ಮೆಲ್ಬೋರ್ನ್: ಶಾನ್ ಮಸೂದ್ (52*) ಹಾಗೂ ಇಫ್ತಿಕಾರ್ ಅಹಮದ್ (೫೦) ಜೋಡಿ ಅರ್ಧ ಶತಕದ ನೆರವು ಪಡೆದ ಪಾಕಿಸ್ತಾನ ತಂಡ ಟಿ೨೦ ವಿಶ್ವ ಕಪ್‌ನ ತನ್ನ ಮೊದಲ ಪಂದ್ಯದಲ್ಲಿ ಭಾರತ ವಿರುದ್ಧ 159 ರನ್ ಬಾರಿಸಿದೆ. ಈ ಮೂಲಕ ಭಾರತ ತಂಡವು 160 ರನ್‌ಗಳ ಗೆಲುವಿನ ಗುರಿಯನ್ನು ಪಡೆದುಕೊಂಡಿದೆ. ಭಾರತ ಪರ ಅರ್ಶ್ ದೀಪ್ ಸಿಂಗ್ (೩೨ಕ್ಕೆ೩), ಹಾಗೂ ಹಾರ್ದಿಕ್ ಪಾಂಡ್ಯ (೩೦ಕ್ಕೆ೩) ಎದುರಾಳಿ ತಂಡ ದೊಡ್ಡ ಮೊತ್ತ ಪೇರಿಸದಂತೆ ನೋಡಿಕೊಂಡರು.
ಎಮ್‌ಸಿಜಿ ಕ್ರಿಕೆಟ್ ಸ್ಟೇಡಿಯಮ್‌ನಲ್ಲಿ ಭಾನುವಾರ ನಡೆದ ಹಣಾಹಣಿಯಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ಆರಂಭಿಕ ಕುಸಿತದ ಹೊರತಾಗಿಯೂ ನಿಗದಿತ ೨೦ ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 159 ರನ್ ಬಾರಿಸಿತು. ಆರಂಭದಲ್ಲಿ ಭಾರತೀಯ ಬೌಲರ್‌ಗಳು ಉತ್ತಮ ಪ್ರದರ್ಶನ ನೀಡಿದರೂ ನಿಧಾನಗತಿಯಲ್ಲಿ ಪಾಕ್ ಬ್ಯಾಟರ್‌ಗಳು ಚೇತರಿಕೆಯ ಪ್ರದರ್ಶನ ನೀಡಿ ಸ್ಪರ್ಧಾತ್ಮಕ ಮೊತ್ತ ಪೇರಿಸಿಸಿದರು.
ಭುವಿ-ಅರ್ಶ್‌ದೀಪ್ ಸೂಪರ್ ಪ್ರದರ್ಶನ
ಮಹತ್ವದ ಪಂದ್ಯದಲ್ಲಿ ಟಾಸ್ ಗೆದ್ದು ಕ್ಯಾಪ್ಟನ್ ರೋಹಿತ್ ಶರ್ಮಾ ಫೀಲ್ಡಿಂಗ್ ಆಯ್ಕೆ ಮಾಡಿದರು. ಇದಕ್ಕೆ ತಕ್ಕ ಬೆಲೆ ತಂದ ಭಾರತೀಯ ಬೌಲರ್‌ಗಳು ಎದುರಾಳಿಗೆ ಆರಂಭಿಕ ಆಘಾತ ನೀಡುವಲ್ಲಿ ಸಫಲರಾದರು. ಭುವನೇಶ್ವರ್ ಕುಮಾರ್, ಎಂದಿನಂತೆ ತಮ್ಮ ಇನ್‌ಸ್ವಿಂಗ್ ಮತ್ತು ಔಟ್ ಸ್ವಿಂಗ್ ಮ್ಯಾಜಿಕ್ ಮೂಲಕ ಪಾಕ್ ಓಪನರ್‌ಗಳ ಏಕಾಗ್ರತೆ ಭಂಗ ಉಂಟುಮಾಡಿದರು. ಅವರ ಮೊದಲ ಓವರ್‌ನಲ್ಲಿ ವೈಟ್ ರೂಪದಲ್ಲಿ ಪಾಕ್ ಒಂದು ರನ್ ಗಳಿಸಿತು.ಆದರೆ ದ್ವಿತೀಯ ಓವರ್ ಎಸೆದ ಅರ್ಶ್‌ದೀಪ್ ಸಿಂಗ್ ತಮ್ಮ ಮೊದಲ ಎಸೆತದಲ್ಲೇ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂ (0) ಅವರನ್ನು ಎಲ್‌ಬಿಡಬ್ಲ್ಯು ಬಲೆಗೆ ಬೀಳಿಸಿದರು.
ಬಾಬರ್ ಗೋಲ್ಡನ್ ಡಕ್ ಆಗುತ್ತಿದ್ದಂತೆಯೇ ಒತ್ತಡಕ್ಕೆ ಸಿಲುಕಿದ್ದ ಮತ್ತೊಬ್ಬ ಓಪನರ್ ಮೊಹಮ್ಮದ್ ರಿಝ್ವಾನ್ (4), ಕೂಡ ಅರ್ಶ್‌ದೀಪ್ ಸಿಂಗ್ ಅವರ ಶಾರ್ಟ್ ಪಿಚ್ ಎಸೆತವನ್ನು ಪುಲ್ ಮಾಡುವ ಪ್ರಯತ್ನದಲ್ಲಿ ವಿಕೆಟ್ ಕೈಚೆಲ್ಲಿದರು. 15 ರನ್‌ಗಳಿಗೆ ಪಾಕಿಸ್ತಾನದ ಇಬ್ಬರೂ ಓಪನರ್‌ಗಳನ್ನು ಪೆವಿಲಿಯನ್‌ಗೆ ಅಟ್ಟಿದ ಭಾರತ ತಂಡ ಉತ್ತಮ ಆರಂಭ ಪಡೆಯಿತು. ಸ್ಯಾರಸ್ಯವೆಂದರೆ ಕಳೆದ ದುಬೈನಲ್ಲಿ ನಡೆದ ಟಿ೨೦ ವಿಶ್ವ ಕಪ್‌ನಲ್ಲಿ ಭಾರತ ಎದುರಿಸಿದ ಆರಂಭಿಕ ಆಘಾತ ಇಲ್ಲಿ ಪಾಕ್‌ಗೂ ಎದುರಾದಂತಾಯಿತು.
ಮಸೂದ್-ಇಫ್ತಿಕಾರ್ ಹೋರಾಟ
ಪಾಕಿಸ್ತಾನ ಆರಂಭಿಕ ಆಘಾತ ಕಂಡರೂ ಇಫ್ತಿಕಾರ್ ಮತ್ತು ಶಾನ್ ಮಸೂದ್ ಎಚ್ಚರಿಕೆಯ ಆಟವಾಡಿ ಅರ್ಧಶತಕ ಸಿಡಿಸಿ ತಂಡಕ್ಕೆ ಆಸರೆಯಾದರು. ಇಫ್ತಿಕಾರ್ 34 ಎಸೆತದಲ್ಲಿ 2 ಬೌಂಡರಿ ಜತೆ 4 ಸಿಕ್ಸರ್ ಸಿಡಿಸಿ 51 ರನ್ ಗಳಿಸಿ ಮೊಹಮ್ಮದ್ ಶಮಿಗೆ ವಿಕೆಟ್ ಒಪ್ಪಿಸಿದರು. ಶಾನ್ ಮಸೂದ್ 42 ಎಸೆತದಲ್ಲಿ 5 ಬೌಂಡರಿ ಮೂಲಕ 52 ರನ್ ಗಳಿಸಿ ಅಜೇಯರಾಗಿ ಉಳಿದರು. ಉಳಿದಂತೆ ಮೊಹಮ್ಮದ್ ನವಾಜ್ 9 ರನ್, ಆಸಿಫ್ ಅಲಿ 2 ರನ್ ಮತ್ತು ಶಾಹೀನ್ ಅಫ್ರಿದಿ 16 ರನ್ ಗಳಿಸಿದರು.
ಸ್ಕೋರ್ ವಿವರ:
ಪಾಕಿಸ್ತಾನ ೨೦ ಓವರ್‌ಗಳಲ್ಲಿ 8 ವಿಕೆಟ್‌ಗೆ ೧೫೯ (ಶಾನ್ ಮಸೂದ್ ೫೨*, ಇಫ್ತಿಕಾರ್ ಅಹಮದ್ ೫೧, ಅರ್ಶ್‌ದೀಪ್ ಸಿಂಗ್ ೩೨ಕ್ಕೆ೩, ಹಾರ್ದಿಕ್ ಪಾಂಡ್ಯ ೩೦ಕ್ಕೆ೩).
ಇದನ್ನೂ ಓದಿ | IND vs PAK | ಪಾಕ್ ವಿರುದ್ಧದ ಹಣಾಹಣಿಯಲ್ಲಿ ಟಾಸ್ ಗೆದ್ದ ಭಾರತ ತಂಡದಿಂದ ಫೀಲ್ಡಿಂಗ್ ಆಯ್ಕೆ