ಈ ಬಾರಿಯ ಐಪಿಎಲ್ ಪಂದ್ಯದಲ್ಲಿ ಆಟಕ್ಕಿಂತ, ಪಂದ್ಯದ ಫಲಿತಾಂಶಕ್ಕಿಂತ ಹಿರಿಯ ಆಟಗಾರರ ನಡುವಿನ ಜಗಳವೇ ಹೆಚ್ಚು ಸುದ್ದಿ ಮಾಡುತ್ತಿದೆ. ಇತ್ತೀಚೆಗೆ ಲಖನೌ ಜಯೆಂಟ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ (ಆರ್‌ಸಿಬಿ) ನಡುವೆ ನಡೆದ ಪಂದ್ಯದಲ್ಲಿ ವಿಶ್ವದ ಅಗ್ರ ಶ್ರೇಯಾಂಕದ ಆಟಗಾರ ವಿರಾಟ್ ಕೊಹ್ಲಿ ಮತ್ತು ಮಾಜಿ ಆಟಗಾರ, ಸಂಸದ ಗೌತಮ್ ಗಂಭೀರ್ ಸಭ್ಯತೆ ಮೀರಿ ಕಚ್ಚಾಡಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಸಿಸಿಐ ಇಬ್ಬರಿಗೂ ಶೇ.100ರಷ್ಟು ದಂಡ ವಿಧಿಸಿದೆ. ಅಂದರೆ ವಿರಾಟ್ ಕೊಹ್ಲಿ 1 ಕೋಟಿ 7 ಲಕ್ಷ ರೂ. ಮತ್ತು ಗೌತಮ್ ಗಂಭೀರ್ 25 ಲಕ್ಷ ರೂ. ದಂಡ ಕಟ್ಟಬೇಕಿದೆ. ದಂಡವೆಂಬುದು ಸಾಂಕೇತಿಕ. ಅಂಗಣದ ಮರ್ಯಾದೆಯನ್ನು ಉಲ್ಲಂಘಿಸಿದರೆ ದೊರೆಯುವ ಶಿಕ್ಷೆ ಅದು ಎಂಬುದು ಮುಖ್ಯ.
ಪಂದ್ಯದಲ್ಲಿ ಗೆಲ್ಲುವ ಒತ್ತಡದ ವೇಳೆ ಆಟಗಾರರ ನಡುವೆ ಸಂಘರ್ಷ ಸಹಜ. ಒಂದು ತಂಡದ ಆಟಗಾರನನ್ನು ಮತ್ತೊಂದು ತಂಡದ ಆಟಗಾರ ಛೇಡಿಸುವುದು, ಕೆಣಕಿ ಪ್ರಚೋದಿಸುವುದು ಕೂಡ ಈಗ ಆಟದ ಒಂದು ಭಾಗವೇ ಆಗಿಬಿಟ್ಟಿದೆ. ಇದಕ್ಕೆ ʼಸ್ಲೆಡ್ಜಿಂಗ್ʼ ಎಂಬ ಗಂಭೀರವಾದ ಹೆಸರಿದೆ. ಆಸ್ಟ್ರೇಲಿಯ ತಂಡದ ಆಟಗಾರರಂತೂ ಇದರಲ್ಲಿ ಪರಿಣಿತರಾಗಿದ್ದಾರೆ. ಪಂದ್ಯದ ಬಳಿಕ ಎರಡೂ ತಂಡದ ಆಟಗಾರರು ಕೈಕುಲುಕುವುದರೊಂದಿಗೆ ಈ ಜಗಳ ಸಮಾಪ್ತಿಯಾಗುತ್ತದೆ. ಆದರೆ ಕೊಹ್ಲಿ- ಗಂಭೀರ್ ಪ್ರಕರಣದಲ್ಲಿ ಇದು ಇಷ್ಟಕ್ಕೇ ನಿಂತಿಲ್ಲ. ಆ ಗಲಾಟೆ ನಡೆದು ನಾಲ್ಕೈದು ದಿನ ಕಳೆದರೂ ಇದು ಬೇರೆ ಬೇರೆ ರೂಪದಲ್ಲಿ ಮುಂದುವರಿದಿದೆ. ಐಪಿಎಲ್ ಪಂದ್ಯ ಆರಂಭವಾದಾಗ ಪ್ರೇಕ್ಷಕರು ಆಟದತ್ತ ಗಮನ ಕೊಡುವುದು ಬಿಟ್ಟು ಕೊಹ್ಲಿ- ಗಂಭೀರ್ ಪರ- ವಿರೋಧ ಘೋಷಣೆ ಕೂಗಲಾರಂಭಿಸುತ್ತಿದ್ದಾರೆ. ಇನ್ನೊಂದೆಡೆ ಮತ್ತೊಂದಿಷ್ಟು ಹಿರಿಯ ಕಿರಿಯ ಆಟಗಾರರು ಕೊಹ್ಲಿ- ಗಂಭೀರ್ ಪರ ವಿರುದ್ಧ ಹೇಳಿಕೆ ನೀಡುತ್ತ ಈ ಪ್ರಕರಣವನ್ನು ಜೀವಂತವಾಗಿಡುತ್ತಿದ್ದಾರೆ.
ವಿರಾಟ್ ಕೊಹ್ಲಿ, ಗೌತಮ್ ಗಂಭೀರ್ ಅಂಥವರು ಇಷ್ಟು ಕೆಳಮಟ್ಟಕ್ಕೆ ಇಳಿದು ಕೋಳಿ ಜಗಳ ಮಾಡಬೇಕಾಗಿರಲಿಲ್ಲ. ಇಂಥ ರಾಷ್ಟ್ರಮಟ್ಟದ ಐಕಾನ್‌ಗಳು, ಆಟಗಾರರನ್ನು ಯುವ ಆಟಗಾರರು ಅನುಸರಿಸುವುದರಿಂದ, ಅವರು ಅಂಗಣದ ಹೊರಗೂ ಒಳಗೂ ಮಾದರಿಯಾಗಿ ನಡೆದುಕೊಳ್ಳಬೇಕು. ಸಾಮಾಜಿಕ ಜಾಲತಾಣದಲ್ಲಂತೂ ದಿನ ಬೆಳಗಾದರೆ ಐಪಿಎಲ್ ಆಟಗಾರರ ವೈಯಕ್ತಿಕ ಸಂಗತಿಗಳೇ ಕಣ್ಣಿಗೆ ರಾಚುತ್ತಿವೆ. ಆಟದ ಪಾವಿತ್ರ್ಯತೆಯನ್ನು ಕಾಪಾಡುವುದು ಹೀಗಲ್ಲ. ಕ್ರಿಕೆಟ್ ಅನ್ನು ಜಂಟಲ್‌ಮೆನ್ ಗೇಮ್ ಅನ್ನುತ್ತಾರೆ. ಹಿಂದಿನ ಆಟಗಾರರು ಅಂಗಣದಲ್ಲಿ ಸಭ್ಯತೆ- ಘನತೆ ಮೆರೆದ ಅನೇಕ ಉದಾಹರಣೆಗಳಿವೆ. ಬೌಲಿಂಗ್ ಮಾಡುವ ಮುನ್ನವೇ ಗೆರೆ ಬಿಟ್ಟು ರನ್ನಿಗಾಗಿ ಓಡಿದ ನಾನ್ ಸ್ಟ್ರೈಕರ್ ದಾಂಡಿಗನನ್ನು ʼಮಂಕಡಿಂಗ್ʼ ಮಾಡದೆ ಬಿಟ್ಟವರು, ಅಂಪೈರ್ ತೀರ್ಪು ನೀಡುವ ಮುನ್ನವೇ ತಾನು ಔಟಾದುದನ್ನು ಒಪ್ಪಿಕೊಂಡು ಕ್ರೀಸ್ ಬಿಟ್ಟು ಹೋದವರು- ಇಂಥ ಸರಳ, ಘನತೆವೆತ್ತ ಉದಾಹರಣೆಗಳು ನಮ್ಮಲ್ಲಿಯೇ ಇವೆ. ಇಂಥದನ್ನು ಅನುಸರಿಸಲು ಆಟಗಾರರು ಕಲಿಯಬೇಕು.
ಇದನ್ನೂ ಓದಿ : ವಿಸ್ತಾರ ಸಂಪಾದಕೀಯ: ಪಾಕ್ ಸಚಿವರಿಗಿಲ್ಲ ಶೇಕ್ ಹ್ಯಾಂಡ್, ಇದು ಉಗ್ರ ಪೋಷಕ ದೇಶಕ್ಕೆ ಕಠಿಣ ಸಂದೇಶ
ಕ್ರಿಕೆಟ್ ಎಂದರೇ ಸಭ್ಯತೆ, ಘನತೆ ಎಂಬ ದಿನಗಳು ಆಗಿಹೋದವು; ಆದರೆ ಭಾರತೀಯರ ಪಾಲಿಗೆ ಕ್ರಿಕೆಟ್ ಆಟಗಾರರು ಇಂದಿಗೂ ದೇವರ ಸಮಾನ. ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಬದುಕಿರುವುದೇ ಭಾರತೀಯರ ಕ್ರಿಕೆಟ್ ಪ್ರೇಮದಿಂದ. ಭಾರತೀಯರು ಎಲ್ಲ ದೇಶಗಳ ಕ್ರಿಕೆಟ್ ಆಟಗಾರರನ್ನು ಗೌರವಿಸುತ್ತಾರೆ; ಅವರ ಆಟವನ್ನು ಪ್ರೀತಿಸುತ್ತಾರೆ. ಇದಕ್ಕೆ ಐಪಿಎಲ್‌ನ ನಾನಾ ತಂಡಗಳಲ್ಲಿ ಪಾಲ್ಗೊಂಡು ಆಟವಾಡುತ್ತಿರುವ, ದೊಡ್ಡ ಮೊತ್ತದ ಸಂಭಾವನೆ ಪಡೆಯುವ, ಇತರ ದೇಶಗಳ ಆಟಗಾರರೇ ಸಾಕ್ಷಿ. ಇಂಥ ಸನ್ನಿವೇಶದಲ್ಲಿ ನಮ್ಮ ಆಟಗಾರರು ಅವರಿಗೂ ಮಾದರಿಯಾಗಿರಬೇಕಲ್ಲವೇ? ಐಪಿಎಲ್ ಆಟಗಾರರ ನಡುವಿನ ಬಣ ಕಲಹ, ಒಣ ಪ್ರತಿಷ್ಠೆಯ ವಿಜ್ರಂಭಣೆ ಇಲ್ಲಿಗೇ ಅಂತ್ಯವಾಗಲಿ. ಐಪಿಎಲ್‌ನ ನಿಜವಾದ ಆಟದ ರೋಚಕತೆ, ಖುಷಿಯನ್ನು ಕ್ರಿಕೆಟ್ ಪ್ರಿಯರು ಆಸ್ವಾದಿಸಲಿ.