫಿಗೆ ಮುತ್ತಿಟ್ಟಿತು. ಈ ಮೂಲಕ ಬ್ಯಾಡ್ಮಿಂಟನ್​ ತಂಡದ ಆಟಗಾರರು ಇಡಿ ದೇಶವೇ ಅಭಿಮಾನದಿಂದ ಬೀಗುವಂತೆ ಮಾಡಿದರು.

ಹೊಸ ತಂಡಕ್ಕೆ ಐಪಿಎಲ್​ ಪ್ರಶಸ್ತಿ

2022ನೇ ಆವೃತ್ತಿಯ ಐಪಿಎಲ್​ಗೆ ಎರಡು ಹೊಸ ತಂಡಗಳನ್ನು ಸೇರ್ಪಡೆ ಮಾಡಲಾಯಿತು. ಗುಜರಾತ್​ ಟೈಟನ್ಸ್​ ಹಾಗೂ ಲಖನೌ ಸೂಪರ್​ ಜಯಂಟ್ಸ್​. ಹಾರ್ದಿಕ್ ಪಾಂಡ್ಯ ನೇತೃತ್ವದ ಟೈಟನ್ಸ್​ ಬಳಗ ಅಷ್ಟೊಂದು ಬಲಿಷ್ಠ ತಂಡವೂ ಆಗಿರಲಿಲ್ಲ. ಆದರೆ, ವಿಜಯದಿಂದಲೇ ಅಭಿಯಾನ ಆರಂಭಿಸಿದ ಆಶೀಶ್​ ನೆಹ್ರಾ ಕೋಚಿಂಗ್​ನಲ್ಲಿ ಪಳಗಿದ ತಂಡ ಚಾಂಪಿಯನ್​ ಪಟ್ಟ ಅಲಂಕರಿಸಿತು. ಈ ಮೂಲಕ ಪದಾರ್ಪಣೆ ಆವೃತ್ತಿಯಲ್ಲೇ ಪ್ರಶಸ್ತಿ ಗೆದ್ದ ತಂಡ ಎನಿಸಿಕೊಂಡಿತು.

ನೀರಜ್​ ಬೆಳ್ಳಿಯ ಸಾಧನೆ

2020ರ ಟೋಕಿಯೊ ಒಲಿಂಪಿಕ್ಸ್​ ಚಿನ್ನದ ಪದಕ ವಿಜೇತ ನೀರಜ್​ ಚೋಪ್ರಾ ಅವರು 2022ರಲ್ಲಿ ಹಲವು ಸಾಧನೆಗಳನ್ನು ಮಾಡಿದ್ದಾರೆ. ಡೈಮಂಡ್ ಲೀಗ್ ಟ್ರೋಫಿ ಗೆದ್ದಿರುವ ಅವರು ಈ ಸಾಧನೆ ಮಾಡಿದ ಭಾರತದ ಮೊದಲ ಜಾವೆಲಿನ್ ಎಸೆತಗಾರ ಎನಿಸಿಕೊಂಡಿದ್ದಾರೆ. ಇದೆಲ್ಲದಕ್ಕಿಂತ ಮಿಗಿಲಾಗಿ ವರ್ಲ್ಡ್​ ಅಥ್ಲೆಟಿಕ್ಸ್​ ಚಾಂಪಿಯನ್​ಷಿಪ್​ನಲ್ಲಿ ಬೆಳ್ಳಿ ಗೆದ್ದರು. ಇದು ಭಾರತದ ಯಾವುದೇ ಅಥ್ಲೀಟ್​ ಮಾಡದ ಸಾಧನೆಯಾಗಿದ್ದು, ವಿಶ್ವ ಮಟ್ಟದಲ್ಲಿ ಭಾರತದ ಕೀರ್ತಿ ಪತಾಕೆ ಹಾರುವಂತೆ ಮಾಡಿದ್ದರು.

ಕಾಮನ್ವೆಲ್ತ್ ಗೇಮ್ಸ್​ನಲ್ಲಿ ಪದಕಗಳ ಬೇಟೆ

ಇಂಗ್ಲೆಂಡ್​ನ ಬರ್ಮಿಂಗ್ಹಮ್​ನಲ್ಲಿ ನಡೆದ ಕಾಮನ್ವೆಲ್ತ್​ ಗೇಮ್ಸ್​ನಲ್ಲಿ ಭಾರತದ ಅಥ್ಲೀಟ್​ಗಳು ಅತ್ಯುತ್ತಮ ಸಾಧನೆ ಮಾಡಿದ್ದಾರೆ. 22 ಚಿನ್ನದ ಪದಕ, 16 ಬೆಳ್ಳಿ ಪದಕ ಹಾಗೂ 23 ಕಂಚಿನ ಪದಕ ಸೇರಿ 61 ಪದಕಗಳನ್ನು ಭಾರತ ತನ್ನದಾಗಿಸಿಕೊಂಡಿತ್ತು.

ಕಾಮನ್ವೆಲ್ತ್​ ಗೇಮ್ಸ್​ನಲ್ಲಿ ಭಾರತದ ಮಹಿಳೆಯರ ಲಾನ್​ ಬೌಲ್ಸ್​ ತಂಡ ಇತಿಹಾಸವನ್ನೇ ಬರೆಯಿತು. ಬಲಿಷ್ಠ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿದ ನಾಲ್ಕು ಸದಸ್ಯರಿದ್ದ ತಂಡ ಚಿನ್ನದ ಪದಕ ಗೆದ್ದಿತು. ಕಾಮನ್ವೆಲ್ತ್​ ಗೇಮ್ಸ್ ಇತಿಹಾಸದಲ್ಲಿ ಮಹಿಳೆಯರ ಲಾನ್​ಬೌಲ್ಸ್​ ತಂಡಕ್ಕೆ ಲಭಿಸಿದ ಮೊಟ್ಟ ಮೊದಲ ಪದಕವಾಗಿದೆ. ಇದರ ಜತೆಗೆ ಟ್ರ್ಯಾಕ್​ ಮತ್ತು ಫೀಲ್ಡ್​ನಲ್ಲಿ ಭಾರತದ ಅಥ್ಲೀಟ್​ಗಳು ಅಸಾಮಾನ್ಯ ಸಾಧನೆ ಮಾಡಿದ್ದರು.

ಇದೇ ಕ್ರೀಡಾಕೂಟದಲ್ಲಿ ಭಾರತದ ಮಹಿಳೆಯರ ಕ್ರಿಕೆಟ್​ ತಂಡ ಬೆಳ್ಳಿಯ ಪದಕ ಗೆದ್ದಿತು. ಕಾಮನ್ವೆಲ್ತ್​ ಗೇಮ್ಸ್​ನಲ್ಲಿ ಅದೇ ಮೊದಲ ಬಾರಿಗೆ ಮಹಿಳೆಯರ ಕ್ರಿಕೆಟ್​ಗೆ ಅವಕಾಶ ನೀಡಲಾಗಿತ್ತು. ಮೊದಲ ಆವೃತ್ತಿಯಲ್ಲಿ ಪದಕ ಚಿನ್ನ ಗೆಲ್ಲುವ ಅವಕಾಶವನ್ನು ಸ್ವಲ್ಪದರಲ್ಲೇ ಕಳೆದುಕೊಂಡ ವನಿತೆಯರ ಬಳಗ ಬೆಳ್ಳಿಯ ಸಾಧನೆ ಮಾಡಿತು.

ಚೆಸ್​ ಒಲಿಂಪಿಯಾಡ್​ ಆಯೋಜನೆಯ ಗೌರವ

ಚೆಸ್​ಗೆ ಭಾರತದಲ್ಲಿ ದೊಡ್ಡ ಮಟ್ಟದ ಜನಪ್ರಿಯತೆ ಇಲ್ಲವಾದರೂ ಅದಕ್ಕೆ ದೊಡ್ಡ​ ಅಭಿಮಾನಿಗಳ ಸಮುದಾಯವೇ ಇದೆ. ಅವರೆಲ್ಲರೂ ಖುಷಿಯ ಪಡುವಂಥ ಸಂಗತಿ 2022ರಲ್ಲಿ ಸಂಭವಿಸಿದೆ. 44ನೇ ಚೆಸ್ ಒಲಿಂಪಿಯಾಡ್​ಗೆ ಈ ವರ್ಷ ಭಾರತವೇ ಆತಿಥ್ಯ ವಹಿಸಿತ್ತು. ಈ ಮೂಲಕ 98 ವರ್ಷಗಳ ಚೆಸ್ ಇತಿಹಾಸದಲ್ಲಿ ದೊಡ್ಡ ಮಟ್ಟದ ಗೌರವ ಪಡೆದುಕೊಂಡಿತು. ಮಹಾಬಲಿಪುರಂನಲ್ಲಿ ನಡೆದ ಈ ಟೂರ್ನಿಯಲ್ಲಿ ಸುಮಾರು 350 ತಂಡಗಳು ಪಾಲ್ಗೊಂಡಿದ್ದವು.

ನಿಖತ್​ ಜರೀನ್​ ತಾಕತ್​

ಭಾರತದ ಮಹಿಳಾ ಬಾಕ್ಸರ್​ ನಿಖತ್ ಜರೀನ್​ ಹೊಸ ಪೀಳಿಗೆಯ ಕ್ರೀಡಾ ಪ್ರೇಮಿಗಳಿಗೆ ಪ್ರೇರಣೆಯಾಗುವಂಥ ಸಾಧನೆಯನ್ನು 2022ರಲ್ಲಿ ಮಾಡಿದ್ದಾರೆ. ಅವರು ವಿಶ್ವ ಬಾಕ್ಸಿಂಗ್​ ಚಾಂಪಿಯನ್​ಷಿಪ್​ನಲ್ಲಿ ಪದಕ ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿ ಮಾಡಿದ್ದರು.

ಮಹಿಳೆಯರಿಗೆ ಸಮಾನ ವೇತನ

ಕ್ರೀಡಾ ಕ್ಷೇತ್ರದಲ್ಲ ಪುರುಷರಿಗೆ ಸಿಗುವ ಸಮ್ಮಾನ ಮಹಿಳೆಯರಿಗೆ ಸಿಗುತ್ತಿಲ್ಲ ಎಂಬ ಕೊರಗು ನೀಗಿಸಿದ ಕೀರ್ತಿ ಬಿಸಿಸಿಐಗೆ ಸಲ್ಲುತ್ತದೆ. ಇತ್ತೀಚೆಗೆ ನಡೆದ ಸಭೆಯಲ್ಲಿ ಪುರುಷರಷ್ಟೇ ಮಹಿಳೆಯರಿಗೂ ವೇತನ ನೀಡುವ ನಿರ್ಧಾರವನ್ನು ಕೈಗೊಳ್ಳಲಾಯಿತು. ಇದು ವಿಶ್ವ ಕ್ರಿಕೆಟ್​ ಕಾರಿಡಾರ್​ನ ಅತ್ಯುತ್ತಮ ನಿರ್ಧಾರಗಳಲ್ಲೊಂದು.

ಕೊಹ್ಲಿಯ ಸಾಧನೆಗಳು

ಭಾರತದ ಪುರುಷರ ಕ್ರಿಕೆಟ್​ ತಂಡ ದೊಡ್ಡ ಮಟ್ಟದ ಸಾಧನೆ ಮಾಡಿಲ್ಲ. ಆದರೆ, ಟೀಮ್​ ಇಂಡಿಯಾದ ಮಾಜಿ ನಾಯಕ ವಿರಾಟ್​ ಕೊಹ್ಲಿ ಮತ್ತೆ ಫಾರ್ಮ್​ಗೆ ಮರಳಿದ್ದು ಭಾರತೀಯರಿಗೆ ಖುಷಿ ಕೊಟ್ಟಿದೆ. ಏಷ್ಯಾ ಕಪ್​ನಲ್ಲಿ ಅಫಘಾನಿಸ್ತಾನ ವಿರುದ್ಧ ಶತಕ ಬಾರಿಸಿದ ಅವರು ಮೂರು ವರ್ಷಗಳ ಶತಕದ ಬರ ನೀಗಿಸಿದ ಜತೆಗೆ ಟಿ20 ಮಾದರಿಯಲ್ಲಿ ಮೊದಲ ಶತಕ ಬಾರಿಸಿದ ಸಾಧನೆ ಮಾಡಿದರು. ಅದೇ ರೀತಿ ಬಾಂಗ್ಲಾದೇಶ ವಿರುದ್ಧದ ಸರಣಿಯಲ್ಲಿ ಏಕ ದಿನ ಮಾದರಿಯಲ್ಲಿ ಶತಕ ಬಾರಿಸಿ, ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ (71 ಅಂತಾರಾಷ್ಟ್ರೀಯ ಶತಕಗಳು) ಅವರನ್ನು ಹಿಂದಿಕ್ಕಿದ್ದಾರೆ. ಕೊಹ್ಲಿ ಹೆಸರಲ್ಲೀಗ 72 ಅಂತಾರಾಷ್ಟ್ರೀಯ ಶತಕಗಳಿವೆ. ಅದೇ ರೀತಿ ಅವರು ವಿಶ್ವ ಕಪ್​ನಲ್ಲಿ ಪಾಕಿಸ್ತಾನ ವಿರುದ್ಧ ಬಾರಿಸಿದ ಅಜೇಯ 82 ರನ್​ ಭಾರತ ಕ್ರಿಕೆಟ್​ ಇತಿಹಾಸದ ಅವಿಸ್ಮರಣೀಯ ಇನಿಂಗ್ಸ್​. ಜತೆಗೆ ಅವರು ಪಾಕ್​ ಬೌಲರ್​ ಹ್ಯಾರಿಸ್​ ರವೂಫ್​ ಎಸೆತಕ್ಕೆ ಬಾರಿಸಿದ ಸಿಕ್ಸರ್​, ಕ್ರಿಕೆಟ್ ಕ್ಷೇತ್ರದ ಅಪರೂಪದ ಹೊಡೆತ.

ಇದನ್ನೂ ಓದಿ | Year-ender | 2022ರಲ್ಲಿ ಭಾರತ ಕ್ರಿಕೆಟ್​ ಕ್ಷೇತ್ರದ ಏಳು ಬೀಳಿನ ಹಾದಿ ಹೀಗಿತ್ತು

Exit mobile version